Wednesday, 27th November 2024

ನಮಗೂ ಒಂದು ಡಿಜಿಟಲ್‌ ಕರೆನ್ಸಿ !

ವಸಂತ ಗ ಭಟ್

ಟೆಕ್ ಫ್ಯೂಚರ್‌

ಚೀನಾ ದೇಶವು ತನ್ನದೇ ಸ್ವಂತ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಿದ್ದು, ಅಲ್ಲಿನ ಕೆಲವು ಪ್ರಾಂತ್ಯಗಳಲ್ಲಿ ಜನರು ಅದರಲ್ಲಿ
ವ್ಯವಹರಿಸುವುದನ್ನು ಕಡ್ಡಾಯಗೊಳಿಸಿದೆ. ದೇಶದ ಹಿತದೃಷ್ಟಿಯಿಂದ ನಮ್ಮ ದೇಶವೂ ಸ್ವಂತ ಡಿಜಿಟಲ್ ಕರೆನ್ಸಿ ಹೊಂದು ವುದು ಉತ್ತಮವೆ? ಒಂದು ಅವಲೋಕನ.

ಜಗತ್ತಿನಲ್ಲಿ ಮೊಟ್ಟ ಮೊದಲ ಆರ್ಥಿಕತೆ ಎಂದರೆ ಅದು ವಿನಿಮಯ ಪದ್ಧತಿ. ರೈತರು ಬೆಳೆದ ಭತ್ತವನ್ನು ಇನ್ನೊಬ್ಬ ರೈತನಿಗೆ ನೀಡಿ ಆತ ಬೆಳೆದ ರಾಗಿಯನ್ನು ಪಡೆಯುವುದೇ ವಿನಿಮಯ ಪದ್ಧತಿ. ಮನುಷ್ಯರ ಅಗತ್ಯತೆಗಳು ಹೆಚ್ಚಾದಾಗ ಹುಟ್ಟಿಕೊಂಡಿದ್ದೇ ನಗದು ಹಣದ ವ್ಯವಸ್ಥೆ. ಮಾನವನ ಅತ್ಯುತ್ತಮ ಅನ್ವೇಷಣೆಗಳಲ್ಲಿ ನಗದು ಹಣ ಸಹ ಒಂದು. ಇಂದು ವಿಶ್ವದ ಆರ್ಥಿಕತೆ ಇಷ್ಟು ಸದೃಢವಾಗಿದೆಯೆಂದರೆ ಮಾನವ ಸೃಷ್ಟಿಸಿದ ಹಣ ಅದಕ್ಕೆ ಮುಖ್ಯ ಕಾರಣ.

ನಗದು ಹಣವನ್ನು ನಕಲು ಮಾಡಲು ಆರಂಭಿಸಿದ ನಂತರ ಅದನ್ನು ತಡೆಯಲು ರೂಪುಗೊಂಡದ್ದೇ ಡಿಜಿಟಲ್ ಹಣ. ಯಾರ ಕೈಗೂ ಸಿಗದೇ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆಗೊಳ್ಳುವ ಹಣವೇ ಡಿಜಿಟಲ್ ಹಣ. ಇತ್ತೀಚಿನವರೆಗೂ ಡಿಜಿಟಲ್ ಪೇಮೆಂಟ್ ಕ್ಷೇತ್ರದ 90 ಪ್ರತಿಶತಕ್ಕಿಂತಲೂ ಹೆಚ್ಚಿನ ಪಾಲನ್ನು ಚೀನಾದ ಖಾಸಗಿ ಸಂಸ್ಥೆಗಳಾದ ಅಲಿ ಪೇ ಮತ್ತು ವಿ ಚಾಟ್ ಪೇ ಸಂಸ್ಥೆಗಳು ಹೊಂದಿದ್ದವು.

ಇತ್ತೀಚೆಗೆ ಚೀನಾ ಸರಕಾರ ಹೊರತಂದ ಡಿಸಿಈಪಿ (ಡಿಜಿಟಲ್ ಕರೆನ್ಸೀ ಎಲೆಕ್ಟ್ರೋನಿಕ್ ಪೇಮೆಂಟ್) ಅದಾಗಲೇ ಹಲವು ಪ್ರಾಂತ್ಯ ಗಳಲ್ಲಿ ಈ ಖಾಸಗಿ ಆ್ಯಪ್ ಗಳನ್ನು ಹಿಂದಕ್ಕೆ ಹಾಕಿ ಮುನ್ನುಗುತ್ತಿದೆ! ಏಕೆ ಚೀನಾ  ಸರಕಾರ ತನ್ನದೇ ಆದ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಸೃಷ್ಟಿಸಿದೆ? ಭಾರತ ಇದರಿಂದ ಕಲಿಯಯಬೇಕಾದುದ್ದೇನು?

ಅಲಿ ಪೆ ಮತ್ತು ವಿ ಚಾಟ್ ಪೇ
2004 ರಲ್ಲಿ ಆರಂಭವಾದ ಅಲಿ ಪೇ ಮತ್ತು 2014 ರಲ್ಲಿ ಆರಂಭವಾದ ವಿ ಚಾಟ್ ಪೇ ಚೀನಾ ದೇಶದ ಜನರ ಹಣದ ಪರಿಕಲ್ಪನೆ ಯನ್ನೇ ಬದಲಾಯಿಸಿ ಬಿಟ್ಟವು.

ಚೀನಾದಲ್ಲಿ ಅಲಿ ಪೇ ಮತ್ತು ವಿ ಚಾಟ್ ಪೇ ಯನ್ನು ಅಲ್ಲಿಯ ಜನ ಬಳಸುತ್ತಾರೆ. ಅವು ಎಷ್ಟರ ಮಟ್ಟಿಗೆ ಪ್ರಾಮುಖ್ಯತೆ ಗಳಿಸಿದೆ ಯೆಂದರೆ ಎಷ್ಟೋ ವ್ಯಾಪಾರಿಗಳು ನಗದು ಹಣ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಪಡೆಯಲು ನಿರಾಕರಿಸುತ್ರ. ಇವುಗಳು ಕೇವಲ ಹಣದ ವರ್ಗಾವಣೆಗೆಡ್ ಮೀಸಲಾಗಿಲ್ಲ ಬದಲಾಗಿ ಸಾಲ ನೀಡುವುದು, ವಿಮಾ ಯೋಜನೆಗಳು, ಷೇರು ಮಾರು ಕಟ್ಟೆಯಲ್ಲಿ ಹೂಡಿಕೆ, ಸರಳವಾಗಿ ಹೇಳಬೇಕೆಂದರೆ ಎಲ್ಲ ಆರ್ಥಿಕ ವ್ಯವಹಾರಗಳಿಗೂ ಈ ಆ್ಯಪ್‌ಗಳನ್ನು ಬಳಸಬಹುದು.

ಅಲಿ ಪೆ ಚೀನಾ ದೇಶದ ದೈತ್ಯ ಇ-ಕಾಮರ್ಸ್ ಸಂಸ್ಥೆ ಅಲಿಬಾಬಾ ಸಂಸ್ಥೆಯ ಅಂಗ ಸಂಸ್ಥೆಯಾದ ಕಾರಣ ಅಲಿಬಾಬಾ ಬಳಕೆ ದಾರರ ಸಾಕಷ್ಟು ಮಾಹಿತಿಯನ್ನು ಅಲಿ ಪೆ ಆ್ಯಪ್ ಮೂಲಕ ಪಡೆದುಕೊಳ್ಳುತ್ತಿತ್ತು. ಉದಾಹರಣೆಗೆ ಅಲಿಬಾಬಾ ಆ್ಯಪ್ ನಲ್ಲಿ ಯಾವುದೇ ವಸ್ತುಗಳನ್ನು ಖರೀದಿ ಮಾಡಲು ಜನ ಅಲಿ ಪೇ ಆ್ಯಪ್ ಬಳಕೆಮಾಡುವುದರಿಂದ ಯಾವ ವ್ಯಕ್ತಿ ಯಾವ ಉತ್ಪನ್ನ ವನ್ನು ಖರೀದಿ ಮಾಡುತ್ತಿದ್ದಾನೆ? ಅದಕ್ಕೆ ಎಷ್ಟು ಹಣ ಖರ್ಚು ಮಾಡುತ್ತಿದ್ದಾನೆ? ಬಳಕೆದಾರ ಈ ವರ್ಷ ಜಿಮ್ ಸದಸ್ಯತ್ವವನ್ನು ಪಡೆದುಕೊಂಡರೆ ಆತನ ವಿಮಾ ಯೋಜನೆಯ ಹಣವನ್ನು ಕಡಿತಗೊಳಿಸಿ ಆತನನ್ನು ವಿಮೆ ತೆಗೆದುಕೊಳ್ಳುವಂತೆ ಮಾಡುವುದು ಅಥವಾ ತಿಂಗಳ ವಿದ್ಯುತ್ ಮತ್ತು ನೀರಿನ ಹಣ ಪಾವತಿ ಮಾಡದಿದ್ದರೆ ಹೆಚ್ಚಿನ ಬಡ್ಡಿಗೆ ಆತನಿಗೆ ಸಾಲ ನೀಡಿ ಲಾಭಗಳಿಸುವುದು ಇತ್ಯಾದಿ.

ಚೀನಾ ಸರಕಾರದ ಸಮಸ್ಯೆಗಳೇನು? 
ತನ್ನದೇ ದೇಶದ ಖಾಸಗಿ ಉದ್ದಿಮೆಗಳಾದ ಅಲಿ ಪೇ ಮತ್ತು ವಿ ಚಾಟ್ ಪೇ ಇಷ್ಟೊಂದು ಪ್ರಾಮುಖ್ಯತೆ ಗಳಿಸುವುದರಿಂದ ಚೀನಾ ಸರಕಾರ ಖುಷಿಯಾಗುವ ಬದಲು ಸಮಸ್ಯೆಗೆ ಸಿಲುಕಲು ಹಲವು ಕಾರಣಗಳಿವೆ. ಖಾಸಗಿ ಸಂಸ್ಥೆಗಳು ಈ ರೀತಿ ಬಳಕೆದಾರನ ಸಂಪೂರ್ಣ ಮಾಹಿತಿಯನ್ನು ಪಡೆದು ಆತನ ಎಲ್ಲ ಆವಶ್ಯಕತೆಗಳನ್ನು ಆ್ಯಪ್ ಮೂಲಕವೇ ಒದಗಿಸಿಬಿಟ್ಟರೆ ಭವಿಷ್ಯದಲ್ಲಿ ಜನ ಸರಕಾರದ ಅವಶ್ಯಕತೆಯನ್ನು ಮರೆಯಬಹುದು. ಜತೆಗೆ ಚೀನಾದಲ್ಲಿ ಬಿಟ್ ಕಾಯಿನ್ ಹಾವಳಿ ಕೂಡ ಹೆಚ್ಚು. ಬಿಟ್ ಕೋಯಿನ್ ಕೂಡ ಭವಿಷ್ಯದಲ್ಲಿ ಚೀನಾ ಆರ್ಥಿಕತೆಯನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆಯುವ ಸಾಧ್ಯತೆಯಿದೆ.

ಫೇಸ್‌ಬುಕ್ ಆರಂಭಿಸಿದ ಲಿಬ್ರ ಕರೆನ್ಸಿ ಜಗತ್ತಿನ ಎಲ್ಲ ದೇಶಗಳಲ್ಲೂ ಬಳಸಬಹುದಾದ ಹಣವಾಗಿದೆ. ಪರಿಸ್ಥಿತಿ ಹೀಗೆ  ಮುಂದು ವರಿದರೆ ಮುಂದೆ ಈ ರೀತಿಯ ಖಾಸಗಿ ಆ್ಯಪ್‌ಗಳು ಚೀನಾ ದೇಶದ ಸರಕಾರಕ್ಕೆ ಸೆಡ್ಡು ಹೊಡೆಯುವ ಅವಕಾಶವಿದೆ. ಇವೆಲ್ಲವನ್ನೂ ಅರಿತ ಚೀನಾ ಸರಕಾರ ತನ್ನದೇ ಆದ ಡಿಸಿಈಪಿ ಎನ್ನುವ ಡಿಜಿಟಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಡಿಸಿಈಪಿ ಚೀನಾರದ ನಗದು ಹಣಕ್ಕೆ ಪರ್ಯಾಯವಾಗಲಿದೆ. ಯಾವೆಲ್ಲ ಅಂಗಡಿಗಳಲ್ಲಿ ನಗದು ಹಣವನ್ನು ತೆಗೆದುಕೊಳ್ಳುತ್ತಾರೋ ಅಲ್ಲೆಲ್ಲ
ಡಿಸಿಈಪಿ ಆ್ಯಪ್ ಮೂಲಕ ನೀಡುವ ಹಣವನ್ನು ಪಡೆಯುವುದು ಕಡ್ಡಾಯವಾಗಲಿದೆ.

ಡಿಸಿಈಪಿ ಆ್ಯಪ್ ನಲ್ಲಿರುವ ಹಣದ ಮೌಲ್ಯ ಮತ್ತು ಚೀನಾ ದೇಶದ ನಗದು ಹಣದ ಮೌಲ್ಯ ಎರಡು ಸಹ ಒಂದೇ. ಮತ್ತು ಈ ಎರಡನ್ನೂ ಚೀನಾ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಚೀನಾವೇ ಬಿಡುಗಡೆಮಾಡುತ್ತದೆ. ಈ ಆ್ಯಪ್ ಅಂತರ್ಜಾಲ ಸಂಪರ್ಕ ಇಲ್ಲದಿದ್ದರೂ ಕಾರ್ಯ ನಿರ್ವಹಿಸುವ ಸಾಮರ್ಥ್ಯನ್ನು ಹೊಂದಿದ್ದು ಇದನ್ನು ಚೀನಾದ ಹಳ್ಳಿಗಳಲ್ಲೂ ಬಳಸಬಹುದಾಗಿದೆ.

ಸಧ್ಯ ಆ್ಯಪ್ ಚೀನಾ ದೇಶದ ಚೆಂಗ್ ಡು, ಕ್ಷೀಯೋಂಗ್ ಆನ್, ಸುಜ್ ಹೂ, ಶೇನ್ ಜೇನ್ ನಂತಹ ಕೆಲವು ಪ್ರಾಂತ್ಯಗಳಲ್ಲಿ ಲಾಟರಿ ಮೂಲಕ ಆಯ್ಕೆಯಾದ ಕೆಲವು ಬಳಕೆದಾರು ಮತ್ತು ವ್ಯಾಪಾರಿಗಳಿಗೆ ನೀಡಲಾಗಿದೆ. ಚೀನಾದ ಅತಿ ದೊಡ್ಡ ಕ್ಯಾಬ್ ಬುಕಿಂಗ್ ಆ್ಯಪ್ ದೀದೀ, ಆಹಾರ ಆರ್ಡರ್ ಮಾಡಲು ಬಳಕೆಯಾಗುವ ಮಿಟ್ವಾನ್ ಆ್ಯಪ್ ಸಹ ಡಿಸಿಈಪಿ ಮೂಲಕ ಹಣ್ನ ಪಡೆಯುತ್ತಿವೆ.

ಚೀನಾ ಸರಕಾರದ ಈ ನಡೆಯನ್ನು ಪ್ರಶ್ನಿಸಿದ್ದ ಆಲಿಬಾಬಾ ಸಂಸ್ಥೆಯ ಸಂಸ್ಥಾಪಕ ಜಾಕ್ ಮಾ ಎರಡು ತಿಂಗಳು ಅಜ್ಞಾತವಾಗ ಬೇಕಾಯಿತು! ಈ ರೀತಿ ಆ್ಯಪ್ ಅನ್ನು ಚೀನಾ ಮಾತ್ರವಲ್ಲ, ಬಹಾಮಾಸ್ ಮತ್ತು ಕಾಂಬೋಡಿಯ ದೇಶಗಳು ಹೊರತಂದಿವೆ.
ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಹೊಂದಿರುವ ಈ ಆ್ಯಪ್‌ಗಳು ಚೀನಾದ ಡಿಸಿಈಪಿ ಗಿಂತಲೂ ಸುರಕ್ಷಿತ.

ಭಾರತ ಕೂಡ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುವುದು ಅತ್ಯಂತ ಅವಶ್ಯಕ. ಅಮೆಜಾನ್, ಗೂಗಲ್ ಪೇ ರೀತಿಯ ಬಹು ರಾಷ್ಟ್ರೀಯ ಸಂಸ್ಥೆಗಳು ಭಾರತದ ಡಿಜಿಟಲ್ ಪೇಮೆಂಟ್ ಕ್ಷೇತ್ರವನ್ನು ಆವರಿಸಿಕೊಳ್ಳುವುದು, ಭವಿಷ್ಯದ ಆರ್ಥಿಕತೆಯ ದೃಷ್ಟಿ ಯಿಂದ ದೇಶಕ್ಕೆ ಅಷ್ಟೊಂದು ಸುರಕ್ಷಿತವಲ್ಲ. ಹಾಗಾಗಿ ಭಾರತ ಸರಕಾರವು ಸಹ ಒಂದು ಡಿಜಿಟಲ್ ಆ್ಯಪ್ ಅನ್ನು ರೂಪಿಸಿ, ಎಲ್ಲರೂ ಅದೇ ಆ್ಯಪ್‌ಅನ್ನು ಬಳಸುವಂತೆ ನೋಡಿಕೊಳ್ಳುವುದರಿಂದ ಸ್ವಾವಲಂಬನೆ ದೊರೆತು, ದೇಶದ ಆರ್ಥಿಕತೆಯನ್ನು ಇನ್ನಷ್ಟು ದೃಢಪಡಿಸಲು ಸಾಧ್ಯ.