Wednesday, 30th October 2024

Roopa Gururaj Column: ತಂದೆ, ತಾಯಿಗಳಿಗೆ ಏನು ಮುಖ್ಯ?

ಓಂದೊಳ್ಳೆ ಮಾತು

ರೂಪಾ ಗುರುರಾಜ್

ಆಗರ್ಭ ಶ್ರೀಮಂತ ತಂದೆ, ಮಗನ ಮೇಲೆ ಕೇಸೊಂದು ಹಾಕಿ ತನಗೆ ತನ್ನ ಮಗನಿಂದ ಮಾಶಾಸನ ಬೇಕೆಂದು
ಕೊರ್ಟ್‌ನ್ನು ಕೇಳಿಕೊಂಡ.

ನ್ಯಾಯಧೀಶರು: ತಾವೇ ಇಷ್ಟೊಂದು ಶ್ರೀಮಂತರಿದ್ದೀರಿ, ಮತ್ತೇಕೆ ಬೇಕು ಎಂದರು.

ತಂದೆ: ಇಲ್ಲ ಸ್ವಾಮಿ, ನನಗೆ ನನ್ನ ಮಗನ ಕಡೆಯಿಂದ, ಪ್ರತಿತಿಂಗಳು, ಸ್ವಲ್ಪವಾದರೂ, ಬೇಕೇಬೇಕು ಎಂದ.
ಹಠಕ್ಕೆ ಬಿದ್ದ ತಂದೆಗೆ ನ್ಯಾಯ ಕೊಡಬೇಕೆಂದು, ಆ ಮಗನನ್ನು, ಕೋರ್ಟಿಗೆ ಬರಲು ಹೇಳಿದ ಜಡ್ಜ್ ಆಸೆ ಕೇಸನ್ನು ಮುಂದಕ್ಕೆ ಹಾಕಿದರು.

ಕೋರ್ಟ್ ನಿರ್ಧರಿಸಿದ ದಿನ ಮಗ ಬಂದು ಕಟಕಟೆಯಲ್ಲಿ ನಿಂತು ಕೊಂಡ.

ನ್ಯಾಯಾಧೀಶರು: ನಿಮ್ಮ ತಂದೆ ನಿಮ್ಮಿಂದ ಪ್ರತಿತಿಂಗಳು ಮಾಶಾಸನ ಕೇಳುತ್ತಿದ್ದಾರೆ ಕೊಡಬೇಕಾಗುತ್ತೆ ಅಂದರು.
ಮಗ: ಸ್ವಾಮಿ, ಅವರಲ್ಲಿಯೇ ಧನ ಕನಕ, ಆಸ್ತಿ, ಹೇರಳವಾಗಿದೆ.

ನ್ಯಾಯಾಧೀಶರು: ಮತ್ತೇಕೆ ಕೇಳುತ್ತಿದ್ದಾರೆ ಅಂತಾ ನಿನಗೇನಾದರೂ ಗೊತ್ತಾ? ಎಂದರು.

ಮಗ: ಇಲ್ಲ, ಸ್ವಾಮಿ.

ನ್ಯಾಯಾದೀಶರು: ಯಜಮಾನರೇ, ನೀವೇಕೆ ಹಠಹಿಡಿದಿದ್ದೀರಿ?
ತಂದೆ: ಸ್ವಾಮಿ, ಇದು ಹಠವಲ್ಲ, ನನ್ನ ಹಕ್ಕು.

ನ್ಯಾಯಾಧೀಶರು: ಹೌದೌದು, ಹೇಳಿ ಎಷ್ಟು ನಿರೀಕ್ಷಿಸುತ್ತೀರಿ?
ತಂದೆ: ಪ್ರತಿ ತಿಂಗಳ ಎರಡನೇ ತಾರೀಕಿಗೊಮ್ಮೆ ಅವನೇ ಬಂದು ನೂರು ರುಪಾಯಿ ಕೊಡಬೇಕು!
ಕೋರ್ಟಿನಲ್ಲಿದ್ದ ವಕೀಲರೆ, ಗೊಳ್ಳೆಟದು ನಕ್ಕರು.

ನ್ಯಾಯಾಧೀಶರು: ಸೈಲೆ…. ಸೈಲೆ……!
ಮಗ: ಸರಿ ಸ್ವಾಮಿ, ಕೊಡುತ್ತೇನೆ.

ನ್ಯಾಯಾಧೀಶರು: ಕೊಡುತ್ತೇನೆಂದು ಒಪ್ಪಿಕೊಂಡಿದ್ದಾನೆ. ಮತ್ತೇನೂ, ತಕರಾರು ಇಲ್ಲವಾ…?

ತಂದೆ: ಇಲ್ಲ ಸ್ವಾಮಿ, ಮತ್ತೇನಿಲ್ಲ, ಅಷ್ಟು ಕೊಟ್ಟರೆ ಸಾಕು. ನ್ಯಾಯಾದೀಶರು ತೀರ್ಪು ಬರೆದು ಓದಿ ಮುಗಿಸಿದರು,
ಕೋರ್ಟ್ ಕಲಾಪದ ಮುಕ್ತಾಯವನ್ನೂ ಮಾಡಿ, ತಮ್ಮ ಚೇಂಬರ್ ಒಳಗೆ ಹೋಗಿ, ಆ ಶ್ರೀಮಂತ ತಂದೆಯನ್ನು
ಕರೆತರಲು ಹೇಳಿದರು. ಅವರು ಬಂದರು.

ನ್ಯಾಯಾಧೀಶರು: ಅಲ್ಲ, ನೀವೇಕೆ ಕೇವಲ ನೂರು ರುಪಾಯಿಯನ್ನೇ ಪ್ರತಿ ತಿಂಗಳು ಕೊಡಬೇಕೆಂದು ಕೇಳಿದ್ರಿ?
ತಂದೆ: ಸ್ವಾಮಿ ನನಗೆ ಅವನ ದುಡ್ಡಿನ ಅವಶ್ಯಕತೆಯೇ ಇಲ್ಲ ನನಗೆ ಅವನೊಬ್ಬನೇ ಮಗ ಚೆನ್ನಾಗಿ ಓದಿದ್ದಾನೆ ದೂರದ ನಗರದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾನೆ,

ನನ್ನನ್ನು ನೋಡಲು ಅವನು ಬರುವುದೇ ಇಲ್ಲ. ಆದರೆ, ನನಗೆ ಅವನನ್ನು ತಿಂಗಳಿಗೊಮ್ಮೆಯಾದರೂ
ನೋಡಬೇಕೆಂಬ ಆಸೆ. ಆ ಕಾರಣಕ್ಕಾಗಿ ಕೋರ್ಟ್ ಆದೇಶದಂತೆ ಅವ ನೂರು ರುಪಾಯಿ ಕೊಡಲಿಕ್ಕಾದರೂ ತಪ್ಪದೇ
ಬರಬೇಕಲ್ಲ. ಅವಾಗಲಾದರೂ, ಅವನನ್ನು ಕಣ್ಣು ತುಂಬಾ ನೋಡಬಹುದೆಂದು ಕೊರ್ಟ್ ಮೂಲಕ ತಾಕೀತು ಮಾಡಿಸಿದೆ ಅಷ್ಟೇ. ಅಂದೇ ಕೋರ್ಟಿಗೆ ಮೂರು ದಿನ ರಜೆ ಹಾಕಿದ ಜಡ್ಜ್, ತಂದೆಗೆ ಫೋನ್ ಮಾಡಿ, ನಾನು ಊರಿಗೆ ಬರುತ್ತಿ ದ್ದೇನೆ, ಏನಾದರೂ ತರುವುದಿದೆಯಾ? ಎಂದರು.

ಅತ್ತಲಿಂದ, ಸಣ್ಣಗಿನ ಧ್ವನಿಯಲ್ಲಿ ಕೇಳಿಸಿದ್ದು, ನೀನು ಬಾರಪ್ಪ ಸಾಕು ಬೇರೇನೂ ಬೇಕಿಲ್ಲ. ಎಷ್ಟೋ ದಿನ ಆಯ್ತು ನಿನ್ನ ನೋಡದೇ . ಈ ಮೇಲಿನ ಸನ್ನಿವೇಶ ನಮ್ಮೆಲ್ಲರಿಗೂ ಕೂಡ ದೊಡ್ಡ ಪಾಠ. ಉದ್ಯೋಗಕ್ಕಾಗಿ ಊರು ಬಿಟ್ಟು ಬಂದಿರು ತ್ತೇವೆ, ಮದುವೆಯಾಗಿ ಬೇರೆ ಊರುಗಳಲ್ಲಿ ನೆಲೆಸಿರುತ್ತೇವೆ.

ತಂದೆ ತಾಯಿಗಳನ್ನ ಆಗಾಗ ಕುಶಲೋಪರಿಯಲ್ಲಿ ಮಾತನಾಡಿಸಿದರೆ ಸಾಕು ಎಂದುಕೊಳ್ಳುತ್ತೇವೆ. ಆದರೆ ಅವರಿಗೆ
ನಿರಂತರವಾಗಿ ನಮ್ಮ ಚಿಂತೆ ಇದ್ದೇ ಇರುತ್ತದೆ. ನಮ್ಮ ಒಂದು ಕರೆ ಅವರ ದಿನವನ್ನು ಚೆಂದವಾಗಿಸುತ್ತದೆ. ಆಗಾಗ ಅವರಿಗಾಗಿ ಸಮಯವನ್ನು ಮೀಸಲಾಗಿಟ್ಟು ಹೋಗಿ ಅವರ ಜೊತೆ ಇದ್ದು ಬಂದಾಗ ಅವರಿಗೆ ಸಿಗುವ ಸಮಾಧಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಾವ್ಯಾರೂ ಶಾಶ್ವತವಲ್ಲ. ದಿನ ದಿನಕ್ಕೆ ಎಲ್ಲವೂ ಬದಲಾಗುತ್ತಿರುತ್ತದೆ.

ಕೈ ತಪ್ಪಿ ಹೋದ ಸಮಯಕ್ಕೆ ನಂತರ ಪಶ್ಚಾತಾಪ ಪಡುವ ಬದಲು, ಇಂದಿನಿಂದಲೇ ತಂದೆ ತಾಯಿಗಳಿಗಾಗಿ ಅವರ ಕಾಳಜಿಗಾಗಿ ಸಮಯ ಮೀಸಲಿಡೋಣ. ದುಡಿಮೆ, ನಮ್ಮ ಜಂಜಾಟಗಳು ಸದಾ ಇದ್ದದ್ದೇ. ಎಲ್ಲದರ ನಡುವೆ ನಾವು ನಮಗಾಗಿ, ನಮ್ಮ ತಂದೆ ತಾಯಿ ಗಳಿಗಾಗಿ ಬದುಕದೆ ಹೋದರೆ ಎಲ್ಲ ಇದ್ದೂ ಏನೂ ಇಲ್ಲದಂತೆ!

ಇದನ್ನೂ ಓದಿ: Roopa Gururaj Column: ಮನುಷ್ಯತ್ವವನ್ನೇ ಮರೆಸುವ ಅಹಂಕಾರ