Saturday, 27th July 2024

ಅಲಿಪ್ತತೆಗೆ ಬೈ ಎನ್ನಬೇಕಾದ ಸಮಯ

ಅಭಿಮತ
ಬೈಂದೂರು ಚಂದ್ರಶೇಖರ ನಾವಡ

ತನ್ನದೇ ಆದ ಸೈನ್ಯ ಶಕ್ತಿ ಹೊಂದಿಲ್ಲದ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಶಾಂತಿಗೆ ಭಂಗ ತರುವ, ನಿಯಮಗಳ ಉಲ್ಲಂಘಿಸುವ ದೇಶಗಳ ವಿರುದ್ದ ಕ್ರಮ ಕೈಗೊಳ್ಳಲು ಅಸಮರ್ಥವಾಗಿದೆ. ಫಿಲಿಫೈನ್ಸ್, ಬಹ್ರೈನ್‌ನಂಥ ಪುಟ್ಟ ರಾಷ್ಟ್ರಗಳಿಗೆ ಬೆದರಿಕೆ ಒಡ್ಡುವ, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸಬಾರದೆಂಬ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ನಡೆದುಕೊಳ್ಳುವ ಚೀನಾದಂಥ ಶಕ್ತ ರಾಷ್ಟ್ರದ ವಿರುದ್ಧವಂತೂ ಅದು ಏನನ್ನೂ ಮಾಡಲಾಗದ
ಅಸಹಾಯಕ ಸ್ಥಿತಿಯಲ್ಲಿದೆ.

ನೈಸರ್ಗಿಕ ಸಂಪತ್ತಿನ ಬಳಕೆ ಕುರಿತಂತೆ ಪುಟ್ಟ ರಾಷ್ಟ್ರಗಳ ಅಧಿಕಾರವನ್ನು ಅತಿಕ್ರಮಿಸುವ, ಉಗ್ರವಾದವನ್ನು ಪೋಷಿಸುವ ತಂಟೆಕೋರ ರಾಷ್ಟ್ರಗಳನ್ನು ದಂಡಿಸುವ ಯಾವ ಅಧಿಕಾರವೂ ಇಲ್ಲದ ವಿಶ್ವಸಂಸ್ಥೆೆ ಕೇವಲ ಮಾತಿನ ಮನೆಯಾಗಿ ಉಳಿದಿದೆ. ಯಾರ ಬಳಿ ದೊಣ್ಣೆ ಇದೆಯೋ ಅವನೇ ದೊಣ್ಣೆ ನಾಯಕ ಎನ್ನುವಂತೆ ವರ್ತಮಾನದಲ್ಲಿ ಸೈನ್ಯ ಶಕ್ತಿ ಮತ್ತು ಆರ್ಥಿಕ ಶಕ್ತಿ
ಹೊಂದಿರುವ ಚೀನಾದಂಥ ಬಲಶಾಲಿ ರಾಷ್ಟ್ರಗಳ ದುರ್ವರ್ತನೆಗೆ ಮೂಗುದಾರ ತೊಡಿಸಬಲ್ಲ ಜಾಗತಿಕ
ಸಂಘಟನೆಯ ಅನುಪಸ್ಥಿತಿ ಎದ್ದು ಕಾಣುತ್ತದೆ.

ದಶಕಗಳಿಂದ ಅಲಿಪ್ತ ಆಂದೋಲನದ ಮುಂಚೂಣಿಯ ನೇತಾರನಾಗಿದ್ದ ಭಾರತಕ್ಕೆ ಸೈನ್ಯ ಕೂಟಗಳೆಂದರೆ ಪ್ರಾರಂಭದಿಂದಲೂ ಮುಜುಗರದ ಅನುಭವ. ಶಾಂತಿ ಮತ್ತು ಸಹಬಾಳ್ವೆಯ ಸಿದ್ದಾಂತದ ಆಧಾರದ ವಿದೇಶ ನೀತಿ ಹೊಂದಿದ್ದ ಭಾರತಕ್ಕೆ 1962ರ ಚೀನೀ ಆಕ್ರಮಣ ಘೋರ ಆಘಾತ ತಂದಿತ್ತು. ಆಗ ಚೀನಾದ ಆಕ್ರಮಣದ ವಿರುದ್ಧ ಯಾವುದೇ ದೇಶ ಭಾರತದ ನೆರವಿಗೆ ಬರಲಿಲ್ಲ, ಖಂಡಿಸುವ ಹೇಳಿಕೆಯೂ ನೀಡಲಿಲ್ಲ.

1962ರ ಸೋಲಿನ ಕಹಿ ನೆನಪು ಆರು ದಶಕಗಳ ನಂತರವೂ ಜನಮಾನಸವನ್ನು ಬಾಧಿಸುತ್ತಿದೆ. ಆ ನೋವಿನ ಹಿನ್ನೆಲೆಯಲ್ಲೇ ನಮ್ಮ ನಾಯಕರು ತೀರಾ ಇತ್ತೀಚಿನವರೆಗೂ ಚೀನಾದ ಕುರಿತಂತೆ ರಕ್ಷಣಾತ್ಮಕ (defensive) ನಿಲುವು ಹೊಂದಿದ್ದರು.
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚೀನಾ ಭಾರತದ ನಿಲುವು ತಳೆದರೂ ಅದರ ವಿರುದ್ಧ ತೀಕ್ಷ್ಣ ಹೇಳಿಕೆ ನೀಡುತ್ತಿರಲಿಲ್ಲ. ಜಮ್ಮು ಕಾಶ್ಮೀರದ ವಿಷಯದಲ್ಲಿ ಅನಾವಶ್ಯಕ ಮೂಗು ತೂರಿಸುವ ನೀತಿ ಅನುಸರಿಸುತ್ತಿದ್ದರೂ ಟಿಬೆಟ್, ತೈವಾನ್ ಕುರಿತಂತೆ ಚೀನಾದ ವಿರುದ್ಧ ನಿಲುವು ತಳೆಯುವುದರಿಂದ ನಮ್ಮ ನಾಯಕರು ತಪ್ಪಿಸಿಕೊಳ್ಳುತ್ತಲೇ ಬಂದಿದ್ದರು. ಚೀನಾವನ್ನು ಅನಾವಶ್ಯಕ ಎದುರು
ಹಾಕಿಕೊಳ್ಳಬಾರದೆನ್ನುವ ಅಲಿಖಿತ ನಿರ್ಣಯ ಭಾರತೀಯ ನಾಯಕರು ಮಾಡಿಕೊಂಡಿದ್ದರು.

ಚೀನಾ ಮಿತ್ರನೋ, ಶತ್ರುವೋ ಎನ್ನುವ ದ್ವಂದ್ವ ಭಾರತೀಯರನ್ನು ಕಾಡುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳ ನಡುವೆ ವ್ಯಾಪಾರ ವಹಿವಾಟು ಹೆಚ್ಚಿದರೂ ಚೀನಾದ ವಿಸ್ತಾರವಾದಿ ಮುಖ ಆಗಾಗ್ಗೆ ಗೋಚರಿಸುತ್ತಿದೆ. ತನ್ನ ಒನ್ ಚೀನಾ ನೀತಿಯನ್ವಯ ತೈವಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಇಟ್ಟುಕೊಳ್ಳಬಾರದೆಂದು, ಟಿಬೆಟ್ ತನ್ನ ಆಂತರಿಕ ವಿಷಯವೆಂದು ಭಾರತ ಒಪ್ಪಿಕೊಳ್ಳಬೇಕೆಂದು ಅಪೇಕ್ಷಿಸುವ ಚೀನಾ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ಭಾವನೆಗಳಿಗೆ ಯಾವತ್ತೂ ಗೌರವ ಕೊಡಲಿಲ್ಲ. ಹಾಗಿರುವಾಗ ಚೀನಾ ಕುರಿತು ಅಷ್ಟೊಂದು ರಿಯಾಯತಿ ಏಕೆ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ತ್ತಿರುವ ಭಾರತದ ಪ್ರಭಾವ ಹಾಗೂ ಅಮೆರಿಕಾದೊಂದಿಗಿನ ಬಾಂಧವ್ಯ ವೃದ್ಧಿಯಿಂದ ಕರುಬುತ್ತಿರುವ ಅದು ಲಡಾಖ್ ಅತಿಕ್ರಮಣದ ಮೂಲಕ ಭಾರತವನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ.

ಭಾರತವನ್ನು ಕೆಣಕುವ ಮೂಲಕ ಅಪ್ರತ್ಯಕ್ಷವಾಗಿ ಅಮೆರಿಕಾಕ್ಕೆ ಸವಾಲು ಹಾಕುತ್ತಿದೆ. ಅಮೆರಿಕಾವನ್ನು ಪ್ರಚೋದಿಸಲು ಭಾರತ ತುಂಬಾ ಸುಲಭದ ಟಾರ್ಗೆಟ್(soft target) ಎನ್ನುವಂತೆ ವರ್ತಿಸುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವ ಮೂಲಕ ದರ್ಪ ಪ್ರದರ್ಶಿಸುತ್ತಿರುವ ಚೀನಾ ಹಿಂದೂ ಮಹಾಸಾಗರದಲ್ಲೂ ಪ್ರಾಬಲ್ಯ ಮೆರೆಯಲು  ಹವಣಿಸುತ್ತಿದೆ.

ದಕ್ಷಿಣ ಏಷ್ಯಾದ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾ, ನೇಪಾಲ, ಬರ್ಮಾದಂತಹ ಭಾರತದ ನೆರೆಹೊರೆಯ ಪುಟ್ಟ ರಾಷ್ಟ್ರಗಳಿಗೆ ಸಾಲ ಹಾಗೂ ವ್ಯಾಪಾರ ರಿಯಾಯಿತಿ ನೀಡುವ ಮೂಲಕ ಅದು ಭಾರತವನ್ನು ಸುತ್ತುವರಿಯಲು ಯೋಜನೆ ರೂಪಿಸಿಕೊಂಡು ಆ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ಶಾಂತಿಯ ಮಾತನಾಡುತ್ತಾ ಹಿಂದಿನಿಂದ ಇರಿಯುವ ಚೀನಾವನ್ನು ಎದುರಿಸಲು ಭಾರತ
ವ್ಯೂಹಾತ್ಮಕವಾಗಿ ಯೊಚಿಸಬೇಕಾದ ಸಮಯ ಬಂದಿದೆ. ಪ್ರಾಸಂಗಿಕತೆ ಕಳೆದುಕೊಂಡಿರುವ ಅಲಿಪ್ತ ನೀತಿಗೆ ಬೈ ಹೇಳಲು ಇದು ಸಕಾಲ.

Leave a Reply

Your email address will not be published. Required fields are marked *

error: Content is protected !!