ಜಿ.ನಾಗೇಂದ್ರ ಕಾವೂರು
ಬಳ್ಳಾರಿ ಜಿಲ್ಲೆಯ ಸಂಡೂರು ಬೆಟ್ಟ ಗುಡ್ಡಗಳ ನಾಡು. ಈ ಪ್ರದೇಶದ ಸುತ್ತಲೂ ಇರುವ ಬೆಟ್ಟ, ಗುಡ್ಡಗಳ ನೋಟ ರಮಣೀಯ ವಾಗಿರುತ್ತದೆ. ಮಳೆ ಬಿದ್ದರಂತೂ ಎಲ್ಲೆಡೆ ಹಸಿರು. ಇಲ್ಲಿನ ಬೆಟ್ಟ ಗುಡ್ಡಗಳಲ್ಲಿ ಒಂದೆರಡು ಜಲಪಾತಗಳು ಮಾತ್ರ ಇಡೀ ವರ್ಷ ನೋಡಲು ಸಿಕ್ಕರೆ, ಕೇವಲ ಮಳೆಗಾಲದಲ್ಲಿ ಮಾತ್ರ ಕೆಲವು ಜಲಪಾತಗಳು ಹುಟ್ಟಿಕೊಳ್ಳುತ್ತವೆ.
ಅನೇಕ ಜಲಪಾತಗಳನ್ನು ವೀಕ್ಷಿಸಲು ಸರಿಯಾದ ಮಾರ್ಗವಿಲ್ಲದ ಕಾರಣ ಆಸಕ್ತರು ಅಂತಹ ಜಲಪಾತಗಳನ್ನು ವೀಕ್ಷಿಸಲು ಹೋಗುವುದಿಲ್ಲ. ಇತ್ತೀಚೆಗೆ ದೊರೆತ ಬಿಡುವಿನ ಸಮಯದಲ್ಲಿ ‘ಸಂಡೂರ್ ಸಮಿಟರ್ಸ್’ ತಂಡದ ಸದಸ್ಯರು ‘ಧುಮುಕು ಫಾಲ್ಸ್’ಗೆ ಚಾರಣ ಮಾಡಲು ನಿರ್ಧರಿಸಿದೆವು.
ಸ್ಥಳೀಯರ ಆಡುಭಾಷೆಯ ‘ಡುಮುಕು ಫಾಲ್ಸ್’ನಲ್ಲಿ ವರ್ಷವಿಡೀ ನೀರಿನ ಹರಿವು ಇರುತ್ತದಾದರೂ, ಮಳೆಗಾಲದಲ್ಲಿ ನೀರಿನ ರಭಸ ಹೆಚ್ಚಾಗಿದ್ದು ನೋಡಲು ಸುಂದರವಾಗಿರುತ್ತದೆ. ಈ ವರ್ಷ ಹಲವು ಬಾರಿ ಸಾಕಷ್ಟು ಮಳೆ ಬಂದಿದ್ದರಿಂದ, ಜಲಪಾತದ ನೋಟ ಸುಂದರವಾಗಿರುತ್ತದೆಂಬ ವಿಶ್ವಾಸದಿಂದ ಚಾರಣಕ್ಕೆ ಸಿದ್ಧವಾದೆವು.
ಸಂಡೂರಿನಿಂದ ಯಶವಂತನಗರ ಮಾರ್ಗದಲ್ಲಿ ೧೦ ಕಿ.ಮೀ. ಕ್ರಮಿಸಿದರೆ, ಅಂಕಮನಾಳ್ ಸೇತುವೆ ಸಿಗುತ್ತದೆ. ಸೇತುವೆಯ ಬಳಿ ಎಡ ತಿರುವು ಪಡೆದು ಮಣ್ಣಿನ ರಸ್ತೆಯಲ್ಲಿ ಸುಮಾರು ಮೂರು ಕಿಲೋ ಮೀಟರ್ ದೂರ ವಾಹನಗಳ ಮೂಲಕ ಅಥವಾ ನಡೆದುಕೊಂಡು ಹೋಗಬೇಕು. ನಂತರ ಕಾಡಿನ ಮಾರ್ಗ ವಾಗಿ ಎರಡು ಕಿ.ಮೀ. ನಡೆದು ಬೆಟ್ಟವನ್ನೇರಿದರೆ ಧುಮುಕು ಫಾಲ್ಸ್ ಮೇಲ್ಭಾಗ ವನ್ನು ತಲುಪಬಹುದು.
ಕಾಡಿನ ಮೂಲಕ ಸಾಗುವಾಗ ಕೆಲವೊಮ್ಮೆ ಕಾಡು ಹಂದಿಗಳು, ನವಿಲುಗಳು ಎದುರಾಗುತ್ತವಂತೆ. ಹಕ್ಕಿಗಳ ಕಲರವ ಕಿವಿಗಳಿಗೆ ಇಂಪನ್ನುಂಟುಮಾಡುತ್ತದೆ. ಮಳೆಗಾಲದಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಸ್ವಾಮಿ ಮಲೆಯಲ್ಲಿ ಸಣ್ಣ ಪುಟ್ಟ ಜಲಪಾತ ಗಳು ಜನ್ಮ ತಳೆಯತ್ತವಾದರೂ, ವರ್ಷವಿಡೀ ವೀಕ್ಷಿಸಬಹುದಾದ ಎತ್ತರದ, ಆಕರ್ಷಕ ಜಲಪಾತವೆಂದರೆ, ಧುಮುಕು ಫಾಲ್ಸ್.
ಸ್ವಾಮಿ ಮಲೆ ಬೆಟ್ಟ ಪ್ರದೇಶದ ಹಲವು ಕಡೆಗಳಿಂದ ಹರಿದು ಬರುವ ನೀರು, ಕಡತಿ ಮಡು(ಒಂದು ಕಾಲದಲ್ಲಿ ಜಿಂಕೆಗಳು ಈ ಮಡುವಿನಲ್ಲಿ ನೀರು ಕುಡಿಯುತ್ತಿದ್ದವಂತೆ) ಎಂಬಲ್ಲಿ ಒಂದಾಗುತ್ತದೆ. ಇದೇ ಜಲಪಾತದ ಮೂಲ ಸ್ಥಾನ. ನಂತರ ಕಾಡಿನಲ್ಲಿ ಹಂತ ಹಂತವಾಗಿ ಹರಿಯುವ ನೀರು ಮುಖ್ಯ ಜಲಪಾತದ ಮೇಲ್ಭಾಗದಲ್ಲಿ ಸುಮಾರು ೪೦ ಅಡಿಗಳಷ್ಟು ಮಿನಿ ಜಲಪಾತವನ್ನು ಸೃಷ್ಟಿಸುತ್ತದೆ. ನಂತರ ನೂರು ಅಡಿಗಳಷ್ಟು ಎತ್ತರದಿಂದ ರಭಸವಾಗಿ ಬೀಳುವ ನೀರು ಮಡುವಿನಲ್ಲಿ ಸಂಗ್ರಹಗೊಳ್ಳುತ್ತದೆ.
ಅಲ್ಲಿಂದ ಮುಂದೆ ಸಾಗುವ ನೀರು ಅಂಕಮನಾಳ್ ಕೆರೆಯಲ್ಲಿ ವಿಲೀನವಾಗುತ್ತದೆ. ಕೆಲವು ಬಾರಿ ಗಣಿ ಪ್ರದೇಶದಿಂದ ನೀರು ಹರಿದು ಬರುವ ಕಾರಣ, ಮಳೆಗಾಲದ ಪ್ರಾರಂಭದಲ್ಲಿ ಜಲಪಾತದಲ್ಲಿ ಕೇವಲ ಕೆಂಪು ನೀರನ್ನು ಕಾಣಬಹುದು. ನಂತರದ ದಿನಗಳಲ್ಲಿ
ತಿಳಿಯಾದ ನೀರು ನೆಗೆದು, ನೋಡುವವರಿಗೆ ಮುದ ನೀಡುತ್ತದೆ. ನೀರು ಹರಿಯುವ ಜಾಡು ಹಿಡಿದು ಜಲಪಾತವನ್ನು ತಲುಪಬಹುದಾದರೂ, ಲಾಂಟಾನ ಗಿಡಗಳು ಹಾಗೂ ಇತರೆ ಗಿಡಗಳು ಹೆಚ್ಚಾಗಿ ಬೆಳೆದಿರುವುದರಿಂದ ಕಷ್ಟವೆಂದೇ ಹೇಳಬಹುದು. ಬೆಟ್ಟದ ಮೇಲ್ಭಾಗದಿಂದ ಕಡಿದಾದ ದಾರಿಯ ಮೂಲಕ ಜಲಪಾತದ ತಳಭಾಗವನ್ನು ತಲುಪಬಹುದು.
ಹಾಗೆಯೇ ಬಂದ ದಾರಿಯಿಂದಲೇ ಹಿಂದಿರುಗಬೇಕು. ತಳ ಭಾಗಕ್ಕೆ ತಲುಪಲು ಇರುವ ದಾರಿ ಕಡಿದಾಗಿರುವುದರಿಂದ, ಮಹಿಳೆ ಯರು ಹಾಗೂ ಮಕ್ಕಳು ಜಲಪಾತದ ತಳ ಭಾಗಕ್ಕೆ ಹೋಗಿ ಜಲಪಾತದ ಸೌಂದರ್ಯವನ್ನು ಆಸ್ವಾದಿಸುವ ಸಾಹಸ ಮಾಡುವು ದಿಲ್ಲ. ಆದುದರಿಂದ ಚಾರಣಿಗರು ಮತ್ತು ಪಡ್ಡೆ ಹುಡುಗರು ಮಾತ್ರ ಇಲ್ಲಿಗೆ ಬರುತ್ತಾರೆ. ಇತರ ಪ್ರವಾಸಿಗರು ಜಲಪಾತದ ಮೇಲ್ಭಾಗಕ್ಕೆ ಮಾತ್ರ ತಮ್ಮ ಚಾರಣವನ್ನು ಸೀಮಿತಗೊಳಿಸುತ್ತಾರೆ.
ವಿಶ್ರಮಿಸಲು ಹಾಗೂ ಉಪಹಾರ ಸೇವಿಸಲು ಸೂಕ್ತವಾದ ಸ್ಥಳ ಇದಾಗಿದ್ದು, ಇಲ್ಲಿಂದ ಕಾಣುವ ಬೆಟ್ಟಗಳ ಸಾಲು, ಕಣಿವೆಗಳು, ಅಂಕಮನಾಳ್ ಕೆರೆಗಳ ವಿಹಂಗಮ ನೋಟ ನಯನ ಮನೋಹರ. ಇಲ್ಲಿ ಬೀಸುವ ಗಾಳಿ ಹಿತಕರ ವಾಗಿರುತ್ತದೆ. ಇಲ್ಲಿನ ಹಸಿರು ಬೆಟ್ಟಗಳ ನೋಡ ಕಣ್ಣಿಗೆ ತಂಪನೀಯುತ್ತದೆ. ಸ್ವಾಮಿ ಮಲೆಯ ಸಮತಟ್ಟು ಪ್ರದೇಶದಲ್ಲಿ, ಇತಿಹಾಸ ಪ್ರಸಿದ್ಧ ಕುಮಾರಸ್ವಾಮಿ ದೇವಾಲಯ, ಸುಬ್ಬರಾಯನ ಹಳ್ಳಿ, ದೇವಗಿರಿ ಹಾಗೂ ಕಮ್ತೂರು ಗ್ರಾಮಗಳಿದ್ದು, ಇಲ್ಲಿಂದಲೂ ಸಹ ಧುಮುಕು ಜಲಪಾತವನ್ನು ವೀಕ್ಷಿಸಲು ಹೋಗಬಹುದಾದರೂ, ಸರಿಯಾದ ರಸ್ತೆಯಿಲ್ಲದ ಕಾರಣ ಅಂಕಮನಾಳ್ ಕಡೆಯಿಂದಲೇ ಹೋಗುವುದು ಉತ್ತಮ.
(ಚಿತ್ರಗಳು : ಸಂಡೂರ್ ಸಮಿಟರ್ಸ್ ತಂಡ)