Thursday, 18th April 2024

ದಾಖಲೆಯ ದಾಖಲಾತಿಯತ್ತ ಸರಕಾರಿ ಶಾಲೆಗಳು

ಅಭಿಪ್ರಾಯ 

ಭಾರತಿ ಎ.ಕೊಪ್ಪ

bharathikoppa101@gmail.com

‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ವಿದ್ಯಾ ದೇಗುಲಕ್ಕೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿ, ಮಕ್ಕಳಿಗೆ ವಿದ್ಯೆಯೆಂಬ ಪಥದಲ್ಲಿ ಸಾಗುವಂತೆ
ಮುನ್ನಡೆಸುವ ಪೋಷಕರು ಮತ್ತು ಆ ಹಾದಿಯಲ್ಲಿ ಸಾಗುವ ಮಕ್ಕಳ ಮನದಂಗಳದಲ್ಲಿ ಕನಸುಗಳು ನೂರೆಂಟಿರುತ್ತವೆ.

ಸುಮಾರು ಒಂದು ದಶಕದಿಂದ ಈಚೆಗೆ ಪೋಷಕರು ಸಾಮಾನ್ಯವಾಗಿ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಿದರೆ ಮಾತ್ರ ಪರಿಪೂರ್ಣ ಶಿಕ್ಷಣ ಲಭಿಸುತ್ತದೆ ಎಂಬ ಮನಸ್ಥಿತಿಯನ್ನು ತಳೆದಿದ್ದರು. ಸರಕಾರಿ ಶಾಲೆಗಳು ಬಹಳಷ್ಟು ಉತ್ತಮವಾಗಿದ್ದರೂ ಕೂಡ ಖಾಸಗಿ ಶಾಲೆಗಳತ್ತ ಪೋಷಕರ ಚಿತ್ತ ಕಳೆದ ದಶಕದಲ್ಲಿ ಸಾಮಾನ್ಯವಾಗಿತ್ತು.

ಆದರೀಗ ಕಾಲ ಬದಲಾಗಿದೆ. ‘ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕು’ ಎಂಬ ಮಾತು ಇದೀಗ ಅಕ್ಷರಶಃ ನಿಜ ವಾಗುತ್ತಿದೆ. ಕಳೆದ ಸುಮಾರು ಒಂದೂವರೆ ವರ್ಷದಿಂದ ಕಾಡುತ್ತಿರುವ ಕರೋನಾ ಜನಸಾಮಾನ್ಯರಿಗೆ ಬಹು ದೊಡ್ಡ ಹೊಡೆತ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಂತೂ ಮಕ್ಕಳಿಗೆ ಮುಖಾಮುಖಿ ಕಲಿಕೆ ಸಿಗದೆ ಅಗಾಧ ನಷ್ಟವಾಗಿದೆ. ಆದರೆ ಈ ಸಮಯದಲ್ಲಿ ಶಾಲಾ ದಾಖಲಾತಿಯ ವಿಚಾರದಲ್ಲಿ ಮತ್ತೆ ಸರಕಾರಿ ಶಾಲೆ ದಾಖಲೆ ಬರೆವ ಇತಿಹಾಸ ಮರುಕಳಿಸುವಂತಿದೆ. ಸುಮಾರು 70-80ರ ದಶಕದಲ್ಲಿ ಎಲ್ಲರೂ ಸರಕಾರಿ ಶಾಲೆಗಳಲ್ಲಿ ಓದಿ, ಯಶಸ್ವಿ ಶಿಕ್ಷಣ ಪಡೆಯುತ್ತಿದ್ದರು.

ಆದರೀಗ ಖಾಸಗಿ ಶಾಲೆಗಳ ದಾಖಲಾತಿಯ ಭರಾಟೆಯ ನಡುವೆಯೂ ಅದೇ ಸರಕಾರಿ ಶಾಲೆಗಳತ್ತ ಇದೀಗ ಪೋಷಕರು ಮತ್ತೆ ಮುಖ ಮಾಡುತ್ತಿದ್ದಾರೆ. 2021-22ನೇ ಸಾಲಿನ ಕೇವಲ 15 ದಿನಗಳ ದಾಖಲಾತಿಯ ಮಾಹಿತಿಯನ್ವಯ ಸರಕಾರಿ ಶಾಲೆಗಳಲ್ಲಿ 16,52,613 ಮಕ್ಕಳು,ಅನುದಾನಿತ ಶಾಲೆಗಳಲ್ಲಿ 3,10,883 ಮಕ್ಕಳು ಮತ್ತು ಖಾಸಗಿ ಶಾಲೆಗಳಲ್ಲಿ 4,48,499 ಮಕ್ಕಳು ದಾಖಲಾಗಿರುವುದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳತ್ತ ಮಕ್ಕಳು ಮುಖ ಮಾಡಿರುವುದಕ್ಕೆ ಸಾಕ್ಷಿಯಾಗಿದೆ.

ಕರೋನಾ ತಂದೊಡ್ಡಿದ ಆರೋಗ್ಯ ಕಾಳಜಿ ಪೋಷಕರ ಮನದಲ್ಲಿ, ಮಕ್ಕಳು ದೂರದ ಖಾಸಗಿ ಶಾಲೆಗಳಲ್ಲಿ ಓದುವುದಕ್ಕಿಂತ ಮನೆಯ ಸಮೀಪದ ಸರ್ಕಾರಿ ಶಾಲೆಗಳಲ್ಲಿ ಓದುವುದು ಉತ್ತಮ’ ಎಂಬ ಭಾವನೆಯನ್ನು ಬಿತ್ತಿದೆ. ಅದರೊಂದಿಗೆ ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಕೊರತೆ ಉಂಟಾಗಿ ಖಾಸಗಿ ಶಾಲೆಗಳು ನೀಡುವ ಆನ್‌ಲೈನ್ ಶಿಕ್ಷಣಕ್ಕೆ ಪರದಾಡುವುದಕ್ಕಿಂತ, ಮನೆಯ ಸಮೀಪದ ಸರಕಾರಿ ಶಾಲಾ ಶಿಕ್ಷಕರು ನೀಡುವ ವಿದ್ಯಾಗಮ ಶಿಕ್ಷಣ, ಮನೆ ಭೇಟಿಯಂತಹವು ಮಕ್ಕಳಿಗೆ ಹೆಚ್ಚು ಉಪಯುಕ್ತ ಎಂಬ ಭಾವವು ಹಲವು ಪೋಷಕರಲ್ಲಿ ಮೂಡಿದೆ. ಕರೋನಾ ತಂದಿಟ್ಟ ಲಾಕ್‌ಡೌನ್ ಆರ್ಥಿಕವಾಗಿ ಪೋಷಕರಿಗೆ ಬಹುದೊಡ್ಡ ಪೆಟ್ಟು ಕೊಟ್ಟಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಪಾವತಿ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಶುಲ್ಕದ ಹೊಡೆತಕ್ಕಿಂತ ಸರಕಾರಿ ಶಾಲೆಯ ಶಿಕ್ಷಣವು ಉತ್ತಮ ಗುಣಮಟ್ಟದಿಂದ ಕೂಡಿದ್ದು,ಉಚಿತವಾಗಿ ದೊರೆಯುತ್ತದೆ ಎಂಬುದು ಕೆಲವು ಪೋಷಕರಿಗೆ ಮನದಟ್ಟಾದಂತಿದೆ. ಹಲವೆಡೆ ಸ್ವತಃ ಶಾಲಾ ಶಿಕ್ಷಕರೇ ಶಾಲಾ ಗೋಡೆಗಳಿಗೆ ಬಣ್ಣದ ಚಿತ್ತಾರ ಬರೆದು ಸುಂದರವಾಗಿಸಿದ್ದರೆ, ಕೆಲವೆಡೆ ದಾನಿಗಳ ಸಹಕಾರದಿಂದ ಗೋಡೆಗಳ ಚಿತ್ತಾರಗಳನ್ನು ಬರೆಸಿದ್ದಾರೆ, ಇನ್ನೂ ಕೆಲವೆಡೆ ಶಾಲಾ ಭೌತಿಕ ಸೌಲಭ್ಯವನ್ನು ಉನ್ನತೀಕರಿಸಿದ್ದಾರೆ.

ಶಾಲಾ ಎಸ್‌ಡಿಎಂಸಿಯವರು ಕೂಡ ಪೋಷಕರ ಮನವೊಲಿಸಿ ಶಾಲಾ ದಾಖಲಾತಿಯನ್ನು ಹೆಚ್ಚಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಕೆಲವೆಡೆ ಸರಕಾರಿ
ಶಾಲೆಗಳ ಮುಂದೆ ಪೋಷಕರು ತಮ್ಮ ಮಗುವಿನ ದಾಖಲಾತಿಗಾಗಿ ಸರದಿ ಸಾಲಿನಲ್ಲಿ ನಿಂತಿರುವುದು ವರದಿಯಾಗುತ್ತಿದ್ದು, ಸರಕಾರಿ ಶಾಲೆಗಳಿಗೆ ಇದರಿಂದ ಆನೆಬಲವು ಬಂದಂತಾಗಿದೆ ಎಂಬುದಂತೂ ದಿಟ. ’ನಮ್ಮ ಸರಕಾರಿ ಶಾಲೆ,ನಮ್ಮ ಹೆಮ್ಮೆ’ ಎಂಬ ಮನಸ್ಥಿತಿ ಜನರಲ್ಲಿ ಮೂಡಿ, ಸರಕಾರಿ ಶಾಲೆಗಳ ಉನ್ನತೀ ಕರಣದಲ್ಲಿ ನಾಗರಿಕರು ಕೈಜೋಡಿಸಿದರೆ ಸರಕಾರಿ ಶಾಲೆಗಳು ಮತ್ತೆ ಉತ್ತುಂಗಕ್ಕೇರುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *

error: Content is protected !!