Saturday, 27th July 2024

ಆಸ್ಟ್ರೇಲಿಯಾ ಆರನೇ ಬಾರಿ ಚಾಂಪಿಯನ್: ಟೀಂ ಇಂಡಿಯಾಕ್ಕೆ ಆಘಾತ

ಅಹಮದಾಬಾದ್: ವಿಶ್ವಕಪ್ ೨೦೨೩ರ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಟೂರ್ನಿಯ ಆರಂಭದಿಂದಲೂ ಕ್ರಿಕೆಟಿನ ಮೂರು ಕ್ಷೇತ್ರಗಳಲ್ಲಿ ಅಮೋಘ ನಿರ್ವಹಣೆ ತೋರಿದ್ದ ಟೀಂ ಇಂಡಿಯಾ, ಫೈನಲಿನಲ್ಲಿ ಆಸೀಸ್ ಅದ್ಭುತ ಕ್ಷೇತ್ರರಕ್ಷಣೆ ಹಾಗೂ ಬೌಲಿಂಗ್ ದಾಳಿಗೆ ನೆಲಕಟ್ಟಿ ಆಡಲಾಗದೆ, ಕೇವಲ ೨೪೦ ರನ್ನಿಗೆ ಸರ್ವಪತನ ಕಂಡಿತು.

ಇದಕ್ಕೆ ಉತ್ತರವಾಗಿ ಆಸೀಸ್‌ ಕೂಡ ಆರಂಭದಲ್ಲಿ ಲಗುಬಗನೆ ಮೂರು ವಿಕೆಟ್ ಕಳೆದುಕೊಂಡರೂ, ಬಳಿಕ ಆರಂಭಿಕ ಟ್ರಾವಿಸ್ ಹೆಡ್ ಅವರ ಶತಕ ಹಾಗೂ ಮಧ್ಯಮ ಕ್ರಮಾಂಕದ ಮಾರ್ನಸ್‌ ಲ್ಯಾಬುಶ್ಗನ್ನೆ ಅವರ ಅಜೇಯ ಅರ್ಧಶತಕವು ತಂಡಕ್ಕೆ ಸುಲಭದ ಗೆಲುವು ತರಲು ಸಹಕಾರಿಯಾಯಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ, ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕರೂ, ಅದರ ಭರಪೂರಾ ಲಾಭ ಎತ್ತಲಾಗಲಿಲ್ಲ ಉಳಿದ ಆಟಗಾರರಿಗೆ. ರೋಹಿತ್ ಮಗದೊಮ್ಮೆ ಸ್ಪೋಟಕ ಆಟವಾಡಿದರೂ, ಅರ್ಧಶತಕ ಗಡಿಯಲ್ಲಿ ಎಡವಿದರು. ಶುಬ್ಮನ್ ಗಿಲ್ ನಾಲ್ಕು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಭಾರತೀಯ ಇನ್ನಿಂಗ್ಸ್ ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಕೆ.ಎಲ್.ರಾಹುಲ್ ಅರ್ಧಶತಕ ಬಾರಿಸಿದರು. ಇದಕ್ಕೂ ಮುನ್ನ ಶ್ರೇಯಸ್ ಅವರು ಕೂಡ ಮೊದಲ ಎಸೆತದಲ್ಲಿ ಕ್ಯಾಚ್ ಔಟಾದರು. ಸೂರ್ಯ ಕುಮಾರ್‌ ಯಾದವ್ ಹಾಗೂ ರವೀಂದ್ರ ಜಡೇಜಾ ಹೆಚ್ಚು ಮೊತ್ತ ಪೇರಿಸದೆ, ಪೆವಿಲಿಯನ್ ಪರೇಡ್ ನಡೆಸಿದರು.

ಆಸೀಸ್ ಪರ ವೇಗಿ ಸ್ಟಾರ್ಕ್‌ ಮೂರು ಹಾಗೂ ಹ್ಯಾಜಲ್ ವುಡ್ ಮತ್ತು ಕಮ್ಮಿನ್‌ ತಲಾ ಎರಡು ವಿಕೆಟ್ ಕಬಳಿಸಿದರು. ಮ್ಯಾಕ್ಸ್ ವೆಲ್ ಮತ್ತು ಜಂಪಾ ಒಂದು ವಿಕೆಟ್ ಕಿತ್ತರು.

 

Leave a Reply

Your email address will not be published. Required fields are marked *

error: Content is protected !!