Saturday, 20th April 2024

ಬ್ರಹ್ಮಗಂಟು ತಪ್ಪಿಸೋಕೆ ಆಗುತ್ತಾ ?

ಎಸ್.ತಾರಾನಾಥ್ ಭದ್ರಾವತಿ

ಮೂಢನಂಬಿಕೆಗಳನ್ನು ದೂರ ಮಾಡಬೇಕು ನಿಜ. ಆದರೆ ನಮ್ಮ ದೃಶ್ಯ ಮಾಧ್ಯಮಗಳಲ್ಲಿ ಕೆಲವು ಜ್ಯೋತಿಷಿಗಳನ್ನು ಪ್ರತಿದಿನ ಕೂರಿಸಿ ಕೊಂಡು, ಯಾವ್ಯಾವುದೋ ವಿಚಾರಗಳನ್ನು ಚರ್ಚಿಸುತ್ತಾರಲ್ಲ, ಇದಕ್ಕೇನು ಹೇಳುವುದು?

ಗೆಳೆಯ ಶಂಕರ ಹಾಗೂ ನಾನು ಯಾವುದೋ ಒಂದು ಮುಖ್ಯ ಕೆಲಸದ ಮೇಲೆ ಎಲ್ಲಿಗೋ ಹೋಗಬೇಕಾಗಿತ್ತು. ಪುಣ್ಯಾತ್ಮ ಬೆಳಗ್ಗೆ ೧೦ ಗಂಟೆಗೆ ಬರುತ್ತೇನೆ ಅಂದೋನು ಸುಮಾರು ೧೧.೦೦ಕ್ಕೆ ಬಂದ. ಯಾಕೆ ಲೇಟು ಅಂತ ಕೇಳಿದ್ರೆ ‘ಅಯ್ಯೋ ಸಾರ್… ಬೆಳಗ್ಗೆ ಎದ್ದು ಯಾರ ಮುಖ ನೋಡಿದ್ನೋ ಗೊತ್ತಿಲ್ಲ. ಮನೆಯಿಂದ ಹೊರಗೆ ಬರುತ್ತಿದ್ದಂತೆ ಯಾವನೋ ಬೈಕಿ ನಲ್ಲಿ ನನ್ನ ಭುಜಕ್ಕೆ ಗುದ್ದಿಕೊಂಡು ಹೋದ. ನಾನು ತಕ್ಷಣ ಬಿದ್ದುಬಿಟ್ಟೆ. ಶರ್ಟ್ ಹರಿದು ಹೋಗಿತ್ತು. ಹಾಗಾಗಿ ಲೇಟಾಯ್ತು ಸಾರ್…’ ಅಂತ ಬಂದ.

ಬೆಳಗ್ಗೆ ಎದ್ದು ಯಾರ ಮುಖ ನೋಡಿದ್ನೋ! ಈ ಮಾತು ಬಹುಶಃ ನಮಗೆ ಏನಾದರೂ ಎಡವಟ್ಟಾದಾಗ, ಏನಾದರೂ ಕಳೆದು ಕೊಂಡಾಗ, ಎಡವಿ ಬಿದ್ದಾಗ, ನಾಯಿ ಕಚ್ಚಿದಾಗ, ಕಛೇರಿಯಲ್ಲಿ ಬಾಸ್ ಜೊತೆ ಜಗಳವಾಡಿದಾಗ. ಹೀಗೆ ಒಂದೊಂದು ಅಹಿತಕರ ಘಟನೆ ನಡೆದಾಗ ನಾವು ಹೇಳುವುದು ಒಂದೇ ಬೆಳಗ್ಗೆ ಎದ್ದು ಯಾರ ಮುಖ ನೋಡಿದ್ನೋ!

ನಿಜ ಹೇಳಬೇಕೆಂದರೆ ನಾವು ಯಾರದೋ ಮುಖ ನೋಡಿದ್ರಿಂದ ಮೇಲೆ ಹೇಳಿದಂತಹ ಅವಘಡಗಳು ನಡೆಯುವುದಿಲ್ಲ. ನಮ್ಮನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದಾಗ, ಗಮನವನ್ನು ಬೇರೆ ಕಡೆ ಹರಿಸಿದಾಗ, ಕಣ್ಣುದೃಷ್ಟಿಯನ್ನು ಸರಿಯಾಗಿ ಹರಿಸದಿದ್ದಾಗ ಇಂತಹವುಗಳು ಸಂಭವಿಸುತ್ತವೆ. ನಮ್ಮ ತಪ್ಪನ್ನು ನಾವು ಅರಿತುಕೊಳ್ಳದೆ ಕೊಡುವ ಕಾರಣಕ್ಕೆ ಬೆಳಗ್ಗೆ ಎದ್ದು ಯಾರ ಮುಖ ನೋಡಿದ್ನೋ? ಎನ್ನುವುದು.

ಬರೀ ಅಹಿತಕರ ಘಟನೆಗಳಿಗೆ ಮಾತ್ರ ನಾವು ಇಂತಹ ಪದಗಳನ್ನು ಉಪಯೋಗಿಸುವುದಿಲ್ಲ. ಬೇಕಾದರೆ ಗಮನಿಸಿ ನೋಡಿ, ಯಾರೊ ಒಬ್ಬನಿಗೆ ಗಣಪತಿ ಹಬ್ಬದ ಸಮಯದಲ್ಲಿ ಲಾಟರಿ ಟಿಕೇಟ್ ಖರೀದಿಸಿದಾಗ ಅದು ಆ ವ್ಯಕ್ತಿಗೆ ಅವನ ಟಿಕೇಟ್ ನಂಬರಿಗೆ ಡ್ರಾ ಆದಾಗ ಅವನ ಅದೃಷ್ಟ ಚೆನ್ನಾಗಿತ್ತು ಅಂತ ಜನ ಮಾಡಿಕೊಳ್ಳುತ್ತಾರೆ. ಹಾಗೆ ನೋಡಿದರೆ ಯಾವ ಅದೃಷ್ಟವೂ ಅಲ್ಲ.
ಯಾರೋ ಒಬ್ಬರಿಗೆ ಡ್ರಾ ಆಗಿ ಬಹುಮಾನ ಬರಬೇಕಿತ್ತು. ಇವನಿಗೆ ಬಂತು. ಅದೃಷ್ಟ ಅನ್ನುವುದು ನಾವು ನಮ್ಮ ಅನುಕೂಲಕ್ಕೆ, ಸಂದರ್ಭಕ್ಕೆ ಕೊಡುವ ಹೆಸರು ಅಷ್ಟೆ. ಗಂಡನ ಪ್ರೇಯಸಿ!

ಈ ವಿಷಯಗಳ ಬಗ್ಗೆ ಹೇಳುತ್ತಲೇ ಹೋದರೆ ಪುಟಗಟ್ಟಲೇ ಬರೆಯಬಹುದು. ಸುಮಾರು ಏಳೆಂಟು ವರ್ಷಗಳ ಹಿಂದೆ ನಡೆದದ್ದು. ನಮ್ಮೂರಿನಲ್ಲಿ ಒಂದು ಸುಂದರವಾದ ಕುಟುಂಬವೊಂದಿತ್ತು. ಗಂಡ-ಹೆಂಡತಿ-ಮಗು. ಹೆಂಡತಿ ಅಪ್ಪಟ ದೈವಭಕ್ತೆ. ಪೂಜೆ, ಪುರ ಸ್ಕಾರ ಅಂದರೆ ಸಾಕು ಬೇಕಾದಷ್ಟು ಹಣ ವ್ಯಯಿಸುತ್ತಿದ್ದಳು. ಗಂಡ ಇದಕ್ಕೆ ತದ್ವಿರುದ್ಧ. ಯಾವುದೇ ಕೊರತೆಯಿಲ್ಲದೆ ಸಂಸಾರ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿತ್ತು.

ಹೀಗಿರುವಾಗ ಅದ್ಯಾರೋ ಮಹಿಳೆಯೊಬ್ಬಳು ಗಂಡನಿಗೆ ಪರಿಚಯವಾಗಿ, ನಂತರ ಸ್ನೇಹಿತೆಯಾಗಿ ಅನಂತರ ಪ್ರೇಯಸಿಯಾದಳು. ಇಬ್ಬರೂ ಆಗಾಗ್ಗೆ ಅಲ್ಲಿ-ಇಲ್ಲಿ ತಿರುಗಾಡಿಕೊಂಡು ದೈಹಿಕ ಸಂಪರ್ಕವನ್ನು ಹೊಂದಿದ್ದರು.ಹೀಗಿರುವಾಗ ಆಕೆ  ಗರ್ಭವತಿ ಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಗಂಡ ಅವಕ್ಕಾದ. ಪ್ರೇಯಸಿ ಮದುವೆಯಾಗಲೇ ಬೇಕು. ಇಲ್ಲದಿದ್ದರೆ ಪೊಲೀಸು, ಪತ್ರಿಕೆಗೆ ತಿಳಿಸುತ್ತೇನೆ ಅಂದಳು. ಪರಿಸ್ಥಿತಿಗೆ ಸಿಕ್ಕಿ ಆಕೆಯನ್ನು ಮದುವೆಯಾದ. ತನ್ನ ಹೆಂಡತಿಗೂ ವಿಷಯ ಗೊತ್ತಾಗಿ ಒಂದೆರಡು ದಿನ ರಂಪಾಟ ಮಾಡಿದಳು. ಈ ಬಗ್ಗೆ ಆಕೆ ಜ್ಯೋತಿಷಿಯನ್ನು ಕೇಳಿದಾಗ ಆತ ಹೇಳಿದ ಒಂದೇ ಮಾತಿಗೆ ಮರುಳಾಗಿ ವಾಪಸ್ಸು ಬಂದು ಎಂದಿನಂತೆ ಸಂಸಾರ ನಡೆಸಿದಳು. ಆ ಜ್ಯೋತಿಷಿ ಏನು ಹೇಳಿದ ಗೊತ್ತೆ!

‘ಇದರಲ್ಲಿ ನಿನ್ನ ಗಂಡನದೇನು ತಪ್ಪಿಲ್ಲ. ಆತನಿಗೆ ಈ ಮುಂಚೆಯೇ ಬ್ರಹ್ಮ ಎರಡನೇ ಮದುವೆಯ ಬಗ್ಗೆ ಅವನ ಹಣೆಯಲ್ಲಿ ಬರೆ ದಿದ್ದ. ಬ್ರಹ್ಮಗಂಟು ಎಲ್ಲಾದರೂ ತಪ್ಪಿಸೋಕೆ ಆಗುತ್ತದೆಯೇ ತಾಯಿ?’ ಅಂತ ಹೇಳಿ ಸಮಾಧಾನ ಹೇಳಿ ಕಳಿಸಿದ್ದ. ಅಂದರೆ ಈ
ಬ್ರಹ್ಮಗಂಟು, ಬ್ರಹ್ಮಲಿಖಿತ, ಹಣೆಬರಹ… ಮುಂತಾದವುಗಳು ನಮ್ಮ ನಮ್ಮ ಅನುಕೂಲಕ್ಕೆ ಉಪಯೋಸುವಂತಹ ಪದಗಳು.
ಇಂತಹ ಘಟನೆಗಳ ಬಗ್ಗೆ ಹೇಳುತ್ತಾ ಹೋದರೆ… ಬೆಳಗ್ಗೆ ಎದ್ದು ಬೆಕ್ಕಿನ ಮುಖ ನೋಡಿದರೆ ಆದಿನ ಮಾಡುವ ಕೆಲಸಗಳೆಲ್ಲವೂ
ವ್ಯರ್ಥವಾಗುತ್ತವೆ ಎನ್ನುತ್ತಾರೆ.

ಬೆಕ್ಕು ದುರದೃಷ್ಟದ ಸಂಕೇತ, ನರಿ ಮುಖ ನೋಡಿದರೆ ಒಳ್ಳೆಯದು ಅನ್ನುತ್ತಾರೆ. ಪಾಪ ಅವರಿಗೆ ಗೊತ್ತಿಲ್ಲ. ನಾವು ನರಿಯನ್ನು ಸಾಕುವುದಿಲ್ಲ, ಬೆಕ್ಕನ್ನು ಮಾತ್ರ ಸಾಕುತ್ತೇವೆ. ಬೆಕ್ಕು ಒಂದು ಪ್ರಾಣಿ ಎನ್ನುವುದೇ ಅವರಿಗೆ ಅರಿವಿರುವುದಿಲ್ಲ. ಇನ್ನು ಕೆಲವರಂತೂ ರಸ್ತೆಯಲ್ಲಿ ನಡೆದು ಹೋಗುವಾಗ ಅಥವಾ ಬೈಕ್‌ಗಳನ್ನು ಹೋಗುವಾಗ ಬೆಕ್ಕು ಅಡ್ಡ ಹೋದರೆ ಒಂದೆರಡು ನಿಮಿಷ ನಿಂತು ಬೇರೆಯವರು ಹೋದಾಗ ನಂತರ ಇವರು ಹೋಗುತ್ತಾರೆ. ಕಾರಣ ಅಕಸ್ಮಾತ್ ಹೋದರೆ ಮುಂದೆ ತೊಂದರೆ ಆಗುತ್ತದೆ ಎನ್ನುವ ಮೂಢನಂಬಿಕೆ. ಅದೇ ಬೆಕ್ಕು ಅಡ್ಡ ಹೋಗಿ ಮುಂದೆ 500 ರೂಪಾಯಿ ನೋಟು ಬಿದ್ದಿದ್ದರೆ ಹಿಂದೆ-ಮುಂದೆ ನೋಡದೆ ತಕ್ಷಣ ತೆಗೆದುಕೊಂಡು ಬಿಡುತ್ತಾರೆ.

ಆಗ ಇವರಿಗೆ ಮೂಢನಂಬಿಕೆ ಬಗ್ಗೆ ನೆನಪಿಗೆ ಬರುವುದೇ ಇಲ್ಲ. ರಾತ್ರಿಹೊತ್ತು ನಾಯಿ ಅಳುತ್ತಿದ್ದರೆ ಯಾರಾದರೂ ಆ ಏರಿಯಾ ದಲ್ಲಿ ಸಾಯುತ್ತಾರೆ ಅಂತಲೂ, ಕಾಗೆ ಕೂಗಿದರೆ ಮನೆಗೆನೆಂಟರು ಬರುತ್ತಾರೆ ಅಂತಲೂ, ಎಡವಿ ಬಿದ್ದರೆ ಬೆಳಗ್ಗೆ ಯಾರದೋ ಮುಖ ನೋಡಿದೆ ಅಂತಲೂ, ಬೆಕ್ಕು ಅಡ್ಡ ಬಂದರೆ ದುರದೃಷ್ಟ ಅಂತಲೂ, ಮೂರ‍್ನಾಲ್ಕು ಮದುವೆಯಾದರೆ ಬ್ರಹ್ಮಗಂಟು ಅಂತಲೂ, ಯಾರಾದರೂ ಮಾನಸಿಕವಾಗಿ ಅಸ್ತತ್ವಗೊಂಡು ವಿಚಿತ್ರವಾಗಿ ಮಾತನಾಡಿದರೆ ಅವರ ಮೈಮೇಲೆ ದೆವ್ವ ಬಂದಿದೆ ಅಂತಲೂ, ಅಪಘಾತದಲ್ಲಿ ಒಂದು ಕೈ, ಒಂದು ಕಾಲು ಮುರಿದು ಪ್ರಾಣ ಉಳಿದಾಗ ಸಧ್ಯ… ದೇವರು ಇದ್ದಿದಕ್ಕೆ ಪ್ರಾಣನಾದ್ರೂ ಉಳಿಸಿದ ಅಂತಲೂ, (ಆ ಸಮಯದಲ್ಲಿ ಅವರಿಗೆ ದೇವರು ಒಂದು ಕೈ ಹಾಗೂ ಒಂದು ಕಾಲನ್ನು ಮುರಿದು ಹಾಕಿರುವುದು ನೆನಪಿಗೆ ಬಂದಿರುವುದಿಲ್ಲ) ಹೇಳುತ್ತಾರೆ.

Read E-Paper click here

error: Content is protected !!