Thursday, 28th November 2024

ತೆಗೆದುಬಿಡಿ ನಿಮ್ಮ ಬಣ್ಣದ ಕನ್ನಡಕ

ಮಹಾದೇವ ಬಸರಕೋಡ

ಇತರರ ಒಂದು ಒಳ್ಳೆಯ ಗುಣವನ್ನು ಗುರುತಿಸಿ, ಅದಕ್ಕಾಗಿ ಅವರನ್ನು ಗೌರವಿಸಿ. ಆಗ ನಿಮ್ಮ ಬದುಕು ಹಸನಾಗುತ್ತದೆ, ಸಂತಸದಿಂದ ತುಂಬುತ್ತದೆ.

ಬದುಕಿನ ಹಾದಿಯ ಬಹಳಷ್ಟು ಸಂದರ್ಭಗಳಲ್ಲಿ ನಾವು ಮಾಡುತ್ತಿರುವುದೆಲ್ಲವೂ ಸರಿ. ಇತರರು ಅದನ್ನು ಸರಿಯಾಗಿ ಆರ್ಥೈಯಿಸಿಕೊಳ್ಳುತ್ತಿಲ್ಲ ಎಂದು ಭಾವಿಸುತ್ತೇವೆ. ಇದಕ್ಕಾಗಿ ದೂರುತ್ತೇವೆ. ಇತರರು ನಮ್ಮ ತಪ್ಪನ್ನೇನಾದರೂ ಎತ್ತಿ ತೋರಿಸಿದರೆ ಅವರೇ ಸರಿ ಇಲ್ಲ, ಅವರು ದೋಷಪೂರಿತ ಎಂದು ಅವರನ್ನೇ ತಪ್ಪುಗಾರರೆಂದು ತೋರಿಸಲು ಮತ್ತು ನಮ್ಮನ್ನು ನಾವು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತೇವೆ.

‘ನಮ್ಮ ತಪ್ಪುಗಳನ್ನು ಇನ್ನೊಬ್ಬರ ಕಣ್ಣುಗಳು ಮಾತ್ರ ನೋಡಲು ಸಾಧ್ಯ’ ಎಂಬ ಸ್ವಿಸ್ ಗಾದೆ ಸರಿಯಾಗಿಯೇ ಇದೆ. ಅದನ್ನು ಮರೆತು ಬೇಸರ ಪಟ್ಟು ಕೊಳ್ಳುತ್ತೇವೆ. ವೈರತ್ವ ಸಾಧಿಸಿಲು ಮುಂದಾಗುತ್ತೇವೆ. ನಮ್ಮ ಶ್ರಮ, ಸಮಯ ಮತ್ತು ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಂಡು, ಕೋಪಗೊಂಡು ಇನ್ನಷ್ಟು ಒತ್ತಡಕ್ಕೆ ಒಳಗಾಗುತ್ತ ಸಾಗುತ್ತೇವೆ.

ಇದರಿಂದ ನಮ್ಮ ತಪ್ಪುಗಳತ್ತ ಗಮನ ಹರಿಸಲು ಪ್ರಯತ್ನಿಸುವುದೇ ಇಲ್ಲ. ಇತರರಿಗೂ ಅವರದೇ ಆದ ವ್ಯಕ್ತಿತ್ವ, ನಿಲುವುಗಳು, ನಿರೀಕ್ಷೆಗಳು
ಇರುವುದನ್ನು ಮರೆಯುತ್ತೇವೆ. ಒಬ್ಬ ರೈತ ಒಂದು ಹಸುವನ್ನು ಸಾಕಿಕೊಂಡಿದ್ದ. ಅದು ಕೊಡುವ ಹಾಲನ್ನು ಮಾರಿ ತನ್ನ ದೈನಂದಿನ ಜೀವನವನ್ನು ನಡೆಸುತ್ತಿದ್ದ. ಅದಕ್ಕೆ ಯಾವಾಗಲೂ ಹಸಿರು ಹುಲ್ಲನ್ನು ತಿನ್ನಿಸುತ್ತಿದ್ದ. ಹಸಿರು ಹುಲ್ಲನ್ನು ತಿನ್ನುವ ರೂಢಿಸಿಕೊಂಡಿದ್ದ ಹಸು ಚೆನ್ನಾಗಿಯೇ ಹಾಲು ಕೊಡುತ್ತಿತ್ತು.

ಅದು ಇತರೆ ಯಾವುದೇ ಒಣ ಹುಲ್ಲನ್ನು ತಿನ್ನುತ್ತಿರಲಿಲ್ಲ. ಒಂದು ಬಾರಿ ಬರಗಾಲ ಉಂಟಾಯಿತು. ಎಲ್ಲಿಯೂ ಹಸಿರು ಹುಲ್ಲು ಸಿಗದಂತಾಯಿತು. ಅನಿವಾರ್ಯವಾಗಿ ರೈತ ಒಣ ಹುಲ್ಲನ್ನು ಹಸುವಿಗೆ ಹಾಕಬೇಕಾಯಿತು. ಆದರೆ ಅದು ಯಾವಾಗಲೂ ಹಸಿರು ಹುಲ್ಲು ತಿನ್ನುತ್ತಿದ್ದರಿಂದ ಒಣ ಹುಲ್ಲನ್ನು ತಿನ್ನಲು ನಿರಾಕರಿಸತೊಡಗಿತು. ಹಾಲು ಕೊಡುವುದನ್ನು ನಿಲ್ಲಿಸಿತು. ಹುಲ್ಲನ್ನು ತಿನ್ನದೆ ಸಾಯುವಂತಾಯಿತು.

ಇರುವುದೊಂದೇ ಹಸು. ಅದೇ ತನ್ನ ಜೀವನಕ್ಕೆ ಆಧಾರ. ಅದು ಹುಲ್ಲು ತಿನ್ನದೇ ಸತ್ತು ಹೋದರೆ ತನ್ನ ಬದುಕು ಮುಳುಗಿದಂತಾಗುತ್ತದೆ ಎಂದು ರೈತನಿಗೆ ಚಿಂತೆಯಾಯಿತು. ಇದೇ ಕೊರಗಿನಲ್ಲಿದ್ದಾಗ ಅವನ ಊರಿಗೆ ಸಂತರೊಬ್ಬರು ಬಂದರು. ಅವರು ಎಲ್ಲರ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಶಕ್ತಿ ಹೊಂದಿದ್ದಾರೆ ಎಂದು ಅರಿತ ರೈತ ಅವರ ಹತ್ತಿರ ಹೋಗಿ ತನ್ನ ಸಮಸ್ಯೆೆಯ್ಯನ್ನು ಹೇಳಿದ. ಸಂತರು ಇವನ ಸಮಸ್ಯೆಯನ್ನು ಕೇಳಿ ಒಂದು ಕ್ಷಣ ನಕ್ಕು, ‘ಅದಕ್ಕಾಗಿ ಚಿಂತಿಸುವ ಅಗತ್ಯವೇ ಇಲ್ಲ.

ಪೇಟೆಯಿಂದ ಹಸಿರು ಬಣ್ಣದ ಕನ್ನಡಕವೊಂದನ್ನು ತಂದು, ನಿನ್ನ ಹಸುವಿನ ಕಣ್ಣುಗಳಿಗೆ ಸಿಕ್ಕಿಸು. ನಿನ್ನ ಹಸು ಹುಲ್ಲು ತಿನ್ನುತ್ತದೆ’ ಎಂದು ಹೇಳಿ ಕಳುಹಿಸಿದರು. ಅದರಂತೆ ಅವನು ಹಸಿರು ಕನ್ನಡಕವನ್ನು ಹಸುವಿಗೆ ಹಾಕಿ ಒಣ ಹುಲ್ಲು ಹಾಕಿದ. ಅದು ಹಸಿರು ಹುಲ್ಲು ಎಂದು ಭಾವಿಸಿ ಒಣ ಹುಲ್ಲನ್ನು ತಿನ್ನತೊಡಗಿತು. ಮತ್ತೆ ಮೊದಲಿನಂತೆ ಹಾಲು ಕರೆಯತೊಡಗಿತು.

ನೋಡುವ ರೀತಿ ಬದಲಿಸಿಕೊಳ್ಳಿ ಹೀಗೆಯೇ ನಾವು ನಮ್ಮ ಆಂತರ್ಯದ ಕಣ್ಣುಗಳಿಗೆ ಮತ್ತೊಬ್ಬರ ತಪ್ಪುಗಳನ್ನೇ ಹುಡುಕುವ, ನಮ್ಮದೇ ನಿಲುವುಗಳು ಸರಿಯೆನ್ನುವ ಕನ್ನಡಕ ಹಾಕಿಕೊಂಡು ನೋಡಲು ಪ್ರಯತ್ನಿಸುವುದರಿಂದ ಅವರ ನಿಲವುಗಳು ಸರಿಯಾಗಿದ್ದರೂ ಅವುಗಳನ್ನು ಗುರುತಿಸಲು ಅಸಮರ್ಥರಾಗಿ ಬದುಕಿನಲ್ಲಿ ಎಡವುತ್ತೇವೆ. ಇನ್ನೊಬ್ಬರ ಪ್ರೀತಿ ಗಳಿಸುವ ಬದಲಾಗಿ ಅವರ ವೈರತ್ವವನ್ನು ಎದುರುಗೊಳ್ಳುತ್ತೇವೆ. ನಮ್ಮ ನಿಲುವುಗಳೇ ಸರಿ ಎಂಬ ಭ್ರಮೆಗೆ ಒಳಗಾಗುತ್ತೇವೆ. ತಪ್ಪು ಧೋರಣೆಗಳ ಕನ್ನಡಕದ ಮೂಲಕವೇ ನೋಡಲು ಪ್ರಯತ್ನಿಸಿ ವಾಸ್ತವಿಕತೆಯನ್ನು ಮರೆಯುತ್ತೇವೆ.

ಇದು ಬದುಕಿನ ಪ್ರಗತಿಗೆ ಮಾರಕವಾಗುತ್ತದೆ. ಪ್ರೀತಿ ಮತ್ತು ನೆಮ್ಮದಿ ಮತ್ತು ಸಂತೃಪ್ತ ಜೀವನದ ಅತ್ಯಂತ ಸರಳಸೂತ್ರವೆಂದರೆ ಇತರರ  ನಿಲುವು ಗಳನ್ನು ಇಷ್ಟಪಡುವುದಾಗಿದೆ. ಇತರರ ಒಳ್ಳೆಯ ಗುಣಗಳನ್ನು, ನಡತೆಗಳನ್ನು ಗೌರವಿಸುವುದು ನಮ್ಮ ಯಶಸ್ವಿ ಬದುಕಿನ ಮೂಲಮಂತ್ರ. ಜನರನ್ನು ಪ್ರೀತಿಸುವುದು, ಗೌರವಿಸುವುದು ನಮ್ಮ ಸಂತೋಷದ ಮತ್ತು ಉತ್ಸಾಹದ ಜೀವನದ ಮೂಲದ್ರವ್ಯ.

ಬಾಲ್ಡ್‌‌ವಿನ್ ಲೊಕೊಮೊಟಿವ್ ವರ್ಕ್ಸನ ಅವರ ಮಾತು ‘ಒಬ್ಬ ವ್ಯಕ್ತಿಗೆ, ಆತನ ಯಾವುದಾದರೂ ಸಾಮರ್ಥ್ಯವನ್ನು ಗುರುತಿಸಿ ನೀವು ಗೌರವ ಕೊಟ್ಟರೆ ಆ ವ್ಯಕ್ತಿ ಸಂತುಷ್ಟನಾಗುತ್ತಾನೆ ಮತ್ತು ನಿಮ್ಮ ಮಾತನ್ನು ಪಾಲಿಸುತ್ತಾನೆ’ ಎಂಬುದು ಗಮನೀಯ. ತೆರೆದ ಮನಸ್ಸಿನಿಂದ ಇತರರ ನಿಲುವುಗಳನ್ನು ಒಪ್ಪಿಕೊಂಡು, ಅವುಗಳನ್ನು ಸಮ್ಮತಿಸಿ ಗೌರವಿಸುವಲ್ಲಿ ನಾವು ಸಫಲರಾದರೆ ನಮ್ಮ ಬದುಕು ಸಂತಸದ ರಹದಾರಿಯಲ್ಲಿ ಮುನ್ನಡೆಯುತ್ತದೆ. ತನ್ನಂತೆ ಇತರರು ಎಂದು ಭಾವಿಸುವ ಗುಣ ನಮ್ಮ ವ್ಯಕ್ತಿತ್ವಕ್ಕೆ ಮೆರಗು ತಂದು ಕೊಡಬಲ್ಲದು.

ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ಕವಿ ಸರ್ವಜ್ಞ ನ ಮಾತಿನಂತೆ ನಾವು ನಮ್ಮ ನಡೆ-ನುಡಿಗಳಲ್ಲಿನ ಬದಲಾವಣೆಯಿಂದ ಬದುಕಿನಲ್ಲಿ ಕೈಲಾಸದ ಅನುಭೂತಿಯನ್ನು ಕಾಣಬಹುದಾಗಿದೆ. ಇತರರ ನಿಲುವುಗಳನ್ನು ಗೌರವ ಮತ್ತು ಆದರಗಳಿಂದ ಕಾವುದು ನಮ್ಮ ಮೊದಲ ಆದ್ಯತೆಯಾಗಬೇಕು.