Thursday, 28th November 2024

ಮದುವೆ ಸನ್ನಿವೇಶದ ಯೂ ಟರ್ನ್‌

ರಮಾನಂದ ಶರ್ಮಾ

ಒಂದು ಕಾಲವಿತ್ತು. ಹುಡುಗಿ ಹೆತ್ತವರು ವರ ಹುಡುಕಲು ಪಡಬಾರದ ಪಾಡು ಪಡುತ್ತಿದ್ದರು. ಇಂದು ಆ ಸನ್ನಿವೇಶ ಯೂ ಟರ್ನ್ ತೆಗೆದುಕೊಂಡಿದೆ. ಹುಡುಗರಿಗೆ, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ, ಸೂಕ್ತ ಕನ್ಯಾ ದೊರಕುತ್ತಿಲ್ಲ!

ಐದು ವರ್ಷಗಳ ಹಿಂದಿನ ಮಾತು. ಆತ ಒಂದು ಸಾಫ್ಟ್‌ ವೇರ್ ಕಂಪನಿಯ ಉದ್ಯೋಗಿ. ಉನ್ನತ ಸ್ಥಾನದಲ್ಲಿದ್ದ ಅತನ ಸಂಬಳ ಸೌಲಭ್ಯ ನೋಡಿ ಹಲವರು ಅಸೂಯೆ ಪಡುತ್ತಿದ್ದರು. ಆತ ಕಚೇರಿಗಿಂತ ವಿಮಾನದಲ್ಲಿ ಹೆಚ್ಚು ಕಾಣುತ್ತಿದ್ದು, ಅವನ ಸಹದ್ಯೋಗಿಗಳು ಅವನನ್ನು ಕಂಪನಿಯ ಜೆಟ್ ಸೆಟ್ ಎಕ್ಸಿಕ್ಯೂಟಿವ್ ಎಂದು ಪ್ರೀತಿಯಿಂದ ಗೇಲಿ ಮಾಡುತ್ತಿದ್ದರು.

ಸ್ಪುರದ್ರೂಪಿ, ಕಪ್ಪು ಬಣ್ಣದ ಗುಂಗುರು ಕೂದಲು ಆತನ ಪರ್ಸನಾಲಿಟಿಗೆ ಇನ್ನೂ ಹೆಚ್ಚಿನ ಮೆರುಗು ಕೊಡುತ್ತಿದ್ದು, ನೋಡಿದ ಹುಡುಗಿಯರು ಮರುಮಾತನಾಡದೇ ಒಪ್ಪುುವಷ್ಟು ಸುಂದರಾಂಗನಾಗಿದ್ದ. ಪ್ರತಿಷ್ಠಿತ ಬಡಾವಣೆಯಲ್ಲಿ ಮೂರು ಬೆಡ್‌ರೂಂ ಫ್ಲ್ಯಾಟ್, ವ್ಯಾಲೆಟ್ ತುಂಬಾ ಡೆಬಿಟ್- ಕ್ರೆಡಿಟ್ ಕಾರ್ಡ್ ಗಳು, ಸ್ವದೇಶಿ- ವಿದೇಶಿ ಕರನ್ಸಿ ನೋಟುಗಳು , ಹೈ ಸೊಸೈಟಿ ಕ್ಲಬ್ ನಲ್ಲಿ ಸದಸ್ಯತ್ವ ಬೇರೆ. ‘ನೀನು ಜಸ್ಟ್ ಹೂಂ ಹೇಳು ನಿನ್ನ ಮದುವೆ ಅಯಿತು ಎಂದು ತಿಳಿ’ ಎಂದು ಸಹದ್ಯೋಗಿಗಳು ಕಿಚಾಯಿಸುತ್ತಿದ್ದರು.

ಇತ್ತೀಚೆಗೆ ಆತ ಯಾವುದೋ ಬಿಜಿನೆಸ್ ಮೀಟಿಂಗ್ ಗಾಗಿ ಅಮೇರಿಕಾದಿಂದ ಸಿಂಗಾಪೂರ್‌ಗೆ ಹೋಗುವ ಮಾರ್ಗದಲ್ಲಿ ಬೆಂಗಳೂರಿ ನಲ್ಲಿ ನಾಲ್ಕಾರು ದಿನ ಉಳಿದಿದ್ದ . ಆತ ಬಾಡಿಯಲ್ಲಿ ಸ್ವಲ್ಪ ಇಳಿದಿದ್ದ ಮತ್ತು ಸ್ವಲ್ಪ ಪೇಲವನಾಗಿ ಕಾಣುತ್ತಿದ್ದ, ಕಣ್ಣಿನ ಕೆಳಗೆ ಮಡಿಕೆಗಳು ಕಾಣುತ್ತಿದ್ದವು. ಹಣೆಯ ಸೈಜ್ ಸ್ವಲ್ಪ ದೊಡ್ಡದಾಗಿತ್ತು. ಹೆಚ್ಚು ಸುಸ್ತಾದವನಂತೆ ಕಾಣುತ್ತಿದ್ದ. ಇನ್ನೂ ಬ್ರಹ್ಮಚಾರಿ ಯಾಗಿಯೇ ಇದ್ದ. ಇನ್ನೂ ಯಾಕೆ ಸಪ್ತಪದಿ ತುಳಿಯಲಿಲ್ಲ ಎಂದು ಕೇಳಲು, ಆತ ಎಲ್ಲೋ ನೋಡುತ್ತಾ ಮುಖದಲ್ಲಿ ಬಲವಂತದ ನಗೆ ತೋರಿಸುತ್ತಾ.. ಮದುವೆಯಾಗದೇ ಉಳಿದಿರುವ ಕಾರಣವನ್ನು ಪಟ್ಟಿ ಮಾಡುತ್ತಾ ಹೋಗುತ್ತಾನೆ.

ನಾನಾ ಕಾರಣಗಳು
ಹಿರಿಯ ಮಗನಿಗೆ ಹಸೆ ಮಣೆ ಇಲ್ಲ. (ತಂದೆ -ತಾಯಿಯರು ಬದುಕಿರುವವರೆಗೆ ಮತ್ತು ತಂಗಿಯರ ಮದುವೆಯಾಗುವವರೆಗೆ
ಅತನಿಗೆ ಹೊಣೆಗಾರಿಕೆ ಇರುತ್ತದೆ). ನಾನು ಹಿರಿಯ ಮಗ. ಮನೆಯಲ್ಲಿ ಅತ್ತೆ- ಮಾವಂದಿರು ಇರಬಾರದು ಎನ್ನುವ ಪರೋಕ್ಷ
ಬೇಡಿಕೆ, ಚಿಕ್ಕ ಚೊಕ್ಕ ಕುಟುಂಬ ನಾನು- ನೀನು ಮಾತ್ರ. ಕೆಲಸದ ಸ್ಥಳ ಊರಿನಿಂದ ದೂರ ಇರಬೇಕು. ಬಂದು ಹೋಗುವವರ ಕಾಟ ಹೆಚ್ಚಾಗಿರಬಾರದು. ಉತ್ತಮ ಬಡಾವಣೆಯಲ್ಲಿ ಕನಿಷ್ಟ ಮೂರು ಬೆಡ್ ರೂಂ ಫ್ಲಾಟ್ ಇರಬೇಕು. ಟಾಪ್ ಎಂಡ್ ಕಾರ್ ಇರಬೇಕು.

ವಾರಾತಂತ್ಯಕ್ಕೆ ಹೋಟೆಲ್ ಊಟ. ಕೂಡಲೇ ಮಕ್ಕಳು ಬೇಡ. ವಿದೇಶಿ ಪೋಸ್ಟಿಂಗ್ ಇದ್ದರೆ, ಇಂಗ್ಲಂಡ್, ಅಮೇರಿಕಾ ಮತ್ತು
ಯುರೋಪಿಯನ್ ದೇಶಗಳಿಗೆ ಮಾತ್ರ ಇರಲಿ. ಮಧ್ಯ ಪ್ರಾಚ್ಯ ಮತ್ತು ಆಫ್ರಿಕನ್ ದೇಶಗಳಿಗೆ ಬೇಡ. ಪರ್ಮನೆಂಟ್ ವಿಸಾ ಇರಲಿ.
ಎಚ್ 1ಬಿ ವಿಸಾ ರಗಳೆ ಬೇಡ. ಊರಿನಲ್ಲಿ ಅನುವಂಶಿಕ ಆಸ್ತಿ ಇದ್ದು ಅದರ ಆದಾಯ ನಿರಂತರವಾಗಿ ಬರುತ್ತಿರಲಿ. ತನ ಪಟ್ಟಿ ಉದ್ದ ಬೆಳೆಯುತ್ತಾ ಹೋಗುತ್ತದೆ.

ಮೇಲು ನೋಟಕ್ಕೆ ಇದು ಅತಿ ಎನಿಸಿದರೂ ಇದರಲ್ಲಿ ಸತ್ಯವಿಲ್ಲದಿಲ್ಲ ಎಂದು ಕನ್ಯಾ ಮತ್ತು ವರ ಪಿತೃಗಳು ಅಭಿಪ್ರಾಯ ಪಡುತ್ತಾರೆ. ಆದರೆ, ಇಂದಿನ ಮದುವೆ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿದರೆ, ಈ ಹತಾಶೆಯಲ್ಲಿ ಇಂಥಹ ಟ್ರೆಂಡ್ ಇರುವು ದನ್ನು ನೋಡಬಹುದು. ಇತ್ತೀಚೆಗೆ ಬಹುತೇಕ ನಿರ್ಧಾರವಾಗಿದ್ದ ಒಂದು ಮದುವೆ ನಿಂತು ಹೋಯಿತು. ಅಮೆರಿಕದಲ್ಲಿ ಇರುವ ಹುಡುಗಿ ತಾನು ಮದುವೆ ಯಾಗುವ ಹುಡುಗನಿಗೆ, ತಾನಿರುವ ಸ್ಥಳದಲ್ಲಿಯೇ, ತಾನಿರುವಂಥ ಕಂಪನಿಯಲ್ಲಿ ತನಗಿಂತ ಉತ್ತಮ ವಾಗಿರುವ ಉದ್ಯೋಗದಲ್ಲಿರಬೇಕು, ಅತನಿಗೆ ಖಾಯಂ ವಿಸಾ ಇರಬೇಕು ಎಂದೆಲ್ಲಾ ಕ್ಯಾತೆ ತೆಗೆದಿದ್ದಳಂತೆ.

ಬದಲಾದ ಪರಿಕಲ್ಪನೆ
ಇದು ನಗರ-ಪಟ್ಟಣ ಕೇಂದ್ರಿಕೃತ ಬಹುತೇಕ ಸಾಫ್ಟವೇರ್ ವರಗಳ ಪಾಡಾದರೆ, ಗ್ರಾಮಾಂತರ ಪ್ರದೇಶದಲ್ಲಿ ಗುದ್ದಲಿ, ಪಿಕಾಸು  ಕತ್ತಿಯಂತಹ ‘ಹಾರ್ಡ್‌ವೇರ್’ ಯುವಕರ ಪಾಡು ಇನ್ನೂ ಕಷ್ಟ. ಅದೆಷ್ಟೋ ಗ್ರಾಮಾಂತರ ವರಗಳಿಗೆ ತಮ್ಮ ಜೀವನದಲ್ಲಿ ಮದುವೆ ಎನ್ನುವ ಮೂರಕ್ಷರ ಖಾಯಂ ಕನಸಾಗಿ ಉಳಿಯುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿದೆ.

ಬಹುತೇಕ ಹುಡುಗಿಯರು ಇಂದು ಉನ್ನತ ವ್ಯಾಸಂಗ ಮಾಡುತ್ತಿದ್ದು, ಉತ್ತಮ ಉದ್ಯೋಗದಲ್ಲೂ ಇದ್ದಾರೆ. ಸ್ವತಂತ್ರವಾಗಿ ಬದುಕುವ ಮಟ್ಟಕ್ಕೆ ಏರಿದ್ದಾರೆ. ಮದುವೆ ಪರಿಕಲ್ಪನೆಗೆ ಹಿಂದಿನಿಂದ ಬಂದ ಅರ್ಥ ಭಾರೀ ತಿರುವು ಪಡೆದುಕೊಂಡಿದೆ. ಜೀವನ ಪರ್ಯಂತ ಸೆಣಸುವ ಪವಿತ್ರ ಮದುವೆಗಿಂತ ಆಧುನಿಕ ಮತ್ತು ಪಾಶ್ಚಿಮಾತ್ಯ ಕಲ್ಪನೆಯಾದ ಲಿವಿಂಗ್ ಟುಗೆದರ್ ಪರಿಕಲ್ಪನೆ ಕ್ರಮೇಣ ಬೇರೂರತೊಡಗಿದೆ. ಮದುವೆ, ಹೆಂಡತಿ, ಗಂಡ, ಕುಟುಂಬ ಮಕ್ಕಳು-ಮರಿ, ಸಂಬಂಧಿಗಳು , ಹಬ್ಬ -ಉತ್ಸವಗಳು
ನಿಶ್ಚಿಂತ ಬದುಕಿಗೆ ಅಡೆತಡೆಗಳು ಎನ್ನುವ ಯೋಚನೆ ಮೊಳಕೆಯೊಡೆದು ಬೆಳೆಯುತ್ತಿದೆ.

ಸಾಮಾಜಿಕ ವಿಜ್ಞಾನಿಗಳ ಪ್ರಕಾರ ಮೇಲೇರಿದ್ದು ಕೆಳಗಿಳಿಯಲೇಬೇಕು. ಪಾತ್ರಗಳ ಅದಲು ಬದಲು, ಅತ್ತೆಗೊಂದು ಕಾಲ ಸೊಸೆ ಗೊಂದು ಕಾಲ, ಮಾಡಿದ್ದುಣ್ಣೋ ಮಹಾರಾಯ ಮಾತುಗಳ ಜೀವಂತ ಉದಾಹರಣೆ. ದಶಕಗಳ ಹಿಂದೆ ಗಂಡುಗಳು ತಮ್ಮ
ಮಗಳಿಗೆ ವರ ಸಿಗಲಿಲ್ಲವೆಂದು, ಅದೇ ವ್ಯಥೆಯಲ್ಲಿ ಕೊರಗುತ್ತಿದ್ದರು.

ಹೆಣ್ಣು ಹೆರುವುದೇ ಪಾಪ ಎನ್ನುವರಷ್ಟ ಮಟ್ಟಿಗೆ ಈ ಸಮಸ್ಯೆ ವ್ಯಾಪಕವಾಗಿತ್ತು. ಈಗ ಕಷ್ಟ ಪಡುವುದು ಗಂಡುಗಳ ಸರದಿ. ಬಡ್ಡಿ ಸಮೇತ ಹೆಣ್ಣುಗಳು ಗಂಡುಗಳಿಗೆ ವಾಪಸ್ಸು ನೀಡುತ್ತಿದ್ದಾರೆ ಎಂದು ಜೀವನದ ಮುಸ್ಸಂಜೆಯಲ್ಲಿರುವವರು ಹೇಳುತ್ತಾರೆ. ಸೃಷ್ಟಿ ಕರ್ತನ ಲೀಲೆ ಎಂದು ಮೇಲ್ಮುಖ ಕೈತೋರಿಸುತ್ತಾರೆ. ಯಾವ ಪರಿಸ್ಥಿತಿಯೂ ಸ್ಥಿರವಾಗಿ ನಿಲ್ಲುವುದಿಲ್ಲ. ಬದಲಾವಣೆ ಬದುಕಿನ ನಿಯಮ. ಅದು ಈಗ ಕಾಣುತ್ತಿದೆ.

ಮುಂದೊಂದು ದಿನ ಇದೂ ಬದಲಾಗಲೂಬಹುದು. ಯಾವುದಾದರೂ ಅತಿಯಾದರೆ, ಸಮಯವೇ ಅದಕ್ಕೆ ಪರಿಹಾರ ತೋರಿಸು ತ್ತದೆ. ಇದು ಬದುಕಿನ ಅಲಿಖಿತ ನಿಯಮಾವಳಿ. ಈ ನಿರೀಕ್ಷೆಯಲ್ಲಿ ಬದುಕು ಸಾಗುತ್ತದೆ.