ಹಸಿರಿನ ನಡುವೆ ಮೋಡದ ಲೋಕ. ಈ ಸುಂದರ ಸ್ಥಳದಲ್ಲಿ ಸ್ವಲ್ಪ ಹೆಚ್ಚಾಗಿಯೇ ಪೋಟೋ ತೆಗೆದುಕೊಂಡೆವು. ಇದನ್ನು ಗಮನಿಸಿದ ಆಂಧ್ರಪ್ರದೇಶ ರಾಜ್ಯದ ಪ್ರವಾಸಿಗರೊಬ್ಬರು ‘ವೀಳ್ಳಿಕಿ ಪೋಟೋ ಪಿಚ್ಚಿ ಎಕ್ಕುವಾ’ ಎಂದದ್ದು ಕೇಳಿಸಿತು!
ಸಿ ಜಿ ವೆಂಕಟೇಶ್ವರ
ಕಣ್ಣಾಡಿಸಿದರೆ ಎ ಕಡೆ ಹಚ್ಚ ಹಸಿರು. ನಮ್ಮ ಉಸಿರು ಹೊರ ಬಂದರೆ ಬಾಯಿ ಮೂಗಿ ನಿಂದ ಹೊಗೆ ಬಂದಂತಹ ಅನುಭವ. ತಂಪಾದ ತಂಗಾಳಿಯು ಬಂದು ನಮ್ಮ ದೇಹ ಸೋಕಿದಾಗ ಆದ ಪರಮಾನಂದ ವರ್ಣಿಸಲಸದಳ. ಅದನ್ನು ಅನುಭವಿಸಿಯೇ ತೀರಬೇಕು. ದೂರದಲ್ಲಿರುವ ಬೆಟ್ಟಗಳ ಸಾಲು ನಮ್ಮನ್ನೇ ಕೈ ಬೀಸಿ ಕರೆಯುತ್ತಿದ್ದವು. ಇನ್ನೂ ಸ್ವಲ್ಪ ದೂರದಲ್ಲಿ ಇರುವ ಕಾನನವು ‘ನೀನೇನು ಮಹಾ ನಾನೇ ಸುಂದರ.
ಕಣ್ತುಂಬಿಸಿಕೊಳ್ಳಲು ಸಾಲದು ನಿನ್ನ ನಯನ’ ಎಂದು ಕೂಗಿ ಹೇಳಿದಂತಿತ್ತು. ಸಾಲು ಸಾಲಾದ ಗಿರಿಶಿಖರಗಳು ನಾವೇನು ಕಮ್ಮಿ ನಮ್ಮನ್ನು ಸ್ವಲ್ಪ ನೋಡಿ ಎಂದು ಪಿಸುಗುಡು ತ್ತಿದ್ದವು. ಆ ಗಿರಿಶಿಖರಗಳಿಗೆ ಯಾರೋ ಹತ್ತಿಯನ್ನು ಪೋಣಿಸಿದ್ದರು. ಅದರ ಜೊತೆಗೆ ಹಾಗೊಮ್ಮೆ ಈಗೊಮ್ಮೆ ಮಂಜಿನ ತೆರೆಗಳು ಬಂದು ನಮಗೂ ಬೆಟ್ಟಗಳಿಗೂ ಮುತ್ತಿಟ್ಟು ನಿಧಾನವಾಗಿ ಮಾಯವಾಗುತ್ತಿದ್ದವು. ಕ್ಷಣಕಾಲ ಮುಂದಿನ ಎಲ್ಲಾ ದೃಶ್ಯಗಳು ಅದೃಶ್ಯ ನಮ್ಮ ಮುಂದೆ ಬರೀ ಬಿಳಿ ಪರದೆ. ಈಗ ಕಂಡ ಅದ್ಬುತ ದೃಶ್ಯಗಳು ಮಾಯವೇ? ಮಂತ್ರವೇ? ಎಂಬ ಅನುಮಾನ ವ್ಯಕ್ತಪಡಿಸುತ್ತಾ ಇರುವಾಗ ನಾನೇ ಮಾಯಕಾರ ಎಂದು ರವಿಯು ಇಣುಕಿದ. ಬಿಳಿ ಪರದೆ ಮಾಯವಾಗಿ ಮತ್ತೆ ಸೌಂದರ್ಯ ಲೋಕದ ಅನಾವರಣ….
ಇಂತಹ ಅದ್ಭುತವಾದ ದೃಶ್ಯಗಳನ್ನು ನೋಡಿದ ನಾವು ಇದು ಕನಸು ಎಂದು ತಿಳಿದೆವು. ಇಲ್ಲ.. ಇದು ಕನಸಲ್ಲ. ನಿಜ! ನಮ್ಮ ಮುಂದೆ ಕೆಲವರು ತಮ್ಮ ಕ್ಯಾಮೆರಾಗಳಲ್ಲಿ ಪೋಟೋ ತೆಗೆದುಕೊಳ್ಳುತ್ತಿದ್ದರು, ವೀಡಿಯೋ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದರು. ಆಗ ನಾವು ವಾಸ್ತವಕ್ಕೆ ಬಂದೆವು. ದೇವರಿಂದ ಮಾತ್ರ ಈ ತಾಣ ನಿರ್ಮಿಸಲು ಸಾಧ್ಯವೇನೊ. ಅದಕ್ಕೇ ಆ ಸ್ಥಳಕ್ಕೆ ದೇವರ ಮನೆ ಕಾಡು ಎಂಬ ಅನ್ವರ್ಥನಾಮ. ಇಂತಹ ಸ್ವರ್ಗ ಸದೃಶ ವಾದ ತಾಣವನ್ನು ಮೊದಲೇ ಕಣ್ತುಂಬಿಕೊಂಡು ನಮಗೂ ತೋರಿಸಲು ನಮ್ಮ ಸಹೋದ್ಯೋಗಿಗಳು ಹಾಗೂ ಕಲಾವಿದರಾದ ಕೋಟೆ ಕುಮಾರ್ ರವರು ಕರೆದುಕೊಂಡು ಬಂದರು.
ತುಮಕೂರಿನಿಂದ ಹೊರಟ ನಾವು ಹಾಸನದ ಮೂಲಕ ಬೇಲೂರು ದಾಟಿ, ಮೂಡಿಗೆರೆಯಂದು ಸ್ಟ್ರಾಂಗ್ ಟೀ ಕುಡಿದು ದೇವರ ಮನೆ ಕಡೆ ಹೊರಟೆವು. ದೇವರ ಮನೆಯ ಸೌಂದರ್ಯವನ್ನು ನಾವು ಸವಿದಾದ ಬಳಿಕ ನಮ್ಮ ಮಧುರ ನೆನಪಿಗೆ ಮತ್ತು ನಮ್ಮವರಿಗೆ ತೋರಿಸಲು ವೀಡಿಯೋ ಮತ್ತು ಚಿತ್ರಗಳ ಸೆರೆಹಿಡಿಯಲು ನಮ್ಮ ಮೊಬೈಲ್ ಮತ್ತು ಸೆಲ್ಪಿ ಸ್ಟಿಕ್‌ಗಳನ್ನು ಹೊರ ತೆಗೆದೆವು.
ಮನಬಂದಂತೆ ಪೋಟೋ ತೆಗೆದುಕೊಂಡೆವು. ನಾವು ಸ್ವಲ್ಪ ಹೆಚ್ಚಾಗಿಯೇ ಪೋಟೋ ತೆಗೆದುಕೊಂಡೆವು. ಇದನ್ನು ಗಮನಿಸಿದ ಆಂಧ್ರಪ್ರದೇಶ ರಾಜ್ಯದ ಪ್ರವಾಸಿಗರೊಬ್ಬರು ‘ವೀಳ್ಳಿಕಿ ಪೋಟೋ ಪಿಚ್ಚಿ ಎಕ್ಕುವಾ’ ಎಂದದ್ದು ನನಗೆ ಕೇಳಿತು. ಹೌದು ಅಣ್ಣ
ಪೋಟೋಗಳಿರಬೇಕಲ್ಲ ನೆನಪಿಗೆ – ಎಂದಾಗ ನನಗೆ ತೆಲುಗು ಅರ್ಥ ವಾಗಿದ್ದು ಅವರಿಗೆ ತಿಳಿದು ನಗುತ್ತಾ… ಎಂಜಾಯ್ ಸರ್ ಎಂದು ಹೊರಟರು. ನಾವು ಬೆಟ್ಟದಿಂದ ಕೆಳಗಿಳಿದು ಬಂದು ಕಾಲಬೈರವೇಶ್ವರ ದೇಗುಲದ ಬಳಿ ನಿಂತೆವು. ಇದೂ ಸಹ ಒಂದು ಸುಂದರ ಸ್ಥಳ.
ಹೌ ಟು ಗೋ : ಮೂಡಿಗೆರೆಯಿಂದ ೨೦ ಕಿ.ಮಿ. ದೂರದಲ್ಲಿದೆ ದೇವರಮನೆ. ಧರ್ಮಸ್ಥಳ ಕಡೆಯಿಂದ ಬರುವುದಾದರೆ
ಕೊಟ್ಟಿಗೆಹಾರದ ಬಳಿ ಬಲಕ್ಕೆ ಚಲಿಸಬೇಕು.