ಬೈಂದೂರು ಚಂದ್ರಶೇಖರ ನಾವಡ
ಬದುಕಿನ ಅತ್ಯಂತ ಪ್ರಮುಖ ಘಟ್ಟವೆನಿಸಿದ ವಿವಾಹ ಸಂಸ್ಕಾರದ ಸವಿ ನೆನಪನ್ನು ಬದುಕಿನುದ್ದಕ್ಕೂ ಜತನದಿಂದ ಕಾಪಿಟ್ಟು ಕೊಳ್ಳಲು ಪ್ರತಿಯೋರ್ವ ಯುವಕ-ಯುವತಿಯರು ಬಯಸುತ್ತಾರೆ.
ವಿವಾಹದ ವಾರ್ಷಿಕ ದಿನಗಳಲ್ಲಿ, ವಿರಾಮದ ಸಮಯದಲ್ಲಿ ವಿವಾಹದ ಹಳೆಯ ಅಲ್ಬಮ್‌ಗಳನ್ನು ತಿರುವಿ ಸಂತಸ ಪಟ್ಟು, ಗತ ನೆನಪಿನಲ್ಲಿ ಮನಸ್ಸು ತೇಲಿ ಸಂಭ್ರಮಿಸುತ್ತದೆ. ಮಾಂಗಲ್ಯ ಮಹೋತ್ಸವವೆಂದು ಪುರೋಹಿತರಿಂದ ಕರೆಯಲ್ಪಡುವ ಭೂತಕಾಲ ದಲ್ಲಿ ನೆರವೇರಿದ ವಿವಾಹದ ವಿಧಿವಿಧಾನಗಳ ಹತ್ತು ಹಲವು ಮಧುರ ನೆನಪುಗಳು ವರ್ತಮಾನದಲ್ಲಿ ಮನಸ್ಸಿನ ಮೇಲೆ ಮತ್ತೆ ಮತ್ತೆ ಲಗ್ಗೆ ಇಡುತ್ತದೆ. ವಿವಾಹ ಸಮಾವರ್ತನೆಯ ಅಂಗವಾಗಿ ನಡೆಯುವ ಕಾಶೀಯಾತ್ರೆಯ ರೋಚಕ ಅನುಭವ ಪುರುಷರ ಮನಸ್ಸಿನಲ್ಲಿ ದೀರ್ಘ ಕಾಲ ಉಳಿಯುವಂತಹದ್ದು.
ವರಮಹಾಶಯನನ್ನು ಕೇಂದ್ರ ಬಿಂದುವಾಗಿಸಿಕೊಂಡು ನಡೆಯುವ ಬಂಧು-ಬಾಂಧವರ, ಒಡನಾಡಿಗಳ ಮನ ಮುದಗೊಳಿಸುವ ಕಿಲಕಿಲ- ಕಲರವ, ಪರಿಹಾಸ್ಯ ಹಿತಕಾರಿ ಕಚಕುಳಿಯ ಅನುಭವ ಕೊಡುವಂತಹದ್ದು. ಕಾಲಿಗೆ ಅಡಿಕೆಯ ಹಾಳೆಯಿಂದ ತಯಾ ರಿಸಿದ ಚಪ್ಪಲಿ, ಕೈಯ್ಯಲ್ಲಿ ಕೊಡೆ, ಬೀಸಣಿಗೆ ಮತ್ತು ದಂಟುಕೋಲು, ಹೆಗಲಿಗೆ ಅಕ್ಕಿ-ಕಾಯಿಯನ್ನೊಳಗೊಂಡ ಬಟ್ಟೆಯ ಗಂಟ ನ್ನೇರಿಸಿ ಐಹಿಕ ಜೀವನದಲ್ಲಿ ಅನಾಸಕ್ತನಾಗಿ, ವೈರಾಗ್ಯಮೂರ್ತಿಯಂತೆ ಮದುಮಗ ಕಾಶಿಗೆ ಹೊರಡಲು ಅಣಿಯಾಗುತ್ತಾನೆ.
ಬದುಕಿನ ಕ್ಲೇಶ ಕಳೆದು ಪುಣ್ಯಪ್ರಾಪ್ತಿಗಾಗಿ ಪಾವನ ಕ್ಷೇತ್ರ ಕಾಶಿ ಯಾತ್ರೆಗೆ ಹೊರಟ ವರನಿಗೆ ಇಹದ ಬದುಕಿನ ಮಹತ್ವವನ್ನು
ವಿವರಿಸುವ ಕಾಶೀ ಯಾತ್ರೆಯ ಪ್ರಸಂಗ ವಾಸ್ತವದಲ್ಲಿ ಗ್ರಹಸ್ಥಾಶ್ರಮದ ಹಿರಿಮೆಯನ್ನು ಮನದಟ್ಟು ಮಾಡುವಂತದ್ದಾಗಿದೆ.
ಕಾಶಿಗೆ ಹೊರಟ ಮದುಮಗನನ್ನು ಕಂಡ ಎಲ್ಲರಿಗೂ ಕಂಗಾಲು. ಆಗ ಸಮಯೋಚಿತವಾಗಿ ಮುಂದೆ ಬರುವ ಸೋದರ ಮಾವ, ವರನನ್ನು ತಡೆದು ತಾನು ಗೊತ್ತುಪಡಿಸಿರುವ ವಧುವಿನೊಂದಿಗೆ ವಿವಾಹವಾಗಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಸಾಂಸಾರಿಕ ಜೀವನಾನುಭವವನ್ನು ಪಡೆಯಬೇಕೆಂದು ಅಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತಾನೆ.
ಗೃಹಸ್ಥಾಶ್ರಮದ ಅನುಭವವಿಲ್ಲದೇ ಜೀವನ ಪರಿಪಕ್ವವಲ್ಲ, ಎಳವೆಯಲ್ಲಿ ಸನ್ಯಾಸ ಸ್ವೀಕಾರ ಸಲ್ಲದು, ತಾನು ಈಗಾಗಲೇ ಯೋಗ್ಯ ಕನ್ಯೆಯೊಂದನ್ನು ಗೊತ್ತು ಮಾಡಿರುವೆ, ಆಕೆಯೊಂದಿಗೆ ವಿವಾಹವಾಗು ಎನ್ನುವ ಸೋದರ ಮಾವನ ಮಾತಿಗೆ ಮದುಮಗ ಒಪ್ಪಿಕೊಳ್ಳಬೇಕಾಗುತ್ತದೆ. ಇತರ ಹಿರಿಯರ ಒಪ್ಪಿಗೆಯೂ ಇದಕ್ಕೆ ಇರುತ್ತದೆ.
ಮದುವೆಯಲ್ಲಿ ಸಾಂಪ್ರದಾಯಿಕ ಮಹತ್ವ ಪಡೆದ ಕಾಶೀ ಯಾತ್ರೆಯ ಪ್ರಸಂಗ ಆಧುನಿಕ ಸನ್ನಿವೇಶದಲ್ಲಿ ಭರ್ಜರಿ ತಮಾಷೆ-ಕೀಟಲೆಗಳ ಆಗರವಾಗಿರುತ್ತದೆ. ಅಡಿಕೆ ಹಾಳೆಯ ತೊಟ್ಟೆಯಲ್ಲಿ ತಯಾರಿಸಿರುವ ಚಪ್ಪಲಿ ಮೆಟ್ಟಿ ನಡೆಯಲಾಗದೇ ಚಡಪಡಿಸುವ ವರ, ಎದುರಿಗಿರುವವರ ಮುಸಿ ಮುಸಿ ನಗುವಿಗೆ ಹ್ರಾಸವಾಗುತ್ತಾನೆ. ಪುರೋಹಿತರ ಆದೇಶದ ಮೇರೆಗೆ ಕೊಡೆ, ಅಕ್ಕಿ ಕಾಯಿ ಗಂಟು, ಬೀಸಣಿಗೆ, ದಂಟುಕೋಲು ಎಲ್ಲವನ್ನೂ ಸಂಭಾಳಿಸಲಾಗದೇ ಒದ್ದಾಡುವ ಮದುಮಗನ ಮೇಲೆ ನೆರೆದವರ ಗೇಲಿ ಮಾತಿನ ವಾಗ್ಬಾಣಗಳು ಧಾಳಿ ಇಡುತ್ತದೆ.
ಮದುವೆ ಮನೆಯ ಸಂತೋಷವನ್ನು ಮತ್ತಷ್ಟು ಹೆಚ್ಚಿಸುವ, ವಾತಾವರಣವನ್ನು ರಸಮಯಗೊಳಿಸುವ ಕಾಶೀ ಯಾತ್ರೆಯ ಪ್ರಸಂಗವನ್ನು ವರ ಮಹಾಶಯ ಸುಲಭದಲ್ಲಿ ಹೇಗೆ ತಾನೇ ಮರೆಯಲು ಸಾಧ್ಯ?