Sunday, 8th September 2024

ಜನಪ್ರತಿನಿಧಿಗಳಿಂದ ಬಾಂಡ್ ಬರೆಸಿಕೊಳ್ಳಿ

ಯಡಿಯೂರಪ್ಪ ಅವರ ಕುರ್ಚಿ ಕುರಿತಾದ ಗೊಂದಲಗಳಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ರವರ ರಾಜಿ ಪಂಚಾಯಿತಿಯಲ್ಲಿ ತಾರ್ಕಿಕದ್ದಲ್ಲವಾದರೂ ಒಂದು ಅಂತ್ಯ ಕಂಡು ಇದೀಗ ವಿವಾದದ ಚೆಂಡು ಅಮಿತ್‌ಶಾರ ಮನೆಯ ಅಂಗಳದಲ್ಲಿದೆ. ಅತೃಪ್ತರ ಬುಸುಗುಡುವಿಕೆ, ತೃಪ್ತರ ಬೆಣ್ಣೆ ಹಚ್ಚುವಿಕೆ ಇನ್ನೂ
ಜಾರಿ ಯಲ್ಲಿದೆ. ಕೋವಿಡ್ ಸಂಕಷ್ಟದ ವೇಳೆಯಲ್ಲಿ ಈ ಗೊಂದಲ ಜನರ ಕ್ರೋಧ ಹೆಚ್ಚಿಸಿದೆ. ಸರಕಾರ ಜಾರಿಗೆ ಬಂದು ವರ್ಷಗಳಾದರೂ ಇನ್ನೂ ಟೇಕಾಫ್ ಆಗಿಲ್ಲ. ಒಂದು ಸಲಹೆ. ಟಿಕೆಟ್ ಕೊಡುವಾಗಲೇ ಜರಡಿ ಹಿಡಿದು ಉತ್ತಮರಿಗೆ ಕೊಡುವುದು ಸೂಕ್ತ. ಅದಕ್ಕಾಗಿ ಟಿಕೆಟ್ ಆಕಾಂಕ್ಷಿಗಳಿಂದ ಚುನಾವಣೆಗೆ ಮುನ್ನ ಈ ರೀತಿ ಬಾಂಡ್ ಬರೆಸಿಕೊಳ್ಳುವ ಹೊಸ ಪ್ರಯೋಗ ಮಾಡಬಾರದೇಕೆ? ಕಾರ್ಯಕರ್ತರ ಸಂಪೂರ್ಣ ಬೆಂಬಲ ಒಪ್ಪಿಗೆ ಪಡೆದಿದ್ದೇನೆ. ಟಿಕೆಟ್‌ಗಾಗಿ ಜಾತಿ, ಮಠಾಧೀಶರ ಲಾಬಿ ಮಾಡುವುದಿಲ್ಲ. ನೂರಕ್ಕೆ ನೂರು ಸತ್ಯವಾದ ಆಸ್ತಿ ಘೋಷಣೆ ಮಾಡಿದ್ದೇನೆ, ಪ್ರತಿ ವರ್ಷ ಆದಾಯ ತೆರಿಗೆ ಘೋಷಣೆಯನ್ನು ಸಾರ್ವಜನಿಕರಿಗೆ ತೋರಿಸು ತ್ತೇನೆ. ಚುನಾವಣೆ ಗೆಲ್ಲಲು ಹಣ ಹಂಚಿಕೆ, ಜಾತಿ ಆಮಿಷ ತೋರಿಸುವುದಿಲ್ಲ. ಗೆದ್ದ ನಂತರ ಸಚಿವ ಸ್ಥಾನಕ್ಕೆ ಹೋರಾಟ, ಲಾಬಿ, ವಶೀಲಿ ನಡೆಸುವುದಿಲ್ಲ. ಕುಟುಂಬದವರಿಗೆ ರಾಜ್ಯಭಾರದಲ್ಲಿ ಅನಗತ್ಯ ಪ್ರವೇಶ ಕೊಡುವುದಿಲ್ಲ. ಗೆದ್ದೆತ್ತಿನ ಬಾಲ ಹಿಡಿದು ಪಕ್ಷಾಂತರ ಮಾಡುವುದಿಲ್ಲ. ನಿಗಮ ಮಂಡಳಿಗಳು, ಜಿಲ್ಲಾ ಉಸ್ತುವಾರಿ ಸ್ಥಾನಗಳಿಗಾಗಿ ದುಂಬಾಲು ಬೀಳುವುದಿಲ್ಲ. ಯಾವುದೇ ಕಾರಣಕ್ಕೂ ನನ್ನ ಕುರಿತು ಸಿಡಿ ಹೊರ ಬರುವಂತಹ ಕುಕೃತ್ಯಗಳನ್ನು ಮಾಡುವುದಿಲ್ಲ. ಪಕ್ಷದ ಸಹ ಶಾಸಕರೊಂದಿಗೆ ನೋ ಕಮೆಂಟ್ಸ್!

ಮೇಲಿನ ಯಾವುದೇ ಅಂಶ ಉಲ್ಲಂಘಿಸಿದಲ್ಲಿ 24 ಗಂಟೆಗಳೊಳಗೆ ವರಿಷ್ಠರಿಗೆ ರಾಜೀನಾಮೆ ಸಲ್ಲಿಸಲು ಬದ್ದ ಎನ್ನುವ ರೀತಿಯ ಬಾಂಡ್ ಬರೆಯಿಸಿಕೊಂಡು ಚುನಾವಣೆ ನಡೆಸಿ ಎಲ್ಲ ಹಳವಂಡಗಳೂ ಒಂದು ಹಂತಕ್ಕೆ ಬರುತ್ತವೆ.
– ಕೆ.ಶ್ರೀನಿವಾಸರಾವ್ ಹರಪನಹಳ್ಳಿ

ಡೆಲ್ಟಾ ಪ್ಲಸ್ ಬಗ್ಗೆ ಎಚ್ಚರಿಕೆ ಅಗತ್ಯ
ಕೋವಿಡ್ ಎರಡನೇ ಅಲೆ ಮುಗಿಯುವ ಮೊದಲೇ ಡೆಲ್ಟಾ ಪ್ಲಸ್ ಎಂಬ ಇನ್ನಷ್ಟು ತೀವ್ರವಾದ ರೂಪಾಂತರಿ ವೈರಾಣು ಹರಡುವ ಭೀತಿ ಸೃಷ್ಟಿಯಾಗಿದೆ. ಭಾರತ ದಲ್ಲಿ ಪ್ರಸ್ತುತ ಲಭ್ಯವಿರುವ ಮೂರು ಕೋವಿಡ್ ಲಸಿಕೆಗಳು, ರೂಪಾಂತರಿ ಸೋಂಕು ಡೆಲ್ಟಾ ಪ್ಲಸ್ ವಿರುದ್ಧವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿವೆಯೇ. ಎಂಬುದನ್ನು ಭಾರತೀಯ ವಿಜ್ಞಾನಿಗಳು ಮುಂದಿನ ಒಂದು ವಾರದ ಅವಧಿಯಲ್ಲಿ ಗುರುತಿಸುವ ಸಂಭವವಿದೆ.

ಪ್ರಸ್ತುತ 11 ರಾಜ್ಯಗಳಲ್ಲಿ ಡೆಲ್ಟಾ ಸೋಂಕಿನ 49 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ಸೇರಿದಂತೆ ನಮ್ಮ ರಾಜ್ಯದ ಐವರಲ್ಲಿ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಇಬ್ಬರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ. ಡೆಲ್ಟಾ ಪ್ಲಸ್ ಸೋಂಕು ಮಹಾರಾಷ್ಟ್ರದಲ್ಲಿ 21 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ತಮಿಳುನಾಡು, ಮಧ್ಯಪ್ರದೇಶ, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ರಾಜಸ್ಥಾನ, ಈ ಎಲ್ಲಾ ರಾಜ್ಯಗಳಲ್ಲಿ ಒಂದು ತಿಂಗಳಲ್ಲಿ ಡೆಲ್ಟಾ ಪ್ಲಸ್ 400 ಪ್ರಕರಣ ಇರುತ್ತದೆಯೋ ಅಥವಾ 4000 ಪ್ರಕರಣ ಇರುತ್ತವೆಯೋ ಎಂಬುದನ್ನು ನೋಡಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ಇದು ಆತಂಕ ವಿಷಯವಲ್ಲ ನಿಜ. ಆದರೆ ಎಚ್ಚರಿಕೆ ತುಂಬಾ ಅಗತ್ಯ. ಹೀಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ವಿಧಾನ ಕಂಡುಕೊಳ್ಳಬೇಕಾಗಿದೆ. ಹರಡದಂತೆ ನಾವು ತಡೆಗಟ್ಟಬೇಕಿದೆ. ಈ ಸೋಂಕು ಹರಡದಂತೆ ಕೇಂದ್ರ ಮತ್ತು ರಾಜ್ಯ ಸರಕಾರ ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಡೆಲ್ಟಾ ಪ್ಲಸ್ ಪತ್ತೆಯಾದ ಸ್ಥಳಗಳಲ್ಲಿ ನಿಗಾವಹಿಸಿ ಇತರರಿಗೆ ಹರಡದಂತೆ ನೋಡಿಕೊಳ್ಳಬೇಕಿದೆ. ಕೇಂದ್ರ- ರಾಜ್ಯ ಸರಕಾರಗಳು ವ್ಯಾಪಕವಾಗಿ ಮತ್ತು ಉಚಿತವಾಗಿ ಸಾರ್ವಜನಿಕ ಆಂದೋಲನಗಳ ಮೂಲಕ ಲಸಿಕೆ ನೀಡಬೇಕು ಲಸಿಕೆ ಉತ್ಪಾದಕ ಕಂಪನಿಗಳು ಪ್ರತಿ ದಿನ ಸರಕಾರಕ್ಕೆ ಮತ್ತು ಖಾಸಗಿಯವರಿಗೆ ನೀಡಿದ ಲಸಿಕೆಗಳು ಕುರಿತು ಪ್ರಕಟಣೆ ನೀಡಬೇಕು.

– ಶೃತಿ ಬಿಜ್ಜರಗಿ ಬಾಗಲಕೋಟ

ಕಲ್ಯಾಣ ಮಂಟಪಗಳಿಗೆ ಅನುಮತಿ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೇರಲಾಗಿದ್ದ, ಹಲವಾರು ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಿ ಜನರ ಜೀವನಕ್ಕೆ ಅನುವು ಮಾಡಿಕೊಟ್ಟಿರುವ ರಾಜ್ಯ ಸರಕಾರ, ಇದೀಗ ಕಲ್ಯಾಣ ಮಂಟಪಗಳಿಗೂ ಮದುವೆ ಕಾರ್ಯಗಳನ್ನು ನಡೆಸಲು ಷರತ್ತುಬದ್ಧ ಅನುಮತಿ ನೀಡಿರುವುದು ಸ್ವಾಗತಾರ್ಹ ನಿರ್ಧಾರ.

ಕಲ್ಯಾಣ ಮಂಟಪಗಳನ್ನೇ ನೆಚ್ಚಿಕೊಂಡಿರುವ ಪುರೋಹಿತರು, ಅಡುಗೆಯವರು, ಫೋಟೋಗ್ರಾಫರ‍್ಸ್, ವಾದ್ಯದವರು, ಡೆಕೋರೇಷನ್, ಹೂ ಬೆಳೆಗಾರರಿಗೆ ಸರಕಾರದ ಈ ಆದೇಶದಿಂದ ಪರೋಕ್ಷವಾಗಿ ಜೀವನ ನಡೆಸುವುದಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ. ಕಲ್ಯಾಣ ಮಂಟಪಗಳಿಗೆ ಹೇರಿದ್ದ ನಿರ್ಬಂಧದಿಂದ ಜನಸಾಮಾನ್ಯರು ಮನೆಯ ಮುಂದೆಯೇ ಮದುವೆ ಮಾಡಿಕೊಳ್ಳಲು ಸೂಕ್ತ ಸ್ಥಳಾವಕಾಶ, ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿದ್ದರು. ಇದೀಗ ಸರಕಾರದ ಈ ಆದೇಶ ದಿಂದ ಜನಸಾಮಾನ್ಯರು ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.
– ಮುರುಗೇಶ.ಡಿ ದಾವಣಗೆರೆ

ಬಸವಣ್ಣನವರ ಪುತ್ಥಳಿ ಸ್ಥಾಪನೆ ಸ್ವಾಗತಾರ್ಹ
12ನೇ ಶತಮಾನದಲ್ಲಿಯೇ ದೇಶಕ್ಕೆ ಪ್ರಜಾಪ್ರಭುತ್ವದ, ಸಂಸತ್‌ನ ಕಲ್ಪನೆಯನ್ನು ನೀಡಿರುವ ವಚನ ಚಳವಳಿಯ ಹರಿಹಾರ ಬಸವಣ್ಣನವರ ಪುತ್ಥಳಿಯನ್ನು ವಿಧಾನಸೌಧ ಆವರಣದಲ್ಲಿ ಸ್ಥಾಪಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಪುತ್ಥಳಿ ನಿರ್ಮಿಸುವಂತೆ ಅಂದಿನ ಸರಕಾರಗಳಿಗೆ ಪತ್ರ ಬರೆದು ಮನವಿ ಮಾಡಿದ್ದೆ.
ಇದರೊಂದಿಗೆ ಈ ವಿಷಯವಾಗಿ ನಿಮಗೂ ಪತ್ರ ಬರೆದಿದ್ದೆ. ಆದರೀಗ ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸೌಧದ ಎದುರು ಜಗಜ್ಯೋತಿ ಬಸವೇಶ್ವರರ
ಪುತ್ಥಳಿಯನ್ನು ನಿರ್ಮಿಸುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಕಾಯಕ ದಾಸೋಹ ಸಮಾನತೆ ಹರಿಕಾರ ರಾಗಿರುವ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವು ದರಿಂದ ವಿಧಾನಸೌಧದ ಗೌರವ ಹೆಚ್ಚಲಿದೆ ಎಂದರೆ ತಪ್ಪಾಗಲಾರದು.
– ಮರಿಲಿಂಗಗೌಡ ಮಾಲಿ ಪಾಟೀಲ್ ಬೆಂಗಳೂರು

Leave a Reply

Your email address will not be published. Required fields are marked *

error: Content is protected !!