Friday, 21st June 2024

ನಿವೃತ್ತ ಯೋಧ ಅಂಬಳ್ಳಿ ನಾಗರಾಜ ನಾಯ್ಕ, ಪತ್ನಿ ಯೋಧೆ ಪದ್ಮಾಕ್ಷೀಗೆ ಅದ್ದೂರಿ ಸ್ವಾಗತ

ಶಿರಸಿ: ಕಾನಸೂರ ಗ್ರಾ.ಪಂ ವ್ಯಾಪ್ತಿಯ ಅಂಬಳ್ಳಿ ನಾಗರಾಜ ನಾಯ್ಕ ಹಾಗೂ ಪತ್ನಿ ಪದ್ಮಾಕ್ಷೀಯು ಸುದೀರ್ಘ ದೇಶ ಸೇವೆ ಸಲ್ಲಿಸಿ, ನಿವೃತ್ತರಾದ ಹಿನ್ನೆಲೆ ನಗರದ ಮಾರಿಕಾಂಬಾ ದೇವಸ್ಥಾನದಿಂದ ಕಾನಸೂರಿನ ವರೆಗೆ ಮೆರವಣಿಗೆ ನಡೆಸಿ, ಅದ್ದೂರಿಯಾಗಿ ಸ್ವಗ್ರಾಮಕ್ಕೆ ಸ್ವಾಗತಿಸಲಾಯಿತು.

ಯೋಧನಾಗಿ ದೇಶ ಸೇವೆ ಸಲ್ಲಿಸಿ, ವರ್ಷದ ಹಿಂದೆ ನಾಗರಾಜ ನಾಯ್ಕ ನಿವೃತ್ತರಾಗಿದ್ದರು. ಪತ್ನಿ ಪದ್ಮಾಕ್ಷಿಯು ಯೋಧೆಯಾಗಿರುವದರಿಂದ ಆಕೆಯ ನಿವೃತ್ತಿಯಾಗುವ ವರೆಗೆ ತನ್ನ ಸೇವೆಯನ್ನು ಮುಂದುವರಿಸಿ, ನಿವೃತ್ತಿಯಾಗಿ ಮೇ.2 ರಂದು ಊರಿಗೆ ಆಗಮಿಸಿದಾಗ ಶಿರಸಿ ಮಾರಿಕಾಂಬಾ ದೇವಸ್ಥಾನ ದಿಂದ ಕಾನಸೂರ ವರೆಗೆ ಮೆರೆವಣಿಗೆ ಮೂಲಕ ಕರೆತರಲಾಯಿತು.

ಕಾನಸೂರ ಪ್ರವೇಶಿಸುತ್ತಿದ್ದಂತೆ ಕಾನಸೂರ ಗ್ರಾಪಂ ಸುತ್ತಮುತ್ತಲಿನ, ಅಂಬಳ್ಳಿ ಗ್ರಾಮಸ್ಥರು ಪುಷ್ಪಗುಚ್ಛ ನೀಡಿ, ಸ್ವಾಗತಿಸಿದರು. ಕಾನಸೂರ ಗಣೇಶ ಸಮುದಾಯ ಭವನದಲ್ಲಿ ಗ್ರಾಪಂ ಅಧ್ಯಕ್ಷೆ ಅನಿತಾ ನಾಯ್ಕ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.

ಸನ್ಮಾನ ಸ್ವೀಕರಿಸಿ ನಿವೃತ್ತ ಯೋಧ ನಾಗರಾಜ ನಾಯ್ಕ ಮಾತನಾಡಿ, ಯುವಕರು ದುಶ್ಚಟದ ದಾಸರಾಗಬಾರದು. ಜೀವನದಲ್ಲಿ ಶಿಕ್ಷಣ ಮುಖ್ಯವಾಗಿದ್ದು, ನಾನು ಚಿಲ್ಲರೆ ಹಣ ಸಂಗ್ರಹಿಸಿ ಶಿಕ್ಷಣ ಪಡೆದಿದ್ದೇನೆ. ಅದ್ದರಿಂದಲೇ ನಾನು ಯೋಧನಾಗಲು ಸಾಧ್ಯವಾಯಿತು. ಯುವಕರು ದುಶ್ಚಟಗಳಿಗೆ ದಾಸರಾಗದೇ, ಉನ್ನತ ಶಿಕ್ಷಣ ಪಡೆದು ದೇಶ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಉತ್ಸಾಹಿ ಯುವಕರು ದೇಶ‌ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಯಾವುದೇ ವೇಳೆಯಲ್ಲಿ ಮಾಹಿತಿ ಕೇಳಿದರೂ ಮಾರ್ಗದರ್ಶನ ನೀಡಲೂ ಸಿದ್ಧ ಎಂದರು.

ಪತ್ನಿ ನಿವೃತ್ತ ಯೋಧೆ ಪದ್ಮಾಕ್ಷಿ ಮಾತನಾಡಿ, ಮಹಿಳೆಯರು ದೇಶಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯಾರಾದರು ಯುವತಿಯರು ಸೇನೆ ಸೇರ ಬಯಸಿದರೆ ಮಾಹಿತಿಬೇಕಾದರೆ ಕೇಳಿ ನಾನು ನೀಡುತ್ತೇನೆ ಎಂದರು.

ಈ ಸಂದರ್ಬದಲ್ಲಿ ಯೋಧನ ತಂದೆ ಗಣಪತಿ ನಾಯ್ಕ ತಾಯಿ, ಪಾರ್ವತಿ ನಾಯ್ಕ, ಗ್ರಾ.ಪಂ ಕಾರ್ಯದರ್ಶಿ ನಾತ್ಲಾ ಪರ್ನಾಂಡಿಸ್ ಸ್ವಾಗತಿಸದರು. ಗ್ರಾಪಂ ಉಪಾಧ್ಯಕ್ಷೆ ಸವಿತಾ ಜಯಶೀಲ ಕಾನಡೆ ಗ್ರಾಪಂ ಸದಸ್ಯರು, ಅಂಬಳ್ಳಿ ಹಾಗೂ ಕಾನಸೂರ ಊರನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!