Thursday, 26th December 2024

‌Roopa Gururaj Column: ಭಗವಂತನನ್ನು ತಲುಪಲು ಹಾದು ಹೋಗಬೇಕಾದ ದಾರಿ

ಒಂದೊಳ್ಳೆ ಮಾತು

ರೂಪಾ ಗುರುರಾಜ್

1861ರಲ್ಲಿ ಒಂದು ದಿನ ಶ್ರೀರಾಮಕೃಷ್ಣರು ಹೂಗಳನ್ನು ಸಂಗ್ರಹಿಸುತ್ತಿದ್ದರು. ಆಗ ದೇವಸ್ಥಾನದ ಸಣ್ಣ ಸ್ನಾನ ಘಟ್ಟದ ಕಡೆ ಒಂದು ದೋಣಿಯು ಬರುತ್ತಿತ್ತು. ಒಬ್ಬ ಮಧ್ಯವಯಸ್ಸಿನ ಸುಂದರಿಯಾದ ಭೈರವಿ ಸಂನ್ಯಾಸಿನಿಯು ಆ ದೋಣಿ ಯಿಂದ ಇಳಿದಳು. ಕೆದರಿದ ಉದ್ದನೆಯ ಕೇಶರಾಶಿಯನ್ನು ಆಕೆ ಹೊಂದಿದ್ದಳು. ಆಕೆಗೆ 40 ವರ್ಷ ವಯಸ್ಸಾಗಿ ದ್ದರೂ ಅಷ್ಟು ವಯಸ್ಸಾದಂತೆ ಕಾಣುತ್ತಿರಲಿಲ್ಲ.

ಶ್ರೀರಾಮಕೃಷ್ಣರು ಹೃದಯನನ್ನು ಕರೆದು ಅವಳನ್ನು ದೇವಸ್ಥಾನದ ಮುಖ್ಯದ್ವಾರದಿಂದ ತಮ್ಮ ಹತ್ತಿರ ಕರೆ ತರು ವಂತೆ ಹೇಳಿದರು. ಶ್ರೀರಾಮಕೃಷ್ಣರನ್ನು ಕಂಡ ತಕ್ಷಣ ಆಕೆ ಆನಂದದ ಕಣ್ಣೀರನ್ನು ಸುರಿಸಿದಳು ಮತ್ತು ಮೃದು ವಾದ ಮಾತಿನಲ್ಲಿ ಹೇಳಿದಳು: ‘ನನ್ನ ಮಗುವೇ! ನೀನು ಇಲ್ಲಿರುವೆಯಾ? ನಾನು ನಿನಗಾಗಿ ಬಹಳ ದಿವಸ ಗಳಿಂದ ಹುಡುಕುತ್ತಿದ್ದೇನೆ. ಈಗ ನೀನು ಸಿಕ್ಕಿರುವೆ!’

‘ನನ್ನ ಬಗ್ಗೆ ನೀವು ಹೇಗೆ ತಿಳಿದಿರುವಿರಿ, ತಾಯಿ?’ ಎಂದು ಶ್ರೀರಾಮಕೃಷ್ಣರು ಕೇಳಿದರು. ‘ಜಗನ್ಮಾತೆಯ ಕೃಪೆಯಿಂದ ನಾನು ಮೂರು ಜನರನ್ನು ಭೇಟಿಯಾಗ ಬೇಕಿತ್ತು. ಚಂದ್ರ ಮತ್ತು ಗಿರಿಜ – ಆ ಇಬ್ಬರನ್ನು ಆಗಲೇ ಭೇಟಿಯಾಗಿರುವೆ. ಈಗ ನೀವು ಭೇಟಿಯಾದಿರಿ’ ಎಂದು ತಾನು ಕಳೆದುಕೊಂಡಿದ್ದ ಸಂಪತ್ತು ಮತ್ತೆ ದೊರಕಿದಂತೆ – ಭಾವುಕತೆಯಿಂದ ಆಕೆ ಮಾತನಾಡಿದಳು. ಶ್ರೀರಾಮಕೃಷ್ಣರೂ ಕೂಡ ಸಂತೋಷಗೊಂಡರು. ಭೈರವಿ ಬ್ರಾಹ್ಮಣಿ ಬಂಗಾಳದ ಜೆಸ್ಸರ್ ಜಿಲ್ಲೆಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದಳು. ವೈಷ್ಣವ ಮತ್ತು ತಾಂತ್ರಿಕ ಶಾಸ್ತ್ರಗಳನ್ನು ಚೆನ್ನಾಗಿ ತಿಳಿದಿದ್ದಳು. ಆಕೆ ವಿಶೇಷ ವೈಷ್ಣವ ಭಕ್ತಳಾಗಿದ್ದಳು. ತೀವ್ರ ಸಾಧನೆಗಳಿಂದ ಅವಳಿಗೆ ಅದ್ಭುತವಾದ ದರ್ಶನಗಳಾಗಿದ್ದವು.

ಸರಿಯಾದ ಶಿಷ್ಯನನ್ನು ಹುಡುಕಿ ಅವನಿಗೆ ತನ್ನೆಲ್ಲ ತಪಃಶಕ್ತಿಯನ್ನು ಧಾರೆಯೆರೆದು ಅವನ ಆಧ್ಯಾತ್ಮಿಕ ಪ್ರಗತಿಗೆ ಸಹಾಯ ಮಾಡುವ ಇಚ್ಛೆ ಅವಳಿಗೆ ಇತ್ತು. ಶ್ರೀರಾಮಕೃಷ್ಣರು ಮಗುವಿನಂತೆ ಆಕೆಯ ಬಳಿ ಕುಳಿತು ತಮ್ಮ
ಹೃದಯವನ್ನು ಆಕೆಯ ಬಳಿ ಬಿಚ್ಚಿಟ್ಟರು. ತಮ್ಮ ಸಾಧನೆಯ ಎಲ್ಲ ವಿವರಗಳನ್ನು ತಿಳಿಸಿದರು. ಅವರು ಮುಂದು ವರಿದು ಲೋಕದ ಜನರು ತಮ್ಮನ್ನು ‘ಹುಚ್ಚ’ರೆಂದು ಕರೆಯುತ್ತಾರೆ. ಏಕೆಂದರೆ ತಮ್ಮ ನಡೆನುಡಿಗಳು ಸಾಮಾನ್ಯ ಜನರಿಗಿಂತ ಭಿನ್ನವಾಗಿವೆಯೆಂದೂ ತಿಳಿಸಿದರು.

ಭೈರವಿಯು ಅನುಕಂಪದಿಂದ ಅವರನ್ನು ಮತ್ತೆ ಮತ್ತೆ ಸಂತೈಸಿದಳು. ‘ಯಾರು ನಿನ್ನನ್ನು “ಹುಚ್ಚ”ನೆಂದು ಕರೆಯು ತ್ತಾರೆ? ಮಗುವೇ! ನಿನ್ನ ಸ್ಥಿತಿಯನ್ನು ಶಾಸ್ತ್ರಗಳಲ್ಲಿ “ಮಹಾಭಾವ” ಎಂದು ವರ್ಣಿಸಲಾಗಿದೆ. ಶ್ರೀರಾಧೆ ಮತ್ತು ಶ್ರೀಗೌರಾಂಗ (ಚೈತನ್ಯ ಮಹಾಪ್ರಭು) ಈ ಸ್ಥಿತಿಯನ್ನು ಅನುಭವಿಸಿದ್ದರು. ಇದನ್ನು ಭಕ್ತಿಶಾಸ್ತ್ರಗಳಲ್ಲಿಯೂ ವರ್ಣಿಸ ಲಾಗಿದೆ.

ಶಾಸ್ತ್ರಗ್ರಂಥಗಳಲ್ಲಿರುವುದನ್ನು ನಾನು ನಿನಗೆ ತೋರಿಸುತ್ತೇನೆ. ಯಾರು ದೇವರಿಗಾಗಿ ಹಂಬಲಿಸುತ್ತಾರೋ ಅವರು ಈ ಸ್ಥಿತಿಯ (ಭಾವದ) ಮೂಲಕ ಹಾದುಹೋಗಲೇಬೇಕು!’ ಈ ಮಾತುಗಳು ಶ್ರೀರಾಮಕೃಷ್ಣರಿಗೆ ಧೈರ್ಯವನ್ನು ತಂದು ಕೊಟ್ಟವು. ಭಗವಂತನಲ್ಲಿ ಅನುಸಂಧಾನ ಮಾಡಿರುವ ಅನೇಕ ಜ್ಞಾನಿಗಳು, ಗುರುಗಳು ಈ ಸ್ಥಿತಿಯನ್ನು ತಲುಪಿzರೆ. ರಾಧೆ ಕೂಡ ಇದೇ ರೀತಿಯ ಸಮರ್ಪಣಾ ಭಾವ ಭಕ್ತಿಯನ್ನ ಕೃಷ್ಣನೆಡೆಗೆ ಹೊಂದಿದ್ದಳು. ಹೀಗಾಗಿ ರಾಧೆಯನ್ನು ಅವಳ ಪ್ರೀತಿಯನ್ನ ಇಂದಿಗೂ ಕೂಡ ಜಗತ್ತು ಪರಮೋಚ್ಚ ಪ್ರೀತಿ ಎಂದು ನೆನಪಿಸಿಕೊಳ್ಳುತ್ತದೆ.

ಯಾವುದೇ ಸಂಬಂಧದಲ್ಲಿ ವಿಶೇಷವಾಗಿ ಗಂಡ ಹೆಂಡತಿಯ ಸಂಬಂಧದಲ್ಲಿ, ತಂದೆ ತಾಯಿ ಮಕ್ಕಳ ಸಂಬಂಧದಲ್ಲಿ, ಈ ರೀತಿಯ ಭಾವನಾತ್ಮಕ ಸ್ಥಿತಿಗೆ ತಲುಪುತ್ತಾರೆ. ಅಲ್ಲಿ ಮತ್ತೊಬ್ಬರ ಏಳಿಗೆ ಎಷ್ಟೇ ಅವರಿಗೆ ಮುಖ್ಯವಾಗಿರುತ್ತದೆ. ಬರೀ ಪ್ರೀತಿಯನ್ನು ಸಮರ್ಪಿಸಿ ಅವರನ್ನು ಸಂತೋಷವಾಗಿ ನೋಡುವುದಷ್ಟೇ ಅವರ ಜೀವನದ ಉದ್ದೇಶವಾಗಿರುತ್ತದೆ. ಇಂತಹ ನಿಷ್ಕಲ್ಮಶ ಪ್ರೀತಿ ನಮ್ಮ ಪಾಲಿಗೆ ದೊರೆಯಬೇಕು ಎಂತಾದರೆ ನಾವು ಕೂಡ ಅಂತಹ ಪ್ರೀತಿ ಅಕ್ಕರೆಯನ್ನು ತೋರಿಸಲು ಶಕ್ತರಾಗಿರಬೇಕು. ಎಂದಿಗೂ ಕೂಡ ನಾವು ಏನನ್ನು ಕೊಡುತ್ತೇವೆಯೋ, ಅದೇ ನಮಗೆ ಮರಳಿ ಸಿಗುತ್ತದೆ.
ನಾವು ಒಂದು ಸಮರ್ಪಣಾ ಭಾವದಿಂದ ಕುಟುಂಬ ಮತ್ತು ಮನೆಯವರನ್ನು ಪ್ರೀತಿಸಿದಾಗ ಅವರನ್ನು ನೋಡಿ ಕೊಂಡಾಗ, ಅದೇ ರೀತಿಯ ಭಾವನಾತ್ಮಕ ಬೆಸುಗೆ ಮನೆಯವರಿಗೂ ಕೂಡ ನಮ್ಮೊಡನೆ ಉಂಟಾಗುತ್ತದೆ.

ಇದನ್ನೂ ಓದಿ: #RoopaGururaj