Friday, 18th October 2024

ನಿಜವಾಗಿ ಸ್ನೇಹದ ಪರಿಚಯವಾಗುವುದು ಕಷ್ಟ ಬಂದಾಗಲೇ !

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ಬಹಳ ಸಲ ನಾವು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಮಾಡಲು ಹೊರಟ ಕೆಲಸಗಳು ನಮಗೇ ಹೇಳಲಾರದಷ್ಟು ತೊಂದರೆ ಯನ್ನು ಕೊಟ್ಟು ಬಿಡುತ್ತವೆ. ಜಾಳುಜಾಳಾಗಿರುವ ಸಂಬಂಧವನ್ನು ಸುಧಾರಿಸಿಕೊಳ್ಳುವ ಪ್ರಯತ್ನ ಮಾಡು ವಾಗ ಹಿಂದೆಯೇ ದೊಡ್ಡ ಜಗಳ ಕಾದು ಕುಳಿತಿರುತ್ತದೆ.

ಕಷ್ಟ! ಹಾಗಂತ ಅಂದುಕೊಂಡುಬಿಟ್ಟರೆ ಅದೊಂದು ಹೊರಲಾಗದ ಹೊರೆಯಂತಾಗಿ ಇರುವ ದಾರಿಗಳೆಲ್ಲ ಒಮ್ಮೆಲೇ ಮುಚ್ಚಿ ಹೋಗಿ ಇದ್ದ ಬಂಧಿಯಾಗಿ ಹೋಗುವ ಅನುಭವ! ಕಷ್ಟ ಅನ್ನುವುದು ಅದಾವ ರೂಪದಲ್ಲಿ ಬಂದು ವಕ್ಕರಿಸುವುದೋ ಗೊತ್ತೇ ಆಗುವುದಿಲ್ಲ. ಎಲ್ಲವೂ ಚೆಂದಗೆ ಖುಷಿ ಖುಷಿಯಲ್ಲಿರುವಾಗ ರಪ್ಪಂತ ಬಂದು ಬೀಳುವ ಕಷ್ಟಗಳು ಹೇಳುತ್ತಾ ಹೋದರೆ ಅದಕ್ಕೆ ಕೊನೆ ಮೊದಲಿಲ್ಲ. ಯಾರೊಬ್ಬರೂ ಬಯಸದೇ ಬರುವ ಅತಿಥಿಯೆಂದರೆ ಬಹುಶಃ ಕಷ್ಟವೊಂದೇ ಇರಬೇಕು.

ಯಾರ್ಯಾರಿಗೆ ಯಾವ ಯಾವ ರೀತಿಯಲ್ಲಿ ಕಷ್ಟಗಳು ಎದುರಾದವು? ಅದನ್ನು ಎದುರಿಸ ಲಾಗದೆ ಮಣ್ಣಲ್ಲಿ ಮಣ್ಣಾಗಿ ಹೋದ ವರು, ಅಧೀರರಾಗಿ ಮನೋರೋಗಿಗಳಾಗಿ ಹೋದ ವರು… ಹೀಗೆ ಸಾಮಾನ್ಯ ಮನುಷ್ಯನಿಂದ ಹಿಡಿದು ಮಂತ್ರಿ-ಮಾಗಧರ ತನಕ ಕಷ್ಟಗಳು ಯಾರನ್ನೂ ಬಿಟ್ಟಿಲ್ಲ. ಕಷ್ಟವನ್ನು ಕಷ್ಟ ಎಂದುಕೊಳ್ಳದೆ ಅದನ್ನೊಂದು ಸವಾಲೆಂದು ಬಗೆದು ಅದಕ್ಕೊಂದು ಪರಿಹಾರ ಹುಡುಕಿ ಯಶಸ್ವಿಯಾದವರು ಎಲ್ಲರ ಮನಗಳಲ್ಲಿ ಅಸಮಾನ್ಯ ನಾಯಕನಂತೆ ಕಂಗೊಳಿಸಿದರೆ ಅದನ್ನು ಎದುರಿಸ ಲಾಗದೆ ಸೋತು ನೆಲಕ್ಕೊರಗಿ ನೆನಪಾಗಿ ಹೋದವರೆಷ್ಟೋ? ಹೊಸದಾಗಿ ಆರಂಭಿಸಿರುವ ನನ್ನ BEST OF BELAGERE ಆನ್ನುವ youtube channelಗೆ ಒಂದಷ್ಟು ವಿಷಯಗಳನ್ನು ಹುಡುಕುತ್ತಾ ಮನಸಿನ ಮಂಥನದಲ್ಲಿ ಮಾತುಗಳು ನಿರಂತರ ನಡೆದೇ ಇತ್ತು.

ಅಷ್ಟರ ರಿಂಗಣಸಿದ ಫೋನು ಮನಸಿನ ಎಲ್ಲ ಮಾತುಗಳಿಗೆ ಬ್ರೇಕು ಹಾಕಿ ಹಲೋ ಎಂದಾಗ ಅತ್ತಲಿಂದ ಬಂದ ಭಾರದ ದನಿ ಕೇಳಿ ಸ್ವಲ್ಪ ಗಾಬರಿಯಾಯಿತು. ಏನಾಯಿತು? ಎಂದು ಕೇಳಿದವಳಿಗೆ ಅವಳು ಹೇಳುತ್ತಾ ಹೋದ ಮಾತುಗಳು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯವೇ ಹಿಡಿಯಿತು. ಏನಿಲ್ಲ, ನನಗೂ ನನ್ನ ಗಂಡನಿಗೂ ಹೊಂದಾಣಿಕೆಯಾಗುತ್ತಿಲ್ಲ. ಏನು ಮಾಡಿದರೂ ಅದರಂ ಹುಳುಕು ಹುಡುಕಿ ಎತ್ತಿ ತೋರುವುದು, ಅವಮಾನವಾಗುವಂತೆ ಮಾತನಾಡುವುದು, ಕೊನೆಗೆ ನನ್ನ ದೈನಂದಿನ ಖರ್ಚು-ವೆಚ್ಚ ಗಳಿಗೂ ಅಳೆದೂ ತೂಗಿ ಎಣಿಸೆಣಿಸಿ ಕೊಡುವಾಗ ಯಾಕಿಂಥಾ ಬದುಕು ಬದುಕಬೇಕು ಅನ್ನಿಸಿ ನನ್ನೆಡೆಗೆ, ಈ ಬದುಕಿನೆಡೆಗೆ ಜುಗುಪ್ಸೆ ಮೂಡಿ ಬರುತ್ತದೆ.

ಹತ್ತತ್ತಿರ ನಲವತ್ತು ವರುಷಗಳಿಂದ ಇದೇ ಬದುಕು ನನ್ನದು. ಈಗಂತೂ ಎಲ್ಲ ಜವಾಬ್ದಾರಿಗಳನ್ನೂ ಕಳೆದುಕೊಂಡು ಬಿಟ್ಟಿದ್ದೇನೆ. ಮಗಳೀಗ ಬೆಳೆದು ನಿಂತಿದ್ದಾಳೆ. ಅವಳ ಅನ್ನ ಅವಳು ದುಡಿಯುತ್ತಿzಳೆ. ಅವಳದೇನೂ ಚಿಂತೆಯಿಲ್ಲ. ಅವಳ ಸಂಗಾತಿಯನ್ನೂ ಅವಳೇ ಆರಿಸಿಕೊಳ್ಳುವ ಎಲ್ಲ ಸ್ವಾತಂತ್ರ್ಯವೂ ಅವಳಿಗಿದೆ. ನನ್ನ ಕರ್ತವ್ಯ ಒಂದು ಮುಗಿಸಿ ಯಾವುದಾದರೂ ಮಠಕ್ಕೋ, ಆಶ್ರಮ ಕ್ಕೋ ಸೇರಿಬಿಡುತ್ತೇನೆ. ನನ್ನ ಕೈಲಾದ ಸೇವೆ ಮಾಡುತ್ತಾ ಬದುಕನ್ನ ಮುಗಿಸಿಕೊಳ್ಳುತ್ತೇನೆ. ಸುಮ್ಮನೆ ನಿನ್ನೊಂದಿಗೆ ಮನಸಿನ ಮಾತುಗಳನ್ನ ಹೇಳಿಕೊಂಡು ಹಗುರಾಗಬೇಕೆನ್ನಿಸಿತು ಅಷ್ಟೆ ಅಂದಾಗ, ಏನು ಹೇಳುವುದು? ಹೇಗೆ ಸಮಾಧಾನ ಮಾಡುವುದು ಎಂದು ತೋಚದೆ ಒಂದು ನಿಮಿಷ ಕಕ್ಕಾಬಿಕ್ಕಿಯಾದೆ.

ಸುಮತಿ ನನಗೆ ಬಹಳ ವರುಷಗಳ ಗೆಳತಿಯೇನಲ್ಲ. ಆದರೂ ಒಂದು ತಣ್ಣನೆಯ ಗೆಳೆತನ ಅರಳಿ ನಿಂತು ಕೆಲವೇ ತಿಂಗಳುಗಳಾಗಿವೆ. ಮಾತಾಡುತ್ತಾ ಆಡುತ್ತಾ ಪರಸ್ಪರರ ಕಷ್ಟ-ಸುಖ-ದುಃಖಗಳನ್ನು, ಭಾವನೆಗಳನ್ನು ಹಂಚಿಕೊಳ್ಳುತ್ತಾ ಆತ್ಮೀಯರಾಗಿ ಮನಸು ಹಗುರಗೊಳಿಸಿಕೊಳ್ಳು ತ್ತಿzವು. ಆದರೆ ಅದೆಷ್ಟು ಖುಷಿ ಖುಷಿಯಾಗಿದ್ದಳಲ್ಲ? ಅದ್ಯಾಕೆ ಹೀಗಾಯ್ತು ಒಮ್ಮೆಲೇ? ಇರಲಿ… ಅದನ್ನೆಲ್ಲ
ನಿಧಾನಕ್ಕೆ ಕೂತು ಮಾತಾಡಿದರಾಯ್ತು. ಆದರೆ ಈಗ ದುಃಖದಲ್ಲಿರುವ ಅವಳಿಗೆ ಕೊಂಚವಾದರೂ ಸಮಾಧಾನ ಸಿಗುವವರೆಗೂ ನನ್ನೊಂದಿಗೇ ಇರಲಿ ಎಂದುಕೊಳ್ಳುತ್ತಾ, ಸುಮಿ, ಸಮಾಧಾನ ಮಾಡ್ಕೋ.

ಒಮ್ಮೆಲೇ ಇಂಥ ನಿರ್ಧಾರಕ್ಕೆ ಬರೋದು ಒಳ್ಳೆಯದಲ್ಲ. ಏನೋ ಕಹಿ ಘಳಿಗೆ ಮಾತಿಗೆ ಮಾತು ಬೆಳೆದು ನಿನಗೆ ಹಾಗನ್ನಿಸುತ್ತಿರ ಬಹುದು. ಮನಸು ತಿಳಿಯಾದ ನಂತರ ಎಲ್ಲ ಸರಿ ಹೋಗುತ್ತದೆ. ನಲವತ್ತು ವರುಷಗಳಿಂದ ಸಹಿಸಿಕೊಂಡವಳು ಹೀಗೆ ದಿಡೀರಂತ ಆಶ್ರಮಕ್ಕೆ ಹೋಗಿ ಹೊಂದಿಕೊಳ್ಳುವುದು ಕೂಡ ಅಷ್ಟು ಸುಲಭವಲ್ಲ. ನಾವಿರಬೇಕಾದರೆ ಅದ್ಯಾಕೆ ನೀನು ಅದ್ಯಾವುದೋ ಮಠಕ್ಕೋ, ಆಶ್ರಮಕ್ಕೋ ಹೋಗಬೇಕು? ನಿಂಗೆ ಸಾಕೆನ್ನಿಸುವಷ್ಟು ದಿನ ನಮ್ಮೊಂದಿಗೆ ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬಳಾಗಿ ಇರುವುದಕ್ಕೆ ಯಾವುದೇ ತೊಂದರೆಯಿಲ್ಲ.

ನಾವು ತಿನ್ನುವುದರಲ್ಲಿ ನಿನಗೊಂದು ತುತ್ತು ಹೆಚ್ಚಾದರೆ ನನಗಾವ ಬಡತನವೂ ಬರುವುದಿಲ್ಲ. ನೆಮ್ಮದಿಯಾಗಿರು ಎಂದು  ಹೇಳಿದೆ ನಾದರೂ, ಎಷ್ಟು ದಿನ ನನ್ನಿಂದ ನೋಡಿಕೊಳ್ಳಲು ಸಾಧ್ಯವಾದೀತು? ಇದ್ದ ಮನೆಯನ್ನು, ಕುಟುಂಬವನ್ನು ಬಿಟ್ಟು ಅದೆಷ್ಟೇ ಆತ್ಮೀಯತೆಯಿದ್ದರೂ ಮತ್ತೊಬ್ಬರ ಮನೆಯಲ್ಲಿ ಬಂದಿರುವುದು ಅವರ ಅಸ್ತಿತ್ವವನ್ನೇ ಕಳೆದುಕೊಂಡಂತಲ್ಲವೇ? ಅದೂ ಅಲ್ಲದೆ ನಮಗೆ ನಮ್ಮದೇ ಆದ ರೀತಿ-ನೀತಿ, ಹವ್ಯಾಸ-ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತೇವೆ.

ಇದ್ದಕ್ಕಿದ್ದಂತೆ ಅದರೊಳಗೆ ಮತ್ತೊಬ್ಬರು ಬಂದು ಹೊಂದಿಕೊಳ್ಳುವುದನ್ನು ಸಾಮಾನ್ಯರಾದ ನಮಗೆ ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಇರುವ ಆತ್ಮೀಯತೆಯೆಲ್ಲ ಮೂರೇ ದಿನಕ್ಕೆ ಕಳೆದುಹೋಗಿ ನಮ್ಮ ಮನೆಯಲ್ಲಿ ನಾವೇ ಬಂಧಿಗಳಂತಿರುವುದು ಅಸಹನೆಗೆ ಕಾರಣವಾಗಿ ಸಣ್ಣ ಸಿಡಿಮಿಡಿ ಶುರುವಾಗುತ್ತದೆ. ಇರುವ ಸ್ನೇಹ ಶಾಶ್ವತವಾಗಿ ಕಳೆದುಹೋಗುತ್ತದೆ. ಅನ್ನುವ ಪ್ರಶ್ನೆ
ಒಳಗೊಳಗೇ ಕಾಡುತ್ತಿತ್ತು. ಇದೇ ವಿಚಾರ ತಲೆತುಂಬಿ ಕೊಂಡು ಬೇರೇನೂ ಕೆಲಸ ಮಾಡಲಾಗದಂತಾಗಿತ್ತು.

ಸಂಜೆಯ ಹೊತ್ತಿಗೆ ಮತ್ತೆ ರಿಂಗಾದ ಫೋನಿಗೆ ಕಿವಿಯಾದವಳಿಗೆ ಎಲ್ಲ ಸಾಧ್ಯತೆಗಳನ್ನೂ, ಸಮಸ್ಯೆಗಳನ್ನೂ, ನನ್ನ ಮನದ ದುಗುಡಗಳನ್ನೂ ಹೇಳಿಕೊಂಡು ಅವಳಿಗೆ ಯೋಚಿಸಿ ಸರಿಯಾದ ನಿರ್ಧಾರಕ್ಕೆ ಬರಲು ತಿಳಿಸಬೇಕು. ಆನಂತರ ಬರುವ ಸಮಸ್ಯೆ ಗಳನ್ನೆಲ್ಲ ಎದುರಿಸಲು ಈಗಲೇ ಮಾನಸಿಕವಾಗಿ ಸಿದ್ಧಳಾಗಿರುವಂತೆ ತಿಳಿಹೇಳಬೇಕು ಅಂದಕೊಳ್ಳುವಷ್ಟರ  ಅತ್ತಕಡೆ ಯಿಂದ ಜೋರಾಗಿ ನಗುವ ಸದ್ದು ಕೇಳಿ ದಂಗಾದೆ. ಇಡೀ ದಿನ ನೀನು ನನ್ನ ಬಗ್ಗೆಯೇ ಯೋಚಿಸುತ್ತಿದ್ದೆ ಅಲ್ವಾ? ನಂಗೊತ್ತಿತ್ತು ನಿನ್ನ ಸ್ವಭಾವವೇನೂ ಎಂದು. ಆದರೂ ಒಮ್ಮೆ ಪರೀಕ್ಷಿಸೋಣ ಅನ್ನಿಸಿತು.

You once again proved what you are…. ನಂಗ್ಯಾವ ತೊಂದರೆಯೂ ಇಲ್ಲ. ನನ್ನ ಗಂಡ ನನ್ನನ್ನು ಮಹಾರಾಣಿಯಂತೆ ನೋಡಿಕೊಳ್ಳುತ್ತಿzರೆ. ನೀನೇನೂ ಚಿಂತೆ ಮಾಡಬೇಡ ಎಂದು ನಗುತ್ತಲೇ ಫೋನು disconnect ಮಾಡಿದಾಗ, ಹೀಗೂ ಇರ್ತಾರಾ ಜನ? ಎಂದುಕೊಳ್ಳುತ್ತಾ ನಾನೂ ನಕ್ಕು ನಿರಾಳವಾದೆ. ಇತ್ತೀಚೆಗೆ ಇಂಥಾ callಗಳು ಮೆಸೇಜುಗಳು ಸಾಕಷ್ಟು ಬರುತ್ತವೆ. ನನ್ನನ್ನು ಪರೀಕ್ಷಿಸಲು. ನಾನೂ ಸಹ ಅವನ್ನೆಲ್ಲ ಬಹಳ ಗಂಭೀರವಾಗಿ ಪರಿಗಣಿಸದೆ ಅವರಿಗೆ ಬೇಕಾದ ಉತ್ತರ ಕೊಟ್ಟು ಸುಮ್ಮನಾಗುತ್ತೇನೆ.

ಯಾಕಂದ್ರೆ ಪರೀಕ್ಷಿಸಲು ಅವರು ಶ್ರೀರಾಮ ಚಂದ್ರರೂ ಅಲ್ಲ. ಸಮರ್ಥಿಸಿಕೊಳ್ಳಲು ನಾನು ಸೀತಾಮಾತೆಯೂ ಅಲ್ಲ ಅನ್ನುವುದು
ಮನವರಿಕೆಯಾಗಿದೆ. ಕೆಲವು ಕಷ್ಟಗಳೇ ಹಾಗೆ. ಕೆಲವು ಶಾಶ್ವತ ಪರಿಹಾರವನ್ನು ಬೇಡಿದರೆ, ಮತ್ತೆ ಕೆಲವು ತಾತ್ಕಾಲಿಕ ಪರಿಹಾರ ಗಳಿಂದಲೇ ಸರಿಹೋಗುವಂಥzಗಿರುತ್ತದೆ. ಆದರೆ ಕೆಲವೊಂದು ನಿರ್ಧಾರಗಳು ಶಾಶ್ವತವಾಗಿ ಬಾರದ ಲೋಕಕ್ಕೆ ಎಳೆದೊಯ್ದು ಬಿಡುತ್ತವೆ ಎಂದುಕೊಳ್ಳುವಾಗ ಯಾಕೋ ಕಾಫಿ ಡೇ’ ಯಂಥಾ ಸುಂದರ ಕಲ್ಪನೆಗೆ ಜೀವ ತುಂಬಿದ ಸಿದ್ಧಾರ್ಥ್ ನೆನಪಾಗುತ್ತಾರೆ.

ಇದುವರೆಗೂ ಯಾರಿಗೂ ಗೋಚರವಾಗದ ಹೊಸ ವಿಷಯವೊಂದನ್ನು ಕಂಡು ಹಿಡಿಯಲು ಹೊರಡುವ ವಿಜ್ಞಾನಿ, ಈ ಬಾರಿ ಅದ್ಭುತವಾದ ಪ್ರದರ್ಶನ ಕೊಡುತ್ತೇನೆಂದು ಹೊರಡುವ ಆಟಗಾರ, ಉತ್ತಮವಾದ ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೊಳಿಸಲು ಬಯಸುವ ರಾಜಕಾರಣಿ, ಒಂದು ಒಳ್ಳೆಯ ಸಿನೆಮಾದಲ್ಲಿ ಉತ್ತಮ ನಟನೆಯನ್ನು ತೋರುತ್ತೇನೆಂದು ಹೊರಡುವ ಸಿನೆಮಾ ತಾರೆಯರು, ಯಾರ್ಯಾರನ್ನೂ ಬಿಟ್ಟಿಲ್ಲ ಈ ಕಷ್ಟವೆಂಬ ದೇವತೆ.

ಬಹಳ ಸಲ ನಾವು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಮಾಡಲು ಹೊರಟ ಕೆಲಸಗಳು ನಮಗೇ ಹೇಳಲಾರದಷ್ಟು ತೊಂದರೆ ಯನ್ನು ಕೊಟ್ಟು ಬಿಡುತ್ತವೆ. ಜಾಳುಜಾಳಾಗಿರುವ ಸಂಬಂಧವನ್ನು ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುವಾಗ ಹಿಂದೆಯೇ ದೊಡ್ಡ ಜಗಳ ಕಾದು ಕುಳಿತಿರುತ್ತದೆ. ಇರುವ ದುಡ್ಡನ್ನೆಲ್ಲ ತೊಡಗಿಸಿ ಒಂದಷ್ಟು ಲಾಭ ಮಾಡಿಕೊಳ್ಳಲು ಹೊರಟರೆ ಲಾಭದ ಮಾತಿರಲಿ, ಅಸಲೂ ಸಹ ಕಣ್ಣಿಗೆ ಕಾಣದಂತೆ ಕೈ ಖಾಲಿಯಾಗಿ ಹೋಗಿರುತ್ತದೆ. ಕಚೇರಿಯ ಅವ್ಯವಸ್ಥೆಯನ್ನು ಸರಿ ಮಾಡಲು ಹೊರಟಾಗ ನಾವೇ ಕೆಲಸ ಕಳೆದುಕೊಂಡು ಮನೆಗೆ ಮರಳಿರುತ್ತೇವೆ.

ಅದ್ಭುತವಾದ ಮನೆಯ ಕನಸು ಕಾಣುವಾಗ ನಿಲ್ಲಲು ನೆಲೆಯೇ ಇಲ್ಲದಂತೆ ಅಲೆಮಾರಿಯಾಗಿ ಹೋಗಿರುತ್ತೇವೆ. ಮೆಚ್ಚುಗೆಯ ನಿರೀಕ್ಷೆಯಲ್ಲಿದ್ದಾಗ ಎಡೆಯಿಂದ ಅವಹೇಳನದ ಸುರಿಮಳೆಯೇ ಆಗಿಹೋಗುತ್ತದೆ. ಇವೆಲ್ಲವೂ ರಕ್ಷಣೆಗೆ ಹೊರಟು ರೆಕ್ಕೆ ಮುರಿದು ಕೊಂಡು ಬಂದ ಜಟಾಯುವಿನ ಪರಿಸ್ಥಿತಿಯಂತೆ ಎಲ್ಲರ ಅನುಭವಕ್ಕೂ ಬಂದಿರಬಹುದು. ಗಮನಿಸಿ ನೋಡಿ ಪ್ರತಿಯೊಬ್ಬ ಯಶಸ್ವೀ ವ್ಯಕ್ತಿಯ ಮೊದಲ ಪ್ರಯತ್ನ ಸೋಲಿನಿಂದಲೇ ಆರಂಭಗೊಂಡಿರುತ್ತದೆ. ಅವರು ಯಶಸ್ವೀ ವ್ಯಕ್ತಿಯಾಗಲು ಕಾರಣ ಅವರ ನಿಲ್ಲದ ನಿರಂತರ ಪ್ರಯತ್ನ.

ಇದೆಲ್ಲದರ ನಡುವೆಯೇ ನಾವು ಕಷ್ಟದಲ್ಲಿದ್ದೇವೆ ಎಂದು ತಿಳಿದ ಕೂಡಲೇ ಜೀವಕ್ಕೆ ಜೀವ ಕೊಡುವಂಥ ಸ್ನೇಹ- ಸಂಬಂಧಗಳೆಲ್ಲ ಜೊತೆಯ ಇದ್ದರೆ ಇನ್ನೆಲ್ಲಿ ತಮ್ಮ ಬಳಿ ಸಹಾಯವನ್ನು ಕೇಳುತ್ತಾರೋ ಅನ್ನುವ ಭಯದಿಂದ ಕಂಡೂ ಕಾಣದಂತೆ ಒಂದೊಂದು ನೆಪವೊಡ್ಡಿ ನಮ್ಮಿಂದ ದೂರಾಗಿ ಹೋಗುತ್ತಾರೆ. ದೂರಾಗಿ ಸುಮ್ಮನಾದರೂ ಚಿಂತೆಯಿಲ್ಲ. ಎಲ್ಲರ ಬಳಿಯೂ ನಮಗೆದುರಾದ ಕಷ್ಟದ ಬಗ್ಗೆ ಹೇಳಿಕೊಳ್ಳುತ್ತಾ ಎಲ್ಲಿಂದಲೂ ಸಹಾಯ ಹುಟ್ಟದಂತೆ ಮಾಡಿಬಿಟ್ಟಿರುತ್ತಾರೆ.

ಅದಕ್ಕಿಂತ ಹೆಚ್ಚಾಗಿ ನಮ್ಮಿಂದ ಸಹಾಯ ಪಡೆದವರೇ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಾಗಿ ಎಲ್ಲರ ಬಳಿ ಆಡಿಕೊಂಡು ನಗುವ ಮಾತುಗಳು ಕಿವಿಗೆ ಬಿದ್ದಾಗ, ಸ್ವಾಭಿಮಾನದಿಂದ ಬದುಕಿದವರ ಅಹಂಗೇ ಸರಿಯಾದ ಹೊಡೆತ ಬಿದ್ದು ಅವರ ಆಕ್ರೂಶವೆಲ್ಲ ಬೋನಿಗೆ ಬಿದ್ದ ಹುಲಿಯ ಘರ್ಜನೆಯಂತಾಗಿರುತ್ತದೆ. ಬಹುಶಃ ಆಗಲೇ ದೇವರೆಡೆಗಿನ ನಂಬಿಕೆ ಬಲವಾಗುವುದು. ಕಾಣದ
ಅಗೋಚರ ದೇವರೆಂಬ ನಂಬಿಕೆ ನಮ್ಮ ಕಷ್ಟಗಳನ್ನೆಲ್ಲ ನಿವಾರಿಸುವ ಆಪದ್ಬಾಂಧವನಂತೆ ಕಾಣುವುದು.

ಎಲ್ಲರ ಬದುಕಲ್ಲಿಯೂ ಕಷ್ಟದ ನಂತರ ಸುಖದ ದಿನಗಳು ಬಂದೇ ಬರುತ್ತವೆ. ಅಲ್ಲಿಯವರೆಗೂ ಕಾಯುವಂಥ ಸಹನೆ ಇರಬೇಕಷ್ಟೆ. ಕಷ್ಟ ಬಂದಾಗ ಹೆದರಬಾರದು. ಕಷ್ಟ ಬರುವುದೇ ನಮ್ಮನ್ನು ಗಟ್ಟಿಗೊಳಿಸುವುದಕ್ಕೆ. ಕಷ್ಟವೇ ಇರದಿದ್ದರೆ ನಮಗೆ ಸುಖದ ಬೆಲೆಯೇ ಅರಿವಾಗುತ್ತಿರಲಿಲ್ಲ. ಕಷ್ಟಕಾಲದಲ್ಲಿ ಸೋಲು, ಅವಮಾನಗಳು ಎದಿರು ನಿಂತು ಗಹಗಹಿಸಿ ನಗುತ್ತವೆ. ಆದರೆ ಅದಕ್ಕೆ ಶರಣಾಗದೇ ಮೆಟ್ಟಿ ನಿಂತು ಅದರೆತ್ತರಕ್ಕೆ ಬೆಳೆದು ನಿಂತು ತೋರಿಸಿದಾಗ ಅದು ನಮ್ಮ ಕಾಲಧೂಳಿನಂತೆ ಭಾಸಾಗುತ್ತದೆ. ಸುಖ
ಮೈಮರೆಯುವಂತೆ ಮಾಡಿದರೆ, ಕಷ್ಟಗಳು ಸದಾ ನಮ್ಮನ್ನು ಎಚ್ಚರದಲ್ಲಿಟ್ಟಿರುತ್ತವೆ. ಹೀಗಾಗಿ ನಾವು ಕಷ್ಟಗಳೆಂದರೆ ಹೀಗಳೆಯದೆ ಸದಾ ಕೃತಜ್ಞರಾಗಿರಬೇಕು.