Saturday, 27th July 2024

ಅರ್ಹ ಕಲಾವಿದರನ್ನು ಗುರುತಿಸಿ

ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ ಅಂದರೆ ಅವರು ನಿಜವಾದ ಸಾಧಕರೇ ಆಗಿರುತ್ತಾರೆ. ಆದರೆ, ಸಾಧಕರು ಅಂತ ಬಂದ ಮೇಲೆ, ಸಾಧಕರ ನಡುವೆಯೇ ಬೇಧವನ್ನು ಮಾಡುವುದು ಎಷ್ಟರಮಟ್ಟಿಗೆ ಸರಿ? ಅನ್ನುವುದನ್ನು ಸರಕಾರವೇ ವಿಚಾರ ಮಾಡಬೇಕಿದೆ.

ಸಂಗೀತ ಕ್ಷೇತ್ರಕ್ಕೆ ಮತ್ತು ನೃತ್ಯ ಕ್ಷೇತ್ರಕ್ಕೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಾರದೇ ಇರುವುದು ಬೇಸರವನ್ನು ಉಂಟುಮಾಡುತ್ತಿದೆ. ರಾಜ್ಯದಲ್ಲಿ ಯಾವುದೇ ಉತ್ತಮ ಕಾರ್ಯಕ್ರಮವಾದರೂ ಅಲ್ಲಿ ಸಾಂಸ್ಕೃತಿಕ ಕಲೆಗೇ ಮೊದಲ ಆಧ್ಯತೆ ಇರುತ್ತದೆ. ಕಲೆಗೆ ಬೆಲೆ ಕಟ್ಟುವುದು ಅಸಾಧ್ಯ. ಆದರೆ ಪ್ರಶಸ್ತಿಗಳ ಮೂಲಕ ಅವರನ್ನು ಉತ್ತೇಜನಗೊಳಿಸ ಬಹುದು. ಕೊರೋನಾ ಸಂದರ್ಭದಲ್ಲಂತೂ ಅದೆಷ್ಟೋ ಕಲಾವಿದರು ಬೀದಿಗೆ ಬರುವ ಪರಿಸ್ಥಿತಿ ಉಂಟಾಗಿತ್ತು. ಇವುಗಳೆಲ್ಲವನ್ನು ಗಮನಿಸುತ್ತಿರುವ ಸರಕಾರ ಏಕೆ ಹೀಗೆ ಮಾಡಿದೆ? ಎನ್ನುವುದು ನಿಜವಾಗಿಯೂ ತಿಳಿಯದ ವಿಚಾರ. ಮುಂದೆಯಾದರೂ ಅರ್ಹ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಯನ್ನು ನೀಡಬೇಕಿದೆ.
-ಸತ್ಕುಲ ಪ್ರಸೂತ ರಾಯಚೂರು

ಎಲ್ಲರದ್ದೂ ಬಾಯಿ ಮಾತೇ ಆಯ್ತು

ನಾನೊಬ್ಬ ವಿಶ್ವವಾಣಿ ಪತ್ರಿಕೆಯ ಅಭಿಮಾನಿ. ನಿಮ್ಮ ಪತ್ರಿಕೆಯಲ್ಲಿ ಅನೇಕ ಸಮಯದವರೆಗೆ, ರಸ್ತೆಯಲ್ಲಿ ಹೆಚ್ಚಾಗುತ್ತಿರುವ ಗುಂಡಿಗಳ ಬಗ್ಗೆ ಹಾಗೂ ಅದನ್ನುಮುಚ್ಚದೇ ಇರುವ ಬಗ್ಗೆ ವರದಿಯನ್ನು ಪ್ರಕಟ ಮಾಡಿದ್ದಿರಿ. ಆದರೆ ಅದು ಯಾವುದೂ ಇಂದು
ಸಾಫಲ್ಯತೆಯನ್ನು ಪಡೆದಂತೆ ಕಾಣುತ್ತಿಲ್ಲ. ಸರಕಾರೀ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವಂತಿದೆ. ಇನ್ನು ನಾವು ಗುಂಡಿ ಮುಚ್ಚಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಎದೆ ಉಬ್ಬಿಸಿ ಹೇಳಿದ್ದ ಆಮ್ ಆದ್ಮಿ ಪಕ್ಷದ ಜಗದೀಶ್ ಮಹಾದೇವ್ ಕೂಡ ಪತ್ರಿಕೆಗಳಲ್ಲಿ ಹೇಳಿಕೆಗಳನ್ನು ನೀಡಿ ಸುಮ್ಮನಾಗಿದ್ದಾರೆ. ರಾಜ ರಾಜೇಶ್ವರಿ ನಗರದಲ್ಲಿಯೇ ಅನೇಕ ರಸ್ತೆ ಗುಂಡಿಗಳಿದ್ದು ರಾತ್ರಿಯ ವೇಳೆ ನಡೆದುಕೊಂಡು ಹೋಗುವಾಗ ತುಂಬಾ ತೊಂದರೆಯಾಗುತ್ತಿದೆ. ಈ ಕುರಿತಾಗಿ ಸರಕಾರ ಗಮನಹರಿಸಬೇಕಿದೆ.
-ವಿಜಯ್ ಪ್ರಾತಃಕಾಲ ಬೆಂಗಳೂರು

Leave a Reply

Your email address will not be published. Required fields are marked *

error: Content is protected !!