Monday, 25th November 2024

Viral News: ನಾಗ ಚೈತನ್ಯನ ಬಗ್ಗೆ ಮೌನ ಮುರಿದ ಸಮಂತಾ – ಮಾಜಿ ಪತಿ ಕೊಟ್ಟಿದ್ದ ಗಿಫ್ಟ್‌ಗಳ ಬಗ್ಗೆ ನಟಿ ಹೇಳಿದ್ದೇನು?

ಹೈದರಾಬಾದ್‌: ನಟ ನಾಗ ಚೈತನ್ಯ (Naga Chaitanya) ನಟಿ ಶೋಭಿತಾ ಧೂಳಿಪಾಲ (Sobhita Dhulipala) ಜೊತೆ ಎರಡನೇ ಮದುವೆಯ ಸಂಭ್ರಮದಲ್ಲಿರುವಾಗಲೇ, ಈ ನಟನ ಮೊದಲ ಪತ್ನಿ ಸಮಂತಾ ಋತು ಪ್ರಭು (Samantha Ruth Prabhu) ತನ್ನ ಹಳೆಯ ಗಂಡನ ಕುರಿತಾಗಿ ಸಂದರ್ಶನವೊಂದರಲ್ಲಿ ಆಡಿರುವ ಮಾತುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.

ಸಮಂತ ಪ್ರಭು, ಇತ್ತೀಚೆಗಷ್ಟೇ ಬಿಡುಗಡೆಗೊಂಡ ತನ್ನ ಸ್ಪೈ ಥ್ರಿಲ್ಲರ್ ಸಿರೀಸ್ ಸಿಟಾಡೆಲ್: ಹನಿ ಬನಿಯ ಯಶಸ್ಸಿನ ಸಂತೋಷದಲ್ಲಿ ನೀಡಿರುವ ಸಂದರ್ಶನವೊಂದರಲ್ಲಿ ತನ್ನ ಮಾಜಿ ಪತಿ ನಾಗ-ಚೈತನ್ಯ ಬಗ್ಗೆ ಕಮೆಂಟ್ ಮಾಡಿದ್ದಾರೆ.
ಅಮೆಝಾನ್ ಪ್ರೈಮ್ ವಿಡಿಯೋ ಚಿಟ್ ಚಾಟ್ ನಲ್ಲಿ ವರುಣ್ ಧವನ್ (Varun Dhawan) ಜೊತೆ ಮಾತನಾಡಿರುವ ಸಮಂತಾ ಪ್ರಭು ಈ ಕುತೂಹಲಕರ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಈ ಚಿಟ್ ಚಾಟ್ ನಲ್ಲಿ ಫನ್ ಗೇಮ್ಸ್ ಸಹ ಜೊತೆಯಾಗಿತ್ತು.

ಈ ಸಂದರ್ಶನದಲ್ಲಿ, ವರುಣ್ ಧವನ್ ಸಮಂತಾ ಅವರಲ್ಲಿ ಕೇಳಿರುವಂತೆ, ʼಸಂಪೂರ್ಣವಾಗಿ ನಿರುಪಯುಕ್ತವಾಗಿರುವುದಕ್ಕೆ ನೀವು ಬಹಳಷ್ಟು ಹಣ ಖರ್ಚು ಮಾಡಿರುವುದಿದ್ದರೆ, ಅದು ಯಾವುದಕ್ಕೆ?” ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಮಂತಾ. “ನನ್ನ ಹಳೆಯ ಪತಿಯ ದುಬಾರಿ ಉಡುಗೊರೆಗಳಿಗೆ” ಎಂದು ಹೇಳಿದ್ದಾರೆ. ಮತ್ತೆ ವರುಣ್ ಕೇಳುತ್ತಾರೆ, “ಎಷ್ಟಾಗಬಹುದು..?ʼ ಇದಕ್ಕೆ ಪ್ರತಿಕ್ರಿಯಿಸಿರುವ ಸಮಂತಾ “ಸಾಕಷ್ಟೇ ಆಗಿದೆ..” ಎಂದು ಉತ್ತರಿಸಿದ್ದಾರೆ.

ಸಮಂತಾ ಅವರ ಈ ಪ್ರತಿಕ್ರಿಯೆ ನಾಗಚೈತನ್ಯಾ ಅವರ ಎರಡನೇ ಮದುವೆಗೆ ಕೆಲವೇ ದಿನಗಳು ಬಾಕಿ ಇರುವಷ್ಟರಲ್ಲೇ ಬಂದಿರುವುದು ವಿಶೇಷವಾಗಿದೆ. ಸಮಂತಾ ಮತ್ತು ನಾಗಚೈತನ್ಯ 2017ರಲ್ಲಿ ಮದುವೆಯಾಗಿದ್ದರು. ಗೋವಾದಲ್ಲಿ ನಡೆದಿದ್ದ ಈ ಅದ್ದೂರಿ ವಿವಾಹ ಸಮಾರಂಭ 2 ದಿನಗಳ ಕಾಲ ನಡೆದಿತ್ತು. ಆದರೆ ಈ ಮದುವೆ ನಾಲ್ಕು ವರ್ಷಗಳ ಬಳಿಕ 2021ರಲ್ಲಿ ಮುರಿದುಬಿತ್ತು. ಸಮಂತಾ ಅವರು ಸಿಟಾಡೆಲ್: ಹನಿ ಬನಿ ನಿರ್ದೇಶಕ ರಾಜ್ ನಿಡಿಮೋರ್ ಜೊತೆ ಸಂಬಂಧವನ್ನು ಹೊಂದಿದ್ದರು ಎಂದು ಹೇಳಲಾಗಿತ್ತು.

ಈ ನಡುವೆ, ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ನಟ ನಾಗ ಚೈತನ್ಯ ಹಾಗೂ ಶೋಭಿತಾ ಅವರ ವಿವಾಹ ನಿಶ್ಚಿತಾರ್ಥ ನಡೆದಿತ್ತು. ನಾಗಾರ್ಜುನ ಅವರ ಮನೆಯಲ್ಲಿ ನಡೆದಿದ್ದ ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕಡೆಯ ಬಂಧು ಬಾಂಧವರು ಉಪಸ್ಥಿತರಿದ್ದರು. ಇವರಿಬ್ಬರ ವಿವಾಹ ಸಮಾರಂಭ ಇವರದ್ದೇ ಕುಟುಂಬದ ಒಡೆತನದಲ್ಲಿರುವ ಹೈದ್ರಾಬಾದ್ ನ ಅನ್ನಪೂರ್ಣ ಸಟ್ಟುಡಿಯೋಸ್ ನಲ್ಲಿ ಡಿ.8ರಂದು ತೆಲುಗು ಸಂಪ್ರದಾಯಕ್ಕನುಗುಣವಾಗಿ ನಡೆಯಲಿದೆ. ಶೋಭಿತಾ ಅವರ ಹೆತ್ತವರು ಮತ್ತು ಸಂಬಂಧಿಕರನ್ನು ಹೊರತುಪಡಿಸಿ, ಅಕ್ಕಿನೇನಿ ಮತ್ತು ದಗ್ಗುಬಾಟಿ ಕುಟುಂಬ ಈ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಲಿದೆ.

ತಮ್ಮ ನಿಶ್ಚಿತಾರ್ಥದ ಫೊಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶೋಭಿತಾ ದೂಳಿಪಾಲ ಅವರು ಅಲ್ಲಿ ಬರೆದುಕೊಂಡಿರುವಂತೆ, “ನಾವಿಬ್ಬರೂ ಹೇಗೆ ಪರಿಚಯವಾದೆವು? ನಮ್ಮ ತಂದೆ – ತಾಯಿಗಳು ನಿಮಗೆ ಏನಾಗಬೇಕಿತ್ತು? ಆದರೆ ಈ ಪ್ರೀತಿಯಲ್ಲಿ ನಮ್ಮ ಹೃದಯಗಳು ಕೆಂಪು ಭೂಮಿಯಂತಾಗಿವೆ ಮತ್ತು ಮಳೆಯನ್ನು ಸುರಿಸುತ್ತಿದೆ; ಬೇರ್ಪಡಿಸಲಾಗದ ರೀತಿಯಲ್ಲಿ ಒಂದಾಗಿವೆ – ಕುರುಂತೋಗಿಯಿಂದ, ಎ.ಕೆ. ರಾಮಾನುಜಮ್ ಅನುವಾದಿತ.

ಇದನ್ನೂ ಓದಿ: Tirupati Temple: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್‌! ಇನ್ಮುಂದೆ ದರ್ಶನ ಮತ್ತಷ್ಟು ಸುಗಮ- ವಿವಿಧ ಇಲಾಖೆಗಳಲ್ಲಿ ಡಿಜಿಟಲ್‌ ವ್ಯವಸ್ಥೆ ಜಾರಿ

ಒಟ್ಟಿನಲ್ಲಿ ನಟ ನಾಗಚೈತನ್ಯ ಮತ್ತು ನಟಿ ಶೋಭಿತಾ ಅವರು ಹೊಸ ಬಾಳಿಗೆ ಹಜ್ಜೆಯಿಡಲು ತೆರೆದ ಮನಸ್ಸಿನಿಂದ ಸಿದ್ಧವಾಗಿದ್ದರೆ ಇನ್ನೊಂದೆಡೆ ನಟಿ ಸಮಂತಾ ಅವರು ತಮ್ಮ ವೃತ್ತಿ ಬದುಕಿನ ಒಂದು ದೊಡ್ಡ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ