ರಂಗನಾಥ ಎನ್ ವಾಲ್ಮೀಕಿ
ಮದುವೆ ಮನೆಯಲ್ಲಿ ಸುತ್ತಾಡುವುದು, ಅಲ್ಲಿನ ಜನರ ಹಾವ ಭಾವ ನೋಡುವುದು, ಅಲ್ಲಿನ ಸನ್ನಿವೇಶ ಗಮನಿಸುವುದು ಒಂದು ರೀತಿಯಲ್ಲಿ ಮುದ ನೀಡುತ್ತದೆ.
ಮದುವೆ ಎಂದರೆ ಏನೋ ಸಂಭ್ರಮ. ಹಲವರು ಗೆಳೆಯರ, ಬಂಧುಗಳ ಸಮ್ಮಿಲನ. ಅಪರೂಪದ ಭೇಟಿಗೆ ಅವಕಾಶ ಕಲ್ಪಿಸುವ
ಸುಸಮಯ. ಅಲ್ಲಿಯ ಊಟ, ವಧು ವರರ ಅಲಂಕಾರ, ಜನರ ಓಡಾಟ, ಸಂಪ್ರದಾಯ ಎಲ್ಲವೂ ವಿಶೇಷ. ಈ ಸಂಭ್ರಮವನ್ನು ಅನುಭವಿಸದವರೇ ಇರಲಾರರು. ಆದರೆ ಈ ಮದುವೆ ಒಂದಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರ ಬಯಕೆಗಳು ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿರುತ್ತವೆ. ಅವರ ಬಯಕೆಗಳೆನು ಎಂಬುದನ್ನು ವಿವಾಹದ ಸುತ್ತ ಒಂದು ಸುತ್ತು ಹಾಕಿದರೆ ನಮಗೂ ಮನವರಿಕೆ ಆಗುವುದು.
ವಿವಾಹ ಸಮಾರಂಭದಲ್ಲಿ ಎರಡು ಬಗೆ – ಒಂದು ಮನೆಯಲ್ಲೇ ವಿವಾಹ. ಇನ್ನೊಂದು ಕಲ್ಯಾಣ ಮಂಟಪ , ಛತ್ರದಲ್ಲಿ ನಡೆಯುವ ವಿವಾಹ. ಹಳ್ಳಿಗಳಲ್ಲಿ ಮಾತ್ರ ಮನೆ ಮುಂದೆ ಛತ್ರ ಹಾಕಿ ಮದುವೆ ಮಾಡುವ ಪರಿಪಾಠ ಇದೆ. ನಗರ ಪ್ರದೇಶಗಳಲ್ಲಿ ಛತ್ರವೇ ಆಧಾರ. ಬಡವರ, ಸಿರಿವಂತರ ವಿವಾಹಗಳಿಗೂ ಭಾರೀ ವ್ಯತ್ಯಾಸ ಉಂಟು…ಎಲ್ಲದರಲ್ಲಿ …ಮದ್ಯಮ ವರ್ಗದವರ ವಿವಾಹ ಸಮಾರಂಭ ಗಳು ಎಲ್ಲರಿಗೂ ಒಗ್ಗುವಂತವು.
ಮದುವೆಯ ವಧು ವರರಿಗೆ ಎಲ್ಲವೂ ಹೊಸದು ಅಲಂಕಾರ, ಸಂಪ್ರದಾಯ ಆಚಾರ, ವಿಚಾರಕ್ಕೆ ಒಳಗಾಗಲೇ ಬೇಕು. ಕೆಲವರು ಮನಸ್ಸೋ ಇಚ್ಚೆ ತೊಡಗಿಸಿ ಕೊಂಡರೆ ಕೆಲವರಿಗೆ ಕಿರಿ ಕಿರಿ ಅನಿಸಿದರೂ ಅನಿಸದಂತೆ ತೊಡಗಿಕೊಳ್ಳುವರು. ಎರಡು ಮೂರು ಬಾರಿ ಹೊಸ ವಸ್ತ್ರಧಾರಣೆ, ಅರಿಸಿನ ಹಚ್ಚುವುದು, ಸ್ನಾನ ಎಲ್ಲವೂ ವಿಭಿನ್ನ ಅನುಭವ. ಹಾರ ಬದಲಾವಣೆ, ತಾಳಿ, ಧಾರೆ ಎರೆಯುವುದು, ವಿವಿಧ ಶಾಸ್ತ್ರಗಳು. ಕೊನೆಗೆ ಊಟ.
ಊಟವೇ ಪ್ರಧಾನ
ಉಪಚಾರ, ಊಟದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವರು ಹೊಟ್ಟೆ ತುಂಬಾ ಗಡದ್ದಾಗಿ ತಿನ್ನುವರು. ಯಾವುದೋ ಒಂದು ಮೂಲೆಯಲ್ಲಿ ಆರಾಮ ಕುಂತು ನಂತರ ಎಲ್ಲರೊಂದಿಗೆ ಗುಂಪಲ್ಲಿ ಹೋಗಿ ಅಕ್ಕಿ ಕಾಳು ಒಗೆಯುವರು. ಅಲ್ಲಿ ಇಲ್ಲಿ ಒಬ್ಬರು ಮದುವೆಗೆ ಬಂದು ಅಕ್ಕಿ ಕಾಳು ಹಾಕದವರು ಸಿಕ್ಕರೂ ಆಶ್ಚರ್ಯ ಪಡಬೇಕಿಲ್ಲ. ಇವರ ಆಶೆ, ಅಭಿರುಚಿ ಊಟ ತಿಂಡಿಯ ಕಡೆಗೆ. ಇನ್ನು ಒಂದು ವರ್ಗಕ್ಕೆ ತಿರುಗಾಟ ಅಂದರೆ ಬಲು ಇಷ್ಟ. ತಿಂಡಿ ತಿಂದು ಗೆಳೆಯರ ಜೊತೆ ಸೇರಿ ಊರೊಳಗೆ ತಿರುಗಾಡುವರು. ಸಿನಿಮಾ ಟಾಕೀಸ್ ಇದ್ರೆ ನೋಡುವರು. ಇವರ ಮತ್ತೆ ಬರುವುದು ಊಟಕ್ಕೆ. ವಿವಾಹ ಮಂಟಪಕ್ಕಿಂತ ಹೊರಗಡೆ ಅಧಿಕ ಕಾಲ
ಕಳೆಯುವರು.
ಇನ್ನು ಹಲವರು ಬಂದ ಗೆಳೆಯರನ್ನು ಬಂದ ಬಂಧುಗಳನ್ನು ಹುಡುಕಿ ಹುಡುಕಿ ಮಾತನಾಡಿಸುವರು. ಅಕ್ಕಾ, ತಮ್ಮಾ, ಅಣ್ಣ, ಅವ್ವ, ಮಾಮ ಹೀಗೆ ಅನೇಕ ಪದಗಳನ್ನು ಹೇಳುತ್ತಾ ಆಚೆ ಈಚೆ ತಿರುಗುತ್ತಾ ಇರುವವರು. ಹಿರಿಯರಂತೂ ಇದ್ಯಾವದಕ್ಕೂ ತಲೆ ಕೆಡಿಸಿಕೊಳ್ಳದೇ ಒಂದೆಡೆ ಕುಳಿತು ವಿಶ್ರಾಂತಿ ಪಡೆಯುವರು. ಇನ್ನು ಹೆಂಗಳೆಯರು ಸಹಜವಾಗಿ ಸೌಂದರ್ಯ ಪ್ರಜ್ಞೆ ಹೊಂದಿರು ವರು. ಹೊಸ ಸೀರೆ ತೊಟ್ಟು, ಅಲಂಕಾರಿಕ ವಸ್ತು ಧರಿಸಿ, ಹೂ ಮುಡಿದುಕೊಂಡೆ ಮದುವೆ ಕಾರ್ಯಗಳಲ್ಲಿ ತೊಡಗಿದ್ದೆ ತೊಡಗಿದ್ದು. ಇನ್ನು ಕೆಲವರು ಸದಾ ವಧುವರರ ಹಿಂದೆನೆ ಇರುವವರು. ಮನೆ ಮಂದಿಯೂ ಆಗಿರಬಹುದು.
ಸೆಲ್ಫಿ ಗೀಳು
ಇನ್ನು ಕೆಲವರಿಗೆ ಸೆಲ್ಪಿ ಗೀಳು. ಪರಿಚಿತರೊಂದಿಗೆ ಸೆಲ್ಪಿ ಕ್ಲಿಕ್ಕಿಸಿದ್ದೆ ಕ್ಲಿಕ್ಕಿಸಿದ್ದು. ಅದರಲ್ಲಿ ಉಳಿಸುವ ಪೋಟೊ ಎಷ್ಟು ಅಳಿಸುವ ಪೋಟೊ ಎಷ್ಟೊ ಅವರಿಗೆ ಗೊತ್ತು. ತೊಟ್ಟ ಹೊಸ ಬಟ್ಟೆ ಎಲ್ಲರೂ ನೋಡಲಿ ಎಂದು ಮೆಚ್ಚುಗೆ ಮಾತು ಆಡಲಿ ಎಂದು ಆಚೀಚೆ ಓಡಾಡಿದ್ದೆ ಓಡಾಡಿದ್ದು.
ಯಾರಿದರೂ ಚೆನ್ನಾಗಿದೆ ಎಂದರೆ ಇವರಿಗೆ ಸ್ವರ್ಗಕ್ಕೆ ಮೂರೇ ಗೇಣು. ಯಾರೂ ಹೇಳದಿದ್ದರೆ ಸಪ್ಪೆ ಮೋರೆ ಹಾಕಿಕ್ಕೊಂಡು ಬೆಪ್ಪ ನಂತೆ ಕೂಡುವರು. ಮತ್ತೊಂದು ವರ್ಗ ಇರುವುದು. ಬಹುತೇಕ ಮದುವೆ ಕಾರ್ಯಗಳನ್ನು ಅತ್ಯಂತ ನಿಷ್ಠೆ ಇಂದ ಮಾಡುವರು. ತೆರೆ ಮೇಲೆ ಇವರು ಕಾಣಿಸಿಕೊಳ್ಳಲು ಇವರು ಅಷ್ಟು ಇಷ್ಟಪಡದವರು. ಹಿಂದೆ ನಿಂತು ಊಟ , ಊಪಚಾರ, ಜನರ ವಾಸ್ತವ್ಯ, ವಸ್ತುಗಳ ಖರೀದಿ ಹೀಗೆ ಹತ್ತಾರು ಕೆಲಸ ಮಾಡುವರು. ಇವರ ಕಾರ್ಯ ಬಹುತೇಕರಿಗೆ ಕಾಣದು. ಮದುವೆ ಯಶಸ್ಸುನಲ್ಲಿ ಇವರ ಪಾತ್ರವೂ ಬಹು ಮುಖ್ಯ. ಇನ್ನು ಕೆಲ ಹೆಂಗಳೆಯರು ಮದುವೆ ಸಂಪ್ರದಾಯಗಳನ್ನು ಪಕ್ಕಾ ಅರಿತವರು.
ಎಲ್ಲಾ ಸಂಪ್ರದಾಯಗಳನ್ನು ನೆನಪಿಸಿ, ಒಂದೊಂದಾಗಿ ಮಾಡಿಸುತ್ತಾರೆ. ಅವರ ಕಾರ್ಯಗಳನ್ನು ನೋಡುವುದು ಒಂದು ಆನಂದ.
ಈ ನಡುವೆ ಕೆಲವರು ಗಾಯನ ಕೆರೆಕೊಂಡು ದೊಡ್ಡದು ಮಾಡಿಕೊಂಡಂತೆ ಇಂತಹ ಶುಭ ಸಂದರ್ಭದಲ್ಲಿಯೂ ಹಳೆಯ ಕಹಿ ಘಟನೆ ಮಾತನಾಡುತ್ತಾ ತಾವೂ ಬೇಸರಗೊಂಡು ಇತರರಿಗೂ ಬೇಸರ ಮಾಡುವವರು. ಮಕ್ಕಳ ಲೋಕವೆ ಭಿನ್ನ. ಅವರು ಆಡಿದ್ದೆ ಆಡಿದ್ದು, ಓಡಿದ್ದೇ ಓಡಿದ್ದು. ಹಿರಿಯರಿಗೆ ಇವರನ್ನು ಹಿಡಿದಿಡುವುದೇ ಪ್ರಯಾಸದ ಕಾರ್ಯ.
ಮಕ್ಕಳು ಊಟ ತಿಂಡಿಗಿಂತ ಆಟದಲ್ಲಿ ತೊಡಗುವರು. ದೊಡ್ಡ ಮಕ್ಕಳ ಮನೋಭಾವ ವಿಭಿನ್ನ. ಇನ್ನು ಮದುವೆ ಮಾಡಿಸುವ ಮನೆ ಮಂದಿಯ ಸಂಕಷ್ಟ ಮತ್ತೊಂದು ಬಗೆಯದು. ಎಲ್ಲಾ ಕಾರ್ಯ ಸುಗಮವಾಗಿ ಮುಗಿದರೆ ಸಾಕು ಎಂಬ ಭಾವ. ಹೀಗೆ ಮದುವೆಯಲ್ಲಿ ಭಾಗವಹಿಸುವ ಬಹುತೇಕರ ಬಯಕೆಗಳು ಒಂದೊಂದು. ವಿವಾಹ ಒಂದು, ಸೇರುವ ಮಂದಿಯ ಬಯಕೆ ನೂರಾರು.