Friday, 13th December 2024

ವಿಂಡೀಸ್ ಸರಣಿಗೆ ಇಂಗ್ಲೆಂಡಿನ ಏಕದಿನ, ಟಿ20 ತಂಡ ಪ್ರಕಟ

ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ ಬಹು-ಮಾದರಿಯ ಸರಣಿಗಳಿಗಾಗಿ ಇಂಗ್ಲೆಂಡ್ ತನ್ನ ಏಕದಿನ ಮತ್ತು ಟಿ20 ತಂಡಗಳನ್ನು ಪ್ರಕಟಿಸಿದೆ.

ಇಂಗ್ಲೆಂಡ್ ತಂಡವು ಮೂರು ಏಕದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ ಮತ್ತು ಸರಣಿಯನ್ನು ಕೊನೆಗೊಳಿಸಲು ಐದು ಟಿ20 ಪಂದ್ಯಗಳಲ್ಲಿ ಭಾಗವಹಿಸಲಿದೆ. ಮೊದಲ ಏಕದಿನ ಪಂದ್ಯ ಡಿಸೆಂಬರ್ 3ರಂದು ನಡೆಯಲಿದ್ದರೆ, ಮೊದಲ ಟಿ20 ಪಂದ್ಯವು ಡಿಸೆಂಬರ್ 13ರಂದು ಆರಂಭವಾಗಲಿದೆ.

ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ತಮ್ಮ ವೈಟ್-ಬಾಲ್ ತಂಡಗಳನ್ನು ಘೋಷಿಸುತ್ತಿದ್ದಂತೆ, 2023ರ ಏಕದಿನ ವಿಶ್ವಕಪ್‌ ಪಂದ್ಯಾವಳಿಗಾಗಿ ಭಾರತಕ್ಕೆ ಪ್ರಯಾಣಿಸಿದ ತಂಡದಿಂದ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಮುಖ ಆಟಗಾರರನ್ನು ಕೈಬಿಡಲಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ತಂಡದಲ್ಲಿ 2023ರ ವಿಶ್ವಕಪ್‌ ತಂಡದಲ್ಲಿದ್ದ ಆರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಜೋಸ್ ಬಟ್ಲರ್ ಅವರನ್ನು ನಾಯಕನಾಗಿ ಮುಂದುವರೆಸಿರುವುದು ಕುತೂಹಲಕಾರಿಯಾಗಿದೆ.

ಜೋಸ್ ಬಟ್ಲರ್ ಹೊರತಾಗಿ ಗಸ್ ಅಟ್ಕಿನ್ಸನ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕರ್ರಾನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಏಕದಿನ ತಂಡದಲ್ಲಿರುವ ಆಟಗಾರರು.

ಏಕದಿನ ಕ್ರಿಕೆಟ್ ಪಂದ್ಯ ಆಡಿಲ್ಲದ ಮೂವರು ಆಟಗಾರರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಅವರೆಂದರೆ, ಒಲ್ಲಿ ಪೋಪ್, ಜಾನ್ ಟರ್ನರ್ ಮತ್ತು ಜೋಶ್ ಟಂಗ್.

ಅನುಭವಿ ಆಲ್‌ರೌಂಡರ್ ಮೊಯಿನ್ ಅಲಿ ಚುಟುಕು ಸ್ವರೂಪದ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಸ್ಫೋಟಕ ಬ್ಯಾಟರ್ ಡೇವಿಡ್ ಮಲಾನ್ ಎರಡೂ ಸ್ವರೂಪಗಳಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.

ವೆಸ್ಟ್ ಇಂಡೀಸ್ ವಿರುದ್ಧದ ಇಂಗ್ಲೆಂಡ್ ಏಕದಿನ ತಂಡ

ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಗಸ್ ಅಟ್ಕಿನ್ಸನ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಝಾಕ್ ಕ್ರಾಲಿ, ಸ್ಯಾಮ್ ಕರ್ರಾನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜ್ಯಾಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಒಲ್ಲಿ ಪೋಪ್, ಫಿಲ್ ಸಾಲ್ಟ್, ಜೋಶ್ ಟಂಗ್, ಜಾನ್ ಟರ್ನರ್.

ಇಂಗ್ಲೆಂಡ್ ಟಿ20 ತಂಡ

ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ಬೆನ್ ಡಕೆಟ್, ವಿಲ್ ಜಾಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಟೈಮಲ್ ಮಿಲ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ರೀಸ್ ಟೋಪ್ಲಿ, ಜಾನ್ ಟರ್ನರ್, ಕ್ರಿಸ್ ವೋಕ್ಸ್.