Sunday, 8th September 2024

ಸರಕಾರ ಗುತ್ತಿಗೆ ನೌಕರರ ಸಂಕಷ್ಟ ನಿವಾರಿಸಲಿ !

ಅಭಿಮತ
ಆದರ್ಶ್ ಶೆಟ್ಟಿ ಉಪ್ಪಿನಂಗಡಿ

ಸರಕಾರಗಳು ಆರ್ಥಿಕ ಉಳಿಕೆ ಮತ್ತು ಸಂಪನ್ಮೂಲ ಕ್ರೋೋಢೀಕರಣದ ದೃಷ್ಟಿಯಿಂದ ಬಹುತೇಕ ಇಲಾಖೆಯ ನಿರ್ವಹಣೆಗಾಗಿ ಸಿಬ್ಬಂದಿಗಳನ್ನು ಪ್ರಸ್ತುತ ಗುತ್ತಿಗೆ ಆಧಾರದಲ್ಲೇ ನೇಮಕ ಮಾಡಿಕೊಳ್ಳುವ ಸಂಪ್ರದಾಯಕ್ಕೆ ನಾಂದಿ ಹಾಡುತ್ತಾ ಬರುತ್ತಿದೆ. ಜತೆಗೆ ಕೆಲ ಇಲಾಖೆಗಳನ್ನು ಖಾಸಗೀಕರಣಗೊಳಿಸುತ್ತಲೂ ಬರುತ್ತಿದೆ.

ಇಂಧನ ಇಲಾಖೆಯ ನಾಲ್ಕು ವಲಯದ ಪೈಕಿ ಮೂರು ವಲಯಗಳನ್ನು ಖಾಸಗಿಗೊಳಿಸಲು ಸಿದ್ಧತೆಗಳು ನಡೆಯುತ್ತಿದೆ. ಇವುಗಳ
ಮಧ್ಯೆೆ ಕರೋನಾ ಸಂಕಷ್ಟದಿಂದಲೂ ಎಲ್ಲಾ ವಲಯಕ್ಕೂ ಬಹುದೊಡ್ಡ ಆರ್ಥಿಕ ಹೊಡೆತ ಬಿದ್ದಿರುವುದಂತೂ ಸುಳ್ಳಲ್ಲ. ಸರಕಾರದ ಹಲವಾರು ಇಲಾಖೆಗಳಲ್ಲಿ ಜೀವನ ಭದ್ರತೆಯಿಲ್ಲದೆ ಕರ್ತವ್ಯ ನಿರ್ವಹಿಸುವ ಹೊರ – ಒಳಗುತ್ತಿಗೆಯ ಸಿಬ್ಬಂದಿಗಳ ಗೋಳು ಹೇಳತೀರದ ಮಟ್ಟದಲ್ಲಿದೆ.

ಇವುಗಳ ಪೈಕಿ ಆರೋಗ್ಯ, ಗ್ರಾಮೀಣಾಭಿವೃದ್ಧಿ, ಇಂಧನ, ಕಂದಾಯ, ಪೌರಾಡಳಿತ, ಲೋಕೋಪಯೋಗಿ, ಸ್ಥಳೀಯ ಆಡಳಿತ, ವಸತಿ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಹತ್ತು ಹದಿನೈದು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ವೇತನ ಕಡಿತ, ಕಾಯಂಗೊಳಿಸುವ ಬದಲು ಹುದ್ದೆಗಳ ಕಡಿತ ಸೇರಿದಂತೆ ಕೂಲಿಯಾಳುಗಳಂತೆ ಕಾಣುವ ಪ್ರವೃತ್ತಿಯೂ ಕಂಡು ಬರುತ್ತಿದೆ.

ಕರೋನಾ ಸಂಕಷ್ಟದಿಂದ ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕತೆಯ ನೆಪವೊಡ್ಡಿ ಗುತ್ತಿಗೆ ವಹಿಸಿಕೊಂಡ ಸಂಸ್ಥೆಗಳು ಕೆಲ ಸಿಬ್ಬಂದಿಗಳನ್ನು ಹುದ್ದೆಯಿಂದ ವಜಾಗೊಳಿಸಿದ, ಪರಿಹಾರಗಳನ್ನು ಒದಗಿಸದೆ ಕೈ ಚೆಲ್ಲಿದ ಘಟನೆಗಳೂ ನಡೆದಿದೆ. ಇದಕ್ಕೆ
ನಿದರ್ಶನವೆಂಬಂತೆ ಆರೋಗ್ಯ, ಸ್ಥಳೀಯಾಡಳಿತ ಇಲಾಖೆಯ 15,000ಕ್ಕೂ ಮಿಕ್ಕಿ ಹೊರಗುತ್ತಿಗೆ ಸಿಬ್ಬಂದಿಗಳು ಕಾಯಂಗೊಳಿಸು ವುದು ಹಾಗೂ ಸಮಾನ ವೇತನಕ್ಕೆ ಆಗ್ರಹಿಸಿ ಬೀದಿಗಿಳಿಯಲು ನಿರ್ಧರಿಸಿದ್ದಾರೆ. ಇತ್ತ ಕರಾವಳಿ ಭಾಗದಲ್ಲಿ ಮೆಸ್ಕಾಂ ಮೀಟರ್ ರೀಡಿಂಗ್ ನೌಕರರನ್ನು ರೀಡಿಂಗ್ ಗುತ್ತಿಗೆದಾರರು ಕರೋನಾ ಸಂಕಷ್ಟ ಸಂದರ್ಭದಲ್ಲಿ ವೇತನ ಕಡಿತಗೊಳಿಸಿ ಅಲ್ಪಸಂಬಳಕ್ಕೆ ದುಡಿಸಲು ಮುಂದಾಗಿದ್ದು, ಇದನ್ನು ವಿರೋಧಿಸಿದ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಿ ಹೊಸ ಕೆಲಸಗಾರರನ್ನು ನೇಮಿಸಲು ಗುತ್ತಿಗೆದಾರರು ಮುಂದಾಗಿರುವುದರಿಂದ ರೀಡಿಂಗ್ ನೌಕರರು ಕರ್ತವ್ಯ ನಿರ್ವಹಿಸದೆ ಕೈ ಚೆಲ್ಲಿ ಕುಳಿತಿದ್ದಾರೆ.

ಇದರಿಂದ ತಿಂಗಳ ವಿದ್ಯುತ್ ಬಿಲ್ಲಿನಲ್ಲೂ ಅಸ್ಪಷ್ಟತೆ ಉಂಟಾಗಿದೆ. ಒಂದು ಇಲಾಖೆಯು ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಗೊಳಿಸುವಾಗ ಆ ಗುತ್ತಿಗೆ ಸಂಸ್ಥೆಯ ಮೇಲೆ ಹಿಡಿತ ಸಾಧಿಸುವಂತಾಗಬೇಕು. ತಮ್ಮ ಇಲಾಖೆಯಲ್ಲಿ ಗುತ್ತಿಗೆ ಸಂಸ್ಥೆಯು
ದುಡಿಸಿಕೊಳ್ಳುವ ಸಿಬ್ಬಂದಿಗಳ ಮೇಲೆ ಜವಾಬ್ದಾರಿ ಹೊತ್ತುಕೊಳ್ಳುವ ಜತೆಗೆ ಆ ಸಿಬ್ಬಂದಿಯ ಕುಟುಂಬದ ಜೀವನ ನಿರ್ವಹಣೆಗೆ ಅಗತ್ಯ ವೇತನ ನಿಗದಿಪಡಿಸಬೇಕು. ಬಹುತೇಕ ಗುತ್ತಿಗೆ ಸಂಸ್ಥೆಗಳು ಸಿಬ್ಬಂದಿಗಳಿಗೆ ಅಲ್ಪ ಮೊತ್ತದ ಸಂಬಳ ನೀಡಿ ಬಾಕಿ ದೊಡ್ಡ ಮೊತ್ತವನ್ನು ಜೇಬಿಗಿಳಿಸುವ ಕಾರಣದಿಂದ ಗುತ್ತಿಗೆ ಸಿಬ್ಬಂದಿಗಳಿಗೆ ದೊರಕುವ ಸಂಬಳ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ಇಂದು ರಾಜ್ಯದಲ್ಲಿ ಲಕ್ಷಾನುಗಟ್ಟಲೆ ಸಿಬ್ಬಂದಿಗಳು ಹತ್ತಾರು ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲೇ ದುಡಿಯುತ್ತಿದ್ದು, ಸರಕಾರಗಳು ನೇಮಕಾತಿಗೆ ಅಧಿಸೂಚನೆ ಹೊರಡಿಸುವ ಸಂದರ್ಭದಲ್ಲಿ ಶೇ.50ರಷ್ಟು ಹುದ್ದೆಗಳನ್ನು ಆಯಾಯ ಇಲಾಖೆಗಳಲ್ಲಿ ತಾತ್ಕಾಲಿಕ ನೆಲೆ, ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಆದ್ಯತೆ ನೀಡುವಂತಾಗಬೇಕು. ಸರಕಾರಗಳು ಗುತ್ತಿಗೆ, ತಾತ್ಕಾಲಿಕ ನೆಲೆಯ ಸಿಬ್ಬಂದಿಗಳ ಮೇಲೂ ಕರುಣೆ, ಮಾನವೀಯತೆ ತೋರಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!