ನಾಗೇಶ್ ಜೆ. ನಾಯಕ ಉಡಿಕೇರಿ
ಇಂದು ನಮ್ಮ ಸುತ್ತ-ಮುತ್ತಲೂ ಮಾನವೀಯ ಅನುಕಂಪವುಳ್ಳ ಮನುಷ್ಯರನ್ನು ಕಾಣುವುದು ತುಂಬಾ ವಿರಳವಾಗುತ್ತಿದೆ.
ಅದರಲ್ಲೂ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಕುಸಿತ ಕಾಣುತ್ತಿರುವುದು ಆತಂಕಕಾರಿ ಸಂಗತಿ. ಯಾವ ದೇಶ ಸಂಸ್ಕೃತಿ, ಪರಂಪರೆ, ಆದರ್ಶಗಳಿಂದ ಜಗತ್ತಿಗೇ ಮಾದರಿಯಾಗಿತ್ತೋ, ಅನುಕರಣೆಗೆ ಪಾತ್ರವಾಗಿತ್ತೋ ಅಂತಹ ದೇಶ ಇಂದು ಪಾಶ್ಚಿಮಾತ್ಯ ಪ್ರಭಾವಕ್ಕೆ ಸಿಲುಕಿ ತನ್ನತನವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ.
ದಯೆ, ಪ್ರೀತಿ, ಅನುಕಂಪ, ತ್ಯಾಗ, ನಿಸ್ವಾರ್ಥ, ಕರುಣೆ, ವಾತ್ಸಲ್ಯ ಮುಂತಾದ ಮಾನವೀಯ ಗುಣಗಳು ಗೌಣವಾಗಿ, ಮನುಷ್ಯನಲ್ಲಿ ಪೈಶಾಚಿಕ, ಸಮಾಜ ವಿರೋಧಿ, ನಿರ್ದಯೆ, ಸ್ವಾರ್ಥ, ಸಂಕುಚಿತ ಮನೋಭಾವಗಳು ತಲೆಯೆತ್ತಿ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿವೆ. ಬೆಳೆಯುತ್ತಿರುವ ಯುವಪೀಳಿಗೆಯನ್ನು ಗಮನಿಸಿದರೆ, ಆತಂಕದ ಅಲೆಯೊಂದು ಮೂಡಿ ಯೋಚಿಸುವಂತೆ ಮಾಡುತ್ತದೆ.
ವಿದ್ಯಾರ್ಥಿಗಳಲ್ಲಿ ಓದಿನ ಶೃದ್ಧೆ ಕಡಿಮೆಯಾಗುತ್ತಿದೆ. ಗುರು-ಹಿರಿಯರಿಗೆ ನೀಡಬೇಕಾದ ಮರ್ಯಾದೆ, ವಿಧೇಯತೆ ಕಡಿಮೆಯಾಗಿದೆ. ಹೆತ್ತವರನ್ನು ನೋಯಿಸುವ, ಅವರ ದುಡಿಮೆಯ ದುಡ್ಡಿನಲ್ಲಿ ಮಜಾ ಉಡಾಯಿಸುವ, ಕಷ್ಟದ ಅರಿವೇ ಇಲ್ಲದಿರುವ ಯುವಪೀಳಿಗೆಯೊಂದು ದಾಂಗುಡಿಯಿಡುತ್ತಿದೆ. ಹೆಣ್ಣುಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವ, ಭೋಗದ ವಸ್ತುವಂತೆ ಬಳಸುವ ಕೆಡುಕರ ಸಂತತಿ ಪಟ್ಟು ಹೆಚ್ಚುತ್ತಿದೆ. ಅನೀತಿ, ಅಕ್ರಮ ಕೆಲಸಗಳನ್ನು ನಿರ್ಭೀತಿಯಿಂದ ಕೈಗೊಂಡು, ಮುಂದಿನ ಪರಿಣಾಮದ ಕುರಿತು ಕಿಂಚಿತ್ತೂ ಯೋಚಿಸದ ಅಪರಾಧಿಗಳು ತುಂಬಿ ಹೋಗುತ್ತಿದ್ದಾರೆ.
ದಿನಪತ್ರಿಕೆಗಳ ಪುಟ ತಿರುವಿದರೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ, ಕಳ್ಳತನ, ದರೋಡೆ, ರೌಡಿಸಂ ಇಂತಹವೇ ಸುದ್ದಿಗಳು ರಾರಾಜಿಸುತ್ತವೆ. ಏನಾಗುತ್ತಿದೆ ಯುವಪೀಳಿಗೆಗೆ? ಎತ್ತ ಸಾಗುತ್ತಿದೆ ಸುಶಿಕ್ಷಿತ, ಸುಸಂಸ್ಕೃತ, ಮಾದರಿ ಭಾರತದ ಪರಂಪರೆ? ಹೆತ್ತವರನ್ನು ಹೆಗಲ ಮೇಲೆ ಹೊತ್ತು ತೀರ್ಥಕ್ಷೇತ್ರದ ದರ್ಶನ ಮಾಡಿಸಿದ ಶ್ರವಣಕುಮಾರನ ಕಥೆ ಯುವಪೀಳಿಗೆಗೆ
ತಂದೆ-ತಾಯಿಯರ ಸೇವೆ ಮಾಡುವಂತೆ, ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವಂತೆ ಮಾಡುತ್ತಿಲ್ಲ ಏಕೆ? ಸತ್ಯವಾಕ್ಯ
ಪರಿಪಾಲನೆಗಾಗಿ ರಾಜ್ಯವೈಭೋಗಗಳನ್ನು ತೊರೆದು, ಹೆಂಡತಿ ಮಕ್ಕಳನ್ನು ಮಾರಿ ಸುಡುಗಾಡು ಕಾಯ್ದ ಹರಿಶ್ಚಂದ್ರನ ಗಾಥೆ ಯುವಕರನ್ನು ಸತ್ಯವಂತರನ್ನಾಗಿಸಲು ವಿಫಲವಾಗುತ್ತಿರುವುದೇಕೆ?
ಹೆಣ್ಣು, ಹೊನ್ನು, ಮಣ್ಣಿಗಾಗಿ ನಡೆದ ರಾಮಾಯಣ, ಮಹಾಭಾರತಗಳು ಕ್ಷಣಿಕ ಸುಖದ ಬೆನ್ನು ಹತ್ತಿ ಹಾಳಾಗುತ್ತಿರುವ ಸಮಾಜದ ಮಂದಿಯ ಕಣ್ಣು ತೆರೆಸುತ್ತಿಲ್ಲವೇಕೆ? ಬುದ್ಧ ದುಃಖದ ಮೂಲವನ್ನು ಹೇಳಿ ಹೋದರೂ, ಮಹಾವೀರ ಅಹಿಂಸೆಯ ಮಹತ್ವವನ್ನು ಸಾರಿ ಹೋದರೂ, ಬಸವಣ್ಣ ಸಮಾನತೆ, ಕಾಯಕ ಶೃದ್ಧೆ ಅರುಹಿದರೂ ಅವುಗಳ ಮಹತ್ವವನ್ನು ಅರಿತುಕೊಳ್ಳಲು ಇಂದಿನ ಜನಾಂಗ ಸೋಲುತ್ತಿರುವುದೇಕೆ? ನಮ್ಮ ನಮ್ಮ ಆಂತರ್ಯವನ್ನು ಮಂಥನ ಮಾಡಿಕೊಳ್ಳಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ನಾವಿದ್ದೇವೆ.
ಯುವಕರೇ ದೇಶದ ತೋಳ್ಬಲಗಳು ಎಂದ ವಿವೇಕಾನಂದರನ್ನು ನಾವು ಓದೋಣ. ಕರುಣೆ, ಪ್ರೀತಿಯೊಂದರಿಂದಲೇ ದ್ವೇಷದ ದಳ್ಳುರಿಯನ್ನು ದಮನ ಮಾಡಬಹುದು ಎಂಬ ಸತ್ಯದ ಸಂಗತಿ ಅರ್ಥ ಮಾಡಿಕೊಳ್ಳೋೋಣ. ಮಹಿಳೆಯನ್ನು ಪೂಜಿಸುವ, ಗೌರವಿಸುವ ದೇಶದಲ್ಲಿ ದೇವರ ನೆಲೆಯಿರುತ್ತದೆ ಎಂಬುದರ ಅರಿವು ನಮಗಿರಲಿ. ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ದರಿದ್ರ ದೇವೋಭವ, ಅತಿಥಿ ದೇವೋಭವ ಎಂಬ ಮಂತ್ರಗಳು ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಲಿ. ಮನುಷ್ಯತ್ವದ, ಮಾನವೀಯತೆಯ ಬೆಳಕು ಸದಾಕಾಲ ನಮ್ಮ ಆಂತರ್ಯದೊಳಗೆ ಬೆಳಗಲಿ.