Thursday, 28th November 2024

‌Roopa Gururaj Column: ಸಾಕು ಪ್ರಾಣಿಗಳ ಪ್ರೀತಿಯಲ್ಲಿ ಕಲ್ಮಶವಿರುವುದಿಲ್ಲ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದು ದಿನರಾತ್ರಿ, ತಿಮ್ಮಣ್ಣ ಬಹಳ ಸುಸ್ತಾಗಿ, ತನ್ನ ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದ, ಒಳ್ಳೆಯ ನಿದ್ರೆ ಹತ್ತಿತ್ತು, ಕೋಣೆಯ ಕಿಟಕಿಯ ಬಳಿ
ಅವನ ಮುದ್ದಿನ ನಾಯಿ ಅವನಿಗೆ ಕಾವಲಾಗಿ ಕುಳಿತಿತ್ತು.

ಮಧ್ಯರಾತ್ರಿಯ ಸಮಯದಲ್ಲಿ, ಮುಖವಾಡ ಧರಿಸಿದ ಕಳ್ಳನೊಬ್ಬ ತಿಮ್ಮಣ್ಣನ ಮನೆಯನ್ನು ಪ್ರವೇಶಿಸಿ, ಕಳ್ಳತನ ಮಾಡುವ ಉದ್ದೇಶದಿಂದ , ಮನೆಯ ಹೊರಗೆ ಹಾಕಿದ್ದ ನೀರಿನ ಕೊಳವೆಯನ್ನು ಹಿಡಿದು ಏರ ತೊಡಗಿದ. ಇದನ್ನು ಕಂಡ ನಾಯಿ ಜೋರಾಗಿ ಬೊಗಳತೊಡಗಿತು. ನಾಯಿ ಬೊಗಳಿದ ಶಬ್ದವನ್ನು ಕೇಳಿ ಕಳ್ಳ ತಾನು ಇನ್ನು ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂದುಕೊಂಡು ಕೊಳವೆ ಯಿಂದ ಜಾರಿ ಕೆಳಗಿಳಿದು ವೇಗವಾಗಿ ಓಡಿ ಹೋದ.

ಇಷ್ಟಾದರೂ ತನ್ನ ಯಜಮಾನ ಎಚ್ಚರಗೊಳ್ಳಲಿಲ್ಲವೆಂದು, ಕಳ್ಳ ಓಡಿ ಹೋದ ಮೇಲೂ ನಾಯಿ ಬೊಗುಳುವುದನ್ನು ನಿಲ್ಲಿಸಲೇ ಇಲ್ಲ. ಇದರಿಂದ ಗಾಢ ನಿದ್ರೆಯಲ್ಲಿದ್ದ ತಿಮ್ಮಣ್ಣನಿಗೆ ನಿದ್ರಾ ಭಂಗವಾಗಿ ಎಚ್ಚರವಾಯಿತು.

ಹೊರಗೆ ಎದ್ದು ಬಂದು ಅತ್ತ ಇತ್ತ ನೋಡಿದ, ಯಾರೂ ಕಾಣಿಸಲಿಲ್ಲ. ತಿಮ್ಮಣ್ಣನಿಗೆ ತನ್ನ ನಿದ್ರಾ ಭಂಗ ಮಾಡಿದ ನಾಯಿಯ ಮೇಲೆ ಬಹಳ ಕೋಪ ಬಂದು, ಅ ಬಿದ್ದಿದ್ದ ದೊಣ್ಣೆಯಿಂದ ಎರಡೇಟು ಬಿಗಿದು, ‘ನೋಡು ಇನ್ನೆಂದಾದರೂ ನಾನು ನಿದ್ರಿಸಿದಾಗ ಈ ರೀತಿಯಾಗಿ ಬೊಗಳಿದರೆ,
ನಿನ್ನ ಕಾಲು ಮುರಿದು ಮನೆಯಿಂದ ಆಚೆ ಕಳಿಸುತ್ತೇನೆ’ ಎಂದು ಹೇಳಿ, ಒಳಗೆ ಹೋಗಿ ಮತ್ತೆ ಮಲಗಿದ. ಕೆಲ ದಿನಗಳ ನಂತರ, ಮತ್ತೊಬ್ಬ ಕಳ್ಳ ಬಂದು ತಿಮ್ಮಣ್ಣನ ಮನೆಯ ಒಳಗೆ ಹೊಕ್ಕ. ಈಗ ಅವನ ನಾಯಿ ಕಳ್ಳನನ್ನು ನೋಡಿದರೂ ಬೊಗಳಲೇ ಇಲ್ಲ, ತನ್ನ ಯಜಮಾನ ಏನು ಹೇಳಿದ್ದ ಅದರಂತೆ ನಡೆದುಕೊಂಡಿತು.

ಒಳಗೆ ನುಗ್ಗಿದ ಕಳ್ಳ, ತಿಮ್ಮಣ್ಣನ ಮನೆಯ ಅಲೆಮಾರಿ ನಲ್ಲಿದ್ದ ಒಡವೆ ವಸ್ತುಗಳನ್ನು, ನಗ ನಾಣ್ಯಗಳನ್ನು, ಒಂದು ಗೋಣಿ ಚೀಲದಲ್ಲಿ ಹಾಕಿ ಕಟ್ಟಿಕೊಂಡು ಸದ್ದಿಲ್ಲ ದಂತೆ ಹೊರಟು ಹೋದ. ಬೊಗಳದ್ದಿದ್ದರೂ ನಾಯಿ, ಅವನಿಗೆ ಕಾಣದಂತೆ ಅವನನ್ನು ಬಿಡದೇ ಹಿಂಬಾಲಿಸಿತು. ಕಳ್ಳ ಹತ್ತಿರದಲ್ಲಿದ್ದ ಒಂದು ಕಾಡನ್ನು ಹೊಕ್ಕು, ಒಂದು ಮರದ ಬುಡದಲ್ಲಿ ಗುಂಡಿಯನ್ನು ತೆಗೆದು ತಾನು ತಂದಿದ್ದ ಒಡವೆ ವಸ್ತು , ನಗನಾಣ್ಯಗಳ ಚೀಲವನ್ನು, ಅದರಲ್ಲಿ ಇಟ್ಟು, ಮಣ್ಣು ಮುಚ್ಚಿ,ಅಲ್ಲಿಂದ ಹೊರಟು ಹೋದ. ನಾಯಿ ಕಳ್ಳ ಮಾಡಿದ್ದನ್ನೆಲ್ಲ ನೋಡುತ್ತಾ , ಅವನು ಹೂತಿಟ್ಟಿದ್ದ ಜಾಗವನ್ನು ನೆನಪಿನಲ್ಲಿ ಇಟ್ಟು ಕೊಂಡು ಮನೆಗೆ ಹಿಂತಿರುಗಿತು.

ತಿಮ್ಮಣ್ಣ ನಡೆದದ್ದೇ ಗೊತ್ತಾಗಿ ಹೌಹಾರಿ ನಾಯಿಯನ್ನು ಕಂಡು ‘ಇಷ್ಟು ಹೊತ್ತು ಎಲ್ಲಿ ಅಲೆಯಲು ಹೋಗಿದ್ದಿ? ಕಳ್ಳ ಬಂದಾಗ ಬೊಗಳಲು
ನಿನಗೇನಾಗಿತ್ತು?’ ಎಂದು ಅದರ ಮೇಲೆ ಸಿಡಿಮಿಡಿ ಗೊಂಡ. ನಾಯಿ ಅವನ ಮೇಲಂಗಿಯನ್ನು ಕಚ್ಚಿ ಎಳೆಯತೊಡಗಿತು, ಹಿಂಬಾಲಿಸಿ ಹೋದಾಗ ಕಳ್ಳ ನಗ ನಾಣ್ಯಗಳನ್ನು ಅಡಗಿಸಿಟ್ಟಿದ್ದ ಜಾಗ ತೋರಿಸಿತು. ವಿನಾಕಾರಣ ತನ್ನ ಪ್ರಾಮಾಣಿಕ ನಾಯಿಯನ್ನು ಅಂದು ಬಯ್ದು ಹೊಡೆದೆನೆ ಎಂದು ತನ್ನ ಬಗೆಯೇ ಅವನಿಗೆ ಬೇಸರವಾಯಿತು. ನಾಯಿ ಅವನ ಪಕ್ಕದಲ್ಲಿ ಬಂದು ನಿಂತುಕೊಂಡು ಅವನನ್ನೇ ಪ್ರೀತಿಯಿಂದ ನೋಡುತ್ತಾ ಬಾಲ ಅಡಿಸ ತೊಡಗಿತು. ನಾಯಿಯನ್ನು ಬರಸೆಳೆದು ಮುzಡಿ, ಅದನ್ನು ಸದಾ ಪ್ರೀತಿಯಿಂದ ನೋಡಿಕೊಂಡ.

ನಮ್ಮ ಪ್ರೀತಿಯ ಸಾಕು ಪ್ರಾಣಿಗಳು ಎಂದಿಗೂ ಕೂಡ ಸ್ವಾರ್ಥದಿಂದ ಯೋಚಿಸುವುದಿಲ್ಲ. ಸಾಕು ಪ್ರಾಣಿಗಳಿಗೆ ಸಾಕಷ್ಟು ಓಡಾಡುವ ಜಾಗ ಬೇಕಾಗುತ್ತದೆ. ಅವುಗಳಿಗೆ ಆಡಿ ನಲಿಯಲು ಸ್ಥಳಾವಕಾಶದ ಅವಶ್ಯಕತೆ ಇರುತ್ತದೆ. ಮರೆಯದೆ ಅವುಗಳನ್ನು ದಿನವೂ ವಾಯುವಿಹಾರಕ್ಕೆ
ಕರೆದುಕೊಂಡು ಹೋಗಿ. ನಮ್ಮ ಆಸೆಗಾಗಿ ಅವುಗಳನ್ನು ತಂದು ಮನೆಯೊಳಗೆ ಕೂಡಿ ಹಾಕುವುದು ನ್ಯಾಯ ಸಮ್ಮತವಲ್ಲ. ಅವುಗಳಿಗೆ ಪೂರಕ ವಾತಾವರಣವನ್ನು ಸೃಷ್ಟಿಸಿ ಅವು ನೆಮ್ಮದಿಯಿಂದ ಬದುಕಲು ನಾವು ಅನುವು ಮಾಡಿಕೊಡಬೇಕು.

ಅವುಗಳನ್ನು ಮುದ್ದು ಮಾಡುತ್ತಾ ಅವುಗಳ ಪ್ರೀತಿಯನ್ನು ಪಡೆದು ಸಂಭ್ರಮಿಸುವ ನಾವು, ನಮಗೆ ಬೇಕಾದಾಗ ಮಾತ್ರ ಅವುಗಳನ್ನು ಮುದ್ದಿಸಿ
ಬೇಡದಿದ್ದಾಗ ದೂರ ಬಿಡುವುದು ಸರಿಯಲ್ಲ. ಸಾಕು ಪ್ರಾಣಿಗಳು ಮಕ್ಕಳಂತೆಯೇ, ಅವುಗಳ ಜವಾಬ್ದಾರಿ ಒಮ್ಮೆ ತೆಗೆದುಕೊಂಡರೆ ಬದುಕಿರು ವವರೆಗೂ ನಿಭಾಯಿಸಬೇಕು.

ಇದನ್ನೂ ಓದಿ: #RoopaGururaj