Thursday, 19th September 2024

ಆಸ್ಟ್ರೇಲಿಯಾವನ್ನು ಮಣಿಸಿದ ಇಂಗ್ಲೆಂಡ್‍: ಸರಣಿ ಸಮಬಲ

ಮ್ಯಾಂಚೆಸ್ಟರ್: ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ  ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಇಂಗ್ಲೆಂಡ್ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ನಿರಾಸೆಯನ್ನು ಅನುಭವಿಸಿತು. ನಿಗದಿತ 50 ಓವರ್‌ಗಳಲ್ಲಿ ಇಂಗ್ಲೆಂಡ್  ಒಂಬತ್ತು ವಿಕೆಟ್ ಕಳೆದುಕೊಂಡು 231 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆಸ್ಟ್ರೇಲಿಯಾಗೆ ಸುಲಭ ಸವಾಲನ್ನು ನೀಡಿತ್ತು.

ಇಂಗ್ಲೆಂಡ್ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆದರೆ ಡೇವಿಡ್ ವಾರ್ನರ್ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗುವ ಭರವಸೆಯನ್ನು ನೀಡಿದರು. ಮ್ಯಾಬುಶೈನ್ ಜೊತೆಗೆ 3ನೇ ವಿಕೆಟ್‌ಗೆ 107 ರನ್‌ಗಳ ಬೃಹತ್ ಜೊತೆಯಾಟ ನೀಡಿದರು. ಈ ಜೋಡಿ ಬೇರ್ಪಟ್ಟ ಬಳಿಕ ಆಸ್ಟ್ರೇಲಿಯಾ ಹಠಾತ್ ಕುಸಿತಕ್ಕೆ ಒಳಗಾಯಿತು.

ಅಂತಿಮವಾಗಿ ಆಸ್ಟ್ರೇಲಿಯಾ 48.4 ಓವರ್‌ಗಳಲ್ಲಿ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 207 ರನ್ ಗಳಿಸಲಷ್ಟೇ ಶಕ್ತವಾಗಿ ಇಂಗ್ಲೆಂಡ್‌ಗೆ 24 ರನ್‌ಗಳಿಂದ ಶರಣಾಗಿದೆ. ಇಂಗ್ಲೆಂಡ್ ಪರವಾಗಿ ವೇಗಿಗಳು ಬಿಗು ದಾಳಿ ನಡೆಸಿದರು. ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಹಾಗೂ ಸ್ಯಾಮ್ ಕರ್ರನ್ ತಲಾ ಮೂರು ವಿಕೆಟ್ ಕಿತ್ತು ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆಗೆ ಆಘಾತ ನೀಡಿದರು.