Sunday, 8th September 2024

ಪಾಠವೂ ಮುಖ್ಯ, ಪ್ರಾಣವೂ ಮುಖ್ಯ

ಅನಿಸಿಕೆ

ಬೀರೇಶ್ ಎನ್.ಗುಂಡೂರ್‌

ಈ ವಯಸ್ಸಿಗೆ ಮೊಬೈಲ್ ಅಭ್ಯಾಸ ಇರಲೇಬಾರದು. ಮಕ್ಳು ಕೆಟ್ಟೋಗ್ತವೆ. ಕಣ್ಣು ಹಾಳಾಗ್ತವೆ. ಅಂತಿದ್ದ ಪಾಲಕರೆ ಈಗ ಅದೇ ಮಕ್ಕಳನ್ನು ಹಿಡಿದು ಮೊಬೈಲ್ ಕೊಟ್ಟು ಹೊಡ್ದು ಬಡ್ದು ಕೂರಿಸುತಿದ್ದಾರೆ. ಪರದೆಯ ಮೇಲೆ ಇಟ್ಟ ದೃಷ್ಟಿ ಸ್ವಲ್ಪ ಕದಲಿದರೆ ಸಾಕು, ನೀನು ಸರಿಯಾಗಿ ಕಲಿಯುತ್ತಿಲ್ಲ. ಫೀಸ್ ಕಟ್ಟಿದ್ದೀವಿ. ಕಲಿಲಿಲ್ಲ ಅಂದ್ರೆ ಅಷ್ಟೇ ಈ ವರ್ಷ, ಅಂತ ರಾಗ ಹಾಡುತಿದ್ದಾರೆ.

ಮಕ್ಕಳಿಗೆ ಇದೊಂತರ ವಿಚಿತ್ರ ಅನಿಸುತಿದೆ. ಇಷ್ಟು ದಿವಸ ಮೊಬೈಲ್ ಕೇಳಿದರೆ ಕಣ್ಣು ಬಿಡುತಿದ್ದವರು. ಈಗ ಅದೇ ಮೊಬೈಲ್ ಕೊಟ್ಟು ದಿಟವಾಗಿ ನೋಡು, ಕೇಳಿಸಿಕೊ ಅಂತಿದ್ದಾರಲ್ಲ ಅಂತ ಕನ್ಯೂಷನ್ ಆದಂತಿರಬೇಕು. ಅದು ಬಿಡಿ. ಪಾಲಕರೆ ಮಕ್ಳಿಗೆ ಈ ಆನ್‌ಲೈನ್ ಕ್ಲಾಸ್ ಅರ್ಥನೆ ಆಗ್ತಿಲ್ಲ , ಸುಮ್ನೆ ದುಡ್ಡು ಹಾಳು ಅಂತ ಮುಖ ಮುರಿಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರ ಅಕ್ಟೋಬರ್ 15ರಿಂದ ಶಾಲೆ ಆರಂಭಿಸುವ ಬಗ್ಗೆ ಆಯಾ ರಾಜ್ಯ ಸರಕಾರಗಳಿಗೆ ಬಿಟ್ಟದ್ದು ಅಂತ ಗ್ರೀನ್ ಸಿಗ್ನಲ್
ಕೊಟ್ಟುಬಿಟ್ಟಿದೆ.

ಕರೋನಾ ಸಂಖ್ಯೆಯಂತೂ ಕೇಳಲೇಬೇಡಿ. ಹುಚ್ಚು ಕುದುರೆಯಾಗಿ ಓಡುತ್ತಿದೆ. ಈಗ ಪಾಲಕರದ್ದು ಶಾಲೆಗೆ ಕಳುಹಿಸುವ ಭಯ. ಏನಾದರೂ ಹೆಚ್ಚು ಕಮ್ಮಿಯಾದರೆ ಜವಾಬ್ದಾರರು ಯಾರು ಎನ್ನುವುದು. ಇದೊಂದು ವಿಷಯದಲ್ಲಿ, ಪ್ರೈವೇಟ್ ಮತ್ತು ಗೌರ್ನಮೆಂಟ್ ಸ್ಕೂಲ್ ಒಟ್ಟಿಗಿಟ್ಟು ಅನುಮಾನಿಸುತಿದ್ದಾರೆ. ಇನ್ನೊಂದು ಬೆಳವಣಿಗೆ ಎಂದರೆ ಈಗೀಗ ಈ ಪ್ರೈವೇಟ್ ಫೀಸ್ ಹಾವಳಿ ಮತ್ತು ಆನ್‌ಲೈನ್ ಕ್ಲಾಸಸ್ ಅಂತ ಬೇಸತ್ತು ಈ ಮಂದಿಯೆ.. ಸರಕಾರಿ ಶಾಲೆಗಳ ಕಡೆಗೆ ಮುಖ ಮಾಡಿದ್ದಾರೆ ಎನ್ನುವುದು.

ಅದೇನೇ ಇರಲಿ, ಇಷ್ಟು ದಿನ ಎ ಮಕ್ಕಳಿಗಂತು ಹೆಣ ಭಾರದಂಥ ಬ್ಯಾಗ್ ಹೊರುವುದು ತಪ್ಪಿದ್ದು ಹಾಗೂ ಅಂಗಳದಲ್ಲಿ ಕುಣಿದು ಕುಪ್ಪಳಿಸಲು ಸಮಯ ಒದಗಿ ಬಂದದ್ದು ಮಾತ್ರ ಅನ್ಯೋನ್ಯ. ಮಕ್ಕಳು ಒಳಗೊಳಗೆ ಖುಷಿ, ಇದು ಹೀಗೆಯೇ ಮುಂದುವರಿಯಲಿ ಅಂತ. ಬಾಲ ಸುಟ್ಟ ಬೆಕ್ಕಿನ ಹಾಗೆ ಓಡುವ ಈ ಮಂದಿಯ ಮಧ್ಯೆ ಬಾಲ್ಯವೆನ್ನುವುದು ಎಷ್ಟು ಅದ್ಭುತ ಅಂತ ಈ ಕರೋನಾ ತಿಳಿಸಿರಬೇಕು. ಸರಕಾರಿ ಶಾಲೆಯ ಮಕ್ಕಳಿಗೆ ಬಹಳ ವ್ಯತ್ಯಾಸ ಆಗಿರಲಿಕ್ಕಿಲ್ಲ, ಏಕೆಂದರೆ ಅಂಗಳದಲ್ಲಿ ಆಟ ಎನ್ನುವ ಪರಿಪಾಠ ಸರಕಾರಿ ಶಾಲೆಯಲ್ಲಿ ಇನ್ನೂ ಮಾಸಿಲ್ಲ. ಇದೆಲ್ಲದರ ಮಧ್ಯೆ ಪಾಠ, ಕಲಿಕೆಗಳನ್ನು ಮರೆಯುವಂತಿಲ್ಲ. ಹಾಗಂತ ಈ ಸಂಧರ್ಭ ದಲ್ಲಿ ತೆರೆಯುವುದು ಎಷ್ಟು ಸರಿ ಎನ್ನುವುದು ಎಲ್ಲರ ವಿರೋಧ. ದೊಡ್ಡವರಾದ ನಾವೇ ಸಾಮಾಜಿಕ ಅಂತರವನ್ನು, ಮಾಸ್ಕ್ ಧರಿಸುವುದನ್ನು ಎಷ್ಟರ ಮಟ್ಟಿಗೆ ಪಾಲಿಸುತಿದ್ದೇವೆ. ಅಂತಹದ್ದರಲ್ಲಿ ಶಾಲೆಗಳ ಪ್ರಾರಂಭ ಎಷ್ಟು ಸಮಂಜಸ ಅನ್ನುವುದು ದೊಡ್ಡ ಪ್ರಶ್ನೆ.

ಮಕ್ಕಳು ಏನೇ ಮಾಡಿದರು ಗುಂಪು ಸೇರುತ್ತಾರೆ. ಅದರಲ್ಲೂ ಈ ವೈರಸ್ ವೇಗ ತುಂಬಾನೇ ಜೋರಿದೆ. ನಿಯಂತ್ರಣ ಕಷ್ಟ ಸಾಧ್ಯ ಎನ್ನುವುದು ಸಾಂದರ್ಭಿಕ. ಒಂದು ವೇಳೆ ಸರಕಾರ ಶಾಲೆಗಳನ್ನು ತೆರೆಯುವುದೇ ಆದರೆ ಅದೊಂದು ಅದ್ಭುತ ಚಾಲೆಂಜ್ ಮತ್ತು ಅವಕಾಶ ಎಂದರೆ ತಪ್ಪಾಗಲಿಕ್ಕಿಲ್ಲ. ಅವಕಾಶ ಏಕೆಂದರೆ, ಮಕ್ಕಳಿಗೆ ಶುಚಿತ್ವ, ಸಾಂಕ್ರಾಮಿಕ ರೋಗದ ಹರಡುವಿಕೆ, ನಿಯಂತ್ರಣ
ಮುಂತಾದ ವಿಷಯಗಳ ಬಗ್ಗೆ ಬರೀ ಪುಸ್ತಕಗಳಲ್ಲದೆ ಪ್ರಾಯೋಗಿಕವಾಗಿ ದಿನನಿತ್ಯ ಜೀವನದಲ್ಲಿ ಕಲಿಸಿಕೊಡುವ ಹಾಗೂ ಪಾಲಿಸುವ ಅವಕಾಶ ದೊರೆತಂತಾಗುತ್ತದೆ. ಮುಖ್ಯವಾಗಿ ಈ ಶಿಸ್ತು ಪಾಲಿಸುವುದಿದೆಯಲ್ಲ, ಅದು ಮಕ್ಕಳಿಗೆ ಕರಗತ ಮಾಡಿಸು ವುದು ಒಳ್ಳೆಯ ಶಿಸ್ತು.

ಸರಿಯಾದ ಸುಂದರ ಜೀವನಕ್ಕೆ ಹಾದಿ ಎನ್ನುವುದನ್ನ ಅರ್ಥ ಮಾಡಿಕೊಳ್ಳಲು ಮಕ್ಕಳಿಗೆ ಇದೊಂದು ಅವಕಾಶ ಎಂದದ್ದು.
ಇದೊಂದು ಚಾಲೆಂಜ್ ಎನ್ನುವವರಿಗೆ ಲಾಕ್‌ಡೌನ್, ಮಾಸ್ಕ್, ಆಗಾಗ ಕೈ ತೊಳೆಯಿರಿ ಅಂತ ಹೇಳಿದಾಗಲೂ ಅದೇ ಚಾಲೆಂಜ್ ಅಂತ ಅನಿಸಿತ್ತು. ಈಗ ನೋಡಿ, ಒಗ್ಗಿಕೊಂಡಿದ್ದೇವೆ. ಹಾಗೆಯೇ ಇದು. ಆದರೆ, ಪರಿಪಾಲನೆ ಎಂಬುದು ಇಲ್ಲಿ ತುಂಬಾ ಮುಖ್ಯ ವಾದ ಅಂಶ. ಅದೇನೇ ಇರಲಿ, ತೆರೆಯುವುದೇ ಆದರೆ, ಬಹಳ ದಿನಗಳ ನಂತರ ಶಾಲೆಯ ಸಮವಸದಲ್ಲಿ ಅಂದವಾಗಿ ಸಿಂಗರಿಸಿ
ಓಡೋಡಿ ಬರುವ ಮಕ್ಕಳಿಗೆ ಶಾಲೆ ಭಯದಂತೆ ಕಾಣದಿರಲಿ. ಆ ಮಕ್ಕಳ ಮುಗ್ದ ಸ್ನೇಹ ಮತ್ತೆ ಜತೆಯಾಗಲಿ, ಸಂಭ್ರಮಿಸಲಿ.

ವಿಶೇಷವಾಗಿ ಸರಕಾರಿ ಶಾಲೆಗಳು ಯಾವುದೇ ರಾಜಿಯಿಲ್ಲದೆ ಮುಂಜಾಗ್ರತಾ ಕ್ರಮಗಳನ್ನು ಮೈಗೂಡಿಸಿಕೊಂಡು ಅಭಯ ನೀಡಲಿ ಎನ್ನುವುದು ಆಶಯ. ಮೇಷ್ಟ್ರುಗಳಿಗೆ ಆ ನಿಷ್ಕಲ್ಮಶ ಪ್ರೀತಿ ಮತ್ತು ಕಾಳಜಿ ಅಷ್ಟೇ ಇಲ್ಲಿ ಬಹುಮುಖ್ಯ.

Leave a Reply

Your email address will not be published. Required fields are marked *

error: Content is protected !!