ಶಾರ್ಜಾ: ಪಂಜಾಬ್ ತಂಡದ ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಬೌಲರ್ ಗಳನ್ನುಚೆಂಡಾಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 183 ರನ್ ಗಳಿಸಿದ ಈ ಜೋಡಿ ಐಪಿಎಲ್ ಇತಿಹಾಸದಲ್ಲಿ ಮೂರನೇ ಗರಿಷ್ಟ ಜೊತೆಯಾಟ ನಡೆಸಿತು.
45 ಎಸೆತಗಳಲ್ಲಿ ಚೊಚ್ಚಲ ಶತಕ ಪೂರೈಸಿದ ಮಾಯಾಂಕ್, ಯೂಸೂಫ್ ಪಠಾಣ್ ಬಳಿಕ ಐಪಿಎಲ್ ಚರಿತ್ರೆಯಲ್ಲಿ 2ನೇ ಅತಿ ವೇಗದ ಶತಕ ಪೂರೈಸಿದರು. ಯೂಸುಫ್ 2010ರಲ್ಲಿ ಮುಂಬೈಇಂಡಿಯನ್ಸ್ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
ನಾಯಕ ರಾಹುಲ್ ಜೊತೆಗೂಡಿ 9ನೇ ಓವರ್ ನಲ್ಲಿ 100 ರನ್ ಜೊತೆಯಾಟ ನಡೆಸಿದ ಮಾಯಾಂಕ್ 9 ವರ್ಷಗಳ ಹಿಂದೆ ಆಯಡಂ ಗಿಲ್ ಕ್ರಿಸ್ಟ್ ಹಾಗೂ ಪಾಲ್ ವಲ್ತಾಟಿ ಪಂಜಾಬ್ ಪರ ನಿರ್ಮಿಸಿರುವ ದಾಖಲೆಯೊಂದನ್ನು ಮುರಿದರು. ಗಿಲ್ಲಿ ಹಾಗೂ ವಲ್ತಾಟಿ 2011ರಲ್ಲಿ ಡೆಕ್ಕನ್ ತಂಡದ ವಿರುದ್ಧ ಮೊದಲ ವಿಕೆಟ್ ಗೆ 136 ರನ್ ಕಲೆ ಹಾಕಿತ್ತು.
ರಾಹುಲ್ ಹಾಗೂ ಮಾಯಾಂಕ್ ಕಳೆದ ಋತುವಿನ ಐಪಿಎಲ್ ನಲ್ಲಿ ಹೈದರಾಬಾದ್ ಪರ ಮೊದಲ ವಿಕೆಟ್ ಗೆ ಗರಿಷ್ಠ ರನ್ ಜೊತೆಯಾಟ ನಡೆಸಿದ್ದ ಜಾನಿ ಬೈರ್ ಸ್ಟೋವ್ ಹಾಗೂ ಡೇವಿಡ್ ವಾರ್ನರ್ ದಾಖಲೆ ಮುರಿಯಲು ಕೇವಲ 2 ರನ್ ಕೊರತೆಯಾಯಿತು. ಒಟ್ಟಾರೆ ಇದು 3ನೇ ಗರಿಷ್ಠ ಜೊತೆಯಾಟವಾಗಿದೆ. 2017ರಲ್ಲಿ ಕ್ರಿಸ್ ಲಿನ್ ಹಾಗೂ ಗೌತಮ್ ಗಂಭೀರ್ ಮೊದಲ ವಿಕೆಟ್ ಗೆ ಕೋಲ್ಕತಾದ ಪರ 184 ರನ್ ಸೇರಿಸಿದ್ದರು.