Friday, 27th December 2024

Roopa Gururaj Column: ಶಿಕ್ಷೆಯಿಂದ ಮುಕ್ತಿ ನೀಡಿದ ದಯಾಗುಣ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದು ಮಧ್ಯಾಹ್ನ ಉರಿ ಬಿಸಿಲಿನ ಸಮಯದಲ್ಲಿ, ಟರ್ಕಿಯ ರಾಜ, ತನ್ನ ಅರಮನೆಯ ಕಿಟಕಿಯ ಹತ್ತಿರ ನಿಂತು
ಹೊರಗಿನ ರಸ್ತೆಯನ್ನು ಗಮನಿಸುತ್ತಿದ್ದ. ಅರಮನೆಯೊಳ ಗಿದ್ದರೂ ಬಿಸಿಲಿನ ಝಳ ಕಣ್ಣಿಗೆ ರಾಚುತ್ತಿತ್ತು.

ಎಲ್ಲಾ ಒಬ್ಬಿಬ್ಬರು ಮಾತ್ರ ರಸ್ತೆಯಲ್ಲಿ ಓಡಾಡುತ್ತಿದ್ದರು. ಇಂತಹ ಸುಡು ಬಿಸಿಲಿನಲ್ಲಿ ಕೂಡಾ ಇವರು ಹೊರಗೆ ಓಡಾಡುತ್ತಾರಲ್ಲ ಎಂದುಕೊಂಡ. ಅಗೊಂದು ದೃಶ್ಯ ಇವನ ಕಣ್ಣಿಗೆ ಬಿತ್ತು. ರಾಜನ ಇಬ್ಬರು ಸೈನಿಕರು ಒಬ್ಬ ಖೈದಿ ಯನ್ನು ಎಳೆದುಕೊಂಡು ಹೋಗುತ್ತಿದ್ದರು. ಬಹುಶಃ ಅವನನ್ನು ಕಾರಾಗೃಹಕ್ಕೆ ಕರೆದುಕೊಂಡು ಹೋಗು‌ತ್ತಿದ್ದರು. ಅವನ ಕಾಲುಗ ಳಿಗೆ ಭಾರಿ ಸರಪಳಿಗಳನ್ನು ಹಾಕಿದ್ದರು, ಕೈಗಳಿಗೆ ಬಲವಾದ ಬೇಡಿ ತೊಡಿಸಿದ್ದರು. ಸೈನಿಕರು ಮತ್ತು ಕೈದಿ ಬಿಸಿಲಿನಲ್ಲಿ ಬೆಂದು ಹೋದವರಂತೆ ತೋರುತ್ತಿತ್ತು.

ಎಲ್ಲರ ಮೈಯಿಂದ ಬೆವರಿಳಿದು ಬರುತ್ತಿತ್ತು. ಆಗ ಕೈದಿ, ಸೈನಿಕರಿಗೆ ಒಂದು ನಿಮಿಷ ನಿಲ್ಲಿಸುವಂತೆ ಬೇಡಿಕೊಂಡು, ತನ್ನ ಕೈಗಳಿಗೆ ಬಿಗಿದ ಬೇಡಿಗಳನ್ನೂ ಒಂದೆರಡು ಕ್ಷಣ ಕಳಚುವಂತೆ ಕೇಳಿಕೊಂಡ. ಏಕೆಂದು ಅವರು ಕೇಳಿದಾಗ,
ತಾನೆಲ್ಲೂ ಓಡಿ ಹೋಗುವುದಿಲ್ಲ, ಕೆಲವು ಕ್ಷಣ ಅಷ್ಟೇ, ಎಂದು ಅವನು ಅಂಗಲಾಚಿ ಬೇಡಿಕೊಂಡಾಗ, ಸೈನಿಕರು ಅವನ ಬೇಡಿಗಳನ್ನು ಬಿಚ್ಚಿದರು. ಇದನ್ನು ರಾಜ ಅರಮನೆಯ ಕಿಟಕಿಯಿಂದ ಗಮನಿಸುತ್ತಿದ್ದ. ಕೈದಿ ನಿಧಾನವಾಗಿ,
ಪಕ್ಕದಲ್ಲಿಯೇ ಹರಿಯುತ್ತಿದ್ದ ನದಿಗೆ ಹೋಗಿ, ತನ್ನ ಬೊಗಸೆಯಲ್ಲಿ ನೀರು ತುಂಬಿಕೊಂಡು, ರಸ್ತೆಯ ಇನ್ನೊಂದು ಬದಿಗೆ ಹೋದ. ತಾನು ನೀರು ಕುಡಿಯದೇ, ಈ ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡು ಎಲ್ಲಿಗೆ ಹೋಗುತ್ತಿದ್ದಾನೆ, ಎಂದು ಸೈನಿಕರಿಗೆ ಆಶ್ಚರ್ಯವಾಯಿತು.

ಆತ ಮುಂದೆ ನಡೆದು ದಾರಿಯ ಪಕ್ಕದಲ್ಲಿ ಸುಸ್ತಾಗಿ ಬಿದ್ದಿದ್ದ ನಾಯಿಯ ಬಾಯಿಯಲ್ಲಿ ನೀರನ್ನು ಸುರಿದ.
ನಾಯಿ ತನ್ನ ಮುಖದ ಮೇಲೆ ಬಿದ್ದ ನೀರಿನ ಹನಿಯಿಂದ ಸ್ವಲ್ಪ ಚೇತರಿಸಿಕೊಂಡು ಕಣ್ಣು ಬಿಟ್ಟಿತು. ಆದರೂ ಅದಕ್ಕೆ ಮೇಲೇಳಲಾಗಲಿಲ್ಲ. ಮತ್ತೆ ಕೈದಿ ನದಿಯ ಕಡೆಗೆ ಹೋಗಿ, ತನ್ನ ಕಾಲಿನ ಬೂಟನ್ನು ಬಿಚ್ಚಿ, ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಅದರಲ್ಲಿ ನೀರು ತುಂಬಿಕೊಂಡು, ತಾನು ಬರಿಗಾಲಿನಲ್ಲಿ ನಡೆಯುತ್ತಾ ಬಂದು,
ಬೂಟುಗಳಲ್ಲಿದ್ದ ನೀರನ್ನು ನಾಯಿಯ ಬಾಯಿಗೆ ಸುರಿದ. ನಾಯಿ ನಿಧಾನವಾಗಿ ಎದ್ದು ನಿಂತಿತ್ತು.

ಇವನಡೆ ಕೃತಜ್ಞತೆಯಿಂದ ನೋಡಿ, ನೆರಳು ಇದ್ದ ಕಡೆಗೆ ಬಾಲ ಅಡಿಸುತ್ತಾ ನಿಧಾನವಾಗಿ ನಡೆದುಹೋಯಿತು. ಕೈದಿ ಸೈನಿಕರ ಕಡೆಗೆ ಹೋಗಿ, ಮತ್ತೆ ತನ್ನ ಕೈಗೆ ಬೇಡಿಯನ್ನು ಹಾಕಿಸಿಕೊಂಡ. ಇದನ್ನೆಲ್ಲ ನೋಡುತ್ತಿದ್ದ ರಾಜ, ತಕ್ಷಣ ತನ್ನ
ಸೇವಕನೊಬ್ಬನನ್ನು ಸೈನಿಕರ ಕಡೆಗೆ ಕಳಿಸಿ, ಕೈದಿಯನ್ನು ಅರಮನೆಗೆ ಕರೆತರುವಂತೆ ಹೇಳಿ ಕಳುಹಿಸಿದ. ಸೈನಿಕರಿಗೆ ಗಾಬರಿಯಾಯಿತು, ತಾವು ಕೈದಿಯ ಬೇಡಿ ಬಿಚ್ಚಿದಕ್ಕೆ ರಾಜ ತಮಗೆ ಇನ್ನಾವ ಶಿಕ್ಷೆ ಕೊಡುತ್ತಾನೋ ಎಂದು ಹೆದರಿ ದರು. ಕೈದಿಗೂ ಕೂಡಾ ಭಯವಾಯಿತು.

ಅರಮನೆಯೊಳಗೆ ಬಂದ ನಂತರ, ರಾಜ ಸೈನಿಕರಿಗೆ, ಕೈದಿಯ ಬೇಡಿ ಮತ್ತು ಕಾಲಿನ ಸರಪಳಿಗಳನ್ನು ಬಿಚ್ಚುವಂತೆ ಆಜ್ಞೆ ಮಾಡಿದ.

ನೀನು ನಾಯಿಗೆ ತೋರಿದ ದಯೆಯನ್ನು ನೋಡಿದೆ, ನೀನು ಅದಕ್ಕೆ ನೀರು ಕೊಡದಿದ್ದರೆ ಅದು ಸತ್ತು ಹೋಗುತ್ತಿತ್ತು. ಅನಾಥ ನಾಯಿಗೇ ಇಷ್ಟುದಯೆ ತೋರಿದ ನೀನು, ದೊಡ್ಡ ಅಪರಾಧ ಮಾಡಿರಲಾರೆ , ಎಂದು ನನಗೆ ಅನ್ನಿಸುತ್ತಿದೆ. ನಿನ್ನ ದಯಾ ಗುಣವೇ, ನಿನ್ನನ್ನು ಕಾಪಾಡುತ್ತಿದೆ. ನೀನು ಮಾಡಿದ ಅಪರಾಧಕ್ಕಿಂತ, ನಿನ್ನ ದಯಾ ಗುಣ ದೊಡ್ಡದು. ನೀನು ಮಾಡಿದ ಅಪರಾಧಕ್ಕೆ ಕ್ಷಮೆ ನೀಡಿದ್ದೇನೆ. ನೀನು ಈಗ ಸ್ವತಂತ್ರ, ಎಂದು ಹೇಳಿ, ಕೈದಿಯನ್ನು ಬಿಡುಗಡೆ ಗೊಳಿಸಿದ.

ನಮ್ಮ ಸುತ್ತಲೂ ಕುಟುಂಬದವರೂ, ಸ್ನೇಹಿತರು ಅರಿತೋ ಅರಿಯದೆಯೋ ತಪ್ಪು ಮಾಡಿ ನಂತರ ಅದಕ್ಕಾಗಿ ಪಶ್ಚಾ ತಾಪ ಪಟ್ಟು ತಿದ್ದಿಕೊಳ್ಳಲು ಪ್ರಯತ್ನಿಸಿದಾಗ ಅವರಿಗೆ ಮತ್ತೊಂದು ಅವಕಾಶ ನೀಡಿ. ದಯೆಗಿಂತ ಮಿಗಿಲಾದ ಧರ್ಮ ವಿಲ್ಲ.

ಇದನ್ನೂ ಓದಿ: #RoopaGururaj