Friday, 29th November 2024

‌Roopa Gururaj Column: ಟ್ರೈನ್‌ ನಲ್ಲಿ ಪಾಠ ಕಲಿಸಿದ ಹಿರಿಯರು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದು ಟ್ರೈನ್ ನಲ್ಲಿ ಹೈಸ್ಕೂಲ್ ಓದುತ್ತಿದ್ದ ನಾಲ್ಕಾರು ಹುಡುಗರು ಪ್ರಯಾಣ ಮಾಡುತ್ತಿದ್ದರು. ಹುಡುಗಾಟಿಕೆಬುದ್ಧಿ ಏನಾದರೂ ಕೀಟಲೆ ಮಾಡಬೇಕೆನಿಸಿ ನಾವ್ಯಾಕೆ ಟ್ರೈನಿನ ಚೈನ್ ಎಳೆದರೆ ಏನಾದೀತು? ಅಬ್ಬಬ್ಬಾ ಎಂದರೆ ಓಡುತ್ತಿದ್ದ ಟ್ರೈನ್‌ನ ಚೈನ್ ಎಳೆದರೆ ಟಿಸಿ ಬರುತ್ತಾರೆ ಒಂದಷ್ಟು ಬೈಯುತ್ತಾರೆ ದಂಡ ಕಟ್ಟಲು ಹೇಳುತ್ತಾರೆ.

ಅಷ್ಟೇ ತಾನೇ ಇನ್ನೇನು ಮಾಡಲು ಸಾಧ್ಯ ಒಂದು ಕೈ ನೋಡೇ ಬಿಡೋಣ ಎಂಬ ಹುಂಬತನದ ಯೋಚನೆ ಕೆಲಸ ಮಾಡಿತು. ದಂಡ ಕಟ್ಟಬೇಕಾದ ಹಣ ಹೊಂದಿಸಲು, ತಲೆಗೊಬ್ಬರಿಗೆ ನೂರು ರುಪಾಯಿಯಂತೆ ಹಾಕಿ ೫೦೦ ರುಪಾಯಿ ಒಟ್ಟು ಮಾಡಿದರು. ಚೈನ್ ಇನ್ನೇನು ಎಳೆಯಬೇಕು. ಆಗ ಅವರಲ್ಲಿ ಒಬ್ಬ ಹುಡುಗ ಹೇಳಿದ. ‘ಈ ಮಜಾ ನೋಡುವುದಕ್ಕೆ ನಾವ್ಯಾಕೆ ನಮ್ಮ ಹಣ ಹಾಕಬೇಕು. ಅಲ್ನೋಡಿ ನಮ್ಮ ಮುಂದಿನ ಸೀಟಿನಲ್ಲಿ ವಯಸ್ಸಾದ ಒಬ್ಬ ಮುದುಕ ಕೂತಿದ್ದಾನೆ.

ನಾವು ಚೈನ್ ಎಳೆಯೋಣ, ಟಿಸಿ ಬಂದು ಕೇಳಿದಾಗ ಇಲ್ಲಿ ಕೂತಿರುವ ಅಜ್ಜ ಚೈನ್ ಎಳೆದಿದ್ದು ಎಂದು ಹೇಳಿ ಅವನ ತಲೆ ಮೇಲೆ ಹಾಕೋಣ’ ಎಂದನು. ಉಳಿದ ಹುಡುಗರಿಗೂ ಈ ಉಪಾಯ ಖುಷಿಯಾಯಿತು. ಖರ್ಚಿಲ್ಲದೆ ಮಜಾ ಪಡೆಯಲು ಮುಂದಾದವು. ಇನ್ನೇಕೆ ತಡ ಮಾಡುವುದು ಎಂದುಕೊಂಡು, ಚೈನನ್ನು ಎಳೆಯಲು ಮೊದಲೇ ಹೊರಟಿದ್ದ ಹುಡುಗನಿಗೆ ಬೇಗ ಎಳೆದುಬಿಡು ಎಂದರು. ಆ ಹುಡುಗ ಚೈನ್ ಎಳೆದೇ ಬಿಟ್ಟ. ಸ್ವಲ್ಪ ಸಮಯಕ್ಕೆ ಟ್ರೈನ್ ನಿಂತಿತು. ಟಿಕೆಟ್ ಕಲೆಕ್ಟರ್ ಬಂದು ಏನು ಹೇಳುತ್ತಾರೆ, ಅಜ್ಜ ಏನು ಉತ್ತರ ಕೊಡುತ್ತಾರೆ, ಎಂದು ನೋಡಲು ಆ ಹುಡುಗರು ಕಾಯುತ್ತಿದ್ದರು. ಟಿಸಿ ಬಂದರು ಜಬರ್ದಸ್ತ್‌ ಸ್ವರದಲ್ಲಿ ‘ಬುದ್ಧಿ ಇಲ್ವಾ? ಯಾರು ಚೈನು ಎಳೆದಿದ್ದು?’ ಎಂದು ಆ ಹುಡುಗರನ್ನೇ ದಿಟ್ಟಿಸಿ ನೋಡುತ್ತಾ ಗಡುಸಾಗಿ ಕೇಳಿದಾಗ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಹುಡುಗರು ಚೈನ್ ಎಳೆದಿದ್ದು ನಾವಲ್ಲ ಅಲ್ಲಿ ಕೂತಿರುವ ಅಜ್ಜ ಎಂದರು.

ಅಜ್ಜನ ಬಳಿ ಬಂದು ಟಿ. ಸಿ ಕೇಳಿದಾಗ, ‘ಹೌದು ನಾನೇ ಚೈನ್ ಎಳೆದಿದ್ದು’ ಎಂದರು. ಇದನ್ನು ಕೇಳಿ ಆ ಹುಡುಗರಿಗೆ ಆಶ್ಚರ್ಯವಾಯಿತು. ‘ಚೈನ್ ಎಳೆದಿದ್ದು ಏಕೆ?’ ಎಂದು ಟಿಸಿ ಕೇಳಿದರು. ಅಜ್ಜ ಹೇಳಿದ ‘ಈ ಹುಡುಗರು ನನ್ನನ್ನು ಹೆದರಿಸಿ, ಬೆದರಿಸಿ ನನ್ನ ಕೈಲಿರುವ ಹಣವನ್ನು ಕಿತ್ತುಕೊಂಡಿದ್ದಾರೆ, ನಾನು ವಯಸ್ಸಾದ ಮುದುಕ ಒಬ್ಬನೇ ಇದ್ದೇನೆ. ಈ ಹುಡುಗರು ಇನ್ನೇನು ಮಾಡಿಬಿಡುತ್ತಾರೋ ಎಂದು
ಹೆದರಿ ಟ್ರೈನಿನ ಚೈನ್ ಎಳೆದೆ’ ಎಂದರು.

ಇದನ್ನು ಕೇಳಿ ಆ ಹುಡುಗರ ಕೈ ಕಾಲು ನಡುಗಿತು. ಟಿಸಿ ಹುಡುಗರತ್ತ ನೋಡಿ ‘ಟ್ರೈನ್‌ನಲ್ಲಿ ಈ ರೀತಿ ಕಳ್ಳತನ, ಗಲಾಟೆ ಮಾಡಬೇಕೆಂದು ಗುಂಪು ಕಟ್ಟಿಕೊಂಡು ಬಂದಿರುವಿರಾ? ಇದಕ್ಕೆ ಎಂತಹ ಶಿಕ್ಷೆ ಆಗುತ್ತೆ ಗೊತ್ತಾ?’ ಎಂದು ಗಟ್ಟಿ ಸ್ವರದಲ್ಲಿ ಕೇಳಿ ಹೆದರಿಸಿದಾಗ ‘ಇಲ್ಲ ಸರ್ ನಾವು
ಹಾಗೆ ಮಾಡಿಲ್ಲ’ ಎಂದು ತೊದಲುತ್ತಿದ್ದಂತೆ, ಅವರ ಕೈಯಲ್ಲಿ ಜೋಡಿಸಿಟ್ಟುಕೊಂಡಿದ್ದ ೫೦೦ ರುಪಾಯಿ ಸಿಕ್ಕಿಬಿಟ್ಟಿತ್ತು. ಕಲೆಕ್ಟರ್ ಇದೇನಾ ನಿಮ್ಮ ಹಣ ಎಂದು ಅಜ್ಜನಿಗೆ ಕೇಳಿದಾಗ ‘ಹೌದು ಸರ್’ ಎಂದರು.

ಹಣವನ್ನು ಅಜ್ಜನಿಗೆ ಕೊಟ್ಟು. ಆ ಹುಡುಗರಿಗೆ ‘ಇನ್ನೊಂದು ಸಲ ಹೀಗೆ ಮಾಡಿದರೆ ಪೊಲೀಸರಿಗೆ ತಿಳಿಸಬೇಕಾಗುತ್ತದೆ ಹುಷಾರ್! ಇದೊಂದು ಸಲ ಬಿಟ್ಟಿದ್ದೇನೆ’ ಎಂದು ಎಚ್ಚರಿಕೆ ಕೊಟ್ಟು, ‘ಈ ಗಾಡಿಯಿಂದ ಇಳಿಯಿರಿ’ ಎಂದ ಕಲೆಕ್ಟರ್ ನಡುದಾರಿಯ ಹುಡುಗರನ್ನು ಟ್ರೈನಿಂದ ಕೆಳಗೆ ಇಳಿಸಿ ತಕ್ಕ ಶಾಸ್ತಿ ಮಾಡಿದರು. ಮತ್ತೊಬ್ಬರಿಗೆ ಕೆಟ್ಟದ್ದು ಮಾಡುವ ಮೊದಲು ನೂರು ಬಾರಿ ಯೋಚಿಸಿ, ಕೆಲವರ ಅನುಭವ ನಮ್ಮ ಇಡೀ ಜೀವನಕ್ಕಿಂತ ದೊಡ್ಡದಾಗಿರುತ್ತದೆ. ಅವರು ಕೊಟ್ಟ ಏಟನ್ನು ತಡೆದುಕೊಳ್ಳುವ ಶಕ್ತಿಯೂ ನಮಗಿರುವುದಿಲ್ಲ.