Sunday, 8th September 2024

ಸಾಮರಸ್ಯಕ್ಕೆ ಕೊಳ್ಳಿಯಿಡುತ್ತಿರುವ ಅಕ್ರಮ ಗೋ ಸಾಗಾಟ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ಅಕ್ರಮ ಗೋ ಸಾಗಾಟ ಮತ್ತು ಗೋ ಕಳ್ಳತನ ಎಂಬುವುದು ನಿತ್ಯ ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಅದು ಕೂಡ ಹಿಂಸಾ ತ್ಮಕ ರೀತಿಯಲ್ಲಿ ಎಂಬುವುದು ಗಮನಾರ್ಹ. ಗೋವು ವಿಶ್ವದ ಮಾತೆಯಾಗಿ, ದೇವತೆಯಾಗಿ ಪೂಜನೀಯ ಸ್ಥಾನದಲ್ಲಿದ್ದರೆ, ಕ್ರೂರ ಮನಸ್ಥಿತಿಯವರಿಗೆ ಇದೊಂದು ದಂಧೆಯೆನಿಸಿಕೊಂಡಿದೆ. ಇದರ ಜತೆಗೆ ಗೋವು ಎಂಬ ಮೂಕಪ್ರಾಣಿಯನ್ನು ಹಲವಾರು ದಶಕ ಗಳಿಂದ ರಾಜಕೀಯ ದಾಳವಾಗಿಯೇ ಎ ಪಕ್ಷಗಳು ಬಳಸಿಕೊಂಡವು. ಆದರೆ ಇದರ ರಕ್ಷಣೆಗೊಂದು ಕಠಿಣ ಕಾನೂನು ಜಾರಿ ಗೊಳಿಸಲು ರಾಜಕೀಯ ನಾಯಕರಿಗೆ ಇಚ್ಛಾಶಕ್ತಿ ಇದ್ದಂತೆ ಕಾಣುತ್ತಿಲ್ಲ.

ಗೋ ಸಾಗಾಟ ಮತ್ತು ಕಳ್ಳತನ ಎರಡು ಘಟನೆಗಳು ಸಮಾಜದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆಯೆಂದರೆ ಪರಸ್ಪರ ಉಭಯ ಕೋಮುಗಳ ಸಾಮರಸ್ಯ ಕದಡುವ ಮಟ್ಟಕ್ಕೆ ತಲುಪಿದರೆ, ಕರಾವಳಿ ಭಾಗದಲ್ಲಂತೂ ಇದರ ತೀವ್ರತೆಗೆ ಹಲವಾರು ಘರ್ಷಣೆ, ಜಿ ಬಂದ್, ಕರ್ಫ್ಯೂ, ಹತ್ಯೆ, ನಿಷೇದಾಜ್ಞೆ ಹೇರಲ್ಪಟ್ಟು, ಅಮಾಯಕರ ಮೇಲೆ ಕೇಸು ದಾಖಲಾಗಿ ಜೈಲುವಾಸ ಅನುಭವಿಸಬೇಕಾದ ದುಸ್ಥಿತಿಗೂ ತಲುಪಿದೆ. ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುವ ಕುಟುಂಬಗಳು ನಮ್ಮ ಸಮಾಜದಲ್ಲಿ ಹಲವಿದೆ.

ಎರಡು ಮೂರು ದನಗಳನ್ನು ಸಾಕಿ ಹಾಲು ಮಾರಿ ಮನೆಯ ಖರ್ಚು, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ತಕ್ಕಮಟ್ಟಿನ ಜೀವನದ ರಥ ಎಳೆಯುವ ಕುಟುಂಬದ ಹಟ್ಟಿಗೆ ನುಗ್ಗಿ ಕಟುಕರು ತಲವಾರು ಜಳಪಿಸಿ ಗೋವುಗಳನ್ನು ಹೊತ್ತೊಯ್ದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವೇ? ಬೀದಿ ಬದಿಯಲ್ಲಿ ಮೇಯಲು ಹೊರಟ ದನಗಳನ್ನು, ದೇವಾಲಯದ ಆವರಣಗಳಲ್ಲಿ ತನ್ನ ಪಾಡಿಗೆ
ಮಲಗಿದ್ದ ಗೋವುಗಳನ್ನು ಹೊತ್ತೊಯ್ದ ನೂರಾರು ಪ್ರಕರಣಗಳು ಕರಾವಳಿ ಪ್ರದೇಶದಲ್ಲಿ ನಡೆದಿವೆ.

ಪುಟ್ಟ ಪುಟ್ಟ ಕರುಗಳನ್ನು, ಗಬ್ಬದ ಹಸುಗಳನ್ನೂ ಬಿಡದ ಗೋ ಕಳ್ಳರ ಆರ್ಭಟಕ್ಕೆ ಪ್ರಸ್ತುತ ಕರಾವಳಿ ಭಾಗ ನಲುಗಿ ಹೋಗಿದೆ. ಶಸಸಜ್ಜಿತರಾಗಿ ಎಲ್ಲದಕ್ಕೂ ಸಿದ್ದರಾಗಿಯೇ ದಾಂಗುಡಿಯಿಡುವ ಗೋಕಳ್ಳರು ಐಷಾರಾಮಿ ಕಾರು, ಎಲ್ಲಿಂದಲೋ ಕಳ್ಳತನ ನಡೆಸಿ ತಂದ ವಾಹನಗಳನ್ನು ಇಂತಹ ದಂಧೆಗೆ ಬಳಸುತ್ತಿದ್ದು, ಗೋವುಗಳನ್ನು ಉಸಿರುಗಟ್ಟಿಸಿ, ಒಂದರ ಮೇಲೊಂದು ತುಂಬಿಸಿ, ಕೈ ಕಾಲುಗಳನ್ನು ಕಡಿದು, ಬಾಲ ಕತ್ತರಿಸಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿರುವುದು ಸರ್ವೇ ಸಾಮಾನ್ಯ ಎಂಬಂತಿದೆ.

ಕೆಲವೊಂದು ಬಾರಿ ಇಂತಹ ವಾಹನಗಳ ಹಿಂದೆ ದ್ವಿ ಚಕ್ರ ವಾಹನದಲ್ಲಿ ಹಿಂಬಾಲಿಸುವ ಬೆಂಗಾವಲು ಪಡೆಯು ಜತೆಗಿರುತ್ತದೆ. ಪೊಲೀಸರ ಕಣ್ಣು ತಪ್ಪಿಸುವ ದೃಷ್ಟಿಯಿಂದ ಆಯಾಯ ಚೆಕ್ ಪೋಸ್ಟ್‌ಗಳಲ್ಲಿ ಮಾಹಿತಿ ನೀಡಲೆಂದೇ ಜನನೇಮಿಸುವ ಇಂತಹ
ದಂಧೆಕೋರರು ಹಗಲು ಹೊತ್ತಿನಲ್ಲಿ ಹಾಯಾಗಿ ತಿರುಗಾಡುತ್ತಾ ರಾತ್ರಿಯಾಗುತ್ತಲೆ ತಮ್ಮ ಕಸುಬು ಶುರುವಿಟ್ಟುಕೊಳ್ಳುತ್ತಾರೆ. ಈ ಎ ಘಟನೆಗಳು ಪೊಲೀಸ್ ಇಲಾಖೆ ಕೆಲ ಬಾರಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದರೂ ರಾಜಕೀಯ ಶಕ್ತಿಗಳು ಒತ್ತಡ ಹೇರುವ ವಿದ್ಯಮಾನಗಳು ಕೂಡ ನಡೆಯುತ್ತವೆ. ದೊಡ್ಡ ಕಂಟೇನರ್, ಹಾಲಿನ ವಾಹನ, ಟ್ಯಾಂಕರ್‌ಗಳಲ್ಲಿ ಅಕ್ರಮ ಗೋ ಸಾಗಾಟ
ನಡೆಯುತ್ತಿರುತ್ತವೆ.

ಈ ಹಿಂದೊಮ್ಮೆ ತನಿಕೋಡ್ ಚೆಕ್ ಪೋಸ್ಟ್‌ನಲ್ಲಿ ಅಕ್ರಮ ಗೋ ಸಾಗಾಟಗಾರನೊಬ್ಬ ಪೊಲೀಸ್ ಗುಂಡೇಟಿಗೆ ಬಲಿಯಾದಾಗ ಪ್ರಕರಣವು ಸಾಕಷ್ಟು ರಾಜಕೀಯ ಬಣ್ಣ ಬಳಿದುಕೊಂಡಿತ್ತು. ಇತ್ತೀಚೆಗೆ ಮಂಗಳೂರಿನಲ್ಲೂ ಗೋ ಸಾಗಾಟದ ವಾಹನದ ಮೇಲೆ ಪೊಲೀಸ್ ಫೈರಿಂಗ್ ನಡೆದಿದ್ದು, ಇಂತಹ ಹತ್ತಾರು ಖಡಕ್ ನಿರ್ಧಾರಗಳನ್ನು ಪೊಲೀಸರು ಕೈಗೊಂಡಾಗ ಇಂತಹ ಅಕ್ರಮಗಳನ್ನು ಮಟ್ಟ ಹಾಕಲು ಸಾಧ್ಯ. ಆದರೆ ರಾಜಕೀಯ ನಾಯಕರು ಇದಕ್ಕೆ ಮುಕ್ತ ಅವಕಾಶ ನೀಡಬೇಕು. ಉಭಯ ಸಮುದಾಯ ನೆಮ್ಮದಿ ಯಾಗಿರಬೇಕೆಂದರೆ ಅಕ್ರಮ ಗೋ ಸಾಗಾಟ ಮತ್ತು ಕಳ್ಳತನಕ್ಕೆ ತಾರ್ಕಿಕ ಅಂತ್ಯವನ್ನು ಪೊಲೀಸ್ ಇಲಾಖೆಯೇ ಒದಗಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!