ಈಗಿನ್ನೂ ಪದವಿ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಈ ಯುವ ಲೇಖಕ, ಮೂವತ್ಮೂರು ಕೃತಿಗಳನ್ನು ಹೊರ ತಂದಿದ್ದಾರೆ! ಇವರ ಸಾಧನೆಯು ಇತರರಿಗೆ ಮಾದರಿ, ಸ್ಫೂರ್ತಿ.
ಸುರೇಶ ಗುದಗನವರ
ಬರೆಯುವುದು ಆತನಿಗೆ ಹವ್ಯಾಸವೂ ಹೌದು. ಆನಂದವೂ ಹೌದು. ಎಲ್ಲರೂ ನಡೆಯುವ ದಾರಿಯಲ್ಲಿಯೇ ಸಾಗಿದರೂ, ಸದಾ ಹೊಸತನ್ನು ಕಾಣುವ ಕನಸುಗಾರ. ಪಠ್ಯದ ಓದು ಬರಹವೇ ಬಹುಪಾಲು ಮಕ್ಕಳಿಗೆ ಇವತ್ತು ಹೊರೆ ಎನಿಸಿರುವಾಗ ಶಿವಮೊಗ್ಗದ ಅಂತಃಕರಣ, ವಿದ್ಯಾರ್ಥಿ ದೆಸೆಯಲ್ಲಿಯೇ ಹಲವು ಪುಸ್ತಕಗಳನ್ನು ರಚಿಸಿ ಅಚ್ಚರಿ ಮೂಡಿಸಿದ್ದಾರೆ.
ಮೂಲತಃ ಶಿವಮೊಗ್ಗದವರಾದ ಅಂತಃಕರಣ ಸದ್ಯ ಡಿ.ವಿ.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷ ಅಭ್ಯಸಿಸುತ್ತಿದ್ದಾರೆ. ತಂದೆ ಸರ್ಜಾ ಶಂಕರ ಹರಳಿಮಠ, ತಾಯಿ ಪ್ರತಿಮಾ ಕೆ. ಇವರ ತಂದೆಯವರು ಡಾ.ಸರ್ಜಾ ಶಂಕರ ಹರಳಿ ಮಠರವರು ರಾಷ್ಟ್ರೀಯ ಕಾನೂನು ಕಾಲೇಜಿನ ಕನ್ನಡ ಪ್ರಾಧ್ಯಾಪಕರು ಮತ್ತು ಲೇಖಕರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 99.20ರಷ್ಟು ಅಂಕ ಗಳಿಸಿರುವ ಅಂತಃಕರಣ, ಈ ತನಕ 33 ಕೃತಿಗಳನ್ನು ಹೊರ ತಂದಿದ್ದಾರೆ.
ನಿಜಕ್ಕೂ ಅಚ್ಚರಿಯಾಗುತ್ತದೆ. ಇಷ್ಟೊಂದು ಕಿರಿಯ ವಯಸ್ಸಿಗೆ ಆತ ಸಾಹಿತ್ಯ ವನ್ನು ರಚಿಸಿದ್ದದಾದರೂ ಹೇಗೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುವುದು ಸಹಜ. ಅದಕ್ಕೆ ಉತ್ತರ ಹುಡುಕಿ ಹೊರಟರೆ ಪಾಲಕರಲ್ಲಿರುವ ಓದು ಬರಹದ ಹವ್ಯಾಸ, ತುಡಿತ. ಅಂತಃಕರಣ ಒಂದು ವರ್ಷದವನಿದ್ದಾಗಲೇ ಪಾಲಕರು ಆತನಿಗೆ ಸಣ್ಣ ಮಕ್ಕಳ ಚಿತ್ರ ಪುಸ್ತಕಗಳನ್ನು ತಂದಿಡುತ್ತಿದ್ದರು. ಒಂದನೆಯ ತರಗತಿಯ ಮುಂಚೆಯೇ ಎಳೆಯರ ರಾಮಾಯಣ ಹಾಗೂ ಮಹಾಭಾರತಗಳನ್ನು ಓದಿ ಮುಗಿಸಿದ್ದನು ಅಂತಃ
ಕರಣ. ಯ.ಕೆ.ಜಿ. ಯಲ್ಲಿದ್ದಾಗಲೆ ಕಥೆಗಳನ್ನು ಕವಿತೆಗಳನ್ನು ಬರೆಯಲು ಶುರು ಮಾಡಿದನು.
ಅಂತಃ ಕರಣ ನಾಲ್ಕನೇಯ ತರಗತಿಯಲ್ಲಿರುವಾಗಲೆ ಮೈಸೂರಿನ ‘ಬಾರುಕೋಲು’ ಪತ್ರಿಕೆಗೆ ಭಗತಸಿಂಗರ ಕುರಿತ ಲೇಖನ ಬರೆದು ಕಳುಹಿಸಿದ್ದ. ಅದು ಪ್ರಕಟವಾಯಿತು. ನಂತರ ‘ಎಚ್ಚರಿಕೆ’ ಪತ್ರಿಕೆಗೆ ಅಂಕಣ ಬರೆಯಲು ಪ್ರಾರಂಭಿಸಿದನು. ಹೀಗೆ ಅಂತಃಕರಣನ ಅಂಕಣ ಬರಹದ ಪಯಣ ಶುರುವಾಯಿತು.
ಅಂತಃಕರಣ ನಂತರ ಬೇರೆ ಬೇರೆ ಕಾದಂಬರಿಗಳನ್ನು ಓದಲು ಆರಂಭಿಸಿದನು. ವಿಶೇಷವೆಂದರೆ ತಾನು ಓದಿದ ಕಾದಂಬರಿಗಳಿಂದ ಪ್ರೇರಿತನಾಗಿ ತಾನೇ ಕಾದಂಬರಿಗಳನ್ನು ರಚಿಸತೊಡಗಿದನು. ನಾ.ಡಿಸೋಜ, ಆನಂದ ಪಾಟೀಲ, ತಮ್ಮಣ್ಣ ಬೀಗಾರರವರ
ಕೃತಿ ಗಳು, ರಸ್ಕಿನ್ ಬಾಂಡ್, ಕ್ರಿಸ್ ಗೇಲ್, ಸಚಿನ್ ತೆಂಡುಲ್ಕರ್ ಮುಂತಾದವರ ಕ್ರೀಡಾಪಟುಗಳ ಆತ್ಮಚರಿತ್ರೆಗಳನ್ನು ಓದಿ ಪ್ರಭಾವ ಗೊಂಡಿದ್ದಾನೆ.
ಏಳನೆಯ ತರಗತಿಯಲ್ಲಿದ್ದಾಗಲೇ ನಾಲ್ಕು ಕಾದಂಬರಿ, ಮೂರು ಕಥಾ ಸಂಕಲನ, ಮೂರು ಕವನ ಸಂಕಲನ ಮತ್ತು ಎರಡು ಪ್ರಬಂಧ ಸಂಕಲನ ಬರೆದು ಅಚ್ಚರಿ ಮೂಡಿಸಿದ್ದ. ಅಂತಃಕರಣ ಐದು ವರ್ಷದ ಬಾಲಕನಿದ್ದಾಗಲೆ ದೊಡ್ಡಮ್ಮನ ಹುಟ್ಟು ಹಬ್ಬಕ್ಕೆ ತನ್ನದೇ ಕೈಬರಹದ ಮುದ್ದಾದ ಪುಸ್ತಕ ನೀಡಿ ಹ್ಯಾಪಿ ಬರ್ಥಡೇ ದೊಡ್ಡಮ್ಮ ಎಂದು ಉಡುಗೊರೆ ನೀಡಿದ್ದ. ಏನೆಂದು
ಬಿಚ್ಚಿ ನೋಡಿದಾಗ ದೊಡ್ಡಮ್ಮನಿಗೆ ಅಚ್ಚರಿಯಾಗಿತ್ತು. ಅದು ಅಂತಃಕರಣ ಬರೆದ ಚೊಚ್ಚಲ ಕಥಾ ಸಂಕಲನದ ಪುಸ್ತಕ. ದೊಡ್ಡಮ್ಮನಿಗೆ ಅದೊಂದು ದೊಡ್ಡ ಉಡುಗೊರೆ!
ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯದ ಅನೇಕ ಶ್ರೇಷ್ಠ ಕೃತಿಗಳನ್ನು ಓದಿರುವ ಈ ಯುವ ಲೇಖಕ ನಿತ್ಯ ದಿನಪತ್ರಿಕೆಗಳನ್ನು ಮತ್ತು ನಿಯತಕಾಲಿಕೆಗಳನ್ನು ಓದುವ ಹವ್ಯಾಸವನ್ನಿಟ್ಟುಕೊಂಡಿದ್ದಾರೆ. ಇದುವರೆಗೂ ಐದು ನೂರು ಅಂಕಣ ಬರಹಗಳು, ತೊಂಭ ತೈದು ಕವಿತೆಗಳು, ಎಪ್ಪತ್ತೆಂಟು ಕಥೆಗಳು, ನಾಲ್ಕು ಕಾದಂಬರಿಗಳು ಮತ್ತು ಒಂದು ನಾಟಕ ಸೇರಿದಂತೆ ಮೂವತ್ಮೂರು ಕೃತಿಗಳು ಹೊರಬಂದಿವೆ. ಅಂತಃಕರಣ ಇವರಿಗೆ ಸರ್ಕಾರದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿ, ಶಂ.ಗು.ಬಿರಾದಾರ ಬಾಲ ಪ್ರತಿಭೆ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ರಾಜ್ಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷತೆಯ ಗೌರವ ಮುಂತಾದ ಪ್ರಶಸ್ತಿ-ಪುರಸ್ಕಾರಗಳು ಒಲಿದುಬಂದಿವೆ.
ಲೇಖಕರಾದ ಸರ್ಜಾಶಂಕರ ಹರಳಿಮಠರವರು ‘ದಯವಿಟ್ಟು ನಿಮ್ಮ ಮಕ್ಕಳಿಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡಿರಿ. ಎಷ್ಟೋ ಬಾರಿ ಪೋಷಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುತ್ತಾರೆ. ಹಾಗೆ ಮಾಡದೆಯೇ ಮ
ಕ್ಕಳಲ್ಲಿಯೇ ನಿಜವಾದ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ, ಅದರಲ್ಲಿ ಎಷ್ಟು ಪ್ರೋತ್ಸಾಹಿಸಲು ಆಗುತ್ತದೆಯೋ ಅಷ್ಟು ಪ್ರೋತ್ಸಾ ಹಿಸಿ’ ಎಂದು ಹೇಳುತ್ತಾರೆ.
ಪ್ರತಿಭಾವಂತ ಯುವ ಲೇಖಕ ಅಂತಃಕರಣ ಅವರಿಂದ ಇನ್ನಷ್ಟು ಮೌಲಿಕ ಕೃತಿಗಳು ಹೊರಬರಲಿ. ನಾಡಿನ ಸಾಹಿತ್ಯ ಲೋಕಕ್ಕೆ ಅವರು ಹೊಸ ರೀತಿಯಲ್ಲಿ, ವಿನೂತನ ಕೊಡುಗೆ ನೀಡಲಿ ಎಂದೇ ಸಾಹಿತ್ಯಾಭಿಮಾನಿಗಳ ಆಶಯ.