Sunday, 21st April 2024

ವಿಶಿಷ್ಟ ಪ್ರವಾಸಿ ತಾಣಗಳು

ಮೋಹನ್‌ದಾಸ್ ಕಿಣಿ, ಕಾಪು

ಅಮೆರಿಕ ದೇಶದಲ್ಲಿ ಎಲ್ಲವನ್ನೂ ಪ್ರವಾಸಿ ಆಕರ್ಷಣೆಯನ್ನಾಗಿ ರೂಪಿಸಿದ್ದಾರೆ. ಸಣ್ಣ ಪುಟ್ಟ ವೈಶಿಷ್ಟ್ಯಗಳಿಗೇ ಪ್ರಚಾರ ನೀಡಿ, ಪ್ರವಾಸಿಗರನ್ನು ಆಕರ್ಷಿಸುತ್ತಾರೆ!

ಅಮೆರಿಕಾ ಪ್ರವಾಸ ಮಾಡುವವರಿಗೆ ಸಾಮಾನ್ಯವಾಗಿ ನೆನಪಾಗುವುದು ನ್ಯೂಯಾರ್ಕ್‌ನ ಸ್ವಾತಂತ್ರ್ಯ ಪ್ರತಿಮೆ, ಶ್ವೇತ ಭವನ, ನಯಾಗರ ಜಲಪಾತ, ನಾಸಾ, ಡಿಸ್ನಿಲ್ಯಾಂಡ್ ಮುಂತಾದ ಜಗದ್ವಿಖ್ಯಾತ ಪ್ರವಾಸಿ ತಾಣಗಳು. ಆದರೆ ಅಮೆರಿಕದ ಮೂಲೆ ಮೂಲೆಗಳಲ್ಲಿ ಇರುವ ಸಣ್ಣಪುಟ್ಟ ಪ್ರವಾಸಿ ತಾಣಗಳು ಅದರದೇ ಆದಂತಹ ಆಕರ್ಷಣೆ ಹೊಂದಿರುವುದನ್ನು ಕಾಣಬಹುದಾಗಿದೆ.

ಅಷ್ಟೇನೂ ಪ್ರಸಿದ್ಧಿ ಇಲ್ಲದಿದ್ದರೂ ಬೇರೆ ಬೇರೆ ಕಾರಣಗಳಿಂದ ವಿಭಿನ್ನವಾಗಿ ರುವ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡುವ ಚಿಕ್ಕದೊಂದು ಪ್ರಯತ್ನ. ಅಮೇರಿಕಾದ ಮೂಲೆಮೂಲೆಗಳಲ್ಲಿ ಇಂತಹ ಪ್ರವಾಸಿ ತಾಣಗಳು ಬಹಳಷ್ಟಿವೆ. ಫ್ಲೋರಿಡಾ ವೈಲ್ಡ ಲೈಫ್ ಸಫಾರಿ ಫ್ಲೋರಿಡಾ ರಾಜ್ಯದ ಫ್ಲೋರಿಡಾ ವೈಲ್ಡ್ ಲೈಫ್ ಸಫಾರಿ ಒಂದು ವಿಶಿಷ್ಟ ರೀತಿಯ ಮೃಗಾಲಯ ಮತ್ತು ಪಾರ್ಕ್. ಸುಮಾರು ೧೭೦ ಎಕರೆ ವಿಸ್ತೀರ್ಣದ ಈ ಪ್ರವಾಸಿತಾಣವು ಅತ್ತ ಮೃಗಾಲಯವೂ ಹೌದು, ಇತ್ತ ಪಾರ್ಕ್ ಕೂಡ ಹೌದು. ಈ ಪಾರ್ಕಿನಲ್ಲಿ ನೂರಾರು ಜಾತಿಯ ಪ್ರಾಣಿಗಳು ಓಡಾಡಿಕೊಂಡಿರುತ್ತವೆ. ಆರೇಳು ಕಿಲೋಮೀಟರ್ ದೂರವನ್ನು ಕಾರಿನೊಳಗೆ ಕುಳಿತು ಪ್ರಯಾಣಿಸುತ್ತಾ ಪ್ರಾಣಿಗಳನ್ನು ಸನಿಹದಿಂದ ನೋಡಬಹುದು.

ಸಾಮಾನ್ಯವಾಗಿ ಮೃಗಾಲಯಗಳಲ್ಲಿ ಪ್ರಾಣಿಗಳು ಪಂಜರದೊಳಗಿದ್ದರೆ, ನಾವು ಸ್ವತಂತ್ರರಾಗಿ ತಿರುಗಾಡಿ ಅವುಗಳನ್ನು ಸನಿಹದಿಂದ ನೋಡಲು ವ್ಯವಸ್ಥೆಯಿರುತ್ತದೆ. ಆದರೆ ಇಲ್ಲಿ ಮನುಷ್ಯ ವಾಹನದೊಳಗೆ ಬಂಧಿಯಾಗಿದ್ದು ಪ್ರಾಣಿಗಳು ಓಡಾಡಿಕೊಂಡಿರುತ್ತವೆ. ಬೇರೆಡೆ ಪ್ರಾಣಿಗಳ ಹತ್ತಿರ ಹೋಗಿ ನೋಡುವ ವ್ಯವಸ್ಥೆ ಇದ್ದರೆ ಇಲ್ಲಿ ಕಾರು ಉದ್ದಕ್ಕೂ ಸಾಗುತ್ತದೆ. ಪ್ರಾಣಿ ಪಕ್ಷಿಗಳು ಕಾರಿನ ಸನಿಹ ಬರುತ್ತವೆ. ಈ ಪಾರ್ಕಿನಲ್ಲಿ ಹೋಗುತ್ತಿದ್ದಾಗ ಉಷ್ಟ್ರಪಕ್ಷಿಯೊಂದು ನಮ್ಮ ಕಾರಿನ ಸನಿಹ ಬಂದು ಪ್ರವಾಸಿಗರ ಕ್ಷೇಮ ವಿಚಾರಿಸಿತೇನೋ ಎಂದಂತೆ ಕಾರಿನ ಗಾಜಿಗೆ ಕುಟುಕಿ ಹೋಯಿತು.

ಇದರೊಳಗೆ ಇನ್ನೊಂದು ಗ್ರೇಟರ್ ಪಾರ್ಕಿದೆ. ಈ ಪಾರ್ಕಿನಲ್ಲಿ ಪ್ರಾಣಿಗಳನ್ನು ನೋಡಲು ವಾಹನದಿಂದ ಇಳಿಯಬೇಕು. ಎರಡೂ ಪಾರ್ಕುಗಳಲ್ಲಿ ಇರುವ ಪ್ರಾಣಿ ಅಥವಾ ಪಕ್ಷಿಗಳಿಗೆ ಪ್ರವಾಸಿಗರು ತಿನಿಸುಗಳನ್ನು ನೀಡಬಾರದೆಂಬ ನಿಯಮವಿದೆ. ಜಿರಾಫೆಗಳಿಗೆ ಮೃಗಾಲಯ ದವರೇ ಒದಗಿಸುವ ಸೊಪ್ಪುಗಳನ್ನು ತಿನ್ನಿಸಲು ಅವಕಾಶ ಇದೆ. ಆದರೆ ಅದಕ್ಕಾಗಿ ಪ್ರತ್ಯೇಕವಾಗಿ ಹಣವನ್ನು ಪಾವತಿಸಬೇಕಾಗುತ್ತದೆ. ಇದೂ ಒಂದು ರೀತಿಯ ಆಕರ್ಷಣೆ ಮತ್ತು ವ್ಯವಹಾರದ ತಂತ್ರ! ಇಲ್ಲಿರುವ ಪ್ರಾಣಿಗಳ ನಡುವೆ ಭಾರೀ ಗಾತ್ರದ ಮೊಸಳೆ ಯೊಂದು ಆಕರ್ಷಣೆಯ ಕೇಂದ್ರವಾಗಿದೆ. ಅದರ ತೂಕ ಐನೂರು ಕಿಲೋಗ್ರಾಂ!

ಲೇಕ್ ಅಪೋಪ್ಕ ಒರ್ಲಾಂಡೋ 
ಇದೊಂದು ಅತ್ತ ಬರಡು ಭೂಮಿಯೂ ಅಲ್ಲದ, ಇತ್ತ ಫಲವತ್ತಾಗಿಯೂ ಇಲ್ಲದ, ಆದರೆ ತನ್ನದೇ ಆದ ಕಾರಣಗಳಿಂದ
ವಿಶಿಷ್ಟವಾದ ಪ್ರವಾಸಿ ತಾಣ. ಅಮೇರಿಕಾದ ಫ್ಲೋರಿಡಾ ರಾಜ್ಯದ ನಾಲ್ಕನೇ ಅತಿ ದೊಡ್ಡ ಸರೋವರ ಲೇಕ್ ಅಪೋಪ್ಕ. ೭೭ ಚದರ ಕಿ.ಮೀ.  ವಿಸ್ತೀರ್ಣದ ಈ ಸರೋವರದ ನಡುವೆ ಸುಮಾರು ೧೮ ಕಿ.ಮೀ. ದೂರವನ್ನು ಸ್ವಂತ ವಾಹನದಲ್ಲಿ ಕ್ರಮಿಸಿ, ವಿವಿಧ ಪ್ರಾಣಿ, ಪಕ್ಷಿಗಳನ್ನು ನೋಡಬಹುದು. ಈ ಪ್ರವಾಸಕ್ಕೆ ಯಾವುದೇ ಶುಲ್ಕವಿಲ್ಲ. ಪ್ರವಾಸದ ಆರಂಭದ ಬಗ್ಗೆ, ನಿಯಮಗಳ ಬಗ್ಗೆ ಮಾರ್ಗದರ್ಶನ ನೀಡುವ ಫಲಕಗಳಿವೆ. ಆದರೆ ಯಾವುದೇ ಮಾರ್ಗದರ್ಶಕರಿರುವುದಿಲ್ಲ. ಸೂರ್ಯಾಸ್ತದೊಳಗೆ ಈ ಪರಿಸರದಿಂದ ಹೊರಗೆ ಹೋಗುವುದು ಕಡ್ಡಾಯ.

ಮಧ್ಯಾಹ್ನ ೩ ಗಂಟೆಯ ನಂತರ ಪ್ರವೇಶವಿಲ್ಲ. ಪ್ರವಾಸ ಆರಂಭವಾಗುವಾಗ ಸಿಗುವ ಫಲಕದಲ್ಲಿರುವ ಕ್ಯೂ ಆರ್ ಸಂಕೇತವನ್ನು ನಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಚಾಲನೆಯಲ್ಲಿಟ್ಟರೆ ಪ್ರವಾಸಕ್ಕೆ ಸಂಬಂಧಿಸಿದ ವಿವರಗಳನ್ನು ಬಿತ್ತರಿಸುತ್ತಾ ಹೋಗುತ್ತದೆ. ಪ್ರವಾಸಿಗರ ಅದೃಷ್ಟ ಚೆನ್ನಾಗಿದ್ದರೆ ವಿವಿಧ ಪ್ರಬೇಧದ ಪ್ರಾಣಿ-ಪಕ್ಷಿಗಳನ್ನು ಕಾಣಬಹುದು. ಇಲ್ಲಿರುವ ಪ್ರಾಣಿ ಪಕ್ಷಿಗಳ ಒಟ್ಟು ಪ್ರಬೇಧಗಳು ಅಽಕೃತ ಅಂಕಿಅಂಶದಂತೆ ೩೬೨. ಆದರೆ ಇದರಲ್ಲಿ ೧೦% ಕೂಡಾ ನೋಡಲು ಸಿಗುವುದಿಲ್ಲ! ಚಲಿಸಬೇಕಾದ ವೇಗ ೧೫ ಕಿ.ಮೀ. ಮೀರುವಂತಿಲ್ಲ.

ಕಾರು ಚಲಿಸುವ ರಸ್ತೆ ತೀರಾ ಅಗಲ ಕಿರಿದಾಗಿದೆ! ಇಲ್ಲಿ ಯಾವುದೇ ರೀತಿಯ ಬೆಳೆಯನ್ನು ಬೆಳೆಯಲಾಗುವುದಿಲ್ಲ. ಉಪಾಹಾರ
ಗೃಹಗಳಿರಲಿ, ಕನಿಷ್ಟ ನೀರು ಕೂಡಾ ಸಿಗುವುದಿಲ್ಲ. ಎಲ್ಲವನ್ನೂ ನಾವೇ ಕೊಂಡೊಯ್ಯಬೇಕು. ಅಲ್ಲಲ್ಲಿ ವಿಶ್ರಮಿಸಲು ತಂಗುದಾಣ, ಶೌಚಗೃಹಗಳು, ಕಸದ ತೊಟ್ಟಿಗಳನ್ನು ಇರಿಸಲಾಗಿದೆ. ದೈತ್ಯ ಗಾತ್ರದ ಮೊಸಳೆಗಳಿರುವುದರಿಂದ ಇಳಿದು ನೀರಿನ ಹತ್ತಿರ ಹೋಗುವುದಾಗಲಿ, ಪ್ರಾಣಿ ಪಕ್ಷಿಗಳಿಗೆ ತಿನಿಸುಗಳನ್ನು ನೀಡುವುದು ನಿಷಿದ್ಧವಷ್ಟೇ ಅಲ್ಲ, ಅಪಾಯಕಾರಿ ಕೂಡ. ಇಷ್ಟೆ ನಿರ್ಬಂಧಗಳಿದ್ದರೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಮಾತ್ರ ದೊಡ್ಡದು!

error: Content is protected !!