Tuesday, 23rd April 2024

ಸ್ವಾತಂತ್ರ್ಯ ಕರ್ಮಯೋಗಿ ತಗಡೂರು ರಾಮಚಂದ್ರರಾಯರು!

ಸ್ಮರಣೆ
ನಂ ಶ್ರೀಕಂಠಕುಮಾರ್‌ ಮೈಸೂರು

ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡವರಲ್ಲಿ ಹಳೆಯ ಮೈಸೂರು ಪ್ರಾಂತ್ಯದಲ್ಲಿ ತಗಡೂರು ರಾಮಚಂದ್ರರಾಯರು ಪ್ರಮುಖರು. ದಿನಾಂಕ 06-10-1898 ರಂದು ಚಾಮರಾಜನಗರ ತಾಲ್ಲೂಕಿನ ಕುದೇರು ಗ್ರಾಮದಲ್ಲಿ ಜನಿಸಿ ನಂತರ ತಗಡೂರು ಗ್ರಾಮ ಅವರ ಕಾರ್ಯಕ್ಷೇತ್ರವಾಯಿತು.

ತಗಡೂರು ಗಾಂಧಿ ಎಂದೇ ಪ್ರಖ್ಯಾತರಾಗಿ ‘ಅನ್ಯಮಿಂದ್ರ ಕರಿಷ್ಯಾಮಿ’ ಎಂಬಂತೆ ಅವರು ದೇಶವ್ಯಾಪ್ತಿ ಹಬ್ಬಿದ್ದ ಸ್ವಾತಂತ್ರ್ಯದ ಕಿಚ್ಚಿಗೆ ಬದುಕನ್ನೆಲ್ಲಾ ಮುಡುಪಾಗಿಟ್ಟರು. ಬ್ರಿಟೀಷರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಸಾಮಾಜಿಕ ಸೇವೆಯಲ್ಲಿ ಸಮರ್ಪಿಸಿಕೊಂಡರು. ಬಡತನ-ಸಿರಿತನಗಳ ಸಮನ್ವಯಕಾರರಾಗಿ ಅವರ ಆದ್ಯತೆ ಸರ್ವ ಸಮಾನತೆಯಾಗಿತ್ತು. ಅವರು ಭೂದಾನ, ಗ್ರಾಮದಾನ ಹಾಗೂ ಖಾದಿ ಈ ಮೂರೂ ಚಳವಳಿಗಳಲ್ಲಿ ಪ್ರಮುಖ ನೇತಾರರಾಗಿದ್ದ ಅವರನ್ನು ಜನಸಾಮಾನ್ಯರು ತಗಡೂರು ಗಾಂಧಿ, ಕರ್ನಾಟಕ ಗಾಂಧಿ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರೊಡನೆ ಹೋಲಿಸಿ ದ್ದುಂಟು. ಇವರು ಮಹಾತ್ಮ ಗಾಂಧಿಯವರ ನಿಷ್ಠಾವಂತ ಅನುಯಾಯಿಗಾಗಿ ಸ್ವಾತಂತ್ರ್ಯ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡರು.

ಬಾಲ್ಯದಲ್ಲೇ ಶಾಲೆಗೆ ಹೋಗುವ ವಯಸ್ಸಿನಲ್ಲಿ ಸಣ್ಣ ಗಾಡಿಯನ್ನು ದಬ್ಬಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಇವರು ಮುಂದೆ ಅಪಾರ ಲೋಕಾನುಭವವನ್ನು ಪಡೆದು ಸಮಾಜಕ್ಕೆ ಧಾರೆ ಎರೆದರು. ರಾಯರು ಬಾಲ್ಯದಲ್ಲೇ ಮಹಾತ್ಮ ಗಾಂಧಿರವರ ಪ್ರಭಾವಕ್ಕೆ ಒಳಗಾಗಿ ಅವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಸಮರದಲ್ಲಿ ಧುಮುಕಿದರು. ಅವರ ಹೋರಾಟ  ಸ್ವಾರ್ಥವಾಗಿದ್ದು, ಪರರ ಹಿತಕ್ಕಾಗಿ, ಲೋಕ ಸೇವೆಗಾಗಿ ಮೀಸಲಾಗಿಟ್ಟರು. ಅವರ ಬಾಳಿನ ಉದ್ದಕ್ಕೂ ನಿರಂತರ ಎಡೆಬಿಡದೆ ಮಾಡಿರುವ ರಚನಾ ತ್ಮಕ ಕಾರ್ಯ ಗಳಿಂದ ಜನಾನುರಾಗಿಯಾಗಿ ಅವರು ಪ್ರಖ್ಯಾತರಾದರು.

1928 ರಲ್ಲಿ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯ ಪಾತ್ರವಹಿಸಿ ಮೈಸೂರಿನಲ್ಲಿ ಸೈಮನ್ ಕಮಿಷನ್
ಬಹಿಷ್ಕಾರ ಮಾಡಿ ಮೊದಲನೇ ಬಾರಿ ಸೆರೆಮನೆ ವಾಸ ಅನುಭವಿಸಿದರು. 1957ರಲ್ಲಿ ಪೂಜ್ಯ ವಿನೋಬಾಜಿ ರವರ ಸಲಹೆಯಂತೆ ಮೈಸೂರು ಪ್ರಾಂತ್ಯದ ಇಲವಾಲ ಗ್ರಾಮದಲ್ಲಿ ಅಖಿಲ ಭಾರತ ಗ್ರಾಮದಾನ ಪರಿಷತ್ ಸೇರಿತ್ತು. ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅಧ್ಯಕ್ಷರಾಗಿದ್ದ ಸಭೆಯಲ್ಲಿ ಹಲವು ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಅಖಿಲ
ಭಾರತ ಸರ್ವ ಸೇವಾ ಸಂಘದವರು ಹಾಜರಿದ್ದರು. ಅಂದಿನ ಪರಿಷತ್ ಸಮಾವೇಶದಲ್ಲಿ ಭೂದಾನ- ಗ್ರಾಮದಾನ ತತ್ವವನ್ನು ಸಂಪೂರ್ಣವಾಗಿ ಅಂಗೀಕರಿಸಲಾಯಿತು.

ಪ್ರಧಾನಿ ಜವಹಾರಲಾಲ್ ನೆಹರು ಮಾದರಿ ಶಾಸನವನ್ನು ತಯಾರಿಸಿ ಕೇಂದ್ರ ಸರ್ಕಾರದಲ್ಲಿ ಅಂಗೀಕರಿಸಿ, ಎಲ್ಲ ರಾಜ್ಯಗಳಲ್ಲೂ ಜಾರಿಗೆ ತರುವಂತೆ ಕಳುಹಿಸಿದರು. ನಂತರ ಕರ್ನಾಟಕದಲ್ಲಿಯೂ ಸಹ ಶಾಸನವನ್ನು ಜಾರಿಗೆ ತರುವಂತೆ ಹಲವು ದಶಕಗಳ ನಿರಂತರ ಹೋರಾಟ ನಡೆಸಿದರು. ಹಾಗೆಯೇ ಕರ್ನಾಟಕದಲ್ಲಿ ಕ್ರಾಂತಿಕಾರಕ ವಿಧೇಯಕವೆಂದೇ ಪರಿಗಣಿಸಲಾದ ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ವಿಧೇಯಕ ಜಾರಿಗೆ ಹೋರಾಟ ಜಾರಿಗೆ ತರುವಂತೆ ಒತ್ತಾಯಿಸಿದ್ದರಿಂದ 1985 ರಲ್ಲಿ ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ರಾಜ್ ವಿಧೇಯಕ ಜಾರಿಗೆ ತರಲಾಯಿತು.

1983ರಲ್ಲಿ ರಾಷ್ಟ್ರಪತಿಗಳಾದ ಗ್ಯಾನಿ ಜೇಲ್‌ಸಿಂಗ್, ನೋಬೆಲ್ ಪ್ರಶಸ್ತಿ ವಿಜೇತ ಡಾ. ನಾರ್ಮನ್ ಬೋರ್ಲಾಂಗ್ ಜತೆಗೂಡಿ ಜಮ್ನಾ ಲಾಲ್ ಬಜಾಜ್ ಪ್ರಶಸ್ತಿಯನ್ನು ರಾಯರುಗೆ ಪ್ರದಾನ ಮಾಡಿ ಗೌರವಿಸಿದ್ದರು. ತಮ್ಮ 90 ವರ್ಷಗಳ ನಿಸ್ವಾರ್ಥ ಸೇವೆ ನಂತರ 28-12-1988 ರಲ್ಲಿ ಸ್ವರ್ಗಸ್ಥರಾದರು. ಸ್ವಾತಂತ್ರ್ಯ ಹೋರಾಟ ಹಾಗೂ ಸಾಮಾಜಿಕ ಕಾರ್ಯ ಗೌರವಿಸಲು ರಾಯರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿ ಸ್ಮರಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!