Thursday, 24th October 2024

‌Roopa Gururaj Column: ಕುರುಕ್ಷೇತ್ರ ಯುದ್ದಕ್ಕಾಗಿ ಪ್ರಾಣತ್ಯಾಗ ಮಾಡಿದ ʼಇರಾವಣʼ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಯುದ್ಧ ಎಂದ ಕೂಡಲೇ ಸಾವು ನೋವು ತಪ್ಪಿದ್ದಲ್ಲ. ಇಷ್ಟಿದ್ದರೂ ಯುದ್ಧ ಆರಂಭವಾಗುವ ಮೊದಲೇ ಯುದ್ಧ ಭೂಮಿಗೆ ನರಬಲಿಯನ್ನು ಕೊಡಬೇಕು ಇದರಿಂದ ಜಯ ಸಾಧ್ಯವಾಗುತ್ತದೆ ಎನ್ನುವ ನಿಯಮವಿತ್ತು. ಕುರುಕ್ಷೇತ್ರ ಕದನವಾಗುವ ಮೊದಲೇ ಯುದ್ಧ ಭೂಮಿಗೆ ಒಂದು ನರಬಲಿಯನ್ನು ಕೊಡಬೇಕು. ಅಮಿಷ ತೋರಿಸಿ ಬೇರೆ ಯಾರನ್ನೋ ಕೊಡುವುದಲ್ಲ ಸಂಬಂಧದಲ್ಲಿ ಆಗಿರಬೇಕು. ಪಾಂಡವರು ಯಾರನ್ನು ಬಲಿಕೊಡುವುದು ಯಾರು ಒಪ್ಪುತ್ತಾರೆ ಎಂದು ಚಿಂತೆಯಲ್ಲಿದ್ದಾಗ ‘ನಾನು ನನ್ನ ಪ್ರಾಣವನ್ನು ತ್ಯಾಗ ಮಾಡುತ್ತೇನೆ’. ಎಂದು ಮುಂದೆ ಬಂದಂತಹ ವೀರ ‘ಇರಾವಣ’.

ದ್ರೌಪದಿ ಯುಧಿಷ್ಠಿರನ ಜೊತೆ ಇದ್ದಾಗ ಅವರ ಏಕಾಂತಕ್ಕೆ ಭಂಗ ತಂದಿದ್ದಕ್ಕಾಗಿ ಅರ್ಜುನ ಮೂರು ವರ್ಷ ಸನ್ಯಾಸವನ್ನು ಸ್ವೀಕರಿಸಿ ಹೊರಡಬೇಕಾಗುತ್ತದೆ. ಆಗ ಬಲರಾಮನ ತಂಗಿ ಸುಭದ್ರೆ, ಚಿತ್ರಾಂಗನೆ ಮತ್ತು ನಾಗ ಲೋಕದ ಯುವರಾಣಿ ಉಲೂಪಿಯರನ್ನು ಮದುವೆಯಾಗಬೇಕಾಗುತ್ತದೆ. ಅರ್ಜುನನ ಸ್ಪುರದ್ರೂಪ ನೋಡಿ ಅವನ
ಮೇಲೆ ಪ್ರೀತಿ ಅಂಕುರಿಸುತ್ತದೆ. ಅವಳು ಒಂದು ದಿನದ ಮಟ್ಟಿಗೆ ಅರ್ಜುನನ ಜೊತೆ ಸಂಬಂಧ ಬೆಳೆಸುತ್ತಾಳೆ. ಇವರಿಬ್ಬರಿಗೆ ಮುಂದೆ ಹುಟ್ಟಿದ ಮಗನೇ ‘ಇರಾವಣ’ ಇವನು ನಾಗಲೋಕದಲ್ಲಿ ಬೆಳೆಯುತ್ತಾನೆ.

ಕಲಾ ನೈಪುಣ್ಯನು, ಶಸ್ತ್ರ-ಶಾಸ್ತ್ರ- ಯುದ್ಧ ವಿದ್ಯೆಗಳಲ್ಲಿ ನಿಪುಣ. ಇವನ ಸೋದರ ಮಾವನೊಬ್ಬ ಅರ್ಜುನನ್ನು, ಪಲಾಯನ ವಾದಿ, ಹೇಡಿ ಎಂದು ಕೆಟ್ಟದಾಗಿ ಚಾಡಿ ಹೇಳಿರುತ್ತಾನೆ. ಒಮ್ಮೆ ಸ್ವತಃ ಇಂದ್ರ ದೇವನೇ ಬಂದು ಆ ಹುಡುಗನಿಗೆ ನಿನ್ನ ತಂದೆ ವೀರ, ಧೀರ, ಬಿಲ್ಲುಗಾರ, ಧನುರ್‌ಧಾರಿ, ಸ್ಪೂರದ್ರೂಪಿ, ಶಕ್ತಿವಂತ. ನಿನ್ನ ಮಾವನ ಮಾತನ್ನು ಕೇಳಬೇಡ ಎಂದು ಹೇಳುತ್ತಾನೆ ಹಾಗೂ ಇನ್ನೂ ಸ್ವಲ್ಪ ದಿನಗಳಲ್ಲಿ ಕುರುಕ್ಷೇತ್ರ ಯುದ್ಧ ಆರಂಭ ವಾಗುತ್ತದೆ ನೀನು ಯುದ್ಧದಲ್ಲಿ ಪಾಲ್ಗೊಂಡು ಪಾಂಡವರಿಗೆ ಜಯ ತಂದು ಕೊಡುವಲ್ಲಿ ಯಶಸ್ವಿಯಾಗು ಎಂದು ಹರಸುತ್ತಾನೆ.

ಮಹಾಯುದ್ಧವನ್ನು ಗೆಲ್ಲಬೇಕೆಂದಾಗ ‘ನರ ಬಲಿ’ ಕೊಡ ಬೇಕು ಇದಕ್ಕೆ ಯಾರು ಮುಂದೆ ಬರುತ್ತಾರೆ? ಎಂಬ ಚಿಂತೆ ಯಲ್ಲಿರುವಾಗಲೇ ‘ಇರಾವಣ’ ಯುದ್ಧ ಭೂಮಿಗೆ ನರಬಲಿಯಾಗಲು ಸಿದ್ಧನಿದ್ದೇನೆ ಎಂದು ಬಂದನು. ಹಾಗೆ
ಹೇಳಿ, ಆದರೆ ಒಂದು ಷರತ್ತಿನ ಮೇಲೆ ಎನ್ನುತ್ತಾನೆ. ಆ ಶರತ್ತು ತಾನು ಬಲಿಯಾಗುವ ಮೊದಲು ಮದುವೆಯಾಗಬೇಕು ಎಂಬ ಇಚ್ಛೆ. ಆದರೆ ನಾಳೆಯೇ ಸಾಯುವ ಇವನಿಗೆ ಯಾರು ಹೆಣ್ಣು ಕೊಡುತ್ತಾರೆ. ಆಗ ಮುಂದೆ ಬಂದವನೇ ಶ್ರೀಕೃಷ್ಣ. ಶ್ರೀಕೃಷ್ಣ ಮೋಹಿನಿ ರೂಪ ಧರಿಸಿ ಇರಾವಣನನ್ನು ವಿವಾಹ ಆಗುತ್ತಾನೆ. ಮದುವೆಯಾದ ಮರುದಿ
ನವೇ ನರ ಬಲಿ ಸಮಯದಲ್ಲಿ ಇರಾವಣನೇ ತನ್ನ ಖಡ್ಗದಿಂದ ಕುತ್ತಿಗೆ ಕಡಿದುಕೊಂಡು ಬಲಿಯಾಗುತ್ತಾನೆ. ಇದನ್ನು ಕಂಡು ಶ್ರೀಕೃಷ್ಣನ ಮನಸ್ಸು ಮರುಗಿತು. ಮೋಹಿನಿ ರೂಪ ದಲ್ಲಿದ್ದ ಕೃಷ್ಣನು ಪತಿ ಕಳೆದುಕೊಂಡ ಸತಿಯಂತೆ ಶೋಕಾಚರಣೆ ಆಚರಿಸಿ ಅತ್ತು ಗೋಳಾಡುತ್ತಾನೆ ಇದರಿಂದ ಇರಾವಣನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.

ಕೃಷ್ಣನು ಮಾಡಿದ ಶೋಕಾಚರಣೆ ಪದ್ಧತಿಯನ್ನು ಮಂಗಳಮುಖಿಯರು ಇಂದಿಗೂ ಮುಂದುವರೆಸಿಕೊಂಡು ಬಂದಿzರೆ. ಕೃಷ್ಣನ ಅನುಗ್ರಹದಂತೆ ಇರಾವಣನಿಗೆ ಮಹಾ ಪುಣ್ಯವೇ ಪ್ರಾಪ್ತಿಯಾಗುತ್ತದೆ. ತಮಿಳುನಾಡಿನಲ್ಲಿ
ಇರಾವಣ ಸತ್ತ ದಿನವನ್ನು ಪವಿತ್ರ ದಿನವೆಂದು ಆಚರಿಸುತ್ತಾರೆ. ತಮಿಳುನಾಡಿನ ‘ಕುವಗಂ’ನಲ್ಲಿ ಇರಾವಣನಿಗೆ ದೊಡ್ಡ ದೇವಸ್ಥಾನ ವಿದೆ. ಇದು ಮಂಗಳಮುಖಿಯರಿಗೆ ಪವಿತ್ರ ದೇವಸ್ಥಾನವಾಗಿದೆ.

ವರ್ಷಕ್ಕೊಮ್ಮೆ ವಾರ್ಷಿಕೋತ್ಸವ ಜಾತ್ರೆ ಉತ್ಸವ ನಡೆಯುತ್ತದೆ. ದೇಶವಿದೇಶಗಳಿಂದ ಮಂಗಳಮುಖಿಯರು ಬಂದು, ಸಂಭ್ರಮದಿಂದ ಉತ್ಸವ ಆಚರಿಸಿ ಮದುಮಗಳಂತೆ ಸಿಂಗರಿಸಿಕೊಂಡು ಅರ್ಚಕರ ನೇತೃತ್ವದಲ್ಲಿ ಅಂದು ರಾತ್ರಿ ಇರಾವಣನನ್ನು ಪತಿಯೆಂದು ಸ್ವೀಕರಿಸಿ ವಿವಾಹ ವಿಧಿಯನ್ನು ಆಚರಿಸುತ್ತಾರೆ. ಸ್ವಲ್ಪ ಹೊತ್ತಿಗೆ ಪತಿ ಇರಾವಣ ಮರಣ ಹೊಂದಿದನೆಂದು ಮಂಗಳಮುಖಿಯರೆಲ್ಲ ವಿಧವೆಯರಂತೆ ದುಃಖ ತಪ್ತರಾಗಿ ಅತ್ತು, ಅಣುಕು ಶವ ಯಾತ್ರೆ ಆಚರಿಸಿ, ‘ಇರಾವಣ’ನ ನೆನಪಿನೊಂದಿಗೆ ಜಾತ್ರೆ ಮುಗಿಸುತ್ತಾರೆ.

ನಮ್ಮ ಧರ್ಮದಲ್ಲಿ ಹೇಗೆ ಪ್ರತಿಯೊಬ್ಬರಿಗೂ ಕೂಡ ತಮ್ಮನ್ನು ಗುರುತಿಸಿಕೊಳ್ಳುವ ಅಂತೆಯೇ ಭಗವಂತನ ಕೃಪೆಗೆ ಪಾತ್ರರಾಗುವ ಅವಕಾಶವಿದೆ ಎನ್ನುವುದಕ್ಕೆ ಮೇಲಿನ ಕಥೆಯೇ ಸಾಕ್ಷಿ.

ಇದನ್ನೂ ಓದಿ: ‌Roopa Gururaj Column: ಹೆತ್ತವರ ಆಶೀರ್ವಾದ ಮಕ್ಕಳಿಗೆ ಶ್ರೀರಕ್ಷೆ