Sunday, 8th September 2024

ಕಳ್ಳಂಗೆ ಅಳ್ಳೆ ಶಂಕೆಯಂತೆ!

ಒಂದಿನ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವಾಗ, ಪಕ್ಕದಲ್ಲಿ ಒಬ್ಬರು ವಯಸ್ಸಾದ ಹೆಂಗಸು ನನ್ನನ್ನು ಮಾತನಾಡಿಸಲು ಶುರು ಮಾಡಿದರು. ನಂತರ ನಿಧಾನವಾಗಿ ತಮ್ಮ ಕೈ ಚೀಲದಿಂದ ಕ್ರಿಶ್ಚಿಯನ್ ಮಿಷನರಿ ಪುಸ್ತಕಗಳನ್ನು ತೋರಿಸಿ, ಇವುಗಳನ್ನೆಲ್ಲ ಸಮಯವಿದ್ದಾಗ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆಯೇ ಈ ಭಾನುವಾರ ನಮ್ಮ ಚರ್ಚಿಗೆ ಬನ್ನಿ ಎಂದು ಆಹ್ವಾನಿಸಿದರು.

ಹಾಗೆಯೇ ನನ್ನ ಮೊಬೈಲ್ ನಂಬರ್ ಕೇಳಿ ಪಡೆದರು. ಅದಾಗಿ ಒಂದು ವಾರದ ನಂತರ, ನನ್ನ ಮನೆಗೆ ಪಾರ್ಸೆಲ್ ಬಂತು. ನೋಡಿ ದರೆ ಅವು ಕ್ರಿಶ್ಚಿಯನ್ ಮಿಷನರಿ ಪುಸ್ತಕಗಳು. ನನ್ನ ಅಡ್ರೆಸ್ ಹೇಗೆ ಪಡೆದುಕೊಂಡರೋ ತಿಳಿಯದು, ಯಾವುದೇ ಒತ್ತಾಯವಿಲ್ಲ. ಆದರೆ ಸಣ್ಣದಾಗಿ ಈ ರೀತಿ ಶುರು ಮಾಡಿ, ಜನರನ್ನು ಮತಾಂತರ ಮಾಡುವ ಕೆಲಸ ನಡೆಯು ತ್ತಿರುವುದೇನು ಹೊಸ ವಿಷಯವಲ್ಲ. ಸಾವಧಾನವಾಗಿ ವಿಷ ಕೊಟ್ಟು ಮನುಷ್ಯನನ್ನು ನಿಧಾನವಾಗಿ ಕೊಲ್ಲುವ ತಂತ್ರದ ಪರಿ ಇದು.

ಬಿಎಂಟಿಸಿ ಬಸ್ ಚಾಲಕ ಸಹ ಮತಾಂತರ ಹೊಂದಿದವರೆಂದು ತಿಳಿದು ಅವರನ್ನು ಒಮ್ಮೆ ವಿಚಾರಿಸಿದೆ. ಯಾಕೆ ನೀವು ಮತಾಂತರ ಹೊಂದಿದ್ದು ಎಂದು. ಅವರಿಗೆ, ಏನೇನೋ ಆಮಿಷಗಳನ್ನು ಒಡ್ಡಿ, ಖರ್ಚಿಗೆ ಸ್ವಲ್ಪ ಹಣ ಸಹಾಯವನ್ನೂ ಮಾಡಿ ಮತಾಂತರ ಮಾಡಲಾಗಿತ್ತು. ಹೊಸದಾಗಿ ಮತಾಂತರ ನಿಷೇಧ ಕಾನೂನನ್ನು ಸರಕಾರ ತರುವ ಯೋಚನೆಯಲ್ಲಿದೆ. ಹಾಗಂದ ಕೂಡಲೇ ಪ್ರತಿಪಕ್ಷದವರು ತಮ್ಮ ಬಾಲ ಬಿಚ್ಚು ತ್ತಿದ್ದಾರೆ.

ಸರಕಾರ ಏನೇ ಹೇಳಲಿ, ಅದು ಒಳ್ಳೆಯದೇ ಇರಲಿ, ಅದಕ್ಕೆ ವಿರೋಧಿಸುವುದೇ ಪ್ರತಿಪಕ್ಷದ ಕೆಲಸ ಎಂದು ತಿಳಿದಿದ್ದಾರೆ. ಡಿಕೆಶಿ ಹೇಳಿಕೆಯಿಂದ ಹುರುಪುಗೊಂಡ ಕ್ರಿಶ್ಚಿಯನ್ನರು ಚಳವಳಿ ಮಾಡೋಕೆ ಹೊರಟಿದ್ದಾರೆ. ನೀವು ಒತ್ತಾಯ ಪೂರ್ವಕ ಮತಾಂತರ
ಮಾಡುತ್ತಿಲ್ಲವೆಂದಾದರೆ ನಿಮಗೇಕೆ ಭಯ? ಆ ಕಾನೂನು ಮಾಡ್ತಿರೋದು ಒತ್ತಾಯದಿಂದ ಮತಾಂತರ ಮಾಡುತ್ತಿರುವವರಿಗೆ ಮಾತ್ರ. ನೀವು ಮಾಡುತ್ತಿಲ್ಲವೆಂದ ಮೇಲೆ ನೀವು ಚಳವಳಿ ಮಾಡಿ ವಿರೋಧವೇಕೆ? ಅವರ್ಯಾರೋ ಹೇಳ್ತಾರೆ, ನೀವ್ಯಾರೋ ಕೇಳ್ತೀರಾ. ಒಟ್ಟಿನಲ್ಲಿ ದೇಶ ಸುಧಾರಣೆಗೆ ಅಡ್ಡಿ ಪಡಿಸೋದೆ ನಿಮ್ಮಗಳ ಉದ್ದೇಶವಾಗಿದೆ.

ಒಳ್ಳೆಯದನ್ನು ಸ್ವೀಕರಿಸುವ ಮನಸ್ಸು ಮಾಡಿದರೆ ದೇಶ ಎಷ್ಟೋ ಮುಂದೆ ಹೋಗುತ್ತಿತ್ತು. ರೈತರ ಕಾನೂನಿಗೂ ಹೀಗೆಯೇ ಅಡ್ಡಿ ಮಾಡಿ, ಇನ್ನಿಲ್ಲದ ಹಂಗಾಮ ಮಾಡಿ, ಕೇಂದ್ರ ಸರಕಾರ ಇವರಿಗೆ ಒಳ್ಳೆಯದು ಬೇಕಾಗಿಲ್ಲ ಎಂಬ ತೀರ್ಮಾನಕ್ಕೆ ಬಂದು ಕಾಯ್ದೆ ಯನ್ನು ಹಿಂಪಡೆಯುವಂತಾಯಿತು. ಈಗ ಈ ಮತಾಂತರ. ದೇಶದ ಹಿತಚಿಂತನೆಗೆ ನಿಮ್ಮ ಮನಸ್ಸು ಯಾಕೆ ಒಗ್ಗುವುದಿಲ್ಲ. ಬರೀ ಸ್ವಾರ್ಥಕ್ಕಾಗಿ, ನಿಮ್ಮ ಹಿತಕ್ಕಾಗಿ, ಅಽಕಾರಕ್ಕಾಗಿ ದೇಶದ ಮೇಲಿನ ಅಭಿಮಾನವನ್ನು ತೊರೆದಿರಾ? ನಮ್ಮ ದೇಶ, ನಮ್ಮ ಜನ, ನಮ್ಮ ಸಂಸ್ಕೃತಿ, ನಮ್ಮ ಸಂಸ್ಕಾರಗಳ ಮೇಲೆ ಅಭಿಮಾನವಿರಲಿ.

ಇದು ದೇಶದ ಉನ್ನತಿಗೆ ಕಾರಣವಾಗಲಿ. ಅದು ಬಿಟ್ಟು ಇಲ್ಲಸಲ್ಲದ ಹೇಳಿಕೆಗಳು, ಚಳವಳಿಗಳನ್ನು ಮಾಡಿ, ಸ್ವಾರ್ಥಕ್ಕಾಗಿ ದೇಶ ವನ್ನು ಹದಗೆಡಿಸುವ ಯೋಚನೆ ಬೇಡ. ಮತಾಂತರ ಮಾಡುತ್ತಿಲ್ಲವೆಂದಾದರೆ, ಭಯ ಬೇಡ. ಮತಾಂತರ ನಿಷೇಧ ಕಾನೂನು
ಬರಲಿ. ಕಳ್ಳನಿಗೆ ಅಳ್ಳೆ ಶಂಕೆಯಂತೆ, ನಿಮಗ್ಯಾಕೆ ಚಿಂತೆ!
– ಸುಜಯ ಆರ್. ಕೊಣ್ಣೂರ್

ಭಾಷೆಯ ಮೋಹದಲ್ಲಿ ಬೇಕಾಬಿಟ್ಟಿ ಹೇಳಿಕೆ ಸಲ್ಲ
ಭಾಷೆಗಳ ಬಗೆಗೆ ಮೋಹವಿರಬೇಕು. ಅತಿಯಾಗಿ ಇರಬಾರದು. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿಯವರಿಗೆ ಇದ್ದಂತೆ ಕಾಣಿಸುತ್ತದೆ. ಅವರು, ಮೊನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಈ ಪ್ರಪಂಚದಲ್ಲಿ ಕನ್ನಡ ಹಾಗೂ ಸಂಸ್ಕೃತ ಭಾಷೆ ಮಾತ್ರ ಶುದ್ಧ ಎಂಬ ಕೀರ್ತಿಗೆ ಪಾತ್ರವಾಗಿವೆ ಎಂದಿದ್ದಾರೆ.

ಅವರ ತರ್ಕ, ವೈಜ್ಞಾನಿಕವಾಗಿರದೇ ಕೇವಲ ಮೋಹದಿಂದ ಕೂಡಿದೆ. ಕಸಾಪ ಅಧ್ಯಕ್ಷರಾಗಿರುವ ಜೋಶಿಯವರು, ಇಂತಹ ಅಪದ್ಧ ಹೇಳಿಕೆಗಳನ್ನು ನೀಡುವುದನ್ನು ಮೊದಲು ನಿಲ್ಲಿಸಬೇಕು. ಭಾಷೆ ಮೇಲೆ ಪ್ರೇಮವಿರಲಿ. ಆದರೆ ಅಂಧತ್ವ ಬರಿಸುವ ಮೋಹ ಬಲೆಯಲ್ಲಿ ಸಿಲುಕುವುದು ಬೇಡ.

ಜಗತ್ತಿನಲ್ಲಿ ಲಕ್ಷಗಟ್ಟಲೆ ಭಾಷೆಗಳು ಬಳಕೆಯಾಗುತ್ತಿವೆ. ಆದರೆ ಯಾವ ಭಾಷೆಯೂ ಶುದ್ಧ ಅಥವಾ ಅಶುದ್ಧ ಎಂಬುದಿಲ್ಲ. ಪ್ರತಿಯೊಂದಕ್ಕೂ ತನ್ನದೇ ಘನತೆ ಇರುತ್ತದೆ. ಹತ್ತಾರು ಬಗೆಯ ಪ್ರಾದೇಶಿಕ ಉಪಭಾಷೆಗಳು ಮತ್ತು ನೂರಾರು ಬಗೆಯ ಸಾಮಾಜಿಕ ಉಪ ಭಾಷೆಗಳು ಇರುತ್ತವೆಯೇ ವಿನಾ ಅವುಗಳಲ್ಲಿ ಯಾವೊಂದು ಬಗೆಯೂ ಮತ್ತೊಂದಕ್ಕಿಂತ ಶುದ್ಧವಲ್ಲ.

ಕನ್ನಡದ ಮಾತಿನಲ್ಲಿ ಪ್ರಾದೇಶಿಕ ಭಾಷೆಗೆ ಸಂಬಂಧಿಸಿದಂತೆ ಹೇಳಬೇಕೆಂದರೆ, ಪ್ರತಿ ಎರಡು ಕಿ.ಮೀ. ಪ್ರಾದೇಶಿಕ ಅಂತರದ
ವ್ಯಾಪ್ತಿಯಲ್ಲಿ ವ್ಯತ್ಯಾಸವಾಗುತ್ತಲೇ, ಬದಲಾಗುತ್ತಲೇ ಬರುತ್ತದೆ. ಪ್ರತಿ ಹತ್ತು ಹದಿನೈದು ಕಿಲೊ ಮೀಟರ್ ಅಂತರದಲ್ಲಿ ಉಚ್ಛಾರಣೆ, ಧ್ವನಿಗಳಲ್ಲಿ, ಪದರೂಪಗಳಲ್ಲಿ ಮತ್ತು ವಾಕ್ಯಗಳಲ್ಲಿ ವ್ಯತ್ಯಾಸಗಳು ಹೆಚ್ಚುತ್ತಲೇ ಹೋಗುತ್ತವೆ. ಊರುಗಳ ಅಂತರ ಹೆಚ್ಚಾದಂತೆಲ್ಲ ನುಡಿ ಸಾಮಗ್ರಿಗಳ ಉಚ್ಚಾರಣೆಯ ಸ್ವರೂಪದಲ್ಲಿನ ವ್ಯತ್ಯಾಸವೂ ಹೆಚ್ಚಾಗುತ್ತದೆ.

ಇದು ಕನ್ನಡ ಭಾಷೆಯಲ್ಲಿರುವ ಒಳನುಡಿಗಳ ಬಗೆಗಳನ್ನು ಸೂಚಿಸುತ್ತದೆ. ಇವುಗಳಲ್ಲಿ ಯಾವೊಂದು ರೂಪದ ಕನ್ನಡವನ್ನು ಇದು ಶುದ್ಧ ಕನ್ನಡವಲ್ಲ ಹಾಗೂ ಸ್ಪಷ್ಟ ಕನ್ನಡವಲ್ಲ ಎಂದು ನಿರಾಕರಿಸಬಾರದು.
– ರಾಜು ಬಡಿಗೇರ ಸಹಶಿಕ್ಷಕರು

ಮಕ್ಕಳನ್ನು ಮೊಬೈಲ್ ಮೋಹದಿಂದ ದೂರವಿರಿಸಿ
ಇತ್ತೀಚೆಗಂತೂ ಮೊಬೈಲ್ ಮೋಹ ಹೇಗಾಗಿದೆಯೆಂದರೆ, ಮಕ್ಕಳಿಗೆ ಹೊರಗೇನಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಆನ್‌ಲೈನ್ ತರಗತಿಗಳ ನೆಪದಲ್ಲಿ ಪ್ರತಿ ಪೋಷಕರು ತಮ್ಮ ಮಕ್ಕಳಿಗೊಂದು ಅಥವಾ ಸರಕಾರವೇ ಒಂದೊಂದು ಮೊಬೈಲ್ ವಿತರಿಸಿವೆ. ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾ ಬೀರುತ್ತಿದೆ. ಗೆಳೆಯರೊಂದಿಗೆ ಆಡುವುದು, ಬೆರೆಯುವುದು, ನಿತ್ಯದ ಸಂಸ್ಕಾರಗಳಿಂದ ದೂರವೇ ಉಳಿದು, ಸಂಸ್ಕೃತಿ ಯಿಂದಲೇ ದೂರವಾಗುತ್ತಿದ್ದಾರೆ ಎನಿಸುತಿದೆ. ಅದಕ್ಕೆ ಈ ಕೋವಿಡ್ ಕಂಟಕವಾಗಿದೆ.

ಪರಿಸ್ಥಿತಿ ಹೀಗೆ ಮುಂದುವರಿದರೆ ಹಳ್ಳಿಗಳಲ್ಲೂ ಸಹ ಮಕ್ಕಳು ಈಗಲೇ ಹೊರಬರುತ್ತಿಲ್ಲ. ಜತೆಗೆ ನಗರದ ಸಂಸ್ಕೃತಿ ಈಗಾಗಲೇ ಹಳ್ಳಿಗಳನ್ನು ಹೊಕ್ಕಿದ್ದು, ಗಟ್ಟಿಯಾಗಿ ನೆಲೆಯೂರುವುದೇ ಎಂಬ ಭೀತಿ ಎದುರಾಗಿದೆ. ಇಂತಹ ಸ್ಥಿತಿಯಿಂದ ಹೊರ ಬರಬೇಕೆಂದರೆ, ಮೊದಲು ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾಗಬೇಕು. ಪೋಷಕರು ಕೂಡ ಧೈರ್ಯದಿಂದ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿ, ಔಪಚಾರಿಕ ಶಿಕ್ಷಣದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಇಲ್ಲವಾದಲ್ಲಿ ಮಕ್ಕಳು ಮೊಬೈಲ್ ದಾಸರಾದರೆ ಮತ್ತಷ್ಟು ಸಂಕಷ್ಟಗಳನ್ನು ಎದುರಿಸಬೇಕಾದೀತು.
– ಗೋಪಾಲ ಜಾಧವ್ ಅವರಖೋಡ್

error: Content is protected !!