ಒಂದೊಳ್ಳೆ ಮಾತು
ರೂಪಾ ಗುರುರಾಜ್
ಶನಿದೇವನೆಂದರೆ ದೇವಾನುದೇವತೆಗಳಿಗೂ ಭಯ, ಆದರೆ ಅವನಿಗೆ ಆಂಜನೇಯ ಮತ್ತು ಗಣೇಶನನ್ನು ಮಾತ್ರ ಕಾಡಲಾಗಲಿಲ್ಲ. ರಾಜ ವಿಕ್ರಮಾದಿತ್ಯ, ನಳ ಮಹಾರಾಜ, ಸತ್ಯ ಹರಿಶ್ಚಂದ್ರ, ಪಾಂಡವರಲ್ಲದೆ ದೇವಾನುದೇವತೆ ಗಳನ್ನೂ ಬಿಡದೆ ಮಹಾ ಶಿವ ಮತ್ತು ವಿಷ್ಣುವಿನ ಸಹಿತ ಎಲ್ಲರನ್ನೂ ಕಾಡಿದ ಕಥೆಗಳನ್ನು ನೀವು ಕೇಳಿರುತ್ತೀರಿ. ಇಂಥ ಶನಿದೇವನಿಗೂ ಲಕ್ಷ್ಮಿಗೂ ಒಮ್ಮೆ ವಾದ ಪ್ರಾರಂಭವಾಗಿಯಿತು.
ಲಕ್ಷ್ಮೀ, ‘ಧನ ಸಂಪತ್ತನ್ನು ಕೊಡುವ ನಾನೇ ಹೆಚ್ಚು ಎಲ್ಲರೂ ನನ್ನನ್ನೇ ಪೂಜಿಸುತ್ತಾರೆ’ ಎಂದಳು. ಆಗ ಇದ್ದಕ್ಕಿದ್ದಂತೆ ಸಿಟ್ಟುಗೊಂಡ ಶನಿದೇವ, ‘ದುಷ್ಟ ಹಾಗೂ ನೀಚ ಮಾರ್ಗದಲ್ಲಿ ನಡೆವ ಎಲ್ಲರ ಕರ್ಮಫಲಗಳನ್ನೂ ಕಳೆದು ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ಮಾಡುವ ನಾನೇ ಹೆಚ್ಚು’ ಎಂದು ವಾದ ಮಾಡಿದ. ಅಲ್ಲಿಗೆ ಮಾತು ನಿಲ್ಲಿಸದ ಲಕ್ಷ್ಮಿದೇವಿ ಮತ್ತೆ ಪಟ್ಟು ಹಿಡಿದು ‘ ಏನೇ ಆಗಲಿ ನನ್ನ ಸಂಪತ್ತಿಗೆ ಎಲ್ಲರೂ ಆಸೆ ಪಡುತ್ತಾರೆ. ನನ್ನನ್ನು ಆರಾಧಿಸು ತ್ತಾರೆ, ಮನೆಯಲ್ಲಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ’ ಎಂದು ವಾದಿಸಿದಳು.
ಆಗ ಶನಿದೇವ ಖಂಡಿಸುವ ಧ್ವನಿಯಲ್ಲಿ ’ಅದು ಸಾಧ್ಯವಿಲ್ಲ. ಜನರು ಯಾವಾಗಲೂ ಸಂಪತ್ತನ್ನು ಮೋಸದಿಂದ, ಭ್ರಷ್ಟಾಚಾರದಿಂದ, ಅಥವಾ ಕಳ್ಳತನ, ಸುಲಿಗೆ, ಮೋಸ, ಕೊಲೆ ಇನ್ನು ಅನೇಕ ಲಂಪಟತನದಿಂದ ಮಾಡಿ ಪಡೆದುಕೊಳ್ಳುತ್ತಾರೆ. ನೀನು ಚಂಚಲೆ, ನಿಂತಲ್ಲಿ ನಿಲ್ಲುವುದಿಲ್ಲ ಮತ್ತು ಈ ಸಂಪತ್ತಿನಿಂದ ಜೂಜು, ಹೆಂಡ, ಸ್ತ್ರೀ ಲೋಲರಾಗಿ, ಸಮಾಜದಲ್ಲಿ ದುಷ್ಟ ಕಾರ್ಯಗಳು ಅವ್ಯಾಹತವಾಗಿ ನಡೆಯುವಂತೆ ಪ್ರೇರೇಪಿಸುತ್ತೀಯ. ನಿನ್ನ
ಪ್ರಭಾವದಲ್ಲಿ ಮನುಷ್ಯ ಪುಣ್ಯಕಾರ್ಯಗಳನ್ನೆಲ್ಲ ಮಾಡುವುದು ಬಿಟ್ಟು ಲೋಲೋಪ್ತಿಯಲ್ಲಿ ತನ್ನ ಜೀವನವನ್ನು ಕಳೆಯುತ್ತಾನೆ. ಅಪಾರ ಸಂಪತ್ತು ಹೊಂದಿರುವವರು, ಸಮಾಜಕ್ಕೆ ಕೆಡುಕನ್ನು ಬಯಸುವವರು ಒಳ್ಳೆಯವರಾ ಗಿರುವುದಿಲ್ಲ.
ಅಂತಹ ದುರ್ಮಾರ್ಗಿಗಳನ್ನು ಸರಿದಾರಿಗೆ ತರಲೆಂದೇ ನಾನು ನ್ಯಾಯಯುತವಾಗಿ ಕಾರ್ಯನಿರ್ವಹಿಸಿ ಅವರಿಗೆ ಬುದ್ಧಿ ಕಲಿಸುತ್ತೇನೆ. ಇದರಿಂದ ಸಂತೋಷ ನೆಮ್ಮದಿ ಸಿಗುತ್ತದೆ’ ಎಂದು ಮಾತಿನ ಸುರಿಮಳೆಯನ್ನೇಗರೆದ. ಹೀಗೆ ಬ್ಬರ
ನಡುವೆ ವಾಗ್ವಾದ ತಾರಕಕ್ಕೆ ತಲುಪಿರುವುದು ತ್ರಿಮೂರ್ತಿಗಳಿಗೂ ತಿಳಿದು ಅವರಿಗೂ ನ್ಯಾಯ ತೀರ್ಮಾನ ಮಾಡಲು ಆಗಲಿಲ್ಲ.
ಇದು ಹೀಗೇ ಮುಂದುವರೆದರೆ ವಿಪರೀತಕ್ಕೆ ಹೋಗುತ್ತದೆ ಎಂದು ತಿಳಿದ ತ್ರಿಮೂರ್ತಿಗಳು, ಈ ವಾಗ್ವಾದವನ್ನು ಸರಿ ಮಾಡುವಂತೆ ನಾರದರನ್ನು ಕಳಿಸಿದರು. ನಾರದರನ್ನು ಕಂಡಿದ್ದೇ ತಡ ಲಕ್ಷ್ಮಿದೇವಿ ಮತ್ತು ಶನಿದೇವ ಇಬ್ಬರೂ, ‘ನಾರದರೆ ನಮ್ಮಿಬ್ಬರಲ್ಲಿ ಯಾರು ಹೆಚ್ಚು ಎಂದು ನೀವೇ ಹೇಳಬೇಕು. ಇಲ್ಲದಿದ್ದರೆ ಪರಿಣಾಮವನ್ನು ನೀವು
ಅನುಭವಿಸಬೇಕಾಗುತ್ತದೆ’ ಎಂದು ಹೇಳಿದರು. ನಾರದರು, ‘ಯಾರು ಹೆಚ್ಚು ಅಥವಾ ಯಾರು ಕಡಿಮೆ ಎಂದರೂ ನನಗೆ ವಿಪತ್ತು ಕಟ್ಟಿಟ್ಟ ಬುತ್ತಿ. ಏನಾದರೂ ಉಪಾಯ ಮಾಡಲೇಬೇಕು’ ಎಂದು ಯೋಚಿಸಿ, ಲಕ್ಷ್ಮಿ ಮತ್ತು ಶನಿಗೆ ‘ನೀವಿಬ್ಬರೂ ಸ್ವಲ್ಪ ದೂರದವರೆಗೆ ಹೋಗಿ ನಡೆದು ಬನ್ನಿ’ ಎಂದರು.
ಅವರ ಮಾತಿನಂತೆ ಲಕ್ಷ್ಮಿದೇವಿ ಮತ್ತು ಶನಿದೇವ ನಡೆದು ಒಂದಷ್ಟು ದೂರ ಹೋಗಿ ಬಂದರು. ನಾರದರು ಸಮಾಧಾನದ ಮುಗುಳ್ನಗೆಯಲ್ಲಿ ‘ನಿಮ್ಮಿಬ್ಬರಲ್ಲಿ ಮಾತೆ ಮಹಾಲಕ್ಷ್ಮಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬರುವುದೇ ಬಲು ಚೆಂದ. ಹಾಗೆಯೇ ಶನಿ ತಿರುಗಿ ನೋಡದೆ ಹೋಗುವುದು ಮನಕೆ ಬಲು ಆನಂದ- ನೆಮ್ಮದಿ’ ಎಂದು ಹೇಳಿದರು. ಇದನ್ನು ಕೇಳಿ ಲಕ್ಷ್ಮಿ ದೇವಿಗೂ, ಶನಿದೇವನಿಗೂ ಇಬ್ಬರಿಗೂ ಸಂತೋಷವಾಗಿ ತಮ್ಮ ತಮ್ಮ ಸ್ವಸ್ಥಾನಕ್ಕೆ
ಮರಳಿದರು. ದೇವತೆಗಳೆ ನಿಟ್ಟಿಸಿರು ಬಿಟ್ಟರು. ಕೆಲವೊಮ್ಮೆ ಪ್ರಭಾವಿ ವ್ಯಕ್ತಿಗಳ ಮಧ್ಯೆ ಸಿಲುಕಿ ನಾವು ಕೂಡ ಅವರ ಕೋಪಕ್ಕೆ ಆಹಾರವಾಗುವ ಪರಿಸ್ಥಿತಿ ತಲುಪುತ್ತೇವೆ. ಅಂತಹ ಸಮಯದಲ್ಲಿ ಜಾಣ್ಮೆಯಿಂದ ಆ ಪರಿಸ್ಥಿತಿಯನ್ನು
ನಿಭಾಯಿಸಬೇಕು. ನಮ್ಮ ಮಾತು ನಮ್ಮನ್ನು ಕಷ್ಟಕ್ಕೆ ತಳ್ಳಲೂ ಬಹುದು. ಹಾಗೆಯೇ ಕಷ್ಟದಿಂದ ಪಾರು ಮಾಡುವ ಶಕ್ತಿಯೂ ಮಾತಿಗಿದೆ. ಮಾತು ಬಲ್ಲವನಿಗೆ ಶತ್ರುಗಳಿಲ್ಲ ನೆನಪಿರಲಿ.
ಇದನ್ನೂ ಓದಿ: Roopa Gururaj Column: ಸಮುದ್ರರಾಜನನ್ನು ತಡೆದು ನಿಲ್ಲಿಸಿದ ಆಂಜನೇಯ