Wednesday, 27th November 2024

ಆತ್ಮಸ್ಥೈರ್ಯ ಹೆಚ್ಚಿಸುವ ರಾಕ್‌ ಕ್ಲೈಂಬಿಂಗ್‌

ಭಯ ಪ್ರತಿ ಜೀವಿಯ ಸಹಜ ಗುಣ. ಆದರೆ ಸತತ ಪ್ರಯತ್ನ ಮತ್ತು ಮುಂದಾಲೋಚನೆಯಿಂದ ಭಯವನ್ನು ಹೋಗ ಲಾಡಿಸಿ, ಅಸಾಧ್ಯವೆನಿಸುವ ಕೆಲಸ ಮಾಡಬಹುದು ಎಂದು ವಿಶ್ವಕ್ಕೆ ತೋರಿಸಿ ಕೊಟ್ಟ ವ್ಯಕ್ತಿಯೇ ಅಲೆಕ್ಸ್‌ ಹೊನೊಲ್ಡ್‌ . ಕನಸುಗಳನ್ನು ಬೆಂಬೆತ್ತುವವರಿಗೆ ಮತ್ತು ಸ್ವಸಾಮರ್ಥ್ಯ ದಲ್ಲಿ ನಂಬಿಕೆ ಇಡುವವರಿಗೆ ಈತನ ಜೀವನ ಮಾದರಿ.

ಡಾ. ಜೆ.ಎಸ್.ಕಾರ್ತಿಕ್

ಕ್ಷಣ ಕ್ಷಣಕ್ಕೂ ಬೀಸುವ ಗಾಳಿ, ಪ್ರಪಾತದಲ್ಲಿ ಕಾಣುವ ಹಸಿರಿನ ವನರಾಶಿ, ಬಿಸಿಲಿನ ಝಳಕ್ಕೆ ಕಾದ ಕಡಿದಾದ ಅಂಕುಡೊಂಕಿನ ಬಂಡೆಗಳು, ಕಾಡುವ ನೀರವ ಮೌನ!

ಸ್ಥಳ ಅಮೇರಿಕಾದ ಯೋಸೆಮಿಟಿ ರಾಷ್ಟ್ರೀಯ ಉದ್ಯಾನವನದಲ್ಲಿರುವ 2900 ಅಡಿ (884 ಮೀಟರ್) ಎತ್ತರದ ಎಲ್ ಕಾಪಿಟಾನ್ ಎಂಬ ಬೃಹತ್ ಬಂಡೆ. ಒಬ್ಬ ವ್ಯಕ್ತಿ ಸುರಕ್ಷತಾ ಸಾಧನಗಳಾದ ಹಗ್ಗ ಮತ್ತು ಸರಪಳಿ ಬಳಸದೆ ಪರ್ವತಾ ರೋಹಣ ಮಾಡುತ್ತಿದ್ದಾನೆ. ಒಂದು ಕೈಯಲ್ಲಿ ಬಂಡೆಯ ಚಪ್ಪಡಿ ಹಿಡಿದಿದ್ದಾನೆ. ಇನ್ನೊಂದು ಕೈಯಿಂದ ತನ್ನ ಹಿಂಭಾಗದಲ್ಲಿ ಕಟ್ಟಿದ ಕೈ ಚೀಲದಲ್ಲಿರುವ
ಟಾಲ್ಕಂ ಹುಡಿಯನ್ನು ತೆಗೆದು ಕೈ ಒರೆಸಿಕೊಳ್ಳುತ್ತಿರುತ್ತಾನೆ.

ಒಂದು ತಪ್ಪು ನಡೆ, ಅವನ ಜೀವವನ್ನೇ ತೆಗೆಯಬಹುದು. ಅಸಾಧಾರಣ ಒತ್ತಡದ ನಡುವೆ, ನಗುತ್ತಾ ಆಗಾಗ ಕ್ಯಾಮೆರಾ ನೋಡುತ್ತಾನೆ. ಆತ ಇರುವ ಸನ್ನಿವೇಶ ನೋಡಿದರೆ, ಎಂಥವರ ಎದೆಯೂ ಝಲ್ಲೆನಿಸಬಹುದು. ಒಂದೇ, ಎರಡೇ! ಹಲವಾರು ಸವಾಲುಗಳನ್ನು ಮೆಟ್ಟಿ ನಿಂತು ಬೆಟ್ಟದ ತುದಿ ತಲುಪು ತ್ತಾನೆ. ತುದಿಯ ಮೇಲೆ ನಿಂತು ನಮ್ಮತ್ತ ಕೈ ಬೀಸುವಾಗ, ಆತನ ಕಣ್ಣಲ್ಲಿ ಹತ್ತಿದ ಸಾರ್ಥಕತೆ ಕಾಣುತ್ತದೆ. ನೋಡಿದವರ ಕಣ್ಣಲ್ಲೂ ಆನಂದಭಾಷ್ಪ ಉಂಟಾಗುತ್ತದೆ.

ಹುಚ್ಚು ಸಾಹಸಿ
ಈ ಸುಂದರ, ಮೈನವಿರೇಳಿಸುವ, ಭಯವನ್ನೂ ಹುಟ್ಟಿಸುವ ಸಾಕ್ಷ್ಯ ಚಿತ್ರವೇ, 2018 ನೇ ಸಾಲಿನ ಅತ್ಯುತ್ತಮ ಸಾಕ್ಷ್ಯ ಚಿತ್ರ
ವಿಭಾಗ’ ದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ‘ಫ್ರೀ ಸೋಲೋ’(ನ್ಯಾಷನಲ್ ಜಿಯಾಗ್ರಾಫಿಕ್). ನೋಡಲು ಹುಚ್ಚು ಸಾಹಸಿ ಎನಿಸಿದರೂ, ತನ್ನ ಮನೋಸ್ಥೈರ್ಯದಿಂದ ವಿಶ್ವದ ಗಮನ ಸೆಳೆದ ಆ ವ್ಯಕ್ತಿಯೇ ಅಲೆಕ್ಸ್‌ ಹೊನೊಲ್ಡ್. ಕೋತಿರಾಜ್ ಅಲಿಯಾಸ್ ಜ್ಯೋತಿ ರಾಜ್, ಚಿತ್ರದುರ್ಗದ ಕೋಟೆಯನ್ನು ಮತ್ತು ಜೋಗ ಜಲಪಾತವನ್ನು ಬರಿಗೈಯಲ್ಲಿ ಹತ್ತಿರುವುದನ್ನು ನೋಡಿರುತ್ತೀರಿ. ಅಂತಹ ಸಾಹಸವನ್ನು ವಿಶ್ವ ಮಟ್ಟದಲ್ಲಿ ಮಾಡಿದ ವ್ಯಕ್ತಿ ಈತ.

ಎಲ್ ಕಾಪಿಟಾನ್ ಪರ್ವತವನ್ನು ಬರಿಗೈಯಲ್ಲಿ ಹತ್ತುವುದು ಅಲೆಕ್ಸ್‌ ಹೊನೊಲ್ಡ್‌‌‌ನ ಬಾಲ್ಯದ ಕನಸು. ಈ ಕನಸನ್ನು ನನಸು
ಮಾಡಿಕೊಳ್ಳಲು, ತರಬೇತಿಯ ರೀತಿಯಲ್ಲಿ, ಹಲವಾರು ಬಾರಿ, ಹಗ್ಗ ಮತ್ತು ಇನ್ನೊಬ್ಬ ಅನುಭವಿ ಪರ್ವತಾರೋಹಿ ಟಾಮಿ ಕಾಲ್ಡ್ವೆಲ್ ನ ಸಹಾಯ ದೊಂದಿಗೆ ಪರ್ವತಾರೋಹಣ ಮಾಡುತ್ತಾನೆ. ಹತ್ತುವಾಗ ಬಿದ್ದು ಕಾಲಿಗೆ ಗಾಯ ಮಾಡಿಕೊಂಡರೂ,  ಮನೋಸ್ಥೈರ್ಯ ಕಳೆದುಕೊಳ್ಳದೆ ಬ್ಯಾಂಡೇಜು ಕಟ್ಟಿ, ಅಭ್ಯಾಸ ಪ್ರಕ್ರಿಯೆ ಮುಂದುವರಿಸುತ್ತಾನೆ. ಆರೋಹಿ ಮಿತ್ರರೊಡನೆ ಮೊರೊಕ್ಕೋ ದೇಶಕ್ಕೆ ಹೋಗಿ ಎಲ್ ಕಾಪಿಟಾನ್ ಹೋಲುವ ಕೆಲವು ಪರ್ವತ ಶ್ರೇಣಿಗಳನ್ನು ಹತ್ತಿ ಆತ್ಮವಿಶ್ವಾಸ ವೃದ್ಧಿಸಿ ಕೊಳ್ಳುತ್ತಾನೆ. ತನ್ನ ಟಿಪ್ಪಣಿ ಪುಸ್ತಕದಲ್ಲಿ ಹತ್ತುವ ಪ್ರಕ್ರಿಯೆಯ ರೇಖಾಚಿತ್ರ ಬಿಡಿಸಿ, ಸೂಕ್ಷ್ಮ ಸಂಗತಿಗಳನ್ನು ಆಗಾಗ ಮನನ ಮಾಡಿಕೊಳ್ಳುತ್ತಿರುತ್ತಾನೆ.

ಸಾಹಸಕ್ಕೆ ಇನ್ನೊಂದು ಹೆಸರು
ಸಾಕ್ಷ್ಯಚಿತ್ರದಲ್ಲಿ, ಆರೋಹಣದ ಮೊದಲ ದಿನ ಪತ್ನಿಯೊಡನೆ ಆತ ನಡೆಸುವ ಚರ್ಚೆ ಮತ್ತು ಮುಂದಿನ ಸನ್ನಿವೇಶ ಊಹಿಸಿ ಆತ ನ ಪತ್ನಿ ಅನುಭವಿಸುವ ತಲ್ಲಣವನ್ನು ಹೃದಯಂಗಮವಾಗಿ ನಿರೂಪಿಸಲಾಗಿದೆ. ಪರ್ವತದ ಮಧ್ಯಭಾಗದಲ್ಲಿರುವ, ಮಾನ್ಸ್ಟರ್ ಆಫ್ ವಿಡ್ತ್ ‌‌ಎಂದು ಕರೆಯಲ್ಪಡುವ ಪ್ರದೇಶದಲ್ಲಿ, ತನ್ನ ದೇಹದ ಒಂದು ಭಾಗವನ್ನು ಬಂಡೆಗಳ ಸಂದಿಯ ನಡುವೆ ಸಿಲುಕಿಸಿ, ಇನ್ನೊಂದು ಭಾಗದ ಸಹಾಯ ದಿಂದ ಆತ ಹತ್ತುವ ಪರಿ ನೋಡಿದರೆ ವಿಸ್ಮಯವಾಗುತ್ತದೆ. ಹಗ್ಗದಲ್ಲಿ ನೇತಾಡುತ್ತಾ ಆತನ ಆರೋಹಣವನ್ನು ಚಿತ್ರೀಕರಿಸುವ ಕ್ಯಾಮೆರಾಮೆನ್‌ಗಳ ಸಾಹಸವನ್ನು ನೋಡಿದರೆ ಅಚ್ಚರಿ ಉಂಟಾಗದಿರದು.

ಹೊನೊಲ್ಡ್ ಮೂಲತಃ ಕ್ಯಾಲಿಫೋರ್ನಿಯದ ಸ್ಯಾಕ್ರಮೆಂಟೊ ಪಟ್ಟಣದವನು. ತನ್ನ ಐದನೇ ವಯಸ್ಸಿನಲ್ಲಿ ಮೂವತ್ತು ಅಡಿ ಎತ್ತರವಿರುವ ರಚನೆಗಳನ್ನು ಕೆಲವೇ ನಿಮಿಷಗಳಲ್ಲಿ ಹತ್ತಲು ಕಲಿಯುತ್ತಾನೆ. ತನ್ನ ಶಾಲಾ ದಿನಗಳಲ್ಲಿ, ಕ್ಯಾಲಿಫೋರ್ನಿಯಾದಲ್ಲಿ ಜರುಗುವ ಹಲವಾರು ರಾಷ್ಟ್ರೀಯ ಮಟ್ಟದ ಆರೋಹಣ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಬಹುಮಾನಗಳನ್ನು ಗಳಿಸುತ್ತಾನೆ. ಕೇವಲ 19 ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಳ್ಳುತ್ತಾನೆ.

ಆ ಸಂದರ್ಭದಲ್ಲಿ ತನ್ನ ಶಾಲಾ ಜೀವನ ತ್ಯಜಿಸುವ ಹೊನೊಲ್ಡ್, ತಾಯಿಯೊಂದಿಗೆ ಪುಟ್ಟ ವ್ಯಾನ್‌ನಲ್ಲಿ ವಾಸಿಸಬೇಕಾದ
ಅನಿವಾರ್ಯತೆ. ಒಂದು ರೀತಿಯಲ್ಲಿ ಅಸಾಂಪ್ರದಾಯಿಕ ಜೀವನಶೈಲಿ ಆತನದ್ದು. ಶಾಂತ ಸ್ವಭಾವದವನಾದ ಹೊನೊಲ್ಡ್, ಒಬ್ಬ ಅಲೆಮಾರಿಯಂತೆ ಬರಿಗೈಯಲ್ಲಿ ಅನೇಕ ಸಣ್ಣ ಪರ್ವತಗಳನ್ನು ಹತ್ತುತ್ತಾ ಜೀವನ ಕಳೆಯುತ್ತಾನೆ.

ಮುಂದೆ ಅವನ ಈ ಅನುಭವವೇ ಎಲ್ ಕಾಪಿಟಾನ್ ಏರಲು ಇಬೇಕಾದ ಮನಸ್ಥಿತಿಗೆ ಸುಭದ್ರ ಅಡಿಪಾಯ ಹಾಕಿಕೊಟ್ಟಿತು.
ಪ್ರಸ್ತುತ 35 ರ ಹರೆಯದ ಹೊನೊಲ್ಡ್, ಪ್ರಸಿದ್ಧ ವ್ಯಕ್ತಿಯಾಗಿದ್ದರೂ ಸರಳ ಜೀವನ ನಡೆಸುತ್ತಾನೆ. ಹೊನೊಲ್ಡ್ ಫೌಂಡೇಶನ್ ಎಂಬ ಹೆಸರಿನ ಸಂಸ್ಥೆ ಪ್ರಾರಂಭಿಸಿ ತನ್ನ ಸಂಪತ್ತಿನ 1/3 ನೇ ಭಾಗವನ್ನು ನವೀರಿಸಬಹುದಾದ ಇಂಧನ ಮೂಲವಾದ ಸೌರಶಕ್ತಿ ಯೋಜೆಗಳಿಗೆ ಮೀಸಲಿಟ್ಟಿದ್ದಾನೆ. ಆ ಮೂಲಕ ಪರಿಸರ ಸಂರಕ್ಷಣೆ ಮತ್ತು ಬಡಜನರ ಬಾಳಿಗೆ ಬೆಳಕು ತರುವ ಕೆಲಸ ಮಾಡು ತ್ತಿದ್ದಾನೆ.

ಬಂಡೆ ಏರುವುದೇಕೆ?
ಬಂಡೆ ಏರುವುದರಿಂದ ಏನು ಸಿಗುತ್ತದೆ? ಈ ಪ್ರಶ್ನೆಗೆ ಉತ್ತರ ಸರಳ. ಮನಸ್ಸಿಗೆ ಆನಂದ ಮತ್ತು ಮನೋಸ್ಥೈರ್ಯ ಹೆಚ್ಚಳ. ಕಡಿದಾದ ಬಂಡೆಯನ್ನು ಏರಿದಾಗ ಮೂಡುವ ಆತ್ಮವಿಶ್ವಾಸ, ತೃಪ್ತಿಯು ಮನಸ್ಸಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಹೊಸ ಹೊಸ ಸಾಹಸಗಳನ್ನು ಕೈಗೊಳ್ಳಲು ಸ್ಫೂರ್ತಿ ತುಂಬುತ್ತದೆ. ಕಷ್ಟದಿಂದ ಬೆಳೆದ ಹುಡುಗನೊಬ್ಬ ಎಲ್ ಕಾಪಿಟಾನ್
ಬಂಡೆಯನ್ನು ಏರಿದ ಕಥೆಯು ಎಲ್ಲರಲ್ಲೂ ಸ್ಫೂರ್ತಿತುಂಬಬಲ್ಲದು, ಅಂತಹ ಸಾಹಸ ಕೈಗೊಳ್ಳಲು ಪ್ರೇರಣೆ ನೀಡಬಲ್ಲದು.