Thursday, 12th December 2024

ಪರಿಯ ತಾಪ

ಬಿ.ಕೆ.ಮೀನಾಕ್ಷಿ, ಮೈಸೂರು

ತನ್ನನ್ನು ಅತ್ತೆ ಮಾವ ಅದೇನೋ, ಅದು ನಂಗೆ ಹೇಳಕ್ಕೇ ಬರ‍್ತಿಲ್ಲ ಅದು ತಗೊಂಡ್ರಂತೆ. ಎಲ್ಲರೂ ತನ್ನ ಕೈಗೆ ಎಷ್ಟೊಂದು ದುಡ್ಡು ಏನೇನೋ ಕೊಟ್ಟರು. ಅಪ್ಪನ ಜತೆಗೆ ಬಂದಿದ್ದ ಆ ಅವರು ಮತ್ತೆ ಅಜ್ಜಿ ಹೊರಟುಹೋದರು. ತಾತ ಮಾತ್ರ ಊಟಕ್ಕೆ ಕುಳಿತಿದ್ದರು. ಅವರು ಊಟ ಪರಿಯ ಮಾಡಿಕೊಂಡು ಹೋಗುತ್ತಾರಂತೆ.

ಎಲ್ಲೆಲ್ಲೋ ಹೋಗುತ್ತೀಯಾ…..ಏನೆನೋ ತುಳಿದುಕೊಂಡು ಬರ‍್ತೀಯಾ. ಚಪ್ಪಲಿ ಹಾಕ್ಕೊಂಡೋಗು ಅಂದ್ರೆ ನೀನು ಕೇಳದೇ ಇಲ್ಲ.’ ಪದೇ ಪದೇ ಇದೇ ಮಾತು ಕಿವಿಯಲ್ಲಿ ಗುಯ್ ಗುಟ್ಟತೊಡಗಿ ಪರಿ ಕಿವಿ ಮುಚ್ಚಿಕೊಂಡಳು. ತಾನೇಕೆ ಎಷ್ಟು ಹೇಳಿದ್ರೂ ಕೇಳ್ತಿರ ಲಿಲ್ಲ? ಕೇಳ್ಬೇಕಿತ್ತು, ಅಮ್ಮ ಹೇಳಿದ ಎಲ್ಲ ಮಾತೂ ಕೇಳ್ಬೇಕಿತ್ತು. ಈಗ ಕೇಳುತ್ತೀನಿ ಹೇಳು ಅಂದ್ರೂ ಅವಳು ಹೇಳಲ್ಲ.

ಉಮ್ಮಳಿಸುವ ದುಃಖ ಗಂಟಲಲ್ಲೇ ತಡೆದು ನಿಲ್ಲುತ್ತದೆ. ಪರಿಯ ಮುಖ ಚಿಕ್ಕದಾಗಿ ಹೋಗಿತ್ತು. ಹರಡಿಕೊಂಡ ಗುಂಗುರು ಕೂದಲು, ಎಣ್ಣೆ ಕಾಣದೆ ತಿಂಗಳೇ ಕಳೆದುಹೋಗಿತ್ತು. ನೆಲ ಸಾರಿಸಿದಂತೆ ಕೂದಲನ್ನೂ ಸಾರಿಸಿಬಿಡಬಾರದೇ? ಮೂತಿಗೆ ಬಂದು ಬಂದು ತಗಲುತ್ತೆ, ಕಣ್ಣಿಗೇ ಇಳಿಯುತ್ತೆ. ಸೆಖೆ ಆಗುವಂತೆ ಮಾಡುತ್ತೆ ಈ ಕೂದಲು. ಪರಿ ತನ್ನ ಪುಟ್ಟ ಕೈಗಳಿಂದ ಕೂದಲನ್ನು ಹಿಂದಕ್ಕೆ ತಳ್ಳಿಕೊಂಡಳು. ಎಷ್ಟು ತಳ್ಳಿಕೊಂಡರೇನು…..ಚದುರಿಕೊಂಡ ಮೋಡಗಳಂತೆ ಅವಳ ಕೂದಲ ರಾಶಿ!

ಪರಿ ಟೇಪಿಗಾಗಿ ಹುಡುಕಾಡಿದಳು. ಎಷ್ಟು ಹುಡುಕಿದರೂ ಒಂದು ಟೇಪಾದರೂ ಸಿಗಲಿಲ್ಲ. ಟೇಪು ಸಿಕ್ಕರೆ ಕಟ್ಟಿಕೊಳ್ಳಲು ಬರಬೇಡವೇ? ಎರಡೂ ಕೈಗಳನ್ನು ಸೇರಿಸಿ ಕೂದಲನ್ನು ಒತ್ತರಿಸಿ ಹಿಡಿದುಕೊಂಡರೂ ಟೇಪು ಹೇಗೆ ಕಟ್ಟಿಕೊಂಡಾಳು? ಮನೇಲಿ ಇಷ್ಟೊಂದು ಜನರಿದ್ದಾರೆ! ತನಗೊಂದು ಟೇಪು ಕಟ್ಟಿಕೊಡಕ್ಕಾ ಗಲ್ಲವಲ್ಲ ಇವರಿಗೆ? ಅದೇನೋ ತಿಂಗಳಿನ ತಿಥಿಯಂತೆ. ಇವತ್ತು ಮಾಡುತ್ತಾರಂತೆ.

ಅಮ್ಮನಿಗಿಷ್ಟವಾಗಿದ್ದೆಲ್ಲ ಮಾಡ್ತಾರಂತೆ. ಸುದೇಶ ಹೇಳುತ್ತಿದ್ದ. ಅಮ್ಮನಿಗೆ ತನ್ನ ಕೂದಲನ್ನು ಎಣ್ಣೆ ಹಚ್ಚಿ ಬಾಚಿ ಬಿಗಿಯಾಗಿ ಜಡೆ ಹೆಣೆಯುವುದು ಇಷ್ಟ ಅಂತ ಇವರಿಗೆಲ್ಲ ಗೊತ್ತಿಲ್ಲವೇ? ಸುದೇಶನ ತರ ತನಗೂ ಕೂದಲು ಕಟ್ ಮಾಡಿಬಿಟ್ಟರೆ ಬಾಚುವುದೇ ಬೇಡ. ಅಮ್ಮನಿಗೆ ಹೇಳಬೇಕು. ಅಯ್ಯೋ! ಅಮ್ಮ ಇಲ್ವಲ್ಲಾ? ಅವಳು ಯಾವಾಗ ಬರ‍್ತಾಳೋ ಏನೋ? ಅಪ್ಪನಿಗಾದರೂ ಹೇಳಬೇಕು.

ಎಲ್ಲ ನೆಂಟರಿಷ್ಟರೂ ಹೊರಟುಹೋದ ಮೇಲೆ ಪರಿಗೆ ಮನೆಯೆಲ್ಲ ಖಾಲಿ ಖಾಲಿ ಅನಿಸತೊಡಗಿತು. ಅಪ್ಪ, ಅಜ್ಜಿ, ತಾತ ಅಷ್ಟೆ
ಮನೇಲಿರೋದು. ಈಗ ಅಜ್ಜಿಯನ್ನು ಕೇಳಿ ತಲೆ ಬಾಚಿಸಿಕೊಳ್ತೀನಿ. ಮೆಲ್ಲಗೆ ಅಜ್ಜಿಯ ಬಳಿ ಹೋದ ಪರಿಮಳ ‘ಅಜ್ಜೀ..’ಎಂದಳು. ಅಜ್ಜಿ ತಿರುಗಿಯೂ ನೋಡಲಿಲ್ಲ. ಪಕ್ಕದ ಮನೆ ಸರೋಜಿನಿ ಆಂಟಿ ಹತ್ತಿರ, ‘ನೋಡಮ್ಮಾ, ಈ ಚಿಕ್ಕಮಗೂನ ಬಿಟ್ಟು ಹೋಗಿ ಬಿಟ್ಟಳಲ್ಲಾ? ಆ ದೇವರಿಗೆ ಕಣ್ಣು ಬೇಡ್ವೇ?’ ಸೆರಗಿನಿಂದ ಕಣ್ಣೀರನ್ನು ಒರೆಸಿಕೊಂಡ ಅಜ್ಜಿಯನ್ನು ಹೋಗಿ ಪರಿ ತಬ್ಬಿಕೊಂಡಳು.

‘ಅಯ್ಯೋ, ಇದೊಂದು ಮೂದೇವಿ. ಎಲ್ಲಿ ಕೂತ್ರೂ ನಿಂತ್ರೂ ಬಂದು ತಗಲಾಕ್ಕೊಳ್ಳುತ್ತೆ’ ಎನ್ನುತ್ತಾ ‘ಏಯ್ ನಡಿ ಒಳಗೆ’ ಎಂದು ಒದರಿಕೊಂಡು ಅಜ್ಜಿ ಒಳಕಳಿಸಿಬಿಟ್ಟಳು. ಪರಿಮನೆಯನ್ನೆಲ್ಲ ಒಮ್ಮೆ ಸುತ್ತಾಡಿದಳು. ಅವಳಿಗೆ ಅಪ್ಪನ ರೂಮಿನಲ್ಲಿ  ಕೂರೋಣ ವೆನಿಸಿ ಅಲ್ಲಿ ಹೋಗಿ ಮಂಚದ ಮೇಲೆ ಕುಳಿತಳು. ‘ಅಮ್ಮ -ಟೋನಲ್ಲಿ ಚೆನ್ನಾಗ್ ನಗ್ತಾ ಇದ್ದಾಳೆ. ಅಮ್ಮಾ,ಯಾವಾಗ ಬರ‍್ತೀಯೇ? ಎಲ್ಲರೂ ನೀನು ಸ್ವರ್ಗಕ್ಕೋದೆ ಅಂತರೆ.

ಹೌದಾ? ನಾನು ಬರುತ್ತಿದ್ದೆ. ನನ್ನನ್ನೂ ಕರ‍್ಕೊಂಡು ಹೋಗಬೇಕಿತ್ತು ನೀನು.’ ಪರಿಗೆ ಅಳು ಬಂತು ಜೋರಾಗಿ ಅಳತೊಡಗಿದಳು. ಮಾತು ನಿಲ್ಲಿಸಿ ಒಳಗೆ ಓಡಿಬಂದ ಅಜ್ಜಿ, ‘ಏನಾಗಿದೆಯೇ ನಿನಗೇ? ಯಾರೋ ಸತ್ತೋದೋರ ಮನೇಲಿ ಅತ್ತ ಹಾಗೆ ಅಳ್ತಿದೀ ಯಲ್ಲಾ?’ ಎನ್ನುತ್ತಾ ಕೆನ್ನೆಗೊಂದು ಛಟೀರೆಂದು ಏಟು ಕೊಟ್ಟಳು. ಅದರ ಶಬ್ದಕ್ಕೇ ಪರಿ ಹೆದರಿದಳು. ಕೆನ್ನೆ ಉರಿಯತೊಡಗಿ ಕೆನ್ನೆಯನ್ನು ಉಜ್ಜತೊಡಗಿದಳು. ಮತ್ತೆ ಅಳು ಬಂದು, ಅಳಲು ರಾಗ ತೆಗೆಯಬೇಕೆನ್ನುವಷ್ಟರಲ್ಲಿ ಅಜ್ಜಿಯ ಗಡಸು ಮುಖ ನೆನಪಾಗಿ ಹಾಗೇ ಅಳುವನ್ನು ನುಂಗಿಕೊಂಡಳು.

ಅಪ್ಪ ಬಂದ ಸದ್ದಾಯಿತು. ಹೊರಗಡೆಗೆ ಬಂದಳು. ಅಪ್ಪ ಬೂಟು ಬಿಚ್ಚುತ್ತಲೇ ಕಿವಿಗೆ ಮೊಬೈಲನ್ನು ಹಿಡಿದಿದ್ದರು. ತನ್ನ ಕಡೆಗೆ ನೋಡಲೇ ಇಲ್ಲ. ಪಾಪ! ಯಾರ ಜೊತೇನೋ ಮಾತಾಡ್ತಿದ್ದಾರಲ್ಲಾ! ಪರಿಯ ನೋಟ ಅಪ್ಪನನ್ನೇ ಹಿಂಬಾಲಿಸಿತು. ಆದರೆ ಅಪ್ಪ ಹಿಂತಿರುಗಿ ನೋಡಲಿಲ್ಲ. ರೂಮಿನ ಕಡೆಗೆ ಓಡಿ ಬಂದಳು. ಬಾಗಿಲು ಹಾಕಿದ ಶಬ್ದ! ಮುಚ್ಚಿದ ಬಾಗಿಲಿನ ಮುಂದೆ ಕಣ್ಣು ಕಣ್ಣು ಬಿಡುತ್ತಾ ನಿಂತಳು. ಬಹಳ ಹೊತ್ತಿನ ನಂತರ ಅಪ್ಪ ಹೊರಬಂದರು. ಆದರೆ ಅವರು, ‘ಅಮ್ಮಾ, ಅವರು ಮದುವೆಗೆ ಅವಸರಿಸು ತ್ತಿದ್ದಾರೆ. ಏನು ಹೇಳಲಿ? ಈಗ ತಾನೇ ಶಮೀ ಪೋನ್ ಮಾಡಿದ್ದಳು. ಇದೇ ವಿಷಯ ಚರ್ಚೆಯಾಯಿತು’.

ಅಜ್ಜಿ ಅಪ್ಪ ಮಾತಾಡಿದ್ದು ಪರಿಗೇನೂ ಅರ್ಥವಾಗದಿದ್ದರೂ ಮನೆಯಲ್ಲೊಂದು ಮದುವೆ ನಡೆಯುತ್ತದೆ, ತನಗೆ ಹೊಸ ಬಟ್ಟೆ  ಡಿಸುತ್ತಾರೆಂದು ಅವಳಿಗೆ ಅರ್ಥವಾಯಿತು. ಅದ ಸರಿ! ಮದುವೆ ಯಾರಿಗೆ? ಅಜ್ಜಿಗಾ? ತಾತನಿಗಾ? ಅಪ್ಪನಿಗಾ? ಯಾರಿಗೆ? ತನಗೆ
ಮಾಡುತ್ತಾರಾ? ಚಿಕ್ಕಮಕ್ಕಳಿಗೆ ಮದುವೆ ಮಾಡುವುದಿಲ್ಲ ಅಲ್ಲವಾ? ಪರಿ ತನಗೆ ತಾನೆ ಪ್ರಶ್ನೋತ್ತರದ ಕಾರ್ಯದಲ್ಲಿ ತೊಡಗಿ ಕೊಂಡಳು.

ಈಗ ತಾತ ಹೊರಗಿನಿಂದ ಒಂದು ಪೊಟ್ಟಣ ಹಿಡಿದು ಬಂದರು. ‘ಪರೀ, ಬಾಯಿಲ್ಲೀ..ಏನು ತಂದಿದೀನಿ ನೋಡು?’ ಪರಿಯ ಮುಖ ಇಷ್ಟಗಲವಾಗಿ ಓಡಿಬಂದವಳೇ ತಾತನ ಮುಂದೆ ಕೈ ನೀಡಿದಳು. ತಾತಾ ಸೋ- ಮೇಲೆ ಕುಳಿತವರು, ‘ಮೊದಲೊಂದು ಮುತ್ತು ಕೊಡಿಲ್ಲಿ’ ಎಂದರು. ಪರಿ ತಾತನನ್ನು ಎರಡೂ ಕೈಗಳಿಂದ ಬಳಸಿ ಮುತ್ತು ಕೊಟ್ಟಳು. ಇನ್ನೊಂದು ಇನ್ನೊಂದು ಎನ್ನುತ್ತಾ ತಾತ ನಾಲ್ಕು ಮುತ್ತು ತೆಗೆದುಕೊಳ್ಳುವುದೇ? ಪರಿಗೆ ಸಿಟ್ಟು ಬಂದು ‘ಹೋಗಿ ತಾತ…..ನಾನು ಮುತ್ತು ಕೊಡಲ್ಲ’ ಅನ್ನುತ್ತಲೇ ತಾತನ ಕೈಯ್ಯಿಂದ ಪೊಟ್ಟಣ ತೆಗೆದುಕೊಂಡಳು. ತಾತ ಮತ್ತೆ ತಮ್ಮ ಕೈಗೆ ತೆಗೆದುಕೊಂಡು ಬಿಚ್ಚಿಕೊಟ್ಟರು.

ಅವಳಿಗೆ ಇಷ್ಟವಾದ ಸಿಹಿಯಾದ ಕಾಜೂ ಪೇಡಾ ತಂದಿದ್ದರು. ‘ಯಾರಿಗೂ ಕೊಡಬೇಡ. ಒಬ್ಬಳೇ ತಿನ್ನು. ಈ ಅಜ್ಜಿಗಂತೂ ಮೊದಲೇ ಕೊಡಬೇಡ’ ಎಂದು ಒಳಗೆ ಹೋದರು. ಮತ್ತೆ ವಾಪಸ್ಸು ಬಂದವರ ಕೈಲಿ ಎಣ್ಣೆ ಬಾಟಲು ಬಾಚಣಿಗೆಯಿತ್ತು. ಮೊಮ್ಮ ಗಳನ್ನು ಕೂರಿಸಿಕೊಂಡು ಚೆನ್ನಾಗಿ ಎಣ್ಣೆ ಹಚ್ಚಿ ಸಿಕ್ಕು ಬಿಡಿಸಿ ತಲೆ ಬಾಚಿದರು. ಪರಿ ಈಗ ಲಕ್ಷಣವಾಗಿ ಕಾಣುತ್ತಿದ್ದಳಲ್ಲದೆ,
ತಾತನನ್ನು ತಬ್ಬಿಕೊಂಡು ಮತ್ತೆ ಮುತ್ತುಗಳನ್ನು ಕೊಟ್ಟಳು.

ಅವಳಿಗೆ ಯಾರೂ ಸ್ನಾನ ಮಾಡಿಸಿಲ್ಲವೆಂಬುದೂ ಅವರಿಗೆ ಗೊತ್ತಿತ್ತು. ಪಂಚೆ ಉಟ್ಟುಕೊಂಡು ಬಂದವರೇ ಮೊಮ್ಮಗಳನ್ನು
ಬಚ್ಚಲಿಗೆ ಕರೆದುಕೊಂಡು ಹೋದರು.

***
ಮನೆಯ ತುಂಬಾ ಜನ. ಪರಿ ಅವರಿವರ ಕೈಕಾಲಿಗೆ ಸಿಕ್ಕಿಕೊಂಡು ಒದ್ದಾಡುತ್ತಿದ್ದರೆ, ಅವಳನ್ನು ತಗುಲಿಸಿಕೊಂಡವರು,
ಢಿಕ್ಕಿ ಹೊಡೆದವರು, ಕಾಲು ತುಳಿದವರು, ‘ಈ ಪರಿ ಒಂದು…. ಎಲ್ಲರ ಕಾಲಿಗೂ ಸಿಕ್ಕಾಕ್ಕೊಳ್ಳುತ್ತೆ. ಒಂದು ಕಡೆ ಕೂರೋದಕ್ಕೆ ಇವಳಿಗೇನು?’ ಎಂದು ಕೆಲವರೆಂದರೆ, ಸ್ವತಃ ಅವಳ ಅಜ್ಜಿ, ‘ಅಯ್ಯೋ ಪರದೇಶೀ ಮುಂಡೇದೇ..ಎಲ್ಲಾದ್ರೂ ಕೂತ್ಕೋಬಾರದೇನೇ?
ಯಾಕೆ ಹೀಗೆ ಎಲ್ಲರ ಕಾಲಿಗೂ ಅಡ್ಡಡ್ಡ ಸಿಕ್ತೀಯಾ?’ ಎಂದವರೆ ಅವಳನ್ನು ಎರಡೂ ಕೈಗಳಿಂದ ಬಿಗಿಯಾಗಿ ಎತ್ತಿಹಿಡಿದು, ಒಂದು
ಮೂಲೆಯಲ್ಲಿ ದೊಪ್ಪೆಂದು ಕುಕ್ಕರಿಸಿದರು. ಪರಿ, ಎಲ್ಲಿ ಹೋಗಬೇಕು, ಏನು ಮಾಡಬೇಕು, ಯಾರ ಜೊತೆ ಇರಬೇಕು ಏನೊಂದೂ ತಿಳಿಯದೆ ಮೂಲೆಯಲ್ಲಿ ಎಲ್ಲರನ್ನೂ ನೋಡುತ್ತಾ ಸುಮ್ಮನೆ ಕುಳಿತಳು.

ಅಷ್ಟರಲ್ಲಿ ಅದೆಲ್ಲಿದ್ದರೋ ಪರಿಯ ಅಜ್ಜಿ, ಊರಿನಿಂದ ಯಾವಾಗ ಬಂದಿದ್ದರೋ ದಾಪುಗಾಲು ಹಾಕುತ್ತಾ ಪರಿಯ ಬಳಿಗೆ ಬಂದವರೇ, ‘ಪುಟಾಣಿ, ಇಲ್ಲೇಕಮ್ಮಾ ಹೀಗೆ ಕೂತಿದ್ದೀ?’ ಬಾಯಿಲ್ಲಿ ಎಂದು ಎರಡೂ ಕೈ ನೀಡಿ ಅವಳನ್ನು ಎತ್ತಿ ಕಂಕುಳಿಗೆ ಇರುಕಿಕೊಂಡರು. ಮೆಲ್ಲಗೆ ಸೋರುತ್ತಿದ್ದ ಕಣ್ಣೀರನ್ನು ಒಣಗಿ ಕರೆಗಟ್ಟಿದ್ದ ಕಣ್ಣೀರಿನ ಕರೆಯನ್ನು ತಮ್ಮ ಸೆರಗಿನಿಂದ ಒರೆಸಿದರು.

‘ಕಣ್ಣೀರು ಕರೆಗಟ್ಟಿ ನಿಲ್ಲುವಷ್ಟು ಅತ್ತಿದೆ ಪಾಪ’ ಎನ್ನುತ್ತಾ ಸೆರಗನ್ನು ಹತ್ತಿರದಲ್ಲಿದ್ದ ನೀರಿನ ಬಾಟಲಿಯಿಂದ ಒದ್ದೆ ಮಾಡಿ
ಕೊಂಡು ಮುಖ ಒರೆಸಿ, ಅದೂ ಸಮಾಧಾನವಾಗದೆ, ಬಾಯಿಲ್ಲಿ ಎಂದು ಕರೆದೊಯ್ದು ಕೈಕಾಲು ಮುಖ ತೊಳೆಸಿ ತಲೆಬಾಚಿ
ಬಿಗಿಯಾಗಿ ಜಡೆ ಹೆಣೆದರು. ತಾವು ತಂದಿದ್ದ ಹೊಸಬಟ್ಟೆ ಹಾಕಿ ಪರಿಯನ್ನು ಸಿಂಗರಿಸಿದರು. ಮತ್ತೆಲ್ಲೂ ಪರಿ ಅಜ್ಜಿಯ ಸೊಂಟ
ಬಿಟ್ಟು ಇಳಿಯಲಿಲ್ಲ. ಅಜ್ಜಿ ತಪ್ಪಿದರೆ ಅಜ್ಜನ ತೊಡೆಯಲ್ಲೇ ಇರುತ್ತಿದ್ದವಳಿಗೆ ಇದ್ದಕ್ಕಿದ್ದಂತೆ ಅನುಮಾನವೊಂದು ಶುರುವಾ ಯಿತು.

‘ಅಜ್ಜಿ, ಮದುವೆ ಯಾರದಜ್ಜಿ? ಯಾಕೆ ಮಾಡುತ್ತಿದ್ದಾರೆ?’ ಅಜ್ಜಿಯ ಕಣ್ಣು ತುಂಬಿ ನಿಂತವು. ನಿಮ್ಮಮ್ಮ ಇದ್ದಿದ್ದರೆ ಈ ಮದುವೆ ಎಲ್ಲಾಗುತ್ತಿತ್ತು ಮಗೂ ಎನ್ನಲು ಸಾಧ್ಯವೇ? ಮಗಳನ್ನು ನೆನೆದು ಮನಸ್ಸು ಒದ್ದೆಮುದ್ದೆಯಾಯಿತು. ಆದರೂ ಮಗಳು ಕೇವಲ ಜ್ವರ ಬಂದು ತೀರಿಹೋದಳೆಂದರೆ! ಇನ್ನೂ ಅವಳು ತೀರಿಹೋಗಿ ಮೂರು ತಿಂಗಳೂ ಕಳೆದಿಲ್ಲ, ಇಷ್ಟುಬೇಗ ಇನ್ನೊಂದು ಮದುವೆಗೆ ಆತುರವೇ? ಮದುವೆಗೆ ಬಂದವರೆಲ್ಲ ಪರಿಯ ಕಡೆಗೆ ನೋಡಿ ಅನುಕಂಪ ಸೂಸುವವರೇ! ‘ಈ ಮಗುವಿನ ಅಪ್ಪನಾ ದರೂ ಏನು ಮಾಡುತ್ತಾನೆ? ವಯಸ್ಸಾದ ತಂದೆ ತಾಯಿ. ಪುಟ್ಟ ಹುಡುಗಿ ಪರಿಮಳ. ಹೇಗೆ ನಿಭಾಯಿಸಿಯಾನು? ಬೇಕಿತ್ತು ಬಿಡಿ ಅವನಿಗಿನ್ನೊಂದು ಮದುವೆ.’ ಎಲ್ಲರ ಬಾಯಲ್ಲೂ ಇದೇ ಮಾತೇ.

ಪರಿಯ ಅಪ್ಪನ ಕಡೆಯಿಂದ ಒಬ್ಬರಾದರೂ ಅವಳನ್ನು ಮಾತಾಡಿಸಲು ಬರಲಿಲ್ಲ. ಪರಿಗೆ ಇದೇನೂ ಅರ್ಥವಾಗದಿದ್ದರೂ ಏನೋ ನಡೆಯುತ್ತಿದೆ ಎನ್ನುವುದಂತೂ ಗೊತ್ತಿತ್ತು. ಆಕೆಯ ಹಿಡಿಯಷ್ಟು ಹೃದಯದಲ್ಲಿ ಆಕಾಶದಷ್ಟಗಲದ ಅಮ್ಮನ ರೂಪವೇ ಬಿಂಬವಾಗಿ ಕುಳಿತಿತ್ತು. ಅಪ್ಪನ ರೂಮಿಗೆ ಓಡಿಹೋಗಿ ಅಮ್ಮನನ್ನು ನೋಡಿ ಬರುವಂ ತಿಲ್ಲ, ಮದುವೆಗಾಗಿ ಬೇರೆ ಊರಿಗೆ ಬಂದಿದ್ದೇವಂತೆ. ಹೋದ ಕೂಡಲೇ ಅಮ್ಮನ ಫೋಟೋ ನೋಡಬೇಕು.

ಮದುವೆ ಮುಗಿಯಿತು. ಮಧ್ಯೆ ಒಮ್ಮೆಯಾದರೂ ಪರಿಯ ಅಪ್ಪ ಪರಿಯನ್ನು ನೋಡಿ ಮಾತಾಡಿಸಲು ಬರಲಿಲ್ಲ. ಅವನು ಮದುವೆಯ ಗಂಡಲ್ಲವೇ? ಬಿಡುವೆಲ್ಲಿದೆ? ತನ್ನ ಮಗಳನ್ನು ಹೊಸ ಹೆಂಡತಿಗೆ ಪರಿಚಯ ಮಾಡಿಸಬೇಕಾಗಿತ್ತು. ಪಾಪ! ಅವ ನಾದರೂ ಏನು ಮಾಡುತ್ತಾನೆ? ಸುತ್ತಲೂ ಗೆಳೆಯರು ನೆರೆದಿದ್ದಾರೆ. ಹೊಸ ಹೆಂಡತಿಯ ಗೆಳತಿಯರು ರೇಗಿಸುತ್ತಿದ್ದಾರೆ. ಅವಳ ನೆಂಟರಿಷ್ಟರು ಆಗಾಗ ಬಂದು ಮಾತಾಡಿಸುತ್ತಿರುವಾಗ ಅವನಾದರೂ ಏನು ಮಾಡಲಿಕ್ಕಾಗುತ್ತದೆ? ಅಲ್ಲವಾ? ಇನ್ನೇನು ಛತ್ರ ಖಾಲಿ ಮಾಡಬೇಕು, ಆಗ ಪರಿಯ ತಾತ ಬಂದರು. ಪರಿಯನ್ನು ಎತ್ತಿಕೊಂಡು ಮುದ್ದಿಸಿದರು.

ಪರಿಯೂ ಅವರನ್ನಪ್ಪಿ ಮುತ್ತು ಕೊಟ್ಟಳು. ತಾತನ ಕಣ್ಣಲ್ಲಿ ಚಿಮ್ಮಿದ ನೀರನ್ನು ಪರಿ ತನ್ನ ಎಳಸಾದ ಬೆರಳುಗಳಿಂದ ಒರೆಸಿ ‘ಯಾಕೆ ತಾತ ಅಳ್ತಿದೀಯಾ?’ ಎಂದರೂ ತಾತ ಏನೂ ಹೇಳದಾದರು. ಬೀಗರಿಬ್ಬರನ್ನು ಕುಳ್ಳಿರಿಸಿ, ‘ನಿಮ್ಮ ಬಳಿ ನನ್ನ ಬೇಡಿಕೆ ಯೊಂದಿದೆ. ನಡೆಸಿಕೊಡುವಿರಾ?’ ಎಂದು ಬೀಗರ ಕೈ ಹಿಡಿದರು. ಪರಿ ಸುಮ್ಮನೆ ನೋಡುತ್ತಿದ್ದಳು. ‘ಈ ದೊಡ್ಡ ಮಾತೆಲ್ಲ ಬೇಕೇ? ಅದೇನು ಹೇಳಿ?’ ಎಂದರು.

ತಾತನ ಮುಖ ಮುದುಡಿದ್ದನ್ನು ಪರಿ ಗಮನಿಸಿದಳು. ಆಕಡೆ ಅಜ್ಜ ಅಜ್ಜಿಯ ಕಣ್ಣುಗಳು ಕುತೂಹಲದಿಂದ ತಾತನನ್ನೇ ನೋಡು ತ್ತಿದ್ದವು. ಬೀಗರ ತೊಡೆಯ ಮೇಲಿಂದ ಪರಿಯನ್ನು ಕೆಳಗಿಳಿಸಿ ‘ ಪುಟ್ಟ, ಅಲ್ಲಿ ಎಲ್ಲ ಏನು ಮಾಡುತ್ತಿದ್ದಾರೆ? ಓಡಿ ಹೋಗಿ ನೋಡು’ ಎಂದು ಕಳಿಸಿಕೊಟ್ಟರು. ಇನ್ನು ತಡ ಮಾಡುವುದು ಬೇಡವೆಂದು, ತಕ್ಷಣ ಬೀಗರ ಎರಡೂ ಕೈ ಹಿಡಿದುಕೊಂಡು, ‘ಇದು ನನ್ನ ಬೇಡಿಕೆಯೆಂದು ತಿಳಿಯಿರಿ. ದಯವಿಟ್ಟು ಪರಿಮಳಳನ್ನು ಇಲ್ಲಿ ಬಿಡಬೇಡಿ. ನನ್ನ ಮಗ ಸೊಸೆಯ ಕಯ್ಯಲ್ಲಿ ಮಗು ನಲುಗಿ ಹೋಗುತ್ತದೆ’ ಅಷ್ಟೆ ಅವರಿಗೆ ಹೇಳಲು ಸಾಧ್ಯವಾಗಿದ್ದು. ಬೀಗರಿಬ್ಬರೂ, ‘ನಿಮ್ಮ ಮನಸ್ಸು ನಮಗೆ ಅರ್ಥವಾಗುತ್ತದೆ ರಾಯರೇ. ಚಿಂತಿಸಬೇಡಿ. ನಾವು ಅದೇ ಯೋಚನೆಯಲ್ಲಿದ್ದೆವು.’

ತಾತನ ಕಣ್ಣಲ್ಲಿ ನೀರು ತುಂಬಿತ್ತು. ‘ನಾನು ಆಗಾಗ ಬಂದು ಪುಟ್ಟಿಯನ್ನು ನೋಡಿಕೊಂಡು ಹೋಗುತ್ತೇನೆ. ಅವಳ ಖರ್ಚಿಗೂ ಹಣ ಕೊಡುತ್ತೇನೆ. ನನಗೆ ಅವಳಿಲ್ಲಿ ಅನಾಥಳಂತಿರುವುದು ಖಂಡಿತ ಇಷ್ಟವಿಲ್ಲ. ಅದನ್ನು ನಾನು ನೋಡಲಾರೆ.’ ಅಷ್ಟರಲ್ಲಿ ಪರಿ ಓಡಿ ಬಂದಳು. ಕಣ್ತುಂಬಿಕೊಂಡಿರುವ ತಾತನನ್ನು ನೋಡಿ ತಬ್ಬಿಬ್ಬಾಗಿ ಸುಮ್ಮನೆ ನಿಂತುಬಿಟ್ಟಳು. ಅಜ್ಜ ಅಜ್ಜಿಯರಿಬ್ಬರೂ ಮಗುವನ್ನು ಹತ್ತಿರ ಸೆಳೆದುಕೊಂಡು ತಲೆ ನೇವರಿಸಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡರು.
***
ಸದ್ಯ! ಪೀಡೆ ತೊಲಗಿತೆಂದು, ಕಾಡುವ ಗ್ರಹವೊಂದು ಕಣ್ಮರೆಯಾಯಿತೆಂದು ಅಮ್ಮ, ಮಗ ಸಂತಸಿಸಿದರು. ಆದರೆ ಈ ಸಂತೋಷ ಹೊರಗಿನಿಂದ ಕಿರಿಹೆಂಡತಿಯಾಗಿ ಬಂದ ಹುಡುಗಿಗಿರಲಿಲ್ಲ. ‘ಮಗುವನ್ನೇಕೆ ಕಳಿಸಿದಿರಿ? ಕರೆತನ್ನಿ. ನಾನು ನೋಡಿಕೊಳ್ತೇನೆ. ಯಾಕೆ ಈ ರೀತಿ ಮಾಡಿದಿರಿ? ಹೋಗೋಣ ಕರೆದುಕೊಂಡು ಬರೋಣ’ ಎಂದು ಹಠ ಹಿಡಿದು ಕುಳಿತಳು. ಆದರೆ ಇವರು ಸುತಾರಂ ಸಿದ್ಧರಿರಲಿಲ್ಲ. ಮೊದಲಾಗಿ ಅಪ್ಪನಿಗೆ ತನ್ನ ಕರುಳಕುಡಿಯ ಆರ್ತತೆಯೇ ಅರ್ಥವಾಗಿರಲಿಲ್ಲ.

ಅದರೊಂದಿಗೆ ಆಪ್ತತೆ ಬೆಳೆಸಿಕೊಂಡಿದ್ದರೇ ತಾನೇ, ತನ್ನ ಕುಡಿ, ನೊಂದುಕೊಂಡೀತು, ದುಃಖದಲ್ಲಿ ಬೆಂದೀತೆಂಬ ತುಡಿತ ಮೂಡುವುದು? ಅದ್ಯಾವುದೂ ಅವನಿಗಿರಲಿಲ್ಲ. ಆದರೆ ಈ ಹೊಸ ಹುಡುಗಿ ಮಗುವನ್ನು ಕರೆತನ್ನಿ ಎಂದು ಮಗುವಿನಂತೆ ರಚ್ಚೆ ಹಿಡಿದಿದ್ದಾಳಲ್ಲಾ? ಇದೇನಿದು? ತಾನು ತಪ್ಪು ಮಾಡಿದೆನಾ ಬೀಗರಿಗೆ ಮಗುವನ್ನು ಕರೆದುಕೊಂಡು ಹೋಗಲು ಹೇಳಿ? ಪರಿಯ ತಾತ ಚಿಂತೆಯಲ್ಲಿ ಬಿದ್ದರು. ಆದರೆ ಅವರ ಮನದಲ್ಲಿ ನಿಶ್ಚಿತಭಾವವೊಂದಿತ್ತು. ನಮ್ಮನ್ನೆಲ್ಲ ಮೆಚ್ಚಿಸಲು ಹೊಸದರಲ್ಲಿ ಹೀಗಾಡುತ್ತಾಳೆ. ಅವಳದೇ ಮಗುವಾದಾಗ ಈ ಪ್ರೀತಿ ಎಲ್ಲಿ ಹಾರಿಹೋಗಿರುತ್ತದೋ? ಸಮಾಧಾನಿಯಾಗಿದ್ದರು. ಆದರೆ ಹೊಸ
ಮದುಮಗಳು ಹೀಗೆ ಸಮಾಧಾನದಲ್ಲಿರಲಿಲ್ಲ.

ಅವಳಿಗೆ ಆ ಮಗು ಬೇಕಿತ್ತು. ಮುದ್ದಾಗಿತ್ತಂತೆ. ಸರಿಯಾಗಿ ನೋಡಿರಲೂ ಇಲ್ಲ ತಾನು! ಎಲ್ಲಿ ಕರೆತಂದೇ ಇರಲಿಲ್ಲ. ಮದುವೆ ಮನೆಯಲ್ಲಿ ನೋಡಿದ್ದಷ್ಟೆ. ಅದರಲ್ಲೂ ತನ್ನ ಗಂಡ, ಆ ಮಗುವನ್ನು ಆ ಕಡೆ ಈ ಕಡೆಗೆ ಓಡಿಸುತ್ತಲೇ ಇದ್ದರು. ಮದುಮಗಳಾಗಿ ನಿಂತವಳಿಗೆ ಏನೂ ಮಾಡಲು ತೋಚಿರಲಿಲ್ಲ. ಆದರೆ ಈಗ ನೋಡಿದರೆ ಆ ಮಗುವನ್ನೇ ಕಳಿಸಿಬಿಟ್ಟಿದ್ದಾರೆ. ಪರಿಯ ತಾತ ಒಮ್ಮೆ ಮಗುವನ್ನು ಕರೆತರೋಣವೆಂದುಕೊಂಡರೆ ಮತ್ತೊಮ್ಮೆ ಯಾರ ಬಣ್ಣ ಹೇಗೆ ತಿರುಗುತ್ತದೋ ಹೇಳಲಾಗದು.

ಸುಮ್ಮನಿದ್ದು ಬಿಡೋಣವೆಂದು ನಿರ್ಧರಿಸಿದರು. ಪರಿಗೆ ತುಂಬಿ ತುಳುಕುವಷ್ಟು ಪ್ರೀತಿ, ವಾತ್ಸಲ್ಯ ಸಿಕ್ಕಿಹೋಗಿದೆ. ಬಾಯಾರಿದವರ ಮುಂದೆ ಸಿಹಿನೀರ ಕೊಳವೇ ಪ್ರತ್ಯಕ್ಷವಾದಂತಾಗಿದೆ. ಎಲ್ಲರೂ ಮುದ್ದು ಮಾಡುವವರೇ! ಅಜ್ಜಿ ಅಜ್ಜ, ಅತ್ತೆ, ಮಾವ, ಅಕ್ಕಪಕ್ಕದವರು ಬಂದವರು ಹೋದವರು ಎಲ್ಲರೂ. ಪರಿಯ ಪ್ರಪಂಚವೀಗ ಸ್ವರ್ಗವಾಗಿದೆ. ಅಲ್ಲಿ ತಾತ ಒಬ್ಬರೇ ತನ್ನನ್ನು ಎತ್ತಿಕೊಂಡು ಮುತ್ತು ಕೊಟ್ಟು ಜೊತೆಯಲ್ಲಿಟ್ಟುಕೊಳ್ಳುತ್ತಿದ್ದುದು. ಬೇರೆ ಯಾರೂ ತನ್ನನ್ನು ಮಾತಾಡಿಸಿದ್ದೇ ಇಲ್ಲ.

ತಾತನ ಮನೆಯಲ್ಲಿ ಬೆಕ್ಕು ಕಾಲಿಗೆ ಸಿಕ್ಕಾಗ ಹೊಡೆದು ಓಡಿಸುತ್ತಾರಲ್ಲಾ ಹಾಗೆ ಅಲ್ವಾ ತನ್ನನ್ನು ಬೈದು ಪೆಟ್ಟು ಕೊಟ್ಟು ಓಡಿಸುತ್ತಿದ್ದುದು! ಈಗ ಯಾರೂ ಬೈಯ್ಯುವುದಿಲ್ಲ. ಇಲ್ಲೇ ಸ್ಕೂಲಿಗೂ ಸೇರಿಸುತ್ತಾರಂತೆ. ಅಜ್ಜನೇ ದಿನಾ ಕರೆದುಕೊಂಡು
ಹೋಗುತ್ತಾರಂತೆ ಅಜ್ಜಿ ಕರೆದುಕೊಂಡು ಬರುತ್ತಾರಂತೆ. ಮೊನ್ನೆ ಅಪ್ಪನ ಹತ್ತಿರ ಅಜ್ಜ ಏನೋ ಮಾತಾಡ್ತಿದ್ರು. ಪರೀ ಪರೀ ಅಂತಿದ್ದರು. ತನ್ನ ವಿಷಯವೇ. ‘ನೀವು ಯಾವಾಗ ಬರುತ್ತೀರಿ, ಆಗಲೇ ನಾವು ಕಾರ್ಯ ಇಟ್ಟುಕೊಳ್ತೀವೆ’ ಅಂದ್ರಲ್ಲಾ ಏನು ಕಾರ್ಯ? ಅಜ್ಜಿಯ ಬಳಿ ತಾತ ಒಪ್ಪಿಗೆ ಕೊಟ್ರು ಅಂದ್ರಲ್ಲ ಏನು ಒಪ್ಪಿಗೆನೋ ಏನೋ? ಪರಿಗೆ ಬೆಳಗ್ಗೆ ಫ್ರಿಜ್ಜಿನಲ್ಲಿಟ್ಟಿದ್ದ ಐಸ್
ಕ್ರೀಮ್ ನೆನಪಾಗಿ ಅಲ್ಲಿಗೆ ಓಡಿಹೋದಳು.

ಮಾವ ಯಾಕೋ ಏನಪ್ಪಾ ತನ್ನನ್ನು ತಬ್ಬಿಕೊಂಡು ಅಳುತ್ತಾರೆ. ‘ಇವಳು ನನ್ನ ಮಗಳು ಇನ್ನು ಮೇಲೆ’ ಅನ್ನುತ್ತಲೇ ತಬ್ಬಿ ಕೊಂಡರಲ್ಲಾ ತನ್ನನ್ನು? ತಾನು ಯಾರ ಮಗಳಾದರೂ ಆಗಬಹುದೇ? ಅವಳು ಹೋಗ್ಬಾರ‍್ದಿತ್ತು ಅಂತಾರೆ. ಅಮ್ಮನೇನೋ! ಇವರೇನಪ್ಪ ಇವ್ರು? ಯಾರು ಕೇಳಿದ್ರೂ ಅಮ್ಮ ಎಲ್ಲಿಗೆ ಹೋದ್ಲು ಅಂತೇ ನಾದ್ರೂ ಹೇಳ್ತಾರಾ? ಬರೀ ಹೋದ್ಲು ಹೋದ್ಲು! ಎಲ್ಲಿಗೆ? ಇನ್ಯಾವತ್ತು ಅಮ್ಮ ಎಲ್ಲಿ ಅಂತ ಯಾರನ್ನೂ ಕೇಳಲ್ಲ. ಅವರಾಗಿಯೇ ಹೇಳಲಿ.! ಪರಿಯ ಮುನಿಸು ಮನೆಯವರೆಲ್ಲರ ಮೇಲೂ!

ಮನೆಯಲ್ಲಿ ಎಲ್ಲರೂ ಯಾರ‍್ಯಾರೋ ಬಂದಿದ್ದಾರೆ. ತನಗೆ ಬೇಕಾದವರೇ ಅಂತೆ. ಸದ್ಯ! ಪರಿಗೊಂದು ಬಾಳು ಸಿಕ್ತು ಅಂತಿದ್ದಾರೆ. ತಬ್ಬಲಿಯಲ್ಲ ಅವಳು ಅಂತಿದ್ದಾರೆ. ಏನೆಂದರೂ ತಂಗಿ ಮಗಳು. ‘ಸಂತೋಷ್ ಒಳ್ಳೆ ಕೆಲಸವನ್ನೇ ಮಾಡಿದ’ ಅಂತಾರೆ. ಸಂತೋಷ್ ಮಾವ ಒಳ್ಳೆ ಕೆಲಸ ಮಾಡಿದರೇ? ಏನು? ಪರಿಗೆ ಏನೂ ಅರ್ಥವಾಗುವುದಿಲ್ಲ ಎಲ್ಲ ಗೋಜಲು ಗೋಜಲು. ಆ ಮನೆಯಂತೆ ಮಾತ್ರ ಇಲ್ಲಿಲ್ಲ ಅದೇ ಖುಷಿ ತನಗೆ. ಒಳಗೇ ನಕ್ಕಳು ಪರಿ.

***

‘ಸುಮ್ಮನೆ ಮಗುವನ್ನು ಕೊಟ್ಟುಬಿಡಿ. ಅವಳ ಅಮ್ಮನಾಗಿ ನಾನಿದ್ದೇನೆ.’ ಅಪ್ಪನ ಪಕ್ಕ ಕೂತಿದ್ದರಲ್ಲ ಅವರು, ಅಳುತ್ತಾ ಗೋಗರೆಯುತ್ತಿದ್ದಾರೆ. ಯಾರಿವರು? ಪರಿಗೆ ಅವರಾರೆಂದು ಉತ್ತರ ಸಿಗಲಿಲ್ಲ! ಮಾವ ಅತ್ತೆ ತನ್ನನ್ನು ಬಿಗಿಯಾಗಿ ಅಪ್ಪಿಕೊಂಡು,
‘ನಿಮ್ಮ ಯಜಮಾನರೇ ಒಪ್ಪಿದ್ದಾರೆ. ನಿನ್ನದೇನಮ್ಮಾ ಮಧ್ಯೆ?’ ‘ಅವರು ಒಪ್ಪಿದರೆ? ನಾನು ಕೂಡ ಒಪ್ಪಬೇಕು ತಾನೇ?’ ‘ಮುಂದೆ ನಿನಗೆ ಮಗುವಾದರೆ ಇದು ಮತ್ತೆ ಅನಾಥವೇ.

ನಮಗಂತೂ ಮಕ್ಕಳಾಗುವುದಿಲ್ಲ. ಅದಕ್ಕೆ ದತ್ತು ತಗೊಳ್ತಿದ್ದೇವೆ.’ ಅವರು ಜೋರಾಗಿ ಅಳುತ್ತಾ ಅಪ್ಪನನ್ನು ಬೈಯ್ಯುತ್ತಿದ್ದಾರೆ.
ಅಪ್ಪ ಒಂದೂ ಮಾತಾಡುತ್ತಿಲ್ಲ. ತನ್ನನ್ನು ಅತ್ತೆ ಮಾವ ಅದೇನೋ ಅದು ನಂಗೆ ಹೇಳಕ್ಕೇ ಬರ‍್ತಿಲ್ಲ ಅದು ತಗೊಂಡ್ರಂತೆ. ಎಲ್ಲರೂ
ತನ್ನ ಕೈಗೆ ಎಷ್ಟೊಂದು ದುಡ್ಡು ಏನೇನೋ ಕೊಟ್ಟರು. ಅಪ್ಪನ ಜತೆಗೆ ಬಂದಿದ್ದ ಆ ಅವರು ಮತ್ತೆ ಅಜ್ಜಿ ಹೊರಟುಹೋದರು. ತಾತ ಮಾತ್ರ ಊಟಕ್ಕೆ ಕುಳಿತಿದ್ದರು. ಅವರು ಊಟ ಮಾಡಿ ಕೊಂಡು ಹೋಗುತ್ತಾರಂತೆ.

***
ಪರಿ ಈಗ ಸ್ಕೂಲಿಗೆ ಸೇರಿದ್ದಾಳೆ. ಯು.ಕೆ.ಜಿ. ಆಗಿದ್ದಾಳೆ. ಇದ್ದಕ್ಕಿದ್ದಂತೆ ಒಂದು ದಿನ ಅಪ್ಪ ಮತ್ತು ಅವಳ ಚಿಕ್ಕಮ್ಮ ಪ್ರತ್ಯಕ್ಷರಾ
ದರು. ಹೆಚ್ಚು ಮಾತೇನಿಲ್ಲ. ‘ಚೆನ್ನಾಗಿದೀರಾ..ಚೆನ್ನಾಗಿದೀರಾ’ ಅಷ್ಟೆ. ಬಂದವರು ಊಟ ತಿಂಡಿ ಎಲ್ಲವನ್ನೂ ಮುಗಿಸಿದರು.
‘ನಿಮ್ಮ ಬಳಿ ಒಂದು ಮಾತು ಕೇಳಬೇಕು.’ ಅಪ್ಪ ನಿಧಾನವಾಗಿ ಹೇಳುತ್ತಿದ್ದಾರೆ. ‘ಹೇಳಿ’ ಅಜ್ಜ ಅನುಮತಿ ಕೊಟ್ಟರು. ‘ಇವಳು ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡ ಬಿಟ್ಟಿದ್ದಾಳೆ. ಪರಿ ಇವಳಿಗೆ ಬೇಕಂತೆ.’ ಅಪ್ಪ ಮಾತು ನಿಲ್ಲಿಸಿದರು.

ಅಜ್ಜ ಪರಿಯನ್ನು ಆಚೆ ಕಳಿಸಿದರು. ಸೊಸೆಯನ್ನು ಕೂಗಿ ಕರೆದು, ‘ಅಮ್ಮಾ, ಕಾಫಿ ಮಾಡಮ್ಮ. ಪಾಪ ಇವರಿಗೆ ತಡವಾಯಿತಂತೆ.
ಹೊರಡಬೇಕಂತೆ.’ ಒಳಗಿನಿಂದ ಉತ್ತರ ಬರಲಿಲ್ಲ. ಅಜ್ಜ ಮೌನವಾಗಿ ಹೊರಗೆ ನೋಡುತ್ತಿದ್ದವರು. ‘ಈಗ ಕೊನೇ ಬಸ್ಸಿದೆ. ಇಲ್ಲಾಂದ್ರೆ ಇವತ್ತು ಇಲ್ಲೇ ಉಳಿದು ಬೆಳಗ್ಗೆ ಹೊರಡಿ’ ಮುಂದಕ್ಕೆ ಅಜ್ಜ ಮಾತಾಡಲಿಲ್ಲ. ಎಲ್ಲರ ಮುಖದಲ್ಲೂ ಮೌನ ತಾಂಡವ ವಾಡತೊಡಗಿತು.