Saturday, 23rd November 2024

ಆಸ್ಟ್ರೇಲಿಯಾ 194/5, ಭಾರತ 77/1: ಕೆ.ಎಲ್‌.ರಾಹುಲ್‌ ಔಟ್‌

ಸಿಡ್ನಿ: ಭಾನುವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಟ್ವೆಂಟಿ-20 ಸರಣಿಯ ದ್ವಿತೀಯ ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟಿರುವ ಆಸ್ಟ್ರೇಲಿಯಾ ತಂಡ ಐದು ವಿಕೆಟ್ ನಷ್ಟಕ್ಕೆ 194 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಇತ್ತೀಚಿನ ವರದಿ ಪ್ರಕಾರ, ಭಾರತ ಒಂದು ವಿಕೆಟ್ ಕಳೆದುಕೊಂಡು 8 ಓವರು ಗಳಲ್ಲಿ 77 ರನ್‌ ಗಳಿಸಿತ್ತು.

ಆಸೀಸ್‌ಗೆ ಫಿಂಚ್ ಅನುಪಸ್ಥಿತಿಯಲ್ಲಿ ಡಾರ್ಸಿ ಶಾಟ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದ ನಾಯಕ ಮ್ಯಾಥ್ಯೂ ವೇಡ್ ತಂಡಕ್ಕೆ ಬಿರುಸಿನ ಆರಂಭವೊದಗಿಸಿದರು. ಭಾರತೀಯ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ವೇಡ್ ತಂಡವನ್ನು ಉತ್ತಮ ಮೊತ್ತ ದತ್ತ ಮುನ್ನಡೆಸಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವೇಡ್ 25 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ ತಮಗೆ ನೀಡಿರುವ ಹೆಚ್ಚುವರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು.

ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಆವೇಗದೊಂದಿಗೆ ರನ್ ಪೇರಿಸತೊಡಗಿದರು. ಮ್ಯಾಕ್ಸ್‌ವೆಲ್ ಹೊರದಬ್ಬಿದ ಶಾರ್ದೂಲ್ ಠಾಕೂರ್ ಕೊನೆಗೂ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 13 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಎರಡು ಸಿಕ್ಸರ್‌ಗಳಿಂದ 22 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟೀವನ್ ಸ್ಮಿತ್ ಹಾಗೂ ಮೊಯಿಸೆಸ್ ಹೆನ್ರಿಕ್ಸ್ ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು. ಕೇವಲ ನಾಲ್ಕು ರನ್‌ಗಳಿಂದ ಅರ್ಧಶತಕ ವಂಚಿತರಾದ ಸ್ಮಿತ್ 38 ಎಸೆತಗಳಲ್ಲಿ 13 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 46 ರನ್ ಗಳಿಸಿದರು.

ಭಾರತದ ಪರ ತಂಗರಸು ನಟರಾಜನ್ ಹೊರತುಪಡಿಸಿ ಬಹುತೇಕ ಎಲ್ಲ ಬೌಲರ್‌ಗಳು ದುಬಾರಿಯೆನಿಸಿದರು. ನಟರಾಜನ್ 20 ರನ್ ಮಾತ್ರ ಬಿಟ್ಟುಕೊಟ್ಟು ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದು ಮಿಂಚಿದರು. ಕಳೆದ ಪಂದ್ಯದ ಹೀರೊ ಯಜುವೇಂದ್ರ ಚಹಲ್ ಒಂದು ವಿಕೆಟ್ ಪಡೆದರೂ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 51 ರನ್ ಬಿಟ್ಟುಕೊಟ್ಟು ಸಾಕಷ್ಟು ದಂಡಿಸಿ ಕೊಂಡರು.