Saturday, 28th December 2024

‌Roopa Gururaj Column: ಅಜ್ಜನ ಮುಖದಲ್ಲಿ ಮೂಡಿದ ಮುಗುಳುನಗೆ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಬಸ್ಸು ಕಾರವಾರದಿಂದ ಹುಬ್ಬಳ್ಳಿಗೆ ಬರುತ್ತಿತ್ತು. ಯಥಾ ರೀತಿ ಕಂಡಕ್ಟರ್ ಎಂಟ್ರಿ ಹಾಕಿಸಿಕೊಂಡು ರೈಟ್ ಹೇಳಲಾಗಿ ಬಸ್ಸು ಮುಂದೆ ಸಾಗಿತು. ಟಿಕೆಟ್ ಕೊಡುವಾಗ ತನ್ನದೇ ಸೀಟಿನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ತುಂಬು ವಯಸ್ಸಿನ ಅಜ್ಜನೊಬ್ಬ ತನ್ನ ಹಿರಿಯ ನಾಗರಿಕರ ಗುರುತಿನ ಚೀಟಿ ತೋರಿಸಿ ಟಿಕೆಟು ಕೇಳಿದ. ಅಜ್ಜನಿಗೆ ಟಿಕೆಟ್ ಕೊಟ್ಟು ಇಪ್ಪತ್ತೊಂದು ರುಪಾಯಿ ಕೊಡಲು ಹೇಳಿದ. ಇಪ್ಪತ್ತು ರುಪಾಯಿ ಕಂಡಕ್ಟರ್ ಕೈಗಿತ್ತ ಅಜ್ಜ ಇನ್ನೊಂದು ರುಪಾಯಿ ಕೊಡುವುದಾಗಿ ಸನ್ನೆ ಮಾಡಿದ.

ಕೆಲಸ ಮುಗಿದು ಸೀಟಿನಲ್ಲಿ ಕುಳಿತಾಗ ಕಂಡಕ್ಟರ್ ಗಮನಿಸಿದ, ಅಜ್ಜ ತುಂಬ ವಿಚಲಿತನಾದಂತಿದ್ದ ಗಡಿಬಿಡಿಯಾಗಿ ಏನನ್ನೋ ಹುಡುಕುತ್ತಿದ್ದ. ತನ್ನ ಜೇಬು, ಎಲೆ ಸಂಚಿ, ಜೊತೆಗೆ ತಂದ ಕೈಚೀಲ ಹೀಗೆ ಎಲ್ಲ ಕಡೆ ತಡಕಾಡುತ್ತ ಅಮೂಲ್ಯ ವಸ್ತುವೊಂದನ್ನು ಕಳೆದುಕೊಂಡವನಂತೆ ಚಡಪಡಿಸುತ್ತಿದ್ದ. ಅವನು ತಡೆಯಲಾಗದೆ, ‘ಅಜ್ಜಾರ ರೊಕ್ಕಾ ರುಪಾಯಿ, ಏನರ ವಸ್ತು ಕಳಕೊಂಡಿರೇನು? ಇಷ್ಟ್ಯಾಕ ಗಾಬರಿಯಾಗೀರಿ?’ ಅಂತ ಕೇಳಿದ. ‘ಇಲ್ರಿ ನಿಮಗ ಒಂದ್ರು ಪಾಯಿ ಕೊಡೂದಿತ್ತಲ್ಲ, ಅದನ್ನ ಹುಡಕಾಕತ್ತೀನಿ ಎಲ್ಲೀ ಸಿಗನವಲ್ತು’ ಅಂತಂದು ಹುಡುಕುವಿಕೆಯಲ್ಲಿ ಮುಳುಗಿದ. ಕಂಡಕ್ಟರ್‌ಗೆ ನಗಬೇಕೋ ಅಳಬೇಕೋ ತಿಳಿಯದಂತಾಗಿ ‘ಅಲ್ಲ ಅಜ್ಜಾರ, ಬರೀ ಒಂದ್ರುಪಾಯಿನ್ನ ಈ ನಮೂನಿ ಗಾಬರಿ ಆಗಿ ಹುಡುಕಾಕತ್ತಿರೆಲಾ. ಸಿಗದಿದ್ರ ಇರಲಿ ಬಿಡ್ರಿ ಯಾಕಷ್ಟು ಒದ್ದಾಡ್ತಿರಿ’ ಅಂದ.

ಅದಕ್ಕವನು ‘ಸಾಹೇಬರ, ನಿಮ್ಮ ಸರಕಾರದವರು ಆಗಲೇ ನನಗ ರುಪಾಯಿದಾಗ ನಾಕಾಣೆ ಭಾಗ ಸವಲತ್ತು ಮಾಡಿ
ಕೊಟ್ಟಾರ, ಅಂಥಾದರಾಗ ನಿಮಗ ಕೊಡೂ ರೊಕ್ಕದಾಗನೂ ನಾನು ಉಳಿಸಿಕೊಂಡರ ಅದು ಸುಲಿಗಿ ಆದಂಗ ಆಗ್ತದ ರೀ’ ಅಂತಂದ. ಕಂಡಕ್ಟರ್‌ಗೆ ಈಗ ನಿಜಕ್ಕೂ ನಗೆ ಬಂತು. ‘ಅಲ್ಲ ಅಜ್ಜ, ಸುಲಿಗಿ ಆಗಾಕ ನೀವೇನು ನನಗ ಸಾವಿರಾರು ರುಪಾಯಿ ಟೊಪಗಿ ಹಾಕಾಕತ್ತಿರೇನು. ಒಂದೇ ಒಂದು ರುಪಾಯಿ. ಅದೂ ನಿಮಗ ಸಿಗಲಾರದ್ದಕ್ಕ ಉಳಿಸಿಕೊಂಡೀರಿ’. ನಕ್ಕು ನುಡಿದ.

‘ವಿಷಯ ಒಂದು ರುಪಾಯಿ, ಸಾವಿರ ರುಪಾಯಿದಲ್ಲರಿ. ನ್ಯಾಯದ ವಿಷಯ ಐತಿ ಇದು. ಈ ರೊಕ್ಕಾ ನಂದೂ ಅಲ್ಲ
ನಿಮ್ಮದೂ ಅಲ್ಲ, ನಿಮ್ಮ ಡಿಪಾರ್ಮೆಂಟಿಂದು. ನೀವು ಹೋಗಿ ಕಟ್ಟಬೇಕಂದ್ರ ಕೈಯಿಂದ ಕಟ್ಟಬೇಕು, ಇದು ಅನ್ಯಾಯ ಅಲ್ಲನ್ರಿ?’ ಅವನಿಗೇ ಮರು ಪ್ರಶ್ನೆ ಎಸೆದ. ಆತು ‘ನಿಮಗ ಕೊಡಬೇಕು ಅಂತನಿಸಿದರ ಆ ಒಂದು ರುಪಾಯಿ ಹೋಗ್ಲಿ, ಯಾವುವು ಇದ್ದವು ಕೊಡ್ರಿ, ನಾನ ಒಂದ್ರುಪಾಯಿ ಮುರಕೊಂಡು ಚಿಲ್ಲರ ಕೊಡ್ತೀನಿ’ ಅಂದ.

‘ಇಲ್ಲರಿ ಸಾಹೇಬ್ರ,, ಬ್ಯಾರೇ ರೊಕ್ಕಾ ಇಲ್ಲ ನನ್ನ ಹಂತೇಕ. ಒಂದೀಸು ಗುಳಿಗಿ ತಗೊಂಡು ಉಳದ ಚಿಲ್ಲರದಾಗ ಮೊಮ್ಮಕ್ಕಳಿಗೆ ಚಾಕಲೇಟ್ ತಗೊಂಡು ಬರೊಬ್ಬರಿ ಇಪ್ಪತ್ತೊಂದು ರುಪಾಯಿ ಇಟಗೊಂಡು ಬಸ್ ಹತ್ತಿದ್ಯಾ’ ಅಂತ ಅನ್ನುವುದರೊಳಗೆ ಅವನ ಕೈ ಕಂಪಿಸತೊಡಗಿದ್ದವು, ಕಂಡಕ್ಟರಿಗೆ ಈಗ ನಿಜಕ್ಕೂ ದಿಗಿಲಾಯಿತು. ‘ಹೋಗ್ಲಿ ಬಿಡ್ರಿ ಅಜ್ಜಾರ, ಮತ್ತೊಮ್ಮೆ ಬಂದಾಗ ಈ ಒಂದ್ರುಪಾಯಿನೂ ಸೇರಿಸಿ ಕೊಟ್ಟು ನಿರಾಳ ಆಗೂವಂತ್ರಿ’ ಅಂತ ಸಮಾಧಾ ನಿಸಲು ಯತ್ನಿಸಿದ.

‘ಇಲ್ರಿ, ಇದ ನನ್ನ ಕೊನೆಯ ಪ್ರಯಾಣ, ಮತ್ತೊಮ್ಮೆ ನಾ ಸಿಗೂದಿಲ್ಲ!’ ಅಂತ ಅಜ್ಜ ಉಸುರಿದನಷ್ಟೆ . ಕಣ್ಣಂಚಲಿ ಚುಳ್ಳನೆ ನೀರು ಜಿನುಗಿತು, ಇವನಿಗೂ ಗಂಟಲು ಬಿಗಿದಂತಾಯಿತು. ಕ್ಷಣಗಳ ನಂತರ ಸಾವರಿಸಿಕೊಂಡು ‘ಛೇ! ಹಂಗ್ಯಾಕ ಅಂತೀರಿ ಬಿಡ್ರಿ ಅಜ್ಜ. ಇನ್ನೂ ಇಪ್ಪತ್ತು ವರ್ಷ ನನ್ನ ಬಸ್ಸಿನ್ಯಾಗನ ಓಡಾಡ್ತೀರಿ ನೋಡ್ರೆಲಾ’ ಅಂತ ಅವನ್ನನ್ನೇ ರಮಿಸಿಕೊಳ್ಳುತ್ತಿದ್ದೇನೇನೋ ಎನಿಸುವಂತೆ. ಮರು ಮಾತಾಡದ ಅಜ್ಜ ಕಡು ವಿಷಾದದ ನಗೆ ಯೊಂದನ್ನು ಚೆಲ್ಲಿದ. ಅವನ ತಡಕಾಟ ನಡೆದೇ ಇತ್ತು.

ಕೆಲ ಸಮಯ ಕಳೆಯಿತು, ಅಜ್ಜನ ಮುಖದ ಗೆರೆಗಳು ರೊಯ್ಯನೇ ನಕಾಶೆ ಬದಲಿಸಿದವು. ಕೈ ಹೊರಗೆಳೆದು ಕೊಂಡ ವನೇ ‘ತೊಗೋರಿ ಸಾಹೇಬ್ರ’ ಅಂತಂದು ಸಿಕ್ಕ ಆ ಒಂದು ರುಪಾಯಿಯನ್ನು ಅವನ ಕೈಗಿತ್ತವನೇ ಋಣಮುಕ್ತ ನಾದವನಂತೆ ಸಂಭ್ರಮಿಸುತ್ತ ಕೈಮುಗಿದ. ಹಿಂದೆಯೇ ದೇವರ ಮುಗುಳುನಗೆ ಆ ಕಂಡಕ್ಟರ್‌ಗಷ್ಟೇ ಎಂಬಂತೆ ತಾಗಿ ಎದೆ ನೇವರಿಸಿತು. ಇಂತಹ ಮಹಾನುಭಾವರಿಂದಲೇ ಇಂದಿಗೂ ಭೂಮಿಯ ಮೇಲೆ ಮಳೆ ಬೆಳೆ ಆಗುತ್ತಿರುವುದು.

ಇದನ್ನೂ ಓದಿ: #RoopaGururaj