Saturday, 23rd November 2024

Champions Trophy 2025: ಹೈಬ್ರೀಡ್‌ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ; ವರದಿ ತಳ್ಳಿ ಹಾಕಿದ ಪಾಕ್‌

ನವದೆಹಲಿ: ಭದ್ರತೆಯ ಕಾರಣದಿಂದ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸದ ಕಾರಣದಿಂದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯನ್ನು(Champions Trophy 2025) ಹೈಬ್ರೀಡ್‌ ಮಾದರಿಯಲ್ಲಿ ನಡೆಸಲು ಪಾಕಿಸ್ತಾನ ಸಮ್ಮತಿ ಸೂಚಿಸಿದೆ ಎಂಬ ವರದಿಯನ್ನು ಪಾಕ್‌ ಕ್ರಿಕೆಟ್‌ ಮಂಡಳಿ(Pakistan Cricket Board) ತಳ್ಳಿ ಹಾಕಿದೆ.

ನಿನ್ನೆಯಷ್ಟೇ ಹೈಬ್ರೀಡ್‌ ಮಾದರಿಯಲ್ಲಿ ಪಂದ್ಯವಾವಳಿಯನ್ನು ನಡೆಸಲು ಪಾಕ್‌ ಕ್ರಿಕೆಟ್‌ ಮಂಡಳಿ ಸಿದ್ಧವಾಗಿದ್ದು, ಭಾರತ ತನ್ನ ಎಲ್ಲ ಪಂದ್ಯವನ್ನು ಯುಎಇಯಲ್ಲಿ ಆಡಲಿದೆ ಎನ್ನಲಾಗಿತ್ತು. ನವೆಂಬರ್‌ 11 ಅಥವಾ 12ರಂದು ಐಸಿಸಿ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಪಾಕ್‌ ಕ್ರಿಕೆಟ್‌ ಮಂಡಳಿ ಸ್ಪಷ್ಟನೆ ನೀಡಿದ್ದು, ಟೂರ್ನಿಯನ್ನು ಹೈಬ್ರೀಡ್‌ ಮಾದರಿಯಲ್ಲಿ ನಡೆಸಲು ನಾವು ಸಮ್ಮತಿ ಸೂಚಿಸಿಲ್ಲ. ಇದೊಂದು ಸತ್ಯಕ್ಕೆ ದೂರವಾದ ಮಾತು. ಟೂರ್ನಿ ಸಂಪೂರ್ಣವಾಗಿ ಪಾಕಿಸ್ತಾನದಲ್ಲೇ ನಡೆಯಲಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯೂ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆʼ ಎಂದು ತಿಳಿಸಿದೆ.

ಚಾಂಪಿಯನ್ಸ್ ಟ್ರೋಫಿ ಕೂಟವು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದ್ದು, ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯಲ್ಲಿ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಭಾರತದ ಗಡಿಯ ಸಾಮೀಪ್ಯದ ಕಾರಣದಿಂದ ಲಾಹೋರ್‌ ನಲ್ಲಿ ಭಾರತದ ಪಂದ್ಯಗಳನ್ನು ಯೋಜಿಸಿದೆ. ಪಂದ್ಯಾವಳಿಯಲ್ಲಿ ಭಾರತದ ಮೂರು ಗುಂಪು-ಹಂತದ ಪಂದ್ಯಗಳನ್ನು ಫೆಬ್ರವರಿ 20 (ಬಾಂಗ್ಲಾದೇಶ ವಿರುದ್ಧ), ಫೆಬ್ರವರಿ 23 (ಪಾಕಿಸ್ತಾನ ವಿರುದ್ಧ), ಮತ್ತು ಮಾರ್ಚ್ 2 (ನ್ಯೂಜಿಲೆಂಡ್ ವಿರುದ್ಧ) ರಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ IND A vs AUS A: ರಾಹುಲ್‌ ಮತ್ತೆ ವೈಫ‌ಲ್ಯ; ಸಂಕಷ್ಟದಲ್ಲಿ ಭಾರತ ‘ಎ’

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದೆ. ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಇರುವ ಕ್ರೇಜ್ ಮತ್ತು ಬೇಡಿಕೆ​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್​ ಮೇಲೆ ಇರುವ ಕಳಂಕವೂ ದೂರವಾಗಲಿದೆ. ಅಲ್ಲದೆ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ.

ಕೆಲವು ದಿನಗಳ ಹಿಂದೆ ಭದ್ರತಾ ಕಾರಣಗಳಿಂದಾಗಿ ಭಾರತ ತಂಡವು ಪಾಕಿಸ್ತಾನದಲ್ಲಿ ಉಳಿಯಲು ಸಿದ್ಧರಿಲ್ಲದಿದ್ದರೆ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳ ನಡುವೆ ಭಾರತವು ನವದೆಹಲಿ ಅಥವಾ ಚಂಡೀಗಢಕ್ಕೆ ಮರಳಲು ಅವಕಾಶ ನೀಡುವ ವ್ಯವಸ್ಥೆಯನ್ನು ಪಾಕ್‌ ಕ್ರಿಕೆಟ್‌ ಮಂಡಳಿ ಪ್ರಸ್ತಾಪಿಸಿತ್ತು. ಪ್ರತಿ ಪಂದ್ಯದ ಬಳಿಕ ಮರಳಿ ಭಾರತಕ್ಕೆ ಬರಬಹುದು ಎಂದು ಹೇಳಿತ್ತು.

ಕಳೆದ ವರ್ಷ ಪಾಕ್​ ಆತಿಥ್ಯದಲ್ಲಿಯೇ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ತಂಡವು ಪಾಕ್​ಗೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ಟೂರ್ನಿಯನ್ನು ಹೈಬ್ರಿಡ್(champions trophy hybrid model) ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು. ಸದ್ಯ ಚಾಂಪಿಯನ್ಸ್‌ ಟ್ರೋಫಿ ಕೂಟದ ಆಯೋಜನೆಗೆ ಪಾಕಿಸ್ತಾನ ತಲೆಕೆಡಿಸಿ ಕೂತಿದೆ.