19ನೇ ಓವರ್‌ನಲ್ಲಿ ಕೇವಲ ಒಂದು ರನ್, 2 ವಿಕೆಟ್ ಕಿತ್ತಿದ್ದೇಗೆಂದು ತಿಳಿಸಿದ ಜಾಶ್ ಹೇಝಲ್‌ವುಡ್!
Josh Hazlewood on his bowling Plan: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಜಾಶ್ ಹೇಝಲ್‌ವುಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 11 ರನ್‌ಗಳ ಗೆಲುವಿಗೆ ನೆರವಾಗುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಪಂದ್ಯದ ಬಳಿಕ ತಮ್ಮ ಬೌಲಿಂಗ್ ಗೇಮ್ ಪ್ಲ್ಯಾನ್ ಏನೆಂದು ರಿವೀಲ್ ಮಾಡಿದ್ದಾರೆ.

ತಮ್ಮ ಬೌಲಿಂಗ್ ಗೇಮ್‌ಪ್ಲ್ಯಾನ್ ತಿಳಿಸಿದ ಜಾಶ್ ಹೇಝಲ್‌ವುಡ್.

ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ(RCB vs RR) ಮ್ಯಾಚ್ ವಿನ್ನಿಂಗ್ ಬೌಲಿಂಗ್ ಪ್ರದರ್ಶನ ತೋರಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಜಾಶ್ ಹೇಝಲ್‌ವುಡ್ (Josh Hazlewood) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆ ಮೂಲಕ ಆರ್‌ಸಿಬಿ ತಂಡ ತವರು ಅಂಗಣದಲ್ಲಿನ ಮೊದಲ ಗೆಲುವಿಗೆ ನೆರವಾಗಿದ್ದರು. ಪಂದ್ಯದ ಬಳಿಕ ಮಾತನಾಡಿದ ಜಾಶ್ ಹೇಝಲ್‌ವುಡ್, 19ನೇ ಓವರ್‌ನಲ್ಲಿ ಆರ್‌ಆರ್ (Rajasthan Royals) ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ್ದೇಗೆಂದು ರಿವೀಲ್ ಮಾಡಿದ್ದಾರೆ.
ಗುರುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 42ನೇ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 205 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕೊನೆಯ ಮೂರು ಓವರ್‌ಗಳಲ್ಲಿ 40 ರನ್‌ಗಳ ಅಗತ್ಯವಿತ್ತು. ಆದರೆ, 18ನೇ ಓವರ್‌ನಲ್ಲಿ 22 ರನ್ ನೀಓಡುವ ಮೂಲಕ ಭುವನೇಶ್ವರ್ ಕುಮಾರ್ ಅತ್ಯಂತ ದುಬಾರಿಯಾಗಿದ್ದರು. ಆ ಮೂಲಕ ಕೊನೆಯ ಎರಡು ಓವರ್‌ಗಳಲ್ಲಿ ಆರ್‌ಆರ್‌ಗೆ 18 ರನ್‌ಗಳ ಅಗತ್ಯಿವಿತ್ತು. ಈ ವೇಳೆ ಆರ್‌ಸಿಬಿ ಸೋಲು ಅನುಭವಿಸುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು.
IPL 2025: ರಾಜಸ್ಥಾನ್ ಎದುರು ರೂಪಿಸಿದ್ದ ಬ್ಯಾಟಿಂಗ್ ರಣತಂತ್ರ ರಿವೀಲ್ ಮಾಡಿದ ವಿರಾಟ್ ಕೊಹ್ಲಿ!
ಆದರೆ, 19ನೇ ಓವರ್‌ನಲ್ಲಿ ಜಾಶ ಹೇಝಲ್‌ವುಡ್ ಮ್ಯಾಜಿಕ್ ಮಾಡಿದರು. ಪೆನಾಲ್ಟಿಮೇಟ್ ಓವರ್ ಅನ್ನು ಅತ್ಯಂತ ಬುದ್ದಿವಂತಿಕೆಯಿಂದ ಬೌಲ್ ಮಾಡಿದ ಹೇಝಲ್‌ವುಡ್ ಕೇವಲ ಒಂದೇ ಒಂದು ರನ್ ನೀಡಿ ಧ್ರುವ್ ಜುರೆಲ್ ಹಾಗೂ ಜೋಫ್ರಾ ಆರ್ಚರ್ ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಕೊನೆಯ ಓವರ್‌ನಲ್ಲಿ ಆರ್‌ಆರ್‌ಗೆ ಗೆಲ್ಲಲು 17 ರನ್‌ಗಳ ಅಗತ್ಯವಿತ್ತು. 20ನೇ ಓವರ್‌ನಲ್ಲಿ ಯಶ್ ದಯಾಳ್ 5 ರನ್ ನೀಡಿ ಆರ್‌ಸಿಬಿಯನ್ನು ಗೆಲುವಿನ ದಡ ಸೇರಿಸಿದರು. 4 ಓವರ್ ಬೌಲ್ ಮಾಡಿದ ಜಾಶ ಹೇಝಲ್‌ವುಡ್ 33 ರನ್ ನೀಡಿ 4 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ತಮ್ಮ ಬೌಲಿಂಗ್ ಗೇಮ್‌ಪ್ಲ್ಯಾನ್ ತಿಳಿಸಿದ ಹೇಝಲ್‌ವುಡ್
ಪಂದ್ಯದ ಬಳಿಕ ಮಾತನಾಡಿದ ಜಾಶ್ ಹೇಝಲ್‌ವುಡ್, "ಹೌದು, ಇದು ಒತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. 18ನೇ ಓವರ್ ಬಳಿಕ ಪಂದ್ಯವು ಬ್ಯಾಟ್ಸ್‌ಮನ್‌ಗಳ ನೆಚ್ಚಿನದಾಗಿತ್ತು ಹಾಗೂ ಬಹುಶಃ ಅವರೇ ಪಂದ್ಯವನ್ನು ಗೆಲ್ಲಬೇಕಾಗಿತ್ತು. ಅದು ನಿಮಗೆ ಸ್ವಲ್ಪ ಮಟ್ಟಿಗೆ ಸಮಾಧಾನ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದರು.
IPL 2025: 7 ಪಂದ್ಯ ಸೋತ ರಾಜಸ್ಥಾನ್ ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?
"ಒಂದು ವೇಳೆ 25 ಅಥವಾ 27 ರನ್ ಇದ್ದಾಗ, ಪಂದ್ಯವನ್ನು ಗೆಲ್ಲಬೇಕೆಂದು ಬೌಲಿಂಗ್ ತಂಡದ ಮೇಲೆ ಒತ್ತಡ ಇರುತ್ತದೆ. ಆ ವೇಳೆ ನಾನು ಅಂದುಕೊಂಡಂತೆ ಬೌಲ್ ಮಾಡಿದ್ದೇ ಹಾಗೂ ನನಗೆ ಸ್ವಲ್ಪ ಸಮಾಧಾನ ಸಿಕ್ಕಿತ್ತು. 19ನೇ ಓವರ್‌ನಲ್ಲಿ ನಾನು ಈ ವಿಕೆಟ್‌ನಲ್ಲಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೌಲ್ ಮಾಡಿದ್ದೇನೆ," ಎಂದು ಜಾಶ್ ಹೇಝಲ್‌ವುಡ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
"ಬ್ಯಾಕ್ ಆಪ್ ದಿ ಲೆನ್ತ್ ಹಾಕಿದಾಗ ನೀವು ದೊಡ್ಡ ಹೊಡೆತವನ್ನು ಆಡುವುದು ಕಷ್ಟ. ನಂತರ ಹಳೆ ಚೆಂಡಿನಲ್ಲಿ ಯಾರ್ಕರ್‌ಗಳನ್ನು ಪ್ರಯತ್ನಿಸಿದೆ. ನನ್ನ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ, ತವರು ಅಂಗಣದಲ್ಲಿ ಆರ್‌ಸಿಬಿಯ ಮೊದಲ ಗೆಲುವಿಗೆ ನೆರವಾಗಿದ್ದಕ್ಕೆ ಸಿಕ್ಕಾಪಟ್ಟೆ ಖುಷಿಯಾಗಿದೆ," ಎಂದು ಜಾಶ್ ಹೇಝಲ್‌ವುಡ್ ಹೇಳಿದ್ದಾರೆ.