Tuesday, 23rd April 2024

ಕರೋನಾ ಸಮಯದಲ್ಲಿ ಸೆಮಿಸ್ಟರ್ ಪದ್ದತಿಗೆ ಗುಡ್ ಬೈ

ಅಭಿಮತ

ಛಾಯಾದೇವಿ ಈ

ಸೆಮಿಸ್ಟರ್ ಶಿಕ್ಷಣ ಪದ್ಧತಿಯಿಂದ ರೋಸಿಹೋಗಿದ್ದ ವಿದ್ಯಾರ್ಥಿಗಳಿಗೆ, ಈ ಕರೋನಾ ಎಂಬ ಮಹಾಮಾರಿಯಿಂದ ಶಿಕ್ಷಣ ಹೆಚ್ಚಿನ ಬದಲಾವಣೆ ತರುವ ಪ್ರಯತ್ನ ಮಾಡಬಹುದಾಗಿದೆ.

ಹಲವಾರು ವರ್ಷಗಳಿಂದ, ಈ ಸೆಮಿಸ್ಟರ್ ಪದ್ಧತಿಯಲ್ಲಿ, ವಿದ್ಯಾರ್ಥಿಗಳು ಯಾಂತ್ರಿಕವಾಗಿ ಕಲಿಯುತ್ತಿದ್ದು ಅವರ ಕ್ರಿಯಾಶೀಲತೆ ಹಾಗೂ ಆಲೋಚನಾ ಶಕ್ತಿಯನ್ನು ಕುಗ್ಗಿಸುವಂತೆ ಮಾಡಿತ್ತು. ಪದವಿಪೂರ್ವ, ಪದವಿ ಕಾಲೇಜುಗಳಲ್ಲಿ ಹಾಗೂ ವಿಶ್ವವಿದ್ಯಾ ಲಯದ ಸ್ನಾತಕೋತ್ತರ ಶಿಕ್ಷಣದ ವ್ಯವಸ್ಥೆಗಳಲ್ಲಿ ಈ ಸೆಮಿಸ್ಟರ್ ಪದ್ಧತಿ ಲಗ್ಗೆಯ ಪರಿಣಾಮವಾಗಿ, ವಿದ್ಯಾರ್ಥಿಗಳು ಹಲವಾರು
ತೊಂದರೆಗಳಿಗೆ ಈಡಾಗಿದ್ದರು. ಉದಾಹರಣೆಗೆ, ಪರೀಕ್ಷಾ ದೃಷ್ಟಿಯನ್ನಿಟ್ಟುಕೊಂಡು, ಕೇವಲ ಅಂಕಗಳಿಗಾಗಿ ಯಾಂತ್ರಿಕ ಶಿಕ್ಷಣ ವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸೆಮಿಸ್ಟರ್ ಪದ್ಧತಿಯ ಶಿಕ್ಷಣದಲ್ಲಿ ಮುಂದುವರಿಯುತ್ತಿದ್ದರು. ಹಿಂದೆ ಕಲಿಯುತ್ತಿದ್ದ ವಾರ್ಷಿಕ ಪದ್ಧತಿಯ ಶಿಕ್ಷಣದಿಂದ ಅಂದಿನ ಪೀಳಿಗೆಯವರು ಉತ್ತಮ ರೀತಿಯಲ್ಲಿ ಪಾಠಪ್ರವಚನಗಳನ್ನು ಅರ್ಥೈಸಿಕೊಂಡು ಬದುಕಿಗೆ ಹತ್ತಿರವಾಗುವಂಥ ಅರ್ಥಪೂರ್ಣ ಶಿಕ್ಷಣದ ಅಧ್ಯಯನವನ್ನು ನಡೆಸುತ್ತಿದ್ದರು.

ಪರಿಪೂರ್ಣ ಶಿಕ್ಷಣವೆಂದರೆ ಕೇವಲ ಅಂಕಗಳನ್ನು ಗಳಿಸುವಂತದ್ದಲ್ಲ. ಅದು ಓದುವ ಪಾಠ – ಪ್ರವಚನ ಶಿಕ್ಷಣದ ಜತೆಯಲ್ಲಿ, ದೈಹಿಕ ಕ್ರೀಡಾ ಶಿಕ್ಷಣ, ಮಾನಸಿಕ ಶಿಕ್ಷಣ , ಆಧ್ಯಾತ್ಮಿಕ ಶಿಕ್ಷಣ, ನೈತಿಕ ಶಿಕ್ಷಣ, ಸಾಂಸ್ಕೃತಿಕ ಮನರಂಜನಾ ಶಿಕ್ಷಣ, ಸಮಗ್ರ ವ್ಯಕ್ತಿತ್ವ ವಿಕಸನ ನೀಡುವ ಮೌಲ್ಯಯುತ ಶಿಕ್ಷಣ ಇತ್ಯಾದಿ ಎಲ್ಲವೂ ಪರಿಪೂರ್ಣ ನಾಂದಿಯಾಗಿದ್ದು ಹಾಗೂ ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುವುದು ಎಂದರೆ ಅತಿಶಯೋಕ್ತಿಯಾಗಲಾರದು.

ಶಿಕ್ಷಣವು ಮನುಷ್ಯನಿಗೆ ಅತ್ಯವಶ್ಯಕವಾಗಿದ್ದು, ಆಧುನಿಕ ಸಮಾಜದ ಮೂಲಭೂತ ಚಟುವಟಿಕೆಗಳಲ್ಲೊಂದಾಗಿದೆ. ಶಿಕ್ಷಣವು ಒಂದು ರೀತಿಯ ಪ್ರಕ್ರಿಯೆಯಾಗಿದ್ದು ಆ ಮುಖಾಂತರ ಸಮಾಜದ ಸಂಸ್ಕೃತಿ, ಸಾಮಾಜಿಕ ಮೌಲ್ಯ ಹಾಗೂ ಗುಣಗಳು ಮೊದಲಾ ದವುಗಳನ್ನು ರೂಢಿಸಿಕೊಂಡು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸುವುದಾಗಿದೆ. ಮಾನವನನ್ನು ಉತ್ತಮ ನಾಗರಿಕನನ್ನಾಗಿ ಹಾಗೂ

ಸಮಾಜದ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಒಂದು ಅಸ್ತ್ರ ಎಂದರೆ ಈ ಶಿಕ್ಷಣ. ಈ ಸೆಮಿಸ್ಟರ್ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಕೂಡಲೇ ಪರೀಕ್ಷೆಗೆ ಸಿದ್ಧಪಡಿಸಿಕೊಂಡು ಅತ್ಯುತ್ತಮ ಅಂಕಗಳನ್ನು ಗಳಿಸಬಹುದೇ ವಿನಃ ಮೌಲ್ಯಯುತವಾದ ಶಿಕ್ಷಣವನ್ನಲ್ಲ. ಹಾಗೂ ಯಾಂತ್ರಿಕವಾಗಿ ಪಾಠ ಪ್ರವಚನಗಳನ್ನು ಒತ್ತಾಯಪೂರ್ವಕವಾಗಿ ಹಾಗೂ ಬಲವಂತವಾಗಿ ಕಲಿತು ಈ ಪದ್ಧತಿಯಲ್ಲಿ ಕೇವಲ ಕಡಿಮೆ ಅವಧಿ ಇರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಪಾಠ
ಪ್ರವಚನಗಳ ಮೇಲೆ ಏಕಾಗ್ರತೆಯನ್ನು ಯಾಂತ್ರಿಕವಾಗಿ ತೋರಿಸುತ್ತಾರೆ.

ಆದರೆ ಈ ಸೆಮಿಸ್ಟರ್ ಪದ್ಧತಿಯಿಂದ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು. ಕಾರಣವೇನೆಂದರೆ, ಈ ಪದ್ಧತಿಯಿಂದ
ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಶಿಕ್ಷಣದ ಅಸಮತೋಲನ ಕಂಡುಬರುವುದರ ಜತೆಗೆ ನೈತಿಕ ಹಾಗೂ ಆಧ್ಯಾತ್ಮಿಕ  ಶಿಕ್ಷಣ ಗಳಿಂದ ವಂಚಿತರಾಗುತ್ತಾರೆ. ಸಾಂಸ್ಕೃತಿಕ ಹಾಗೂ ಇನ್ನಿತರ ಮನರಂಜನೆಗಳಲ್ಲಿ ಹಿಂದುಳಿಯಬೇಕಾಗುತ್ತದೆ. ಕ್ರೀಡೆ ಮತ್ತು ಮತ್ತಿತರ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಬಿದ್ದಂತಾಗುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುವುದರ ಜತೆಗೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆೆಗಳನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾಗುತ್ತಾರೆ. ನೀತಿ ಬೋಧನೆಯಿಂದ ವಂಚಿತರಾಗುತ್ತಾರೆ.

ಮಂದಗತಿಯಲ್ಲಿ ಅರ್ಥೈಸಿಕೊಳ್ಳುವ ವಿದ್ಯಾರ್ಥಿಗಳಿಗಂತೂ ಈ ಪದ್ಧತಿ ಬಹಳ ಕೆಡುಕನ್ನು ಉಂಟುಮಾಡುವಂಥದ್ದು, ಬಹು ಮುಖ್ಯವಾಗಿ ವಿದ್ಯಾರ್ಥಿಗಳು ಪುಸ್ತಕದ ಹುಳಗಳಾಗುತ್ತಾರೆ ಹಾಗೂ ಸಾಮಾಜಿಕ ಮೌಲ್ಯಗಳು ಈ ತರಹದ ಶಿಕ್ಷಣದಲ್ಲಿ ಸಿಗದೆ ಒಟ್ಟಾರೆ ವಿದ್ಯಾರ್ಥಿಯ ಮೂಲಭೂತ ವಿಕಾಸಕ್ಕೆ ಪೆಟ್ಟು ಬೀಳುವುದರ ಜತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಮೌಲ್ಯಾಧಾರಿತ ಶಿಕ್ಷಣಕ್ಕೆ ಪಾಠ ಪ್ರವಚನದ ಜತೆಗೆ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ವಾರ್ಷಿಕ ಪದ್ಧತಿ ಶಿಕ್ಷಣ ಅಗತ್ಯವೂ ಹಾಗೂ ಅರ್ಥಪೂರ್ಣವೂ ಹೌದು ಎಂದರೆ ತಪ್ಪಾಗಲಾರದು. ಈ ಕರೋನಾ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಗಿರುವ ಅವೈಜ್ಞಾನಿಕ ಹಾಗೂ ವೈಚಾರಿಕ ರಹಿತ ಸೆಮಿಸ್ಟರ್ ಪದ್ಧತಿಯನ್ನು ಈ ವರ್ಷದಿಂದಲೇ ತೆಗೆದು ಹಾಕಿ ವಾರ್ಷಿಕ ಶಿಕ್ಷಣ ಪದ್ಧತಿಯನ್ನು ಪರಿಚಯಿಸಿದರೆ ಕೂಡಲೇ ಪರೀಕ್ಷೆ ನಡೆಸುವ ಅವಶ್ಯಕತೆ ಇರುವುದಿಲ್ಲ. ಆ ಮೂಲಕ ವಿದ್ಯಾರ್ಥಿಗಳ ಆರೋಗ್ಯವನ್ನು ಕಾಪಾಡುವುದರ ಜತೆಗೆ ಸಾರ್ವಜನಿಕರ ಆರೋಗ್ಯ ಹಾಗೂ ಸುವ್ಯವಸ್ಥೆೆಯಿಂದ ಕಾಪಾಡಿಕೊಳ್ಳ ಬಹುದು.

ತಾಂತ್ರಿಕ ಪದವಿ ಪೂರ್ವ, ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿಭಾಗಗಳು ಮುಂದಿನ ವರ್ಷ
ಪರೀಕ್ಷೆಗಳನ್ನು ನಡೆಸಬಹುದು. ಇದರ ಜತೆಗೆ ಆನ್‌ಲೈನ್ ತರಗತಿಗಳನ್ನು ಕೂಡ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!