Wednesday, 27th November 2024

ಮದುವೆಯಲ್ಲಿ ಮುಖಗವಸು

ಗೌರಿ ಚಂದ್ರಕೇಸರಿ

ಮದುವೆಗೆ ಹೋಗಿದ್ದೇನೋ ಆಯಿತು. ಸೀರೆಯ ಬಣ್ಣಕ್ಕೆ ಸರಿ ಎನಿಸುವ ಮ್ಯಾಚಿಂಗ್ ಮುಖಗವಸು ಧರಿಸಿದ್ದೂ ಆಯಿತು. ಆದರೆ, ಮದುವೆಗೆ ಬಂದ ಬಂಧುಗಳ ನಮ್ಮ ಗುರುತು ಹಿಡಿಯಲೇ ಇಲ್ಲವಲ್ಲ! ಛೆ!

ವೈರಸ್ ಕುರಿತಾದ ಭಯವನ್ನು ಕೊಡವಿಕೊಂಡು ಎಲ್ಲವೂ ಮತ್ತೆ ಯಥಾ ಸ್ಥಿತಿಗೆ ಬರುತ್ತಿದೆ. ಆದರೂ ಎಲ್ಲರಲ್ಲೂ ಒಂದು
ಅಳುಕು ಇದ್ದೇ ಇದೆ. ಜನ ಜಂಗುಳಿಗಳಲ್ಲಿ ಮೊದಲಿನಂತೆ ಮೈಮರೆತು ಸಂಭ್ರಮ ಪಡಲಾಗುತ್ತಿಲ್ಲ. ಕೆಲವರಿಗೆ ಇಲ್ಲಿಯವರೆಗೂ ಅಟಕಾಯಿಸಿಕೊಳ್ಳಲಾರದ ವೈರಸ್ ಹೊಂಚು ಹಾಕಿ ಕುಳಿತು, ಇದೇ ಸರಿಯಾದ ಸಮಯ ಎಂದು ಸವಾರಿ ಮಾಡಿ ಬಿಟ್ಟರೆ ಎಂಬ ಭಯ ಇದ್ದೇ ಇದೆ. ಸುತ್ತ ಮುತ್ತಲಿದ್ದವರು ಯಾರಾದರೂ ಅಕಸ್ಮಾತ್ತಾಗಿ ಕೆಮ್ಮಿದರೆ, ಸೀನಿದರೆ ಭಯ ಭೀತರಾಗಿ ಆ
ಜಾಗವನ್ನು ಬಿಟ್ಟು ಮತ್ತೊಂದು ಜಾಗಕ್ಕೆ ಸ್ಥಳಾಂತಗೊಳ್ಳುತ್ತೇವೆ.

ಒಟ್ಟಿನಲ್ಲಿ ಸದಾ ಕೋವಿಡ್ ವೈರಸ್ ಧ್ಯಾನದಲ್ಲೇ ಇರಬೇಕಾದ ಸ್ಥಿತಿ ಬಂದೊದಗಿದೆ. ಈ ಹಿಂದೆ ಇಪ್ಪತ್ತರಿಂದ ಐವತ್ತು ಜನರಿಗೆ ಮಾತ್ರ ಅವಕಾಶವಿದ್ದ ಮದುವೆ ಮನೆಗಳು, ಛತ್ರಗಳು ಮತ್ತೆ ಕಿಕ್ಕಿರಿಯುತ್ತಿವೆ. ಇತ್ತೀಚೆಗೆ ಹತ್ತಿರದ ಬಂಧುಗಳೊಬ್ಬರ ಮದುವೆ ಯೊಂದಕ್ಕೆ ಹೋಗಲೇಬೇಕಾಯಿತು. ರೇಷ್ಮೆ ಸೀರೆಯುಟ್ಟು, ಕನ್ನಡಿಯ ಮುಂದೆ ನಿಂತು ಅಡಿಯಿಂದ ಮುಡಿಯವರೆಗೆ ಅಲಂಕರಿಸಿಕೊಂಡು ಹೆಮ್ಮೆ ಪಟ್ಟುಕೊಂಡೆ. ಸೀರೆಯ ಬಣ್ಣಕ್ಕೆ ಸೂಕ್ತ ಎನಿಸುವ ಬಣ್ಣದ ಮುಖಗವಸನ್ನೂ ಆಯ್ದುಕೊಂಡೆ. ಆದರೆ ಅರ್ಧ ಮುಖಾರವಿಂದವನ್ನು ಮರೆಮಾಚುವಂತೆ ಮಾಸ್ಕ್‌ ಧರಿಸಿ ಮದುವೆ ಮನೆಗೆ ಹೋಗುವುದೆಂದರೆ ಹೆಣ್ಣು ಮಕ್ಕಳಿಗೆ ಹೇಳಲಾರದ ವೇದನೆಯಾಗುತ್ತದೆ.

ಹೊರಗೆ ಹೊರಟಾಗಲೊಮ್ಮೆ ಮಾಸ್ಕ್‌ ಧರಿಸುತ್ತ ಕೋವಿಡ್ ಶಪಿಸದಿರುವ ಹೆಣ್ಣು ಮಕ್ಕಳಿಲ್ಲ. ಮದುವೆಗೆ ಹೋದಾಗ ಛತ್ರದಲ್ಲಿನ ಕುರ್ಚಿಗಳ ಮೇಲೆ ಕುಳಿತುಕೊಳ್ಳಲೂ ಭಯ. ಯಾರು ಆ ಕುರ್ಚಿಯ ಮೇಲೆ ಕುಳಿತು ವೈರಸ್ ಸೋಂಕನ್ನು ಪ್ರತಿಷ್ಠಾಪಿಸಿ ಹೋಗಿದ್ದಾರೋ ಎಂಬ ದಿಗಿಲು.

ಹಾಗಂತ ನಿಂತುಕೊಂಡೇ ಇರಲೂ ಸಾಧ್ಯವಿಲ್ಲ. ಸೀಟಿನ ತುದಿಗೆ ಕುಳಿತು ಕೈಗಳೆರಡೂ ಎಲ್ಲಿಯೂ ತಾಗದಂತೆ ಎಚ್ಚರ ವಹಿಸುತ್ತೇವೆ. ಅಪ್ಪಿ ತಪ್ಪಿಯೂ ಯಾರ ಕೈಗಳನ್ನೂ ಕುಲುಕುವುದಿಲ್ಲ. ಗಳಿಗೆಗೊಮ್ಮೆ ಸ್ಯಾನಿಟೈಸರ್ ಹಾಕಿ ಉಜ್ಜಿಕೊಂಡು ಹಸ್ತಗಳ ರೇಖೆಗಳೂ ಕಾಣದಂತಾಗುತ್ತಿವೆ. ಹೋದಲ್ಲಿ ಬಂದಲ್ಲಿ ಎಲ್ಲಿಯೂ ನೀರನ್ನು ಕುಡಿಯದೇ ಮನೆಯಿಂದ ತೆಗೆದುಕೊಂಡು
ಹೋದ ನೀರನ್ನೇ ಬಾಯಾರಿದಾಗ ತೀರ್ಥದಂತೆ ಅಷ್ಟಷ್ಟೇ ಬಾಯಿಗೆ ಹುಯ್ದುಕೊಳ್ಳುತ್ತೇವೆ.

ಮದುವೆ ಮುಗಿಸಿ ಬಂದ ಒಂದೆರಡು ದಿನಗಳ ನಂತರ ಸಂಬಂಧಿಯೊಬ್ಬರು ಫೋನಾಯಿಸಿ ‘ಯಾಕೆ ಮದುವೆಗೆ ಬರಲೇ ಇಲ್ಲವಲ್ಲ’ ಎಂದಾಗ ನಾನು ಅವಾಕ್ಕಾಗಿದ್ದೆ. ‘ಅಲ್ಲಾ ಮದುವೆಗೆ ಬರದವರು ನೀವು. ಛತ್ರದ ತುಂಬ ಕಣ್ಣಾಡಿಸಿದರೂ ನೀವು ಕಾಣಲೇ ಇಲ್ಲ’
ಎಂದಾಗ ಈ ಬಾರಿ ಅವಾಕ್ಕಾಗಿದ್ದು ಅವರು. ನಡೆದದ್ದೇ ನೆಂದರೆ ಇಬ್ಬರೂ ಮದುವೆಗೆ ಹೋಗಿದ್ದರೂ ನಾವು ಧರಿಸಿದ್ದ ಮಾಸ್ಕಿನ ಮರೆಯಲ್ಲಿ ಅವರನ್ನು ನಾನು ಗುರುತಿಸಿರಲಿಲ್ಲ, ನನ್ನನ್ನು ಅವರು ಗುರುತಿಸಿರಲಿಲ್ಲ.

ಈ ದುಸ್ಥಿತಿಗೆ ಕಾರಣವಾದ ಕೋವಿಡ್ ವೈರಸ್‌ನ್ನು, ಅದರ ತವರು ಮನೆಯವರನ್ನೂ ಛೀಮಾರಿ ಹಾಕಿ ಕೊನೆಗೊಂದಿಷ್ಟು ಮಂಗಳಾರತಿಯನ್ನು ಮಾಡಿ ಮಾತು ಮುಗಿಸಿದ್ದೆವು. ನಿನ್ನೆ ನಮ್ಮ ತವರು ಮನೆಯ ಕಡೆಯ ಸಂಬಂಧಿಯೊಬ್ಬರು ಫೋನಾಯಿಸಿ ಅವರ ಮಗನ ಮದುವೆಗೆ ಆಮಂತ್ರಿಸುತ್ತ, ‘ಏನೋಮ್ಮ, ನೀವು ದೊಡ್ಡವರಾಗಿ ಬಿಟ್ಟಿರಿ. ನಮ್ಮನ್ನು ಕಣ್ಣೆತ್ತಿಯೂ ನೋಡುವುದಿಲ್ಲ.
ಚಿಕ್ಕವರಿದ್ದಾಗ ನಿಮ್ಮನ್ನು ಎತ್ತಿ ಆಡಿಸಿದ್ದನ್ನು ಮರೆತು ಬಿಟ್ಟಿರಿ’ ಎಂದು ಗೋಳಾಡತೊಡಗಿದರು. ಅದಕ್ಕೆ ನಾನು ‘ಅಯ್ಯೋ ಚಿಕ್ಕಮ್ಮ ಹಾಗೇಕೆನ್ನುತ್ತೀರಿ? ನಿಮ್ಮನ್ನು ಮರೆಯಲು ಸಾಧ್ಯವೆ?’ ಎಂದಾಗ, ‘ಅಲ್ಲಮ್ಮ ನಿನ್ನ ಹಿಂದಿನ ಸಾಲಿನಲ್ಲಿರುವ ಕುರ್ಚಿಯಲ್ಲೇ ಕುಳಿತಿದ್ದೆ.

ಹೇಗಿದ್ದೀಯ ಚಿಕ್ಕಮ್ಮ ಎನ್ನಲಿಲ್ಲ’ ಎಂದು ಅವರು ಅಂದಾಗಲೇ ಗೊತ್ತಾಗಿದ್ದು ಅವರೂ ಕೂಡ ನಾನು ಹೋಗಿದ್ದ ಮದುವೆಗೆ ಬಂದಿದ್ದರು ಎಂದು. ಈ ಮುಖಗವಸಿನ ಅವಾಂತರದಿಂದ ನಾನು ಅವರನ್ನು ಗುರುತಿಸಿರಲಿಲ್ಲ. ಅವರನ್ನು ಸಮಾಧಾನಪಡಿಸುವು
ದರಲ್ಲಿ ನನ್ನ ಬುದ್ಧಿ ಎಲ್ಲ ಖರ್ಚಾಗಿತ್ತು. ಹೇಳುತ್ತಾ ಹೋದರೆ ಇಂತಹ ಅನುಭವಗಳಿಗೇನೂ ಬರವಿಲ್ಲ. ಅವಸರಲ್ಲಿದ್ದಾಗ ಆಗಂತುಕರು ಭೇಟಿಯಾಗುವುದು, ಗಂಟೆಗಟ್ಟಲೆ ಹೊಟ್ಟು ಕುಟ್ಟುವವರ ಕೈಯ್ಯಲ್ಲಿ ಸಿಕ್ಕಿ ಹಾಕಿಕೊಳ್ಳುವುದನ್ನು ಈ ಮಾಸ್ಕ್ ಎಂಬ ಅಂಗೈ ಅಗಲದ ಬಟ್ಟೆ ತಪ್ಪಿಸಿದೆ.

ಮಾಸ್ಕ್‌‌ನ ಹಿಂದೆ ಅಡಗಿರುವ ಮುಖವನ್ನು ಥಟ್ ಎಂದು ಗುರುತಿಸಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಈ ಕೋವಿಡ್
ತಂದಿಟ್ಟಿದೆ. ಈ ಕೊರೊನಾ ದೆಸೆಯಿಂದ ಇನ್ನೂ ಏನೇನು ನೋಡಬೇಕಾಗಿದೆಯೋ ಈ ಕಣ್ಗಳಿಂದ!