Sunday, 8th September 2024

ಇ-ಆಟಿಕೆ ಜತೆಗೆ ಇರಲಿ ಇತರ ಆಟಿಕೆಗಳಿಗೂ ಆದ್ಯತೆ

ಅಭಿಮತ
ರಾಜು. ಭೂಶೆಟ್ಟಿ bhooshettiraj@gmail.com

ಜಾಗತಿಕವಾಗಿ ನೋಡುವುದಾದರೆ ಆಟಿಕೆ ಉದ್ಯಮ ಒಂದು ಬೃಹತ್ ಮಾರುಕಟ್ಟೆಯನ್ನು ಹೊಂದಿರುವ ಹಾಗೂ ಯಾವುದೇ ಒಂದು ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲೂ ಇದರ ಪಾತ್ರ ತುಂಬಾ ದೊಡ್ಡದು. ಆಟಿಕೆಗಳು ಮಗುವಿಗೆ ಮನೋರಂಜನೆ ಒದಗಿಸುವುದರ ಜತೆಗೆ ತಾರ್ಕಿಕ ಚಿಂತನೆ, ಬಿಡು ವಿನ ಸಮಯದ ಸದುಪಯೋಗಕ್ಕೂ ಕಾರಣವಾಗುತ್ತವೆ.

ಅದರಲ್ಲೂ ವಿಶೇಷವಾಗಿ ಜಗತ್ತಿನಲ್ಲೇ ಭಾರತೀಯ ಆಟಗಳು ಸರ್ವಶ್ರೇಷ್ಠ ವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆ, ಸೃಜನಶೀಲತೆಯನ್ನು ಹೊರತರುವಲ್ಲಿಯೂ ತುಂಬಾ ಸಹಕಾರಿಯಾಗಿವೆ. ಭಾರತವು ಸಾಂಸ್ಕೃತಿಕ ವಾಗಿ ಸಾಕಷ್ಟು ಭಿನ್ನ ಆಯಾಮಗಳನ್ನು ಹೊಂದಿರುವ ರಾಷ್ಟ್ರವಾಗಿರುವು ದರಿಂದ ಸ್ಥಳೀಯವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾದ ಆಟ, ಆಟಿಕೆಗಳು ಬೆಳೆದುಬಂದಿರುವುದು ಹಾಗೂ ಆ ಆಟಗಳನ್ನು ಈಗಾಗಲೇ ನಮ್ಮ ಹಿರಿಯರು ಅನುಭವಿಸಿ ಸಾಕಷ್ಟು ಸಂತೋಷಪಟ್ಟಿದ್ದು ಕೂಡ ಸತ್ಯ. ಆದರೆ ಕಾಲ ಕ್ರಮೇಣ ಇಂಟರ್‌ನೆಟ್, ಮೊಬೈಲ್‌ಗಳು, ಜಾಗತೀಕರಣದ ಪ್ರಭಾವ ದಿಂದ ಅತ್ಯಂತ ಶ್ರೀಮಂತಿಕೆಯುಳ್ಳ ಸಾಕಷ್ಟು ಭಾರತೀಯ ಆಟಗಳು, ಆಟಿಕೆಗಳು ಮೂಲೆ ಗುಂಪಾಗಿ ಇತ್ತೀಚಿನ ಮಕ್ಕಳಿಗೆ ಅವುಗಳ ಪರಿಚಯವೇ ಇಲ್ಲದಂತಾಗಿರುವುದು ತುಂಬಾ ನೋವಿನ ಸಂಗತಿಯಾಗಿದೆ.

ಇದಕ್ಕೆ ಕಾರಣ ನಮ್ಮ ಆಟ/ ಆಟಿಕೆಗಳ ಬಗ್ಗೆೆ ನಾವು ನಿರಾಸಕ್ತಿ ಹೊಂದಿ, ದೇಶದ ಆಟ/ಆಟಿಕೆಗಳೇ ಉತ್ತಮವೆಂಬ ತಪ್ಪು ಕಲ್ಪನೆ
ಒಂದೆಡೆಯಾದರೆ, ಇನ್ನೊಂದೆಡೆ ನಮ್ಮ ದೇಶೀಯ ಆಟಗಳಿಗೆ ಜಾಗತಿಕವಾಗಿ ವೇದಿಕೆ ಕಲ್ಪಿಸುವಲ್ಲಿ ಸೋತಿರುವುದು. ಅಂದರೆ ಆನ್‌ಲೈನ್‌ನಲ್ಲೂ ಕೂಡ ಭಾರತೀಯ ಆಟಗಳಿಗಾಗಿ ವಿಶೇಷವಾಗಿ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ, ಪರಂಪರೆ, ಜನಪದ ಕಥೆಗಳನ್ನು ಆಧರಿಸಿದ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ವಿಶ್ವದಾದ್ಯಂತ ಪರಿಚಯಿಸಬೇಕಾಗಿದೆ. ಮಕ್ಕಳು ಆಟಗಳನ್ನು ಬಹಳಷ್ಟು ಇಷ್ಟಪಡುವುದರಿಂದ ಆಟಿಕೆ/ಗೊಂಬೆಗಳ ಮೂಲಕ ಹಲವಾರು ಜೀವನ ಕೌಶಲದ ಪಾಠಗಳ ಸಂದೇಶ ಗಳನ್ನು ತಿಳಿಸಬಹುದಾಗಿದೆ. ವಿಶೇಷವಾಗಿ ಅಂಗನವಾಡಿ ಕೇಂದ್ರಗಳಲ್ಲಿ ಹೆಚ್ಚೆಚ್ಚು ಗೊಂಬೆಗಳನ್ನು ಬಳಸಿ ಕಡಿಮೆ ಸಮಯ ದಲ್ಲಿ, ಹೆಚ್ಚು ಪರಿಶ್ರಮವಿಲ್ಲದೇ ಮಕ್ಕಳ ಬೌದ್ಧಿಕ ವಿಕಾಸವನ್ನು ಮಾಡಬಹುದಾಗಿದೆ.

ಭಾರತದಲ್ಲಿ ಆಟಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಇದ್ದರೂ ಕೂಡ ಉತ್ಪಾದನಾ ವಲಯದಲ್ಲಿ ಮಾತ್ರ ಯಾವುದೇ ಬೆಳವಣಿಗೆ ಕಂಡುಬರುತ್ತಿಲ್ಲ. ಕಾರಣ ಚೀನಾದಂಥ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಕಡಿಮೆ ಬೆಲೆಗಳಿಗೆ ಆಟಿಕೆಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವುದು. ಇದರಿಂದಾಗಿ ಕೋಟ್ಯಂತರ ಮೊತ್ತದ ಹಣವು ಚೀನಾದ ಪಾಲಾಗುತ್ತಿದೆ. ಈ ಕಾರಣಕ್ಕಾಗಿ ಭಾರತದಲ್ಲಿ ಆಟಿಕೆ ತಯಾರಿಕಾ ಉದ್ಯಮವನ್ನು ಸ್ವಾವಲಂಬನೆ ಹೊಂದುವಂತೆ ಮಾಡುವುದರ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸಬಹುದಾಗಿದೆ.

ಇದಕ್ಕಾಗಿ ಆಟಿಕೆಗಳ ತಯಾರಿಕೆಗೆ ಬೇಕಾಗಿರುವ ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ಸಾಮಗ್ರಿಗಳನ್ನು ಸಂಗ್ರಹಿಸುವುದು, ಕೆಲವೊಂದಿಷ್ಟು ಉಪಯೋಗಕ್ಕೆ ಬಾರದ ಪ್ಲ್ಯಾಸ್ಟಿಕ್, ಎಲೆಕ್ಟ್ರಾನಿಕ್ ಆಟಿಕೆ ವಸ್ತುಗಳನ್ನು ಸಂಗ್ರಹಿಸಿ ಮರುಚಕ್ರೀಕರಣ ಗೊಳಿಸಲು ಆದ್ಯತೆ ನೀಡುವುದು ಕೂಡ ತುಂಬಾ ಮುಖ್ಯ. ಆಟಿಕೆ ವಸ್ತುಗಳ ತಯಾರಿಕೆಗಾಗಿ ತಾಂತ್ರಿಕವಾಗಿ ಅಗತ್ಯವಿರುವ ಕೆಲವು ತರಬೇತಿಗಳನ್ನು ಸಂಯೋಜಿಸಿ ಆ ಮೂಲಕ ನುರಿತ ತಜ್ಞರು ಲಭ್ಯವಾಗುವಂತೆ ನೋಡಿಕೊಳ್ಳುವುದು. ಆಧುನಿಕ ಯಂತ್ರೋ ಪಕರಣಗಳನ್ನು ಅಭಿವೃದ್ಧಿಪಡಿಸುವುದು, ಆಟಿಕಾ ತಯಾರಿಕಾ ಕೇಂದ್ರಗಳಿಗೆ ಬೇಕಾದ ಕೆಲವು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.

ಈ ರೀತಿಯಾಗಿ ಆಟಿಕಾ ಉದ್ಯಮದ ಅಭಿವೃದ್ಧಿಗಾಗಿ ಪರಿಣಾಮಕಾರಿ ಕಾರ್ಯಯೋಜನೆಗಳನ್ನು ರೂಪಿಸಿ ಉದ್ಯಮಿಗಳಲ್ಲಿ ವಿಶ್ವಾಸ ಮೂಡಿಸಿ ಬೃಹತ್ ಪ್ರಮಾಣದಲ್ಲಿ ಹೂಡಿಕೆಯಾಗುವಂತೆ ನೋಡಿಕೊಳ್ಳಬೇಕಾಗಿದೆ. ಬೃಹತ್ ಪ್ರಮಾಣದ ಹೂಡಿಕೆ ಯಿಂದ ಮಾತ್ರ ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾಗುತ್ತದೆ. ಬೃಹತ್ ಪ್ರಮಾಣದ ಉತ್ಪಾದನೆಯಿಂದ ಮಾತ್ರ ದೇಶೀಯ
ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಪೈಪೋಟಿ ಒಡ್ಡಲು ಸಾಧ್ಯವಾಗುತ್ತದೆ. ಆಟಿಕೆ ಉದ್ಯಮಕ್ಕೆ ಇರುವ ಬಹು ದೊಡ್ಡ ಸವಾಲೆಂದರೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಟಿಕೆಗಳನ್ನು ಉತ್ಪಾದಿಸುವುದು. ಈಗಾಗಲೇ ಚೀನಾದಿಂದ ನಮ್ಮ ಮಾರುಕಟ್ಟೆೆಗೆ ಬರುತ್ತಿರುವ ಆಟಿಕೆಗಳು ಅತೀ ಕಡಿಮೆ ಬೆಲೆಗೆ ದೊರೆಯುತ್ತಿದ್ದರೂ ಕೂಡ ಗುಣಮಟ್ಟ ಮಾತ್ರ ತುಂಬಾ ಕಳಪೆಯಾಗಿದೆ. ಈ ಬೆಲೆಗೆ ಪೈಪೋಟಿ ಒಡ್ಡುವುದರ ಜತೆಗೆ ಗುಣಮಟ್ಟಕ್ಕೂ ಆದ್ಯತೆ ನೀಡಬೇಕಿದೆ.

ವಿವಿಧ ಬೊಂಬೆಗಳು, ಕ್ರಿಕೆಟ್ ಕಿಟ್, ಬೋರ್ಡ್ ಮೂಲಕ ಆಡುವ ಆಟಗಳು, ಆಕ್ಷನ್ ಆಟಿಕೆಗಳು, ಕಾರು ಮತ್ತು ರೈಲಿನ ಆಟಿಕೆಗಳು, ಮಾತನಾಡುವ ಆಟಿಕೆಗಳು, ಯಂತ್ರ ಮಾನವ, ರಿಮೋಟ್ ಕಂಟ್ರೋಲ್‌ನಿಂದ ನಿಯಂತ್ರಿಸುವ ಆಟಿಕೆಗಳು, ವಿಡಿಯೋ ಗೇಮ್ಸ್‌, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಆಟಿಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂಥ ಆಧುನಿಕ ಆಟಿಕೆಗಳಿಂದ ಹಿಡಿದು, ಭಾರತೀಯ ಸ್ಥಳೀಯ ಜನಪದ, ಸಾಂಸ್ಕೃತಿಕ ಶ್ರೀಮಂತಿಕೆ ಬಿಂಬಿಸುವ ಆಟಿಕೆಗಳೆಲ್ಲಾ ಭಾರತದಲ್ಲೇ ಉತ್ಪಾದಿಸಿ ಈ ಕ್ಷೇತ್ರವನ್ನು ಸಂಪೂರ್ಣ ಸ್ವಾವಲಂಬನೆಗೊಳಿಸಲು ಪಣತೊಡಬೇಕಾಗಿದೆ. ಒಟ್ಟಾರೆಯಾಗಿ ಇ-ಆಟಿಕೆ ಜತೆಗೆ ಕಣ್ಮರೆಯಾಗಿರುವ ಅಥವಾ ಕಣ್ಮರೆಯಾಗುತ್ತಿರುವ ಆ-ಆಟಿಕೆಯನ್ನು ಉಳಿಸಿ ಬೆಳೆಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!