Saturday, 14th December 2024

ಚಂದನವನದಲ್ಲಿ ಛಲಗಾತಿಯ ಬಯೋಪಿಕ್

ಶಿಕಾರಿಪುರದ ಹುಡುಗಿ ತನುಜಾ ಅಪ್ಪಟ ಛಲಗಾತಿ. ಜೀನವನದಲ್ಲಿ ವೈದ್ಯೆಯಾಗಬೇಕು ಎಂಬ ಆಸೆ ಆಕೆಯ ಮನದಲ್ಲಿ ಅದಾಗಲೇ ಬಲವಾಗಿ ಬೇರೂರಿತ್ತು. ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ನೀಟ್ ಪರೀಕ್ಷೆಗೆ ಸಿದ್ದವಾಗುತ್ತಿದ್ದ ತನುಜಾಗೆ, ಕರೋನಾ ಮಹಾಮಾರಿ ಕಾಡಿತ್ತು.

ಪರಿಣಾಮ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಪೂರಕ ಪರೀಕ್ಷೆೆಗಾದರೂ ಹಾಜರಾಗಬೇಕು ಎಂದುಕೊಳ್ಳುತ್ತಿರುವಾಗಲೇ ತಾಂತ್ರಿಕ ದೋಷದಿಂದ ಪ್ರವೇಶಪತ್ರವೇ ಸಿಗಲಿಲ್ಲ. ತನ್ನ ಕನಸು ಕಮರಿತು ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ತನುಜಾಗೆ
ನೆರವಾಗಿದ್ದೇ ‘ವಿಶ್ವವಾಣಿಯ’ ಪ್ರಧಾನ ಸಂಪಾದಕರಾದ ವಿಶ್ವೇಶ್ವರಭಟ್ ಅವರು.

ತನುಜಾಳ ಸಮಸ್ಯೆೆಯ ಬಗ್ಗೆ ತಕ್ಷಣ ಟ್ವೀಟ್ ಮಾಡಿ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದರು. ಬಳಿಕ ಎಲ್ಲರ ಶ್ರಮದಿಂದ ತನುಜಾ ನೀಟ್ ಪರೀಕ್ಷೆ ಬರೆಯುವಂತಾಯಿತು. ಅಷ್ಟು ಮಾತ್ರವಲ್ಲ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಪಡೆದಿದ್ದು, ಬೆಳಗಾವಿ ಮೆಡಿಕಲ್ ಕಾಲೇಜಿನಲ್ಲಿ ಸರಕಾರಿ ಕೋಟಾ ಸೀಟ್ ಪಡೆಯುವಲ್ಲಿಯೂ ತನುಜಾ ಯಶಸ್ವಿಯಾಗಿದ್ದಾಳೆ.

ತನ್ನ ಕನಸನ್ನು ಸಾಕಾರಗಳಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾಳೆ. ನಿಜವಾಗಿಯೂ ತನುಜಾ ಎಲ್ಲಾ ವಿದ್ಯಾರ್ಥಿಗಳಿಗೂ ಮಾದರಿ ಯಾಗಿದ್ದಾಳೆ. ಈಗ ಆಕೆಯ ಯಶೋಗಾಥೆ ಸಿನಿಮಾ ರೂಪ ಪಡೆದಿದ್ದು, ತೆರೆಗೆ ಬರಲು ಸಿದ್ದವಾಗುತ್ತಿದೆ. ಕರೋನಾ ಕಾಲಘಟ್ಟ ದಲ್ಲಿ ನಡೆದ ಈ ನೈಜ ಘಟನೆ, ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಎಲ್ಲರಿಗೂ ತಿಳಿಸಿ ಹೇಳಿದೆ. ಮನದಟ್ಟು ಮಾಡಿದೆ.

ಸ್ವತಃ ಇಂತಹ ಸವಾಲುಗಳನ್ನು ಎದುರಿಸಿದ್ದ ಹರೀಶ್, ತನುಜಾಳ ಯಶೋಗಾಥೆಯನ್ನು ಕಂಡು, ಅದಕ್ಕೆ ಸಿನಿಮಾ ರೂಪ ಕೊಡಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಕಥೆ ಬರೆಯುತ್ತಿದ್ದು, ಜನವರಿ ಅಥವಾ ಫೆಬ್ರವರಿಯಲ್ಲಿ ಚಿತ್ರ ಸೆಟ್ಟೇರಲಿದೆ.

ಮನ ಮುಟ್ಟಿದ ಕಥೆ 
ಹರೀಶ್ ಬಡತನದಲ್ಲಿಯೇ ಬೆಳೆದವರು. ತಾನೂ ಸಾಧಕನಾಗಬೇಕು, ಎಲ್ಲರಂತೆ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಅವರಲ್ಲಿತ್ತು. ಅದಕ್ಕೆ ಪೂರಕ ಎಂಬಂತೆ, ಕಾಲೇಜು ದಿನಗಳಲ್ಲಿಯೇ ‘ವಿದ್ಯಾರ್ಥಿ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು. ವಿದ್ಯಾರ್ಥಿಗಳ ಕಾಲೇಜು ಜೀವನ, ಅಲ್ಲಿನ ನೋವು ನಲಿವುಗಳು, ಈ ಕಿರುಚಿತ್ರದಲ್ಲಿ ಹಾಸುಹೊಕ್ಕಾಗಿತ್ತು. ಇದು ಹರೀಶ್ ಅವರ ಪ್ರಥಮ ಪ್ರಯತ್ನವಾದರೂ ಕಿರುಚಿತ್ರ ವಿದ್ಯಾರ್ಥಿಗಳಿಗೆ ಮೆಚ್ಚುಗೆಯಾಯಿತು.

ಇದರ ಯಶಸ್ಸಿನಿಂದ ಪ್ರೇರಿತರಾದ ಹರೀಶ್, ‘ಮರಳಿಗೂಡಿಗೆ’ ಹಾಗೂ ‘ಅಂತರ್ಜಲ’ ಎಂಬ ಮತ್ತೆರಡು ಕಿರುಚಿತ್ರಗಳನ್ನು ನಿರ್ದೇ ಶಿಸಿ ಸೈ ಎನಿಸಿಕೊಂಡರು. ಪ್ರಶಸ್ತಿಗಳನ್ನು ಪಡೆದುಕೊಂಡರು. ಆ ಬಳಿಕ ಸಿನಿಮಾ ನಿರ್ದೇಶನ ಮಾಡಲೇಬೇಕು ಎಂಬ ತುಡಿತ ದಿಂದ ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ತಾನು ಸ್ವತಂತ್ರ ನಿರ್ದೇಶಕನಾಗ ಬೇಕೆಂದು ಹಲವು ಕಥೆಗಳನ್ನು ಬರೆದರು. ಆದರೆ ಅವ್ಯಾವು ಹರೀಶ್ ಅವರಿಗೆ ಹಿಡಿಸಲಿಲ್ಲ. ಈ ಸಂದರ್ಭದಲ್ಲಿಯೇ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ‘ತನುಜಾಳ ಯಶೋಗಾಥೆ’ಯ ಲೇಖನ ಹರೀಶ್ ಮನಕಲಕಿತು. ಇದೇ ಕಥೆಯನ್ನು ಯಾಕೆ ಸಿನಿಮಾ ರೂಪದಲ್ಲಿ ತೆರೆಗೆ ತರಬಾರದು ಎಂದು ಯೋಚಿಸಿದ ಹರೀಶ್, ‘ವಿಶ್ವವಾಣಿ’ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರನ್ನು ಭೇಟಿ ಮಾಡಿ ತನುಜಾಳ ಕಥೆಯನ್ನು ಸಿನಿಮಾವಾಗಿಸಲು ಸಲಹೆ ಕೇಳಿದರು. ಅವರ ಒಪ್ಪಿಗೆ ಪಡೆದು, ಚಿತ್ರ ನಿರ್ದೇ ಶನಕ್ಕೆ ಮುಂದಾಗಿದ್ದಾರೆ.

ಛಲಗಾತಿ ತನುಜಾ
ವೈದ್ಯಳಾಗುವ ಕನಸು ತನುಜಾಳಲ್ಲಿ ಹೇಗೆ ಚಿಗುರಿತು. ಅದಕ್ಕಾಗಿ ತನುಜಾ ಪಟ್ಟ ಶ್ರಮ ಹೇಗಿತ್ತು. ಅಂತಿಮವಾಗಿ ಆಕೆ ವೈದ್ಯಕೀಯ ಸೀಟು ಪಡೆಯುವಲ್ಲಿಯವರೆಗೂ ಕಥೆ ಸಾಗುತ್ತದೆ. ಇದರ ನಡುವೆ, ತನುಜಾಳ ಬಾಲ್ಯ, ಆಕೆಯ ಪೋಷಕರ ಪ್ರೋತ್ಸಾಹ, ಶಾಲೆಯ ದಿನಗಳು ಇವೆಲ್ಲವೂ ತೆರೆಯಲ್ಲಿ ಹಾದು ಹೋಗುತ್ತವೆ. ತನುಜಾಳ ಕಥೆ ಸಿನಿಮಾವಾಗಲಿದೆ ಎಂದಾಗಲೇ ಚಿತ್ರದಲ್ಲಿ ತನುಜಾಳೇ
ನಟಿಸಬಹುದು ಎಂದು ಹಲವರು ಅಂದುಕೊಂಡಿದ್ದರು. ಆದರೆ ತನುಜಾ ಚಿತ್ರದಲ್ಲಿ ನಟಿಸುತ್ತಿಲ್ಲ. ಬೇರೆ ಪಾತ್ರಧಾರಿ ತನುಜಾಳ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈಗಾಗಲೇ ತನುಜಾಳನ್ನು ಮತ್ತು ಪೋಷಕರನ್ನು ಭೇಟಿ ಮಾಡಿರುವ ನಿರ್ದೇಶಕರು, ಕಥೆಗೆ ತಕ್ಕ ಪೂರಕ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಚಿತ್ರ ನಿರ್ಮಾಣಕ್ಕೆ ಅನುಮತಿಯನ್ನು ಪಡೆದಿದ್ದಾರೆ. ತನುಜಾಳ ಕನಸು ಸಾಕಾರಗೊಳ್ಳಲು ಹಲವರ ಶ್ರಮವಿದೆ. ಆ ಎಲ್ಲರ ಪಾತ್ರಗಳು ತೆರೆಯಲ್ಲಿ ತೆರೆದುಕೊಳ್ಳಲಿವೆ. ವಿಶ್ವೇಶ್ವರಭಟ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನಿರ್ದೇಶಕ ಹರೀಶ್ ಈಗಾಗಲೇ ವಿಶ್ವೇಶ್ವರ ಭಟ್ ಅವರನ್ನು ಭೇಟಿ ಮಾಡಿ ಚಿತ್ರದಲ್ಲಿ ನಟಿಸುವಂತೆ ಮನವಿ ಮಾಡಿದ್ದಾರೆ. ಇದರ
ಜತೆಗೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಸಿನಿಮಾದ ದೃಶ್ಯದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗು ತ್ತಿದೆ. ಜತೆಗೆ ಮತ್ತಿತರ ಪಾತ್ರಗಳ ಆಯ್ಕೆಯೂ ನಡೆಯುತ್ತಿದೆ.

ಹಿಂದಿಯಲ್ಲೂ ತನುಜಾಳ ಬಯೋಪಿಕ್: ತನುಜಾಳ ಯಶೋಗಾಥೆ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಹಿಂದಿ ಯಲ್ಲಿಯೂ  ಮೂಡಿಬರಲಿದೆ. ಈಗಾಗಲೇ ಚಿತ್ರಕಥೆ ಸಂಭಾಷಣೆ ಸಿದ್ದಪಡಿಸಿರುವ ನಿರ್ದೇಶಕ ಹರೀಶ್ ನಾಲ್ಕು ಭಾಷೆಗಳಲ್ಲೂ ಚಿತ್ರ ನಿರ್ದೇಶನಕ್ಕೆ ತಯಾರಿಸಿ ನಡೆಸಿದ್ದಾರೆ. ಹಿಂದಿಯಲ್ಲಿ ಸ್ಟಾರ್ ನಟರು ಅಭಿನಯಿಸುವ ಸಾಧ್ಯತೆಯೂ ಇದೆಯಂತೆ.

***

ತನುಜಾ ವೈದ್ಯೆಯಾಗಬೇಕು ಎಂಬ ಕನಸನ್ನು ಆಕೆಯ ಮನದಲ್ಲಿ ಬಿತ್ತಿದ್ದೆ ಆಕೆಯ ತಾಯಿ ಹಿರಿಯಮ್ಮ ಕೆರೆಗೌಡ್ರು. ಒಮ್ಮೆ ತನುಜಾ ಅಮ್ಮನ ಜತೆ ಆಸ್ಪತ್ರೆಗೆ ತೆರಳಿದ್ದಳಂತೆ, ಆಗ ಅವರ ಅಮ್ಮ ಡಾಕ್ಟರ್ ಅನ್ನು ತೋರಿಸಿ, ನೀನು ಅವರಂತೆ ವೈದ್ಯಳಾದರೆ ಎಷ್ಟು ಜನಕ್ಕೆ ಸಹಾಯಕವಾಗುತ್ತದೆ ಎಂದು ಹೇಳಿ, ವೈದ್ಯೆಯಾಗುವ ಮೊದಲ ಕನಸಿನ ಬೀಜ ಬಿತ್ತದ್ದರಂತೆ, ಆ ಬೀಜ ಇಂದು ಗಿಡವಾಗಿ ಚಿಗುರಿದೆ. ತನುಜಾ ಮುಂದೆ ಒಳ್ಳೆಯ ವೈದ್ಯೆಯಾಗುತ್ತಾಳೆ ಎಂಬ ನಂಬಿಕೆ ಇದೆ. ನಿಜವಾಗಿಯೂ ಇಂತಹ ತಾಯಿ ಎಲ್ಲರಿಗೂ ಸಿಕ್ಕರೆ, ಎಲ್ಲ ಮಕ್ಕಳು ತನುಜಾಳಂತೆ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ.
-ಹರೀಶ್ , ನಿರ್ದೇಶಕ