ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಮ್ಮೆ ಆದಿ ಶಂಕರಾಚಾರ್ಯರು ಕಾಶಿಯಲ್ಲಿ ಮುಂಜಾನೆ ಸ್ನಾನಕ್ಕೆ ಗಂಗಾನದಿ ತೀರಕ್ಕೆ ಹೋಗಿದ್ದರು. ಅಲ್ಲಿ ಒಬ್ಬ ಹಿರಿಯರು ಸ್ನಾನ ಮಾಡು
ತ್ತಿದ್ದರು. ಶಂಕರರು ‘ಶಿವೋಹಂ ಶಿವೋಹಂ’ ಎಂಬ ಶಿವ ನಾಮಸ್ಮರಣೆ ಮಾಡುತ್ತಾ ಅವರಿಂದ ಸ್ವಲ್ಪ ದೂರದಲ್ಲಿ ಸ್ನಾನ ಮಾಡುತ್ತಿದ್ದರು. ಆ ಹಿರಿಯರು ‘ಶಿವೋಹಂ’ ಎಂಬುದನ್ನು ಕೇಳಿ, ಎರಡೂ ಕಿವಿ ಮುಚ್ಚಿಕೊಂಡು ಮೈಮೇಲೆ ಚೇಳು ಕುಟುಕಿದವರಂತೆ, ಒಂದೇ ಸಲಕ್ಕೆ ನದಿಯಿಂದ ಹಾರಿ ದಡಕ್ಕೆ ಬಂದು ಎದುಸಿರು ಬಿಡುತ್ತಾ ದಾಪುಗಾಲುತ್ತಾ ನಡೆದುಬಿಟ್ಟರು.
ಸ್ನಾನ ಮಾಡುತ್ತಿದ್ದ ಶಂಕರರಿಗೆ ಗಾಬರಿಯಾಗಿ, ‘ಯಾಕೆ ಏನಾಯಿತು ಸ್ವಾಮಿ?’ ಎಂದು ಹಿರಿಯರನ್ನು ಕೇಳಿದರು. ಆ ಹಿರಿಯರು ಶಂಕರರನ್ನು ‘ನೋಡಿ ನೀವು ನನ್ನನ್ನು ಮಾತನಾಡಿಸಬೇಡಿ, ನಿಮ್ಮ ಮೈ ಮೇಲಿರುವ ನೀರು ನನಗೆ ಸಿಡಿದೀತು’ ಎಂದರು ಕೋಪದಿಂದ. ಶಂಕರರಿಗೆ ವೃದ್ಧರ ಮನಸ್ಥಿತಿ ಅರ್ಥವಾಯಿತು.
ಶಿಷ್ಯರ ಜೊತೆ ಮುಂದೆ ನಡೆದರು. ಆ ವೃದ್ಧರು ಅವರ ಮುಖ ಮರೆಮಾಚಿಕೊಂಡು ಹೋಗುವ ಧಾವಂತ ದಲ್ಲಿ ಗಮನಿಸದೇ, ಎಡವಿ ಮುಂದಿರುವ ಗುಂಡಿಯಲ್ಲಿ ಬೀಳುವುದರಲ್ಲಿದ್ದರು. ಇದನ್ನು ನೋಡಿ ಶಂಕರರ ಒಬ್ಬ ಶಿಷ್ಯ ‘ಸ್ವಾಮಿ ಹಾಗೆ ಮರೆ ಮಾಡಿ ಕೊಂಡು ಮುಂದೆ ಹೋದರೆ ರಸ್ತೆ ಸರಿಯಾಗಿ ಕಾಣದೆ ಬಿದ್ದು ಬಿಡುತ್ತೀರಿ’ ಎಂದನು.
ಆ ವೃದ್ಧರು ಕೋಪದಿಂದ ‘ನೀನು ತೆಪ್ಪಗಿರು. ರಸ್ತೆ ನನಗೆ ಕಾಣದಿದ್ದರೂ ಸರಿ ಕಂಡರೂ ಸರಿ, ಅದು ನನಗೆ ಮುಖ್ಯವಲ್ಲ. ಆದರೆ ಕಾಶಿ ‘ವಿಶ್ವನಾಥನ’ ದೇವಸ್ಥಾನ ನನ್ನ ಕಣ್ಣಿಗೆ ಬೀಳಬಾರದು’ ಎಂದರಂತೆ. ಆಗ ಶಿಷ್ಯ ಹಾಗಾದರೆ ‘ನೀವು ಕಾಶಿಗೆ ಏಕೆ ಬಂದಿರಿ, ಇಲ್ಲಿ ಮುಖ್ಯವಾಗಿ ಬರುವುದೇ ಗಂಗಾ ಸ್ನಾನ ಮಾಡಿ ವಿಶ್ವನಾಥನ ದರ್ಶನ ಮಾಡಲು’ ಎಂದ. ಆಗ ಆ ವೃದ್ಧರು ‘ನಾನು ಕಾಶಿ ವಿಶ್ವನಾಥ ನನ್ನು ದರ್ಶನ ಮಾಡಲು ಬಂದಿದ್ದಲ್ಲ ‘ಬಿಂದು ಮಾಧವ’ ನನ್ನು ನೋಡಲು ಬಂದಿದ್ದೇನೆ’ ಎಂದರು ಧೋರಣೆಯಿಂದ.
ಶಂಕರರು ಆ ವೃದ್ಧರಿಗೆ,‘ಸ್ವಾಮಿ ಹರ ಬೇರೆ ಅಲ್ಲ- ಹರಿ ಬೇರೆ ಅಲ್ಲ , ಮನುಷ್ಯರಾದ ನಾವು ಏಕೆ ದೇವರುಗಳನ್ನು ಬೇರೆ ಬೇರೆ ಮಾಡಬೇಕು. ದೇವತೆ ಗಳಿಗೆ ಬರುವ ತೊಂದರೆಗಳನ್ನು ಪರಿಹರಿಸುವುದು, ಅಹಂಕಾರದಿಂದ ಮೆರೆದವರನ್ನು ಮಟ್ಟ ಹಾಕುವುದು, ಶಿವ ಮತ್ತು ವಿಷ್ಣು ಇಬ್ಬರೂ ಮಾಡುತ್ತಿದ್ದಾರೆ. ಅವರು ಜಗತ್ತಿನ ಕರ್ತೃಗಳು. ಅವರಲ್ಲಿ ಇಲ್ಲದ ಭೇದ ಭಾವ ನಾವ್ಯಾಕೆ ಮಾಡಬೇಕು. ಈ ಭೂ ಮಂಡಲಕ್ಕೆ ಬರುವ ಸಂಕಷ್ಟಗಳನ್ನು ಸರಿಪಡಿಸುತ್ತಾ, ಬ್ರಹ್ಮಾಂಡವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುವ ಶಕ್ತಿಗಳು ಇಬ್ಬರು. ನಾವೆಲ್ಲಾ ಒಬ್ಬನೇ ಭಗವಂತನನ್ನು ಬೇರೆ ಬೇರೆ ರೂಪ ಮತ್ತು ಹೆಸರಿನಲ್ಲಿ ನೋಡುತ್ತೇವೆ.
ಶಿವ -ವಿಷ್ಣು- ಗಣಪತಿ -ಸುಬ್ರಹ್ಮಣ್ಯ -ಸೂರ್ಯ ದೇವ ಎಲ್ಲರೂ ಒಂದೇ. ನಮ್ಮ ತೃಪ್ತಿಗೆ, ಮನೆತನದ ಸಂಸ್ಕಾರಗಳಿಗೆ ತಕ್ಕ ಹಾಗೆ ಆಯಾ ವಿಗ್ರಹಗಳನ್ನು ಇಟ್ಟುಕೊಂಡು ಆರಾಧಿಸುತ್ತೇವೆ. ದೇವರ ಮೂರ್ತಿಯಲ್ಲಿ ವ್ಯತ್ಯಾಸ ಮಾಡಬಾರದು. ನಮ್ಮ ದೇವರು ದೊಡ್ಡವನು- ನಿಮ್ಮ
ದೇವರು ದೊಡ್ಡವನು ಎಂದು ನಾವೇ ಮಾಡಿಕೊಂಡರೆ ಇದು ರಾಷ್ಟ್ರದಲ್ಲಿ ದ್ವೇಷಕ್ಕೆ ಕಾರಣವಾಗುತ್ತದೆ ನಾವೆಲ್ಲಾ ಒಂದೇ’ ಎಂದರು. ಇದೇ ರೀತಿ ಸತತ ಮೂರು ದಿನ ವೃದ್ಧರ ಜೊತೆ ಚರ್ಚೆ ನಡೆಯಿತು.
ನಂತರ ವೃದ್ಧರು ಶಂಕರರ ಮಾತಿಗೆ ತಲೆದೂಗಿ, ಕಾಶಿ ವಿಶ್ವನಾಥನ ದರ್ಶನ ಮಾಡಿದರಂತೆ. ಅನಾದಿಕಾಲದಿಂದಲೂ ಭಗವಂತನ ಬಗ್ಗೆ ಇಂತಹ
ವಿಶಾಲ ಮನೋಭಾವ, ಪರಿಪಕ್ವ ಮನಸ್ಥಿತಿ ಬೆಳೆಸಿಕೊಂಡು ಬಂದ ಸನಾತನ ಧರ್ಮ ಮತ್ತು ದೇಶ ನಮ್ಮದು. ಇಂದು ಜಾತಿ ಧರ್ಮದ ಹೆಸರಿ ನಲ್ಲಿ ರಾಜಕೀಯ ಪಕ್ಷಗಳು ನಮ್ಮನ್ನು ಒಡೆದು ಆಳುತ್ತಿವೆ. ಇಂಥ ಮುತ್ಸದ್ದಿಗಳ ಪ್ರಲೋಭನೆಗೆ ಒಳಗಾಗದಂತೆ ನಾವು ನಮ್ಮ ಬೇರುಗಳನ್ನು, ಅರಿವನ್ನು ಗಟ್ಟಿಯಾಗಿಸಿ ಕೊಂಡಷ್ಟೂ ಹೆಚ್ಚು ಅರ್ಥಪೂರ್ಣವಾಗಿ ಬದುಕಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: #RoopaGururaj