ಮುಂಬೈ: ಐಷಾರಾಮಿ ಹಡಗಿನ ಡ್ರಗ್ ಪ್ರಕರಣದಲ್ಲಿನ ಇತರ ಏಳು ಆರೋಪಿ ಗಳಿಗೆ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ. ಕಳೆದ ಗುರುವಾರ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್’ಗೆ ಜಾಮೀನು ಮಂಜೂರಾಗಿ, ಶನಿವಾರ ಬಿಡುಗಡೆಯಾಗಿತ್ತು.
ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ವಿ.ವಿ.ಪಾಟೀಲ್ ಅವರು ಪ್ರಕರಣದ ವಿಚಾರಣೆ ನಡೆಸಿದರು.
ಡ್ರಗ್ ಪೆಡ್ಲರ್ ಆಚಿತ್ ಕುಮಾರ್, ನೂಪುರ್ ಸತಿಜಾ, ಗೋಮಿತ್ ಚೋಪ್ರಾ, ಗೋಪಾಲ್ಜಿ ಆನಂದ್, ಸಮೀರ್ ಸೆಹಗಲ್, ಮಾನವ್ ಸಿಂಘಾಲ್ ಮತ್ತು ಭಾಸ್ಕರ್ ಅರೋರಾ ಅವರಿಗೆ ಜಾಮೀನು ನೀಡಲಾಗಿದೆ. ಇದರೊಂದಿಗೆ ಇದು ವರೆಗೆ 12 ಮಂದಿಗೆ ಜಾಮೀನು ದೊರೆತಂತಾಗಿದೆ.
ಆರೋಪಿ ಆರ್ಯನ್ ಖಾನ್, ಅರ್ಬಾಜ್ ಮರ್ಚಂಟ್ ಮತ್ತು ಮುನ್ಮುನ್ ಧಮೇಚಾ ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿತ್ತು.
ಅ.2 ರಂದು ಎನ್‌ಸಿಬಿ ತಂಡವು ಐಷಾರಾಮಿ ಹಡಿಗಿನ ಮೇಲೆ ದಾಳಿ ನಡೆಸಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡಿತ್ತು. 22 ದಿನಗಳ ಜೈಲುವಾಸದ ನಂತರ ಆರ್ಯನ್ ಖಾನ್ ಶನಿವಾರ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದರು.