Wednesday, 11th December 2024

ಮಾಸ್ ಅವತಾರದಲ್ಲಿ ಬಾಂಡ್ ರವಿ

ಪ್ರಮೋದ್ ಪಂಜು ಈ ಬಾರಿ ಹೊಸ ಅವತಾರದಲ್ಲಿ ತೆರೆಗೆ ಎಂಟ್ರಿಕೊಟ್ಟಿದ್ದು, ಮಾಸ್ ಆಗಿ ಕಂಗೊಳಿಸಿದ್ದಾರೆ. ಜತೆಗೆ ಆಕ್ಷನ್‌ನಲ್ಲಿ ಮಿಂಚುತ್ತಿದ್ದಾರೆ. ಟೈಟಲ್‌ ನಲ್ಲೇ ಪಂಚಿಂಗ್ ಇರುವ ಬಾಂಡ್ ರವಿ ಚಿತ್ರವನ್ನು ನಿರ್ದೇಶಕ ಪ್ರಜ್ವಲ್ ನಿರ್ದೇಶಿಸಿ ತೆರೆಗೆ ತಂದಿದ್ದಾರೆ.

ನೈಜ ಘಟನೆಯಾಧಾರಿತ ಈ ಚಿತ್ರ ಬಿಡುಗಡೆಗೂ ಮುನ್ನವೇ ಹೊಸ ಕ್ರೇಜ್ ಸೃಷ್ಟಿಸಿದೆ. ಬಾಂಡ್ ರವಿ ಶೀರ್ಷಿಕೆ ಕೆಳಿದಾಕ್ಷಣ ಇದು ಮಾಸ್ ಸಿನಿಮಾ ಎನ್ನುವುದು ಮನದಟ್ಟಾಗುತ್ತದೆ. ಟ್ರೇಲರ್ ನೋಡಿದರೆ ಅದ್ಭುತ ಆಕ್ಷನ್ ದೃಶ್ಯಗಳು ಗಮನಸೆಳೆಯುತ್ತವೆ. ಹಾಗಂತ ಇದು ಸಾಹಸ ಪ್ರಧಾನ ಕಥೆಗೆ ಸೀಮಿತವಾಗಿಲ್ಲ. ಇಲ್ಲಿ ಮಾಸ್, ಕ್ಲಾಸ್ ಲವ್, ಎಮೋಷನ್ ಹೀಗೆ ಎಲ್ಲಾ ಅಂಶಗಳು ಮಿಳಿತವಾಗಿವೆ.

ಸೆರೆಮನೆಯ ಪ್ರಸ್ತುತತೆ
ಬಾಂಡ್ ರವಿ ಸಿನಿಮಾದ ಬಹುತೇಕ ಕಥೆ ಜೈಲಿನಲ್ಲಿಯೇ ನಡೆಯುತ್ತದೆ. ಸಾಮಾನ್ಯವಾಗಿ ಸೆರೆಮನೆಯಲ್ಲಿ ಇರುವವರೆಲ್ಲರೂ ಕೆಟ್ಟವರು ಎಂಬ ಭಾವನೆ ಎಲ್ಲರಲ್ಲಿಯೂ ಇದೆ. ಆದರೆ ಅಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇವೆ. ಸೆರಮನೆಯಲ್ಲಿ ನಡೆಯುವ ವಾಸ್ತವತೆಯನ್ನು ನಿರ್ದೇಶಕರು ತೆರೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅದಕ್ಕಾಗಿ ಸುಮಾರು ಇಪ್ಪತ್ತು ದಿನಗಳ ಕಾಲ ಜೈಲಿನಲ್ಲಿಯೇ ಚಿತ್ರೀಕರಣ ನಡೆಸಿದ್ದಾರೆ.

ಅಪರೂಪದ ಪ್ರೇಮ್ ಕಹಾನಿ
ಜೈಲು ಎಂದಾಗ ಹೊಡಿ ಬಡಿ ಕಥೆಗೆ ಸೀಮಿತವಾಗದೆ ಇಲ್ಲಿ ನೈಜತೆಯನ್ನು ತಿಳಿಸುವ ಪ್ರಯತ್ನ ಮಾಡಲಾಗಿದ್ದು ನೈಜತೆಗೆ ಕಾಲ್ಪನಿಕತೆಯ ಸ್ಪರ್ಶವನ್ನು ನೀಡಿದ್ದಾರೆ. ಅದರ ಜತೆಗೆ ಅಪರೂಪದ ಪ್ರೇಮ ಕಥೆಯನ್ನು ಬೆರೆಸಿದ್ದಾರೆ. ಜೈಲಿನಲ್ಲಿರುವ ಖೈದಿಯನ್ನು ನೋಡಲು ಬರುವುದು ಪೊಲೀಸ್ ಇಲ್ಲವೆ ಲಾಯರ್. ಆದರೆ ಅದೇ ಖೈದಿಯನ್ನು ಯುವತಿ ಯೊಬ್ಬಳು ಹುಡುಕಿ ಬಂದಾಗ ಹೇಗಿರಬಹುದು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಅಷ್ಟಕ್ಕೂ ನಾಯಕನ ಮೇಲೆ ಪ್ರೇಮ ಚಿಗುರಿದ್ದು ಯಾಕೆ, ಹೇಗೆ ಎಂಬುದೇ ಚಿತ್ರದ ಸಸ್ಪೆನ್ಸ್. ಅದನ್ನು ತೆರೆಯಲ್ಲಿಯೇ ನೋಡಬೇಕು ಎನ್ನುತ್ತಾರೆ ನಿರ್ದೇಶಕರು.

ಮನಸೆಳೆವ ಸೆಂಟಿಮೆಂಟ್
ಚಿತ್ರದಲ್ಲಿ ಆಕ್ಷನ್, ಪ್ರೇಮ ಕಥೆಯ ಜತೆಗೆ ಸೆ0ಟಿಮೆಂಟ್ ಅಂಶಗಳೂ ಮಿಳಿತವಾಗಿವೆ. ನಾಯಕ ಜೈಲು ಸೇರಿದ್ದು ಯಾಕೆ ಅದರ ಹಿಂದಿನ ಮರ್ಮ ಏನು. ಆತ ಹೇಗೆ ಬದಲಾಗು ತ್ತಾನೆ ಎಂಬು ಸ್ಟೋರಿ ತೆರೆಯಲ್ಲಿ ಕುತೂಹಲಕಾರಿಯಾಗಿ ಸಾಗಲಿದೆ. ಹಾಗಾಗಿ ಇದು ಕಂಪ್ಲೀಟ್ ಕೌಟುಂಬಿಕ ಕಥೆಯ ಸಿನಿಮಾ ಎನ್ನುತ್ತಾರೆ ನಿರ್ದೇಶಕ ಪ್ರಜ್ವಲ್. ಇಲ್ಲಿ ಸಂದೇಶಕ್ಕಿಂತ ಪ್ರಸ್ತುತತೆಯನ್ನು ಕಟ್ಟಿ ಕೊಡಲಾಗಿದೆ. ಪ್ರಮೋದ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜಲ್ ಕುಂದರ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ರವಿ, ಕಾಳೆ, ಶೋಭರಾಜ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ನರಸಿಂಹ ಮೂರ್ತಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.

*

ದಶಕಗಳ ಹಿಂದೆ ನಾನು ಜೈಲಿಗೆ ಭೇಟಿ ನೀಡುವ ಸಂದರ್ಭ ಬಂದಿತ್ತು. ಆಗ ಅಲ್ಲಿ ಕಂಡ ನೈಜ ಘಟನೆಗಳನ್ನು ಹೆಣೆದು ಅದಕ್ಕೆ ಚಿತ್ರಕಥೆ ಬರೆದು ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದೇನೆ. ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ನೈಜವಾಗಿವೆ. ಪ್ರಸ್ತುತತೆಯ ಸಂದರ್ಭಕ್ಕೆ ಬಾಂಡ್ ರವಿ ಸೂಕ್ತವಾದ ಚಿತ್ರವಾಗಿದೆ.
-ಪ್ರಜ್ವಲ್ ನಿರ್ದೇಶಕ