Tuesday, 27th February 2024

ಮನೆಯಿಂದ ಆರಂಭಗೊಳ್ಳಲಿ ಸ್ವಚ್ಛತೆ

‘ಸ್ವಚ್ಛತೆ ಮತ್ತು ಮನೆ ಕಸ ನಿರ್ವಹಣೆ’ ಬಗ್ಗೆ ವಿಶ್ವವಾಣಿ ಕ್ಲಬ್‌ಹೌಸ್ ಮಾತುಕತೆಯಲ್ಲಿ ಮಂಗಳೂರಿನ ರಾಮಕೃಷ್ಣ ಆಶ್ರಮದ ಏಕಗಮ್ಯಾನಂದ ಸ್ವಾಮೀಜಿಯವರು ತಾವು ಕಂಡುಕೊಂಡ ವಿನೂತನ ವಿಧಾನಗಳ ಮೂಲಕ ಸಾಕಷ್ಟು ಮಾಹಿತಿ ನೀಡಿದ್ದಾರೆ. ಸ್ವಚ್ಛತೆಯ ಬಗ್ಗೆ ಅವರಿಗಿರುವ ಸಾಮಾಜಿಕ ಕಾಳಜಿ, ಮೆಚ್ಚುವಂಥದ್ದು. ಜತೆಗೆ, ಇದು ಪ್ರತಿಯೊಬ್ಬರಿಗೂ ಅನುಕರಣೀಯ. ತ್ಯಾಜ್ಯ ನಿರ್ವಹಣೆಯ ಕೌಶಲಕ್ಕಿಂತ ಮಿಗಿಲಾಗಿ ಸಾಮಾಜಿಕ ಪ್ರeಯೇ ಪ್ರಮುಖ ಅಂಶ. ಇತ್ತಿಚೆಗೆ ಸಾಮಾಜಿಕ ಪಿಡುಗಾಗಿರುವ ಕಸದ ಸಮಸ್ಯೆಗೆ ಅದೊಂದೇ ಪರಿಹಾರ.

ಜತೆಗೆ ಸಾರ್ವಜನಿಕರಿಗೆ ನೆರವಾಗುವಂಥ ವಿನೂತನ ಪ್ರಯೋಗಗಳನ್ನು ಪ್ರೋತ್ಸಾಹಿಸಿ, ಪ್ರಚಾರ ನೀಡುವ ಕೆಲಸವಾಗಬೇಕು. ಎಲ್ಲದಕ್ಕೂ ಪ್ರಮುಖವಾಗಿ, ಉನ್ನತ ಆಲೋಚನೆಗಳಿದ್ದರೆ ಮಾತ್ರ ಸಾಮಾನ್ಯರಿಂದ ಹಿಡಿದು ಸಮಾಜದಲ್ಲಿ ಎಷ್ಟೇ ಎತ್ತರದ ಸ್ಥಾನದಲ್ಲಿ ಇರುವವರು ಕೂಡ ಇಂಥ ಪರಿಸರ ಸಂಬಂಧಿ ಮಹತ್ವದ ಕಾರ್ಯಕ್ಕೆ ಮುಂದಾಗಲು ಸಾಧ್ಯ ಎನ್ನುವುದನ್ನು ಸ್ವಾಮೀಜಿಯವರು ತೋರಿಸಿಕೊಟ್ಟಿದ್ದಾರೆ. ಕಸವನ್ನು ಉದಾಸೀನ ಮಾಡದೆ ಅದು ಒಂದು ಸಂಪನ್ಮೂಲ ಆದ್ದರಿಂದ, ಅದನ್ನು ಮೂಲದಲ್ಲಿಯೇ ಕ್ರಮ ಬದ್ಧವಾಗಿ ಸಂಗ್ರಹಿಸಿ, ಮರುಬಳಕೆಯಂಥ ಚಿಂತನೆ ಒಂದು ಉತ್ತಮ ಸಂದೇಶ.

ತ್ಯಾಜ್ಯ ನಿರ್ವಹಣೆಯಲ್ಲಿ ಜನರಿಗೆ ಸಾಮಾಜಿಕ ಶಿಕ್ಷಣ ಬೇಕು. ಇದು, ತನ್ನ ಮನೆಯ ಅಂಗಳದಿಂದಲೇ ಆರಂಭ ಗೊಳ್ಳಬೇಕು. ಇದರಲ್ಲಿ, ಸ್ಥಳೀಯ ಆಡಳಿತ ವರ್ಗ ಕೈ ಜೋಡಿಸಿದರೆ ಸಾಮಾಜಿಕ ಬದಲಾವಣೆಯಲ್ಲಿ ಅದ್ಭುತ ಯಶಸ್ಸು ಕಾಣಬಹುದು.
-ಡಾ. ಜಿ. ಬೈರೇಗೌಡ ಬೆಂಗಳೂರು

ಪರ್ಯಾಯ ಯೋಚಿಸಲಿ
ಒಮೈಕ್ರಾನ್ ಆತಂಕದ ನಡುವೆ ರೂಪಾಂತರಿಗಿಂತ ಹಿಂದಿನ ಕರೊನಾ ಸೋಂಕಿತರ ಸಂಖ್ಯೆಯೂ ದಿನೇ ಏರಿಕೆ ಕಾಣುತ್ತಿರುವುದು ದುರ್ದೈವದ ಸಂಗತಿ. ಜಗತ್ತಿನಾದ್ಯಂತ ಮೂರನೇ ಅಲೆಯ ಭೀತಿ ಮೂಡಿದೆ. ಈ ಮಧ್ಯೆ ರಾಜ್ಯ ಸರಕಾರ ಮತ್ತೆ ಲಾಕ್‌ಡೌನ್ ಸುಳಿವು ನೀಡಿದ್ದು, ಜನತೆಯನ್ನು ಚಿಂತೆಗೀಡು ಮಾಡಿದೆ. ಲಾಕ್‌ಡೌನ್‌ನಿಂದ ದೈನಂದಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಲಿದ್ದು, ಕಾರ್ಮಿಕರಿಗೆ, ಉದ್ಯಮಿಗಳಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಕೂಲಿಯನ್ನೆ ನಂಬಿ ಬದುಕು ನಡೆಸುವ ಕಾರ್ಮಿಕರಿಗೆ, ಕೂಲಿಕಾರರಿಗೆ ಬಿಸಿ ತಟ್ಟಲಿದೆ.

ಸರಕಾರಕ್ಕೆ ಲಾಕ್‌ಡೌನ್ ಅನಿವಾರ್ಯವಾದರೆ ಅದನ್ನು ವ್ಯವಸ್ಥಿತವಾಗಿ ಮಾಡಬೇಕು. ಕೂಲಿಯನ್ನೇ ನಂಬಿ ಜೀವನ ನಡೆಸುವ ಕಾರ್ಮಿಕರು, ಕೃಷಿಕರಿಗೆ ಉಚಿತವಾಗಿ ಪಡಿತರ ವಿತರಣೆ, ಜನರ ತುರ್ತು ಓಡಾಟಕ್ಕೆ ಸಾರಿಗೆ ವಾಹನಗಳ ವ್ಯವಸ್ಥೆಯನ್ನು ರಾಜ್ಯಾದ್ಯಂತ ನಗರ, ಗ್ರಾಮೀಣ ಪ್ರದೇಶದಲ್ಲಿ ಮಾಡ ಬೇಕು. ಕರೊನಾ ತಡೆಗಟ್ಟಲು ಇದು ಒಳ್ಳೆಯ ಮಾರ್ಗವೇನೊ ನಿಜ. ಆದರೆ ಅಗತ್ಯ-ತುರ್ತು ನಿಮಿತ್ತ ಕೆಲಸಗಳಿಗನುಗುಣವಾಗಿ ವಿನಾಯ್ತಿಯನ್ನು ನೀಡಬೇಕು.

ಅಂತಹ ಸಂದರ್ಭದಲ್ಲಿ ಶಾಲೆ-ಕಾಲೇಜು ಮುಚ್ಚುವುದು ಅನಿವಾರ್ಯ. ಇದಕ್ಕೆ ಪೂರಕವಾಗಿ ಖಾಸಗಿ ಶಾಲೆಗಳೇನೊ ಆನ್‌ಲೈನ್ ತರಗತಿಗಳನ್ನು  ನಡೆಸು ತ್ತವೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆ-ಕಾಲೇಜುಗಳ ಮಕ್ಕಳ ಗತಿಯೇನು? ಈ ನಿಟ್ಟಿನಲ್ಲಿ ಸರಕಾರ, ಶಿಕ್ಷಣ ಇಲಾಖೆ ಯೋಚಿಸಬೇಕು. ಲಸಿಕೆ ಕಡ್ಡಾಯದ ಜತೆಗೆ ಲಾಕ್‌ಡೌನ್‌ಗೆ ಪರ್ಯಾಯ ಯೋಚನೆ ಮಾಡಬೇರದೇಕೆ? ಕಳೆದ ಎರಡು ವರ್ಷಗಳ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಚಿಂತಿಸಲಿ.
-ಶ್ರೀಧರ ಡಿ.ರಾಮಚಂದ್ರಪ್ಪ ತುರುವನೂರು

ಪಾದಯಾತ್ರೆ ಪ್ರಚಾರ ತಂತ್ರ
ಕರೋನ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸು ಮೇಕೆದಾಟು ಬಗ್ಗೆ ಪಾದಯಾತ್ರೆ ಮಾಡುವಿಕೆ ಹಾಸ್ಯಾಸ್ಪದ ಮತ್ತು ವಿವೇಚನಾ ರಹಿತ. ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅದ್ಯಕ್ಷ ೨೦೧೩ ರಿಂದ ೨೦೧೮g ಅವಧಿಗೆ ಮುಖ್ಯಮಂತ್ರಿ ಮತ್ತು ಇಂದನ ಮಂತ್ರಿಯಾಗಿದ್ದರು. ಆಗಾಗಲೇ ಮೇಕೆದಾಟುವಿನ ಯೋಜನಾ ವರದಿ (ಈP)ಯನ್ನು ಕರ್ನಾಟಕ ಪವರ್ ಕಾರ್ಪೋರೇಷನ್ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಿತ್ತು. ಕೇಂದ್ರದಲ್ಲೂ ಆಗ
ಕಾಂಗ್ರೆಸ್ ಸರಕಾರ ಇತ್ತು. ಆಗ ಕಾಂಗ್ರೆಸ್‌ನವರು ಕಡ್ಲೆ ಕಾಯಿ ತಿನ್ನುತ್ತಿದ್ದರೆ? ಹೋಗಲಿ ತಮಿಳುನಾಡಿನ ಬಾಯಿಮುಚ್ಚಿಸುವ ಯತ್ನವನ್ನೂ ಮಾಡಿಲ್ಲ ವೇಕೆ? ಅಂತೂ ಹೇಳುವುದಾದರೆಇದೊಂದು ಕಾಂಗ್ರೆಸ್‌ನವರ ಪ್ರಚಾರ ತಂತ್ರ.
-ಎ.ಯಂ.ಈರಪ್ಪ ನಿವೃತ್ತ ಇಂಜಿನಿಯರ್ ಮೈಸೂರು

ಕೈಕಟ್ಟಿ ಕೂರುವ ಸಮಯವಲ್ಲ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರಕಾರ ಏಕೆ ಇನ್ನೂ ಮೀನ-ಮೇಷ ಎಣಿಸುತ್ತಿದೆಯೋ ಗೊತ್ತಿಲ್ಲ ! ಕೆರೆ ನೀರಿಗೆ ದೊಣೆನಾಯಕನ ಅಪ್ಪಣೆ ಎಂಬಂತೆ ತಮಿಳುನಾಡನ್ನು ಕೇಳುತ್ತ ಕುಳಿತಿರುವುದೇಕೆ? ಈ ವಿಷಯ ದಲ್ಲಿ ತಮಿಳುನಾಡು ಯಾವುದೇ ತೀರ್ಮಾನ ತೆಗೆದುಕೊಳ್ಳಲಿ ಅದು ಆ ರಾಜ್ಯಕ್ಕೆ ಸಂಬಂಧಿಸಿದ್ದು, ಕನ್ನಂಬಾಡಿ ಕಟ್ಟೆ ಕಟ್ಟಿದಾಗಿ ನಿಂದ ರಾಜ್ಯಕ್ಕೆ ಪ್ರತಿ ಸಲ ಅನ್ಯಾಯ ನಡೆಯುತ್ತ ಬಂದಿರುವುದು ಬೇಸರದ ಸಂಗತಿ. ಇದಕ್ಕೆ ಆಗಿನಿಂದ ನಮ್ಮ ರಾಜ್ಯದಿಂದ ಆಯ್ಕೆಯಾಗಿ ಬಂದಂತಹ ಯಾವುದೇ ರಾಜಕೀಯ ವ್ಯಕ್ತಿಗಳ ಗಟ್ಟಿ ಕೂಗಿನ ಕೊರತೆಯೇ ಮುಖ್ಯ ಕಾರಣ.

ಅದೇನೇ ಇರಲಿ, ಈಗ ಮತ್ತೆ ಕೈಕಟ್ಟಿ ಕೂರುವ ಸಮಯವಲ್ಲ, ರಾಜ್ಯದ ಹಿತದೃಷ್ಟಿಯಿಂದ ಎಲ್ಲ ಪಕ್ಷದವರು ಪಕ್ಷಭೇದ ಮರೆತು ಪೈಪೋಟಿಗೆ ನಿಲ್ಲದೆ ರಾಜ್ಯದ ಒಟ್ಟಾರೆ ಹಿತದೃಷ್ಟಿಯಿಂದ ಒಗ್ಗಟಾಗಿ ಕೈಜೋಡಿಸಿ ಯೋಜನೆಯನ್ನು ಶೀಘ್ರ ಮಾಡಿಮುಗಿಸಬೇಕು.
– ಬೆಂ.ಮು.ಮಾರುತಿ ಮಲ್ಲತ್ತಹಳ್ಳಿ

ನಿಯಮ ಪಾಲನೆ ಏಕಿಲ್ಲ?
ಕಳೆದ ಡಿಸೆಂಬರ್ ೩೦ರಂದು ಎಂಇಎಸ್/ಶಿವಸೇನೆ ವಿರುದ್ಧ ಪ್ರತಿಭಟನೆಯಲ್ಲಿ ಮಹಿಳೆಯರೂ ಸೇರಿದಂತೆ ಸಾವಿರಾರು ಜನರು ಬೆಮಗಳೂರಿನಲ್ಲಿ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದು ಸರಿಯಷ್ಟೆ. ಆದರೆ ಯಾರೊಬ್ಬರೂ ಮುಖಗವಚವನ್ನು ಧರಿಸಿರಲಿಲ್ಲ. ಇದು ನಮ್ಮ ಸರಕಾರ, ಕೋವಿಡ್ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಜರುಗಿಸಿದ ಉದಾಹರಣೆ!. ಆಕಸ್ಮಿಕವಾಗಿ ಧರಿಸಿದ ಮುಖಗವಚ ಸ್ವಲ್ಪ ಜಾರಿದ್ದರೂ ತಕ್ಷಣ ಫೋಟೋ ಕ್ಲಿಕ್ಕಿಸಿ ದಂಡ ವಸೂಲಿ ಮಾಡುವ ಪೊಲೀಸರಾಗಲೀ, ಮಾರ್ಷಲ್ ಗಳಾಗಲಿ ಪ್ರತಿಭಟನೆ ಸಂದರ್ಭದಲ್ಲಿ ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳದೇ ನಿಷ್ಕ್ರಿಯರಾಗಿದ್ದುದು ಸರಿಯಲ್ಲ.

ಇದೋಂದೇ ಅಂತಲ್ಲ ಇತ್ತೀಚಿನ ದಿನಗಳಲ್ಲಿ ಯಾವುದೇ ಸಾರ್ವಜನಿಕ ಸಮಾರಂಭ-ಸಮಾವೇಶದ ಸಂದರ್ಭದಲ್ಲಿ ಜನಪ್ರತಿನಿಧಿಗಳೂ ಸೇರಿ ಯಾರೊಬ್ಬರೂ ನಿಯಮ ಪಾಲನೆ ಮಾಡುತ್ತಿಲ್ಲ. ಅವೈಜ್ಞಾನಿಕವಾಗಿ ಕೇವಲ ರಾತ್ರಿ ವೇಳೆ ಕರ್ಫ್ಯೂ ಜಾರಿಗೊಳಿಸುವ ಸರಕಾರ ಅಗತ್ಯವಾಗಿ
ಪಾಲಿಸ ಬೇಕಾದ ನಿಯಮಗಳ ಮೀರಿದರೂ ಕ್ರಮಗೊಳ್ಳದಿರುವ ಬಗ್ಗೆ ಆಯುಕ್ತರಾಗಲೀ, ಮುಖ್ಯಮಂತ್ರಿಯವರಾಗಲೀ ಸ್ಪಷ್ಟನೆ ನೀಡಬಲ್ಲರೇ? ಮುಖಗವಚ ಧಾರಣೆ, ನಿಮಯ ಪಾಲನೆಗೆ ರಾಜ್ಯದಲ್ಲಿ ಏನಾದರೂ ವಿನಾಯಿತಿ ಇದೆಯೇ?
– ಬೆಳ್ಳೆ ಚಂದ್ರಶೇಖರ ಶೆಟ್ಟಿ ಬೆಂಗಳೂರು

error: Content is protected !!