Friday, 10th January 2025

‌Roopa Gururaj Column: ವಿಷ್ಣು ಸಹಸ್ರನಾಮದ ಮಹತ್ವ

ಒಂದೊಳ್ಳೆ ಮಾತು

ರೂಪಾ ಗುರುರಾಜ್

**”ಆದಿ ಶಂಕರಾಚಾರ್ಯರು ಪ್ರಪ್ರಥಮವಾಗಿ ಶ್ರೀಲಲಿತಾಸಹಸ್ರನಾಮಕ್ಕೆ ಭಾಷ್ಯ ಬರೆಯುವ ಸಂಕಲ್ಪ ಮಾಡಿ ತಮ್ಮ ಶಿಷ್ಯನಿಗೆ ಶ್ರೀಲಲಿತಾಸಹಸ್ರನಾಮ ಪುಸ್ತಕ ತರಲು ಹೇಳಿದರು. ಶಿಷ್ಯ ಬಹಳ ಶೃದ್ಧೆಯಿಂದ ಪುಸ್ತಕ ತಂದು ಗುರುಗಳಿಗೆ ಕೊಟ್ಟರೆ, ಅದು ಶ್ರೀವಿಷ್ಣುಸಹಸ್ರನಾಮವಾಗಿತ್ತು. ಅವರು ಪುನಃ ಶಿಷ್ಯನನ್ನು ಕರೆದು, ‘ನಾನು ಹೇಳಿದ್ದು ಶ್ರೀಲಲಿತಾಸಹಸ್ರನಾಮ, ನೀನು ತಂದದ್ದು ಶ್ರೀವಿಷ್ಣುಸಹಸ್ರನಾಮ ತಂದಿರುವೆ. ಯಾಕೆ ಹೀಗೆ ಮಾಡಿದೆ’ ಅನ್ನುತ್ತಾ ವಿಷ್ಣುಸಹಸ್ರನಾಮ ಪುಸ್ತಕ ಅವನಿಗೆ ಹಿಂತಿರುಗಿಸಿದರು.

ಶಿಷ್ಯ ಪುನಃ ಹೋಗಿ ಸರಿಯಾಗಿ ಪರೀಕ್ಷೆ ಮಾಡಿ ಶ್ರೀಲಲಿತಾಸಹಸ್ರನಾಮ ಅಂತ ಖಾತ್ರಿಯಾದ ಮೇಲೆ ಪುಸ್ತಕ ತಂದು ಆಚಾರ್ಯರ ಕೈಗೆ ಕೊಟ್ಟ. ಆದರೆ ಆಚಾರ್ಯರು ಪುಸ್ತಕ ತೆರೆದು ನೋಡಿದರೆ ಪುನಃ ಶ್ರೀವಿಷ್ಣುಸಹಸ್ರನಾಮವಾಗಿತ್ತು.
ಸ್ವಲ್ಪ ಬೇಸರದಿಂದ ಆಚಾರ್ಯರು ತಾವೇ ಸ್ವತಃ ಪುಸ್ತಕ ಬಂಡಾರಕ್ಕೆ ಹೋಗಿ ಶ್ರೀಲಲಿತಾಸಹಸ್ರನಾಮ ಪುಸ್ತಕ ವನ್ನು ಕೈಯಲ್ಲಿ ಎತ್ತಿಕೊಳ್ಳುತ್ತಿರುವಾಗ, ಪುಸ್ತಕ ಭಂಡಾರದಲ್ಲಿದ್ದ ಶಾರದಾಂಬೆಯ ವಿಗ್ರಹದಿಂದ ಧ್ವನಿ ಬಂತು. ‘ಶಂಕರ, ಸಮಸ್ತ ಮಾನವಕೊಟಿಯ ಉದ್ಧಾರಕ್ಕೆ ಇರುವ ಸ್ತೊತ್ರ ವಿಷ್ಣುಸಹಸ್ರನಾಮ. ಕಲಿಯುಗದ ಜನರಿಗೆ ಶ್ರೀವಿಷ್ಣುಸಹಸ್ರನಾಮ ಅಗತ್ಯ.

ಶ್ರೀಲಲಿತಾಸಹಸ್ರನಾಮಕ್ಕಿಂತಲೂ ಹೆಚ್ಚಾಗಿ ಇದೆ, ಕಲಿಯುಗದಲ್ಲಿ ಈ ಸ್ತೋತ್ರವನ್ನು ಭಕ್ತಿಯಿಂದ ಪಾರಾಯಣ ಮಾಡುವುದೇ ತಪಸ್ಸು. ವಿಷ್ಣುಸಹಸ್ರನಾಮಕ್ಕೆ ಗಂಡಸು- ಹೆಂಗಸು- ಶೂದ್ರ- ಬ್ರಾಹ್ಮಣ ಎನ್ನುವ ಭೇದವಿಲ್ಲ. ಹಾಗೆ
ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭಗಳಲ್ಲಿ, ಯಾವುದೇ ಸಮಯ ದಲ್ಲಿ ಎಲ್ಲಿಯಾದರೂ ಪಠಿಸಬಹುದು. ಅದು ಎಲ್ಲ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೋತ್ರವನ್ನು ಎಲ್ಲ ವರ್ಗದವರು ಮತ್ತು ಎಲ್ಲವಯಸ್ಸಿನವರು ಪಠಿಸಬಹುದಾಗಿದೆ.
ಆದ್ದರಿಂದ ಶಂಕರ, ನೀನು ಮೊದಲು ಶ್ರೀವಿಷ್ಣುಸಹಸ್ರನಾಮಕ್ಕೆ ಭಾಷ್ಯ ಬರೆಯುವುದೇ ಸೂಕ್ತ ಎಂದು ಆದೇಶ ನೀಡಿದಾಗ’ ಶಂಕರರ ಕಣ್ಣಿನಲ್ಲಿ ಆನಂದ ಭಾಷ್ಪ ಸುರಿಯಿತು.

ಅದಕ್ಕಾಗಿಯೆ ಶಂಕರಾಚಾರ್ಯರು ‘ಗೇಯಂ ಗೀತಾ, ನಾಮ ಸಹಸ್ರಂ’ ಎಂದರು. ವೇದದ ಪ್ರತಿ ಮಾತಿಗೆ ಮೂರು ಮೂರು ಅರ್ಥವಿದ್ದರೆ, ಮಹಾಭಾರತದ ಪ್ರತಿ ಮಾತಿಗೆ ಹತ್ತು ಹತ್ತು ಅರ್ಥವಿರುತ್ತದೆ. ವಿಷ್ಣುಸಹಸ್ರನಾಮ ಪ್ರತಿ
ನಾಮಕ್ಕೆ ನೂರು ನೂರು ಅರ್ಥವಿರುತ್ತದೆ. ಹಾಗಾಗಿಯೆ ಒಮ್ಮೆ ವಿಷ್ಣುಸಹಸ್ರನಾಮವನ್ನು ಶ್ರದ್ಧಾಪೂರ್ವಕವಾಗಿ ಹೇಳಿದರೆ ಪರಮಾತ್ಮನ ಒಂದು ಲಕ್ಷನಾಮಗಳನ್ನು ಜಪ ಮಾಡಿದರೆ ಬರುವಷ್ಟು ಪುಣ್ಯ ಲಭಿಸುತ್ತದೆ. ಸ್ತೋತ್ರ ರಾಜ ಎಂದು ವರ್ಣಿತವಾದ, ವಿಷ್ಣುವಿನ ಸಹಸ್ರ ನಾಮಗಳ ಪಾರಾಯಣವನ್ನು ಕಲಿಯುಗದ ತಪಸ್ಸು ಎಂದು ಹೇಳಲಾಗಿದೆ. ಇದು ಸಾತ್ವಿಕರ ಆನಂದನಾಮವೆಂದು ಪ್ರಸಿದ್ಧವಾಗಿದೆ.

ಇದು ಬ್ರಹ್ಮಾಂಡವನ್ನು ವ್ಯಾಪಿಸಿರುವ ವಿಷ್ಣುವಿನ ವರ್ಣನೆ. ವಿಷ್ಣುವಿಗೆ ಸಾವಿರ ಹೆಸರು, ಸಾವಿರ ತಲೆ, ಸಾವಿರ ನೆಲೆ, ಈತ ಜಗದಾದಿಪುರುಷ. ಮಂಗಳಮಯವಾದ ವಿಷ್ಣುವಿನ ಸ್ತುತಿ ಯೇ ವಿಷ್ಣು ಸಹಸ್ರನಾಮ. ಇದು ದ್ವಾಪರವು ಕಲಿಯುಗಕ್ಕೆ ನೀಡಿದ ಮಹತ್ತರವಾದ ಒಂದು ವರ. ಕಲಿಯುಗದಲ್ಲಿ ಈ ಸ್ತೋತ್ರವನ್ನು ಭಕ್ತಿಯಿಂದ ಪಾರಾಯಣ ಮಾಡುವುದೇ ತಪಸ್ಸು. ಇದರ ಪಾರಾಯಣದಿಂದ ಬದುಕಿನಲ್ಲಿ ಧನ್ಯತೆಯ ಅನುಭವವಾಗುತ್ತದೆ.

ಶರಶಯ್ಯೆಯಲ್ಲಿದ್ದ ಭೀಷ್ಮನಿಗೆ ಶ್ರೀಕೃಷ್ಣನು ಮಿದುಳಾಗಿ ಸ್ಮರಣೆ ನೀಡಿ, ಕಣ್ಣಾಗಿ ದೃಷ್ಟಿಯನ್ನಿತ್ತು, ಹೃದಯವಾಗಿ ಚೈತನ್ಯ ನೀಡಿದ. ಆಗ ಭೀಷ್ಮರು ಯುಧಿಷ್ಠಿರನಿಗೆ ವಿಷ್ಣುವಿನ ಸಹಸ್ರ ನಾಮಗಳ ಪಾರಾಯಣವನ್ನು ಹೇಳಿ,
ಇದನ್ನು ಶೃದ್ಧೆ ಭಕ್ತಿಯಿಂದ ಪಾರಾಯಣ ಮಾಡುವುದರಿಂದ ಆತ್ಮ ವಿಶ್ವಾಸ, ಯೋಗಕ್ಷೇಮ, ಐಶ್ವರ್ಯ, ಕೀರ್ತಿ ಲಭಿಸುತ್ತವೆ ಎಂದು ಹೇಳಿದರು.

ಇದರ ಪಾರಾಯಣದಿಂದ ಶರೀರದ ೭೨ ಸಹಸ್ರ ನಾಡಿಗಳು ಶುದ್ಧವಾಗುತ್ತವೆ. ಇದಕ್ಕೆ ಕಾಲ, ಸ್ಥಳ, ಲಿಂಗ ಭೇದವಿಲ್ಲ, ಯಾವ ಉಪಕರಣಗಳ ಅವಶ್ಯಕತೆ ಇಲ್ಲ, ಇನ್ನೊಬ್ಬರ ಸಹಾಯವಿಲ್ಲದೆ ಪಠಿಸಬಹುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಸರ್ವ ದುರಿತಾಪಹಾರಿ ಮತ್ತು ಸಕಲ ರೋಗ ನಿವಾರಣೆಯಾಗುತ್ತವೆ ಎಂದು
ಚರಕಮುನಿಗಳು ಚರಕಸ್ಮೃತಿ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ .ಇಂತಹ ವಿಷ್ಣು ಸಹಸ್ರನಾಮದ ಮಹತ್ವ ನಾವೆಲ್ಲರೂ ತಿಳಿದುಕೊಂಡು, ನಮ್ಮ ಮುಂದಿನವರಿಗು ದಾಟಿಸಬೇಕು.

ಇದನ್ನೂ ಓದಿ: #RoopaGururaj

Leave a Reply

Your email address will not be published. Required fields are marked *