Saturday, 27th July 2024

ಹಾಸ್ಯಗಂಗೆಗೊಂದು ಹಾರ್ದಿಕ ಹಾರೈಕೆ

ಅನಿಸಿಕೆ
ಅಣಕು ರಮಾನಾಥ್

ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗುವ ಹೆದ್ದಾರಿಯಲ್ಲಿ ನವನಗರದಿಂದ ಕೊಂಚ ಮುಂದಕ್ಕೆ ಹೋದರೆ ಒಂದು ಸಾಂಸ್ಕೃತಿಕ ಸಭಾಂಗಣವಿದೆ. ಧಾರವಾಡದ ಗ್ರಾಮೀಣ ಬ್ಯಾಂಕೊಂದು ಅಲ್ಲಿ ಹಾಸ್ಯಸಂಜೆಯೊಂದನ್ನು ಹಮ್ಮಿಕೊಂಡಿತ್ತು. ಅದರ ಅಂಗ ವಾಗಿ ತುಮಕೂರಿನಿಂದ ಮೃತ್ಯುಂಜಯ, ಹುಬ್ಬಳ್ಳಿಯಿಂದ ‘ಟಿಂಗರಬುಡ್ಡಣ್ಣ’ ಖ್ಯಾತಿಯ ಜಿ.ಎಚ್.ರಾಘವೇಂದ್ರ, ಶಿವಮೊಗ್ಗ ದಿಂದ ಅಸಾದುಲ್ಲಾ ಬೇಗ್, ಗಂಗಾವತಿಯಿಂದ ಪ್ರಾಣೇಶ್, ಬೆಂಗಳೂರಿನಿಂದ ಮೃತ್ಯುಂಜಯ, ತೊಗೊಂಡ್ರೆ ರಾಮನಾಥ್ ಫ್ರೀ ಸ್ಕೀಂನಲ್ಲಿ ನಾನು ಹೋದೆವು. ತುಮಕೂರಿನಲ್ಲಿ ಮುಖಪರಿಚಯ ಮಾತ್ರ ಆಗಿದ್ದ ಈ ‘ಮಡಿಕೋಲಿಗೊಂದು ಕನ್ನಡಕ’ದಂತಿದ್ದ ವ್ಯಕ್ತಿಯ ಮಾತನ್ನು ಅಂದು ಮೊಟ್ಟಮೊದಲ ಬಾರಿಗೆ ಕೇಳಿದೆ. ನಂತರದ್ದು ಇತಿಹಾಸ.

ಪ್ರಾಣೇಶ ಆ ಮೊದಲೂ ಬೆಂಗಳೂರಿಗೆ ಬಂದಿದ್ದರಾದರೂ ಹೋದ ಪುಟ್ಟ ಬಂದ ಪುಟ್ಟ ಎಂದಂತಾಗಿತ್ತಂತೆ. ಈ ವಿಶಿಷ್ಟ ಹಾಸ್ಯಪಟುವನ್ನು ಬೆಂಗಳೂರಿಗೆ ಸರಿಯಾಗಿ ಪರಿಚಯಿಸುವ ಸಲುವಾಗಿ ಆ ವರ್ಷದ ನಗೆಜಾಗರಣೆಗೆ ಅವರನ್ನು ಆಹ್ವಾನಿಸಿ ರೆಂದು ಕಾರ್ಯಕ್ರಮ ನಡೆಸುವರಲ್ಲಿ ವಿನಂತಿಸಿಕೊಂಡೆ. ಅಸ್ತು ಎಂದರವರು. ಆ ರಾತ್ರಿಯಿಡೀ ನಡೆದ ಕಾರ್ಯಕ್ರಮದಲ್ಲಿ ನನ್ನ ಮೂರು ಅಣಕ ಹಾಡುಗಳು ಮತ್ತು ಪ್ರಾಣೇಶರ ಭಾಷಣವೇ ಹೈಲೈಟ್ಸ್‌’ ಎಂದು ಅಲ್ಲಿದ್ದ ಹಲವಾರು ಪ್ರೇಕ್ಷಕರ ಅಭಿಪ್ರಾಯ  ವಾಗಿತ್ತು. ಆ ಕಾರ್ಯಕ್ರಮದಲ್ಲಿನ ಪ್ರಾಣೇಶರ ಭಾಷಣದ ವೈಶಿಷ್ಟ್ಯವನ್ನು ತಿಳಿಸಲೇಬೇಕು.

ಸಾಮಾನ್ಯವಾಗಿ ಹಾಸ್ಯಪಟುವಿಗೆ ಗಮನವಿಟ್ಟು ಆಲಿಸುವ ಪ್ರೇಕ್ಷಕರು ಬೇಕು. ಸದ್ದುಗದ್ದಲಗಳ ನಡುವೆ ಹಾಸ್ಯವನ್ನು ಉಣ ಬಡಿಸುವುದು ಯಮಯಾತನೆ. ಆದರೆ ಅಂದು ಪ್ರಾಣೇಶ್ ಮಾತಿಗೆ ನಿಂತಾಗ (ಕುಂತಾಗ?) ಯಶವಂತ ಸರದೇಶಪಾಂಡೆಯ ತಂಡದವರು ತಮ್ಮ ನಾಟಕಕ್ಕೆೆಂದು ಸೆಟ್ ಸಿದ್ಧಪಡಿಸುತ್ತಿದ್ದರು. ಮೊಳೆ ಹೊಡೆಯುವ, ಮರ ಎಳೆಯುವ, ವೇದಿಕೆಯ ಮೇಲೆ ಜನ ಓಡಾಡುವ ಸದ್ದುಗಳ ಮಧ್ಯೆ ಇವರ ಭಾಷಣ ನಡೆಯಬೇಕಿತ್ತು. ಇದು ಸಾಮಾನ್ಯ ಪ್ರತಿಭಾವಂತ ಹಾಸ್ಯಪಟುವಿಗೆ ಶ್ರಾದ್ಧಕ್ಕೆ ಸಮ.

ಆದರೆ ಪ್ರಾಣೇಶ್ ಸಾಮಾನ್ಯ ಅಲ್ಲವಲ್ಲ! ಆ ಎಲ್ಲ ಸದ್ದು, ನಡೆದಾಟಗಳ ನಡುವೆಯೂ ಜನರ ಮನಸ್ಸನ್ನು ಆಕರ್ಷಿಸಿ ಹಿಡಿದು, ಆ ಇಡೀ ಗದ್ದಲ ಇವರ ಮಾತಿಗೆ ಹಿನ್ನೆೆಲೆಯೋ ಎನ್ನುವ ರೀತಿಯಲ್ಲಿ ರೂಪಿಸಿಕೊಂಡು ಜನರ ಮನ ಸೂರೆಗೊಂಡರು. ಆ ಭಾಷಣ ಅವರನ್ನು ಟಿವಿಯ ಹರಟೆಗೂ, ವಿದೇಶದ ಕಾರ್ಯಕ್ರಮಗಳಿಗೂ ರಹದಾರಿ ಆಯಿತು.

ಒಂದು ಸ್ವಾರಸ್ಯಕರ ಪ್ರಸಂಗವನ್ನು ನಿಮ್ಮ ಮುಂದಿರಿಸಬೇಕು. ದೈನಿಕವೊಂದರಲ್ಲಿ ಪ್ರತಿ ಭಾನುವಾರ ನಾನು ಬರೆಯುತ್ತಿದ್ದ ಹಾಸ್ಯಬರಹಗಳನ್ನು ಗಂಗಾವತಿಯ ಓರ್ವ ಮಹಿಳೆ ಓದಿ, ಮಗನಿಗೆ ಫೋನಾಯಿಸಿ ಈ ವಾರದ್ದರಲ್ಲಿ ಇಂತಹದ್ದು ಛಲೋ ಅದೆ ನೋಡು ಎಂದೋ, ಸಂಸ್ಕೃತ ಶ್ಲೋಕಾನ ತಿರುಚಿ ಹಾಸ್ಯ ಹ್ಯಾಂಗ್ ಹೊರತಂದಾನ ನೋಡು ಎಂದೋ ಹೇಳುತ್ತಿದ್ದರು. ಮಗ ಅವುಗಳನ್ನೆಲ್ಲ ಕೇಳಿಸಿಕೊಂಡು, ಗಂಗಾವತಿಗೆ ಹೋದಾಗಲೆಲ್ಲ ತಾಯಿ ಪೇರಿಸಿಟ್ಟಿದ್ದ ಲೇಖನಗಳನ್ನು ಓದುತ್ತಿದ್ದದ್ದುಂಟು. ಆ ಮಗನೇ ಪ್ರಾಣೇಶ, ಮಹಿಳೆಯೇ ಪ್ರಾಣೇಶರ ತಾಯಿ. ಓದುವ ಗುಣ ಪ್ರಾಣೇಶರಿಗೆ ವಂಶಪಾರಂಪರ್ಯವಾಗಿ ಬಂದದ್ದು!

ವಾರಪತ್ರಿಕೆಯೊಂದರಲ್ಲಿ ಬರುತ್ತಿರುವ ನನ್ನ ಲೇಖನಗಳನ್ನು ಪುಸ್ತಕವನ್ನಾಗಿಸಿರೆಂದು ದುಂಬಾಲು ಬಿದ್ದು, ಸಪ್ನ ಬುಕ್ ಹೌಸ್‌ನ ಷಾ ಅವರಿಗೆ ನನ್ನನ್ನು ಪರಿಚಯಿಸಿ, ಪುಸ್ತಕ ಹೊರಬರುವವರೆಗೆ ನಮ್ಮಿಬ್ಬರ ಬೆನ್ನು ಹತ್ತಿದ ಅವರ ಸ್ನೇಹದ ಪರಿ ಅನನ್ಯ.
ಭಾಷಣಕಾರ ಹತ್ತು ಜನರ ಮಧ್ಯೆ ಎದ್ದುಕಾಣುವಂತಿರಬೇಕು, ಧ್ವನಿಯೇರಿಸಿ ಮಾತನಾಡಬೇಕು, ಖ್ಯಾತನಾಮರ ಹೇಳಿಕೆಗಳನ್ನು ಕೋಟ್ ಮಾಡಬೇಕು ಎಂಬ ಸಕಲ ಭಾಷಣನಿಯಮಗಳನ್ನು ಗಾಳಿಗೆ ತೂರಿ, ದಿನನಿತ್ಯದ ನುಡಿಗಳು, ನುಡಿಗಟ್ಟುಗಳು, ಡಬ್ಬಿ ಮೇಲೆ ಡಬ್ಬಿ ಸಣ್ಣಡಬ್ಬಿ ಪುಟ್ಟಡಬ್ಬಿಯಂಥ ಸರಳ ಹಾಸ್ಯ, ಬೀಚಿಯ ಆಯ್ದ ನಗೆಪ್ರಸಂಗಗಳು, ಸಮಾಜದಲ್ಲಿ ಕಂಡುಬರುವ ಓರೆಕೋರೆಗಳ ವಿಡಂಬನೆ, ಇವೆಲ್ಲವುಗಳ ಮೂಲಕ ಬುರ್ಜ್ ಕಲೀಫಾದ ಎತ್ತರ, ಅಟ್ಲಾಂಟಿಕ್ ಸಾಗರದ ಅಗಲಗಳನ್ನು ಸುಲಭ ವಾಗಿ ದಾಟಿದ ಸುಸ್ನೇಹಿ ಪ್ರಾಣೇಶರಿಗೆ ಶಂಬರ್ ಆಗುವವರೆಗೆ ನಿಮ್ಮ ಜೀವನದ ಡಿಸೆಂಬರ್ ಬರದಿರಲಿ’ ಎಂದು ಹಾರೈಸುತ್ತೇನೆ.

Leave a Reply

Your email address will not be published. Required fields are marked *

error: Content is protected !!